Oyorooms IN

Saturday, 19th August, 2017 4:38 PM

BREAKING NEWS

ಪ್ರಮುಖ ಸುದ್ದಿಗಳು

ಅಕ್ರಮ ಸಂಪತ್ತಿಗೆ, ಮೋದಿಯ ಸವಾಲು

modi

2016ರ ನವಂಬರ್ 9, ಕಪ್ಪುಹಣ ಸಾಮ್ರಾಜ್ಯದ ಕಾಳಧನಿಕರಿಗೆ ಕರಾಳ ದಿನ. ಯಾವುದೋ ಮೋಜು ಮಜಾದ ಮಂಪರಿನಲ್ಲಿದ್ದ ಕಪ್ಪುಹಣದ ಒಡೆಯರಿಗೆ ದಿಕ್ಕು ಕಾಣದಂತೆ ಬಂದ ಮೋಧಿಯ ಬರಸಿಡಿಲು. ಅವತ್ತು ಯಾವುದೋ ಅಮಲಿನಲ್ಲಿ ಕುಪ್ಪಳಿಸುತ್ತಿದ್ದ ಕುರುಡು ಕಾಂಚಾಣ ದೀರ್ಘ ಕಾಲದ ನಂತರ ತನ್ನ ಮೌಲ್ಯ ಕಳೆದುಕೊಂಡು ಮುಗ್ಗರಿಸಿ ಬಿದ್ದ ಕ್ಷಣ. ಈ ಘಟನೆಯಿಂದ ಬೆಚ್ಚಿಬಿದ್ದ ಕಪ್ಪು ಹಣದ ಸಾಮ್ರಾಜ್ಯದ ಒಡೆಯರು ಅಂದು ಬಾಲ ಸುಟ್ಟ ಬೆಕ್ಕಿನಂತಾಗಿದ್ದರು. ಇದು ದೇಶದ ಭ್ರಷ್ಟ ವ್ಯವಸ್ಥೆಗೆ, ಅಕ್ರಮ ಸಂಪತ್ತಿಗೆ, ಮೋದಿಯು ಹಾಕಿದ ಬಹು ದೊಡ್ಡ ಸವಾಲು. ಬ್ಲಾಕ್ ಮ್ಯಾಜಿಕ್.

ಇಂದು ಸಮಾಜದಲ್ಲಿ ಹಣವೇ ಪ್ರಧಾನವಾಗಿದೆ. ಎಲ್ಲವನ್ನೂ ಹಣದಿಂದಲೇ ಅಳೆಯುವಂತಾಗಿದೆ. ವ್ಯಕ್ತಿಯ ವ್ಯಕ್ತಿತ್ವ ಗುರುತಿಸಲು ಹಣವೇ ಮಾನದಂಡ ಎನ್ನುವಂತಾಗಿದೆ. ಹಣ ಮತ್ತು ಅಧಿಕಾರ ಬಿಟ್ಟರೆ. ಬೇರೆ ಏನೂ ಕಾಣುವುದಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸಮಾಜದಲ್ಲಿ ಜನರು ಹಣವನ್ನು ಪ್ರೀತಿಸುವಷ್ಟು ಬೇರೆ ಯಾರನ್ನೂ ಪ್ರೀತಿಸುವುದಿಲ್ಲ. ಇದರಿಂದ ನಮ್ಮ ನಿಮ್ಮ ನಡುವೆ ಮಾನವೀಯ ಮೌಲ್ಯಗಳು ಕಳೆದು ಹೋಗಿವೆ. ಮನುಷ್ಯ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಈ ದುಡ್ಡು ಎಂಬ ಮಾಯೆಯ ಎದುರು ತಂದೆ, ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ ಕೊನೆಗೆ ಪ್ರೀತಿಸಿದ ಜೀವವೂ ಕಾಣದೇ ಹೋಗುತ್ತದೆ. ಹಣದ ವ್ಯಾಮೋಹಕ್ಕೋ, ಜಾತಿ ಅಮಲಿಗೋ, ಅಧಿಕಾರ ದರ್ಪಕ್ಕೋ ಕಾಲ ಕಳೆದಂತೆಲ್ಲಾ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ತೀರಾ ತಳಮಟ್ಟಕ್ಕೆ ತಲುಪಿದೆ. ನಾವು ಇಂದು ಅವಕಾಶದ ಬಾಗಿಲು ತಟ್ಟಿ, ಸ್ವಾರ್ಥದ ಮೆಟ್ಟಿಲು ಹತ್ತಿ ನಿಂತಿದ್ದೇವೆ. ಬದಲಾದ ವ್ಯಾಪಾರಿ ಮನೋಭಾವದಲ್ಲಿ ನಮ್ಮಲ್ಲಿ ನಾವು ಕಳೆದು ಹೋಗಿದ್ದೇವೆ ಎನ್ನುವ ತಲ್ಲಣದ ಬದುಕು ನಮ್ಮದಾಗಿದೆ.

ಯಾವುದೂ ಅತಿಯಾಗಬಾರದು. ಅದು ವಿಷವಾಗುತ್ತದೆ ಎಂದು ಹಿರಿಯರ ನಾಣ್ಣುಡಿ ಎಂದೆಂದಿಗೂ ಸತ್ಯ. ಅತಿರೇಕಕ್ಕೆ ಹೋದಾಗ ಅದಕ್ಕೆ ತಕ್ಕ ಶಾಸ್ತಿ ಆಗುತ್ತದೆ. ಸಮಾಜದಲ್ಲಿ ಅನ್ಯಾಯ, ಅಕ್ರಮ, ಅತ್ಯಾಚಾರಗಳು ಹೆಚ್ಚಾದಾಗ ಭಗವಂತ ಯಾವುದಾದರೂ ರೂಪ ತಾಳಿ ಎಲ್ಲವನ್ನೂ ನಿಯಂತ್ರಿಸುತ್ತಾನೆ ಎನ್ನುವ ಪುರಾಣ ಕಥೆಗಳಿವೆ. ಹಾಗೆಯೇ, ಕಳೆದ ಎರಡೂವರೆ ದಶಕಗಳಿಂದ ಕುರುಡು ಕಾಂಚಾಣ ಅನ್ಯಾಯ ಮಾರ್ಗದವರ ಕೈಗೆ ಸಿಕ್ಕಿ ಎಗ್ಗಿಲ್ಲದೇ ಕುಣಿಯಲು ಆರಂಭಿಸಿತ್ತು. 1೦ ವರ್ಷದಿಂದ ಈಚೆಗಂತೂ ಸಮಾಜದಲ್ಲಿ ಅಕ್ರಮ ಹಣದ ಹೊಳೆಯೇ ಹರಿದ ಪರಿಣಾಮ ಅದರ ಮೌಲ್ಯವಂತೂ ದಿನೇ ದಿನೇ ಕುಸಿಯುತ್ತಾ ಬಂದಿದ್ದು ಅಕ್ಷರಸಹಃ ಸತ್ಯವಾಗಿತ್ತು. ಹಣದ ಅಬ್ಬರದಲ್ಲಿ ಜನ ನೆಮ್ಮದಿ, ಶಾಂತಿ, ನಿದ್ರೆ ಕಳದುಕೊಂಡು ಬಿಟ್ಟಿದ್ದರು. ನ್ಯಾಯ ಮಾರ್ಗದಲ್ಲಿ ಹೇರಳ ಹಣ ಸಂಪಾದನೆ ಸಾಧ್ಯವಾಗದೇ ಅನಿವಾರ್ಯವಾಗಿ ಅಕ್ರಮ ಮಾರ್ಗ ಹಿಡಿಯುವಂತಾಗಿತ್ತು. ಹಾಗಾಗಿ ಸಮಾಜದಲ್ಲಿ ಅಕ್ರಮ, ಅನ್ಯಾಯ, ಕೊಲೆ, ಅತ್ಯಾಚಾರಗಳಂತಹ ಹೇಯಕೃತ್ಯಗಳು ನಿರಾತಂಕವಾಗಿ ನಿರಂತರವಾಗಿ ನಡೆದುಹೋಗುತ್ತಿತ್ತು. ಹಣದ ದರ್ಪದೆದುರು ಸತ್ಯ ಸೋಲುತ್ತಿತ್ತು, ಅನ್ಯಾಯ ಗೆಲ್ಲುತ್ತಿತ್ತು. ಜನರು ಮಾತಾಡದೇ ಮೌನವಾಗಿ ಬಿಟ್ಟಿದ್ದರು. ಹುಟ್ಟು-ಸಾವು, ನ್ಯಾಯ-ಅನ್ಯಾಯ, ನೆಲ-ಆಕಾಶ, ನದಿ-ಸಾಗರ ಹೀಗೆ ಎಲ್ಲಾ ಕಡೆಯೂ ತನ್ನ ಕೆನ್ನಾಲಿಗೆ ಚಾಚಿದ್ದ ನೋಟುಗಳು, ಇಂದು ಏನಾದವು ? ಕಾಗದಕ್ಕಿಂತ ಕಡೆಯಾಗಿ ಬಿದ್ದವು. ಸರ್ಪಕಾವಲಿನಲ್ಲಿ ಜೀವದಂತೆ ಕಾಪಾಡಿಕೊಂಡಿದ್ದ ಕಾಳಧನಿಕರಿಗೆ ಇಂದು ನೋಟಿನ ಕಂತೆಗಳು ಕೆಣಕುವಂತೆ ಭಾಸವಾಗುತ್ತಿದೆ. ನವಂಬರ್ 9, 2೦16 ಕಾಳಧನಿಕರಿಗೆ ಕರಾಳ ದಿನ. ಇಡೀ ದೇಶದ ಅಕ್ರಮದ ಸಂಪಾದನೆಯ ದೊಡ್ಡ ಸಪ್ಪತ್ತಿಗೆ ಮೋದಿಯ ಸವಾಲು. ಭ್ರಷ್ಟತನ, ನೀಚತನ ಮತ್ತು ಅಕ್ರಮ ಸಂಪಾದನೆಯ ಬಹುದೊಡ್ಡ ನಿಧಿಗೆ ಬೆಂಕಿಯಿಟ್ಟು ಭಸ್ಮ ಮಾಡಿಬಿಟ್ಟರು ಧೀರ ಪ್ರಧಾನಿ ಮೋಧಿ. ಯಾರು ಏನೇ ಹೇಳಲಿ, ಇದು ನಿಜಕ್ಕೂ ಇಡೀ ಜಗತ್ತೆ ಮೆಚ್ಚುವಂತಹ ಧೀರತನ ತೋರಿದ ಮೋದಿ ತಂತ್ರಗಾರಿಕೆಯ ರಾಜಕಾರಣಿಯೇ ಸರಿ.

modi-1

ಬೀದಿ ಬದಿಯಲ್ಲೂ ಸಾವಿರ ನೋಟು..

ಈಚೆಗೆ, ಬೀದಿಯಲ್ಲಿ ಗೋಲಿ ಆಡುವ, ಚಿಂದಿ ಆಯುವ ಹುಡುಗರ ಬಳಿಯೂ 5೦೦, 1೦೦೦ ನೋಟುಗಳು ಇರುವುದನ್ನು ನಾವು ಕಂಡಿದ್ದೇವೆ. ಎಲ್ಲೆಂದರಲ್ಲಿ ಈ ನೋಟುಗಳದ್ದೆ ಕಾರುಬಾರು. ನೂರು, ಐವತ್ತು, ಹತ್ತರ ನೋಟುಗಳನ್ನು ಕೇಳುವವರೇ ಇಲ್ಲದಂತೆ ಬೆಲೆ ಕೆಳದುಕೊಂಡಿದ್ದವು. ಅಷ್ಟೊಂದು ಹಬ್ಬರದಲ್ಲಿ ಮೆರೆಯುತ್ತಿದ್ದ 5೦೦, 1೦೦೦ ನೋಟುಗಳ ಆರ್ಭಟ ಕೇಳದಂತಾಗಿತ್ತು. ಎಲ್ಲಾ ಬಂದಾ..ಚಿಲ್ಲರೆ ಇಲ್ವೇ ಇಲ್ಲಾ.. ಯಾರೂ ಚಿಲ್ಲರೆ ಆಗಲು ಇಷ್ಟ ಪಡದೇ ತೆಗೆದರೆ 5೦೦, 1೦೦೦, ಇವುಗಳ ಬಳಕೆ ಹೆಚ್ಚಾದಂತೆ ಖೋಟಾನೋಟುಗಳ ಹಾವಳಿ ವಿಪರೀತವಾಗಿ ನುಸುಳಿಕೊಂಡು ಜನರಿಗೆ ಗೊಂದಲ ಸೃಷ್ಟಿಸಿತ್ತು.

ತಲಾತಲಾಂತರದಿಂದ ಬೇಸಾಯ ಮಾಡಿಕೊಂಡು ಬಂದ ನಮ್ಮೂರಿನ ಚಿಕ್ಕಣ್ಣ ಇದ್ದಕ್ಕಿದಂತೆ ಆರು ತಿಂಗಳ ಮುಂಚೆ ಹೊಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಇಹಲೋಕಕ್ಕೆ ಒಂದು ದೊಡ್ಡ ಸಲಾಮು ಹೊಡೆದು ಬಿಟ್ಟ. ಬೇಸಾಯ ಮಾಡಿಯೇ ಬದುಕು ಸವೆಸುತ್ತಿದ್ದ ಜೀವ ಅದು. ಆದರೆ ಕೊನೆಯವರೆಗೂ ನೆಮ್ಮದಿ ಕಾಣದೇ ಹೋಗಿ ಬಿಟ್ಟ. ಅದೂ ಈ ಕುರುಡು ಕಾಂಚಾಣದ ಪ್ರಭಾವದಿಂದಲೇ. ಹೀಗೆ ದಿಕ್ಕು ಕಾಣದೇ, ಬದುಕಲಾರದೇ ಪ್ರಾಣ ಬಿಟ್ಟ ಅಮಾಯಕರು ಸಾವಿರಾರು. ಇಂತಹ ಘಟನೆಗಳೂ ಸಹ ನಮ್ಮನಿಮ್ಮ ಊರಲ್ಲಿ ಹತ್ತಾರು ನಡೆದಿವೆ. ಹಾಗೆಯೇ, ದೇವಸ್ಥಾನ, ಸಂತೆ, ಅರಳಿಕಟ್ಟೆ ಅಂತ ಓಡಾಡಿಕೊಂಡಿದ್ದ ನಮ್ಮೂರಿನ ರಾಮ ಇವತ್ತು ಬೆಂಗಳೂರಿನಲ್ಲಿ ಎರಡು ಅಪಾರ್ಟ್‌ಮೆಂಟ್ ಮಾಡಿದ್ದಾನಂತೆ, ಐದು ಕಾರು ಇದೆಯಂತೆ, ಮೈಗೆ ಕೈಗೆ ಮಣ ಬಂಗಾರ ಹಾಕಿದ್ದಾನಂತೆ ?? ಇಂತಾ ನಾನಾ ಸುದ್ದಿಗಳನ್ನು ನಾವು ಕೇಳಿದ್ದೇವೆ. ಈ ಸುದ್ದಿಗಳು ಅಂತೆ ಕಂಥೆ ಅಥವಾ ಉಹಾಪೋಹಗಳ ಅಲ್ಲ. ನಮ್ಮ ಮುಂದೆ ನಡೆಯುತ್ತಿರುವ ಸತ್ಯ ಘಟನೆಗಳೇ! ಹಾಗಾದರೆ ಇದು ಹೇಗೆ ಸಾಧ್ಯವಾಗುತ್ತದೆ. ಪ್ರತಿ ಊರಲ್ಲೂ ಆರ್ಥಿಕ ವಿಸ್ಮಯ ಸೃಷ್ಟಿಸಿರುವವರ ಇಂತಹ ಘಟನೆಗಳು ಇವೆ. ನಿಮ್ಮೂರಿನಲ್ಲಿಯೂ ಇಂತಹ ಸತ್ಯ ಘಟನೆಗಳ ಬಗ್ಗೆ ನೀವು ತಿಳಿದಿದ್ದೀರಿ. ಈ ರೀತಿ ದಿನ ಬೆಳಗಾಗುವುದರೊಳಗೆ ಸಿರಿವಂತರಾದವರ ಕಥೆಗಳಿಗೇನೂ ಕಮ್ಮಿ ಇಲ್ಲ. ಅವರ ಪಟ್ಟಿ ಸೇರುವ ಜನಗಳ ಸಾಲು ಈಚೆಗೆ ಹೆಚ್ಚುತ್ತಾ ಹೋಗುತ್ತಿದೆ. ಇಂತಹ ದಿಡೀರ್ ಶ್ರೀಮಂತರ ಕಡೆ ಬೇರೆ ಜನರೂ ಆಕರ್ಷಿತಗೊಂಡು ತಾವೂ ಅದೇ ರೀತಿಯಲ್ಲಿ ಹಣ ಸಂಪಾದನೆ ಮಾಡಿ ಮೋಜು ಮಜಾ ಮಾಡಬೇಕು ಎಂದು ದುಂಬಾಲು ಬಿದ್ದವರಿಗೇನೂ ಕಡಿಮೆ ಇಲ್ಲ. ಸುಲಭದಲ್ಲಿ ದುಡ್ಡು ಸಂಪಾದನೆ ಮಾಡುವ ಹಟಕ್ಕೆ ಬಿದ್ದು ಕೈಯಲ್ಲಿದ್ದ ಮೂರು ಕಾಸು ಕಳೆದುಕೊಂಡು, ಮಕ್ಕಡೆ ಮಲಗಿದವರು ಮತ್ತು ಸಾಲ ಮಾಡಿಕೊಂಡು ತಲೆ ಮೇಲೆ ಕೈಹೊತ್ತು ಕುಳಿತವರ ಬಗ್ಗೆಯೂ ಕೇಳಿದ್ದೇವೆ. ಕೊನೆಗೆ ಬೇಸತ್ತು, ಜಿಗುಪ್ಸೆಗೊಂಡು ಸಾವಿನ ಬಾಗಿಲು ತಟ್ಟಿದವರ ಸಂಖ್ಯೆಯೇನೂ ಕಡಿಮೆ ಇಲ್ಲ.. ಇದು ಹಣದ ಬೇಟೆಯ ಹಿಂದೆ ಬಿದ್ದವರ ಕಥೆ.

ಆದರೆ, ಇದಕ್ಕೆಲ್ಲಾ ವಿಭಿನ್ನಾವಾಗಿ ಹಣ ಮಾಡಿಕೊಂಡು ಸುಖದ ಸಪ್ಪತ್ತಿಗೆಯಲ್ಲಿ ತೇಲಿ ಹೋದ ಜನರೂ ನಮ್ಮ ಮುಂದೆ ಉದಾಹರಣೆಯಾಗಿ ಮೆಹಿಷಾಸುರರಂತೆ ಬಹಳಷ್ಟು ಜನ ನಿಂತು ನಮ್ಮನ್ನು ಬೆಚ್ಚಿಬೀಳಿಸುತ್ತಾರೆ. ಮೈನಿಂಗ್ ಹೆಸರಿನಲ್ಲಿ ಈ ನೆಲದ ಮಣ್ಣನ್ನು ಮಾರಿ ರಾತ್ರೋರಾತ್ರಿ ಶ್ರೀಮಂತರಾದವರು, ಮೂರು ಕಾಸಿಗೆ ನೆಲ ಕೊಂಡು ಒಂಬತ್ತು ಕಾಸಿಗೆ ಮಾರಿ ಜೋಬು ದಬ್ಬಗೆ ಮಾಡಿಕೊಂಡ ರಿಯಲ್‌ಎಸ್ಟೇಟ್ ಮಂದಿಯೂ ನಮ್ಮ ಮುಂದೆ ಇದ್ದಾರೆ. ಮೀಟರ್ ಬಡ್ಡಿದಂಧೆ ನಡೆಸಿಕೊಂಡು ಮನೆ ಮೇಲೆ ಮನೆ ಕಟ್ಟಿ ಸೆಟೆದು ನಿಂತು ಮೀಸೆ ತಿರುವ ಖೂಳರೂ ಇದ್ದಾರೆ. ಜನಸೇವೆಯೇ ಜನಾರ್ಧನ ಸೇವೆ ಎಂದು ಮನೆಯಲ್ಲಿ ದುಡ್ಡಿನ ಹಾಸಿಗೆ ಮಾಡಿಕೊಂಡು ನಿದ್ರೆಗೆಟ್ಟು, ನಾನಾ ರೋಗಗಳಿಗೆ ತುತ್ತಾಗಿರುವ ಭ್ರಷ್ಟ ಅಧಿಕಾರ ವರ್ಗವೂ ನಮ್ಮ ಮುಂದೆ ಇದೆ, ಪ್ರಜೆಗಳೇ ಪ್ರಭುಗಳು, ಪ್ರಜೆಗಳು ದೇವರು, ಇದು ಪ್ರಜಾ ಸಾಮ್ರಾಜ್ಯ ಎಂದು ನಿಂತ ನಿಂತ ಕಡೆಯಲ್ಲಿ ಅರಚಿಕೊಳ್ಳುತ್ತಾ, ತಳಮನೆಯಲ್ಲಿ ಮೂಟೆಗಟ್ಟಲೆ ದುಡ್ಡಿನ ಚೀಲ ಬಿಸಾಕಿ ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುವ ಭ್ರಷ್ಟರಾಜಕಾರಣಿಗಳು ನಮ್ಮ ಮುಂದೆ ದೊಡ್ಡ ಸಾಕ್ಷಿಯಾಗಿ ನಿಲ್ಲುತ್ತಾರೆ. ಈ ಮೈನಿಂಗ್, ರಿಯಲ್‌ಎಸ್ಟೇಟ್, ರಾಜಕಾರಣ ಮತ್ತು ಅಧಿಕಾರಿಶಾಯಿ ವ್ಯವಸ್ಥೆಯ ಜೊತೆಜೊತೆಗೆ ವಾಮಮಾರ್ಗದಲ್ಲಿ ಯಾವಯಾವುದೋ ಅಕ್ರಮ ದಂಧೆ ನಡೆಸಿ, ದಿಡೀರ್ ಅಂತ ಶ್ರೀಮಂತರ ಪಟ್ಟಿಗೆ ಸೇರಿದ ಜನರಿಗೇನು ಕಡಿಮೆ ಇಲ್ಲ.

ರಾಜಕೀಯ ಉದ್ಯಮ ! ಹೌದು, ರಾಜಕೀಯ ಕ್ಷೇತ್ರ ಈಗ ಸೇವಾಕ್ಷೇತ್ರ ಆಗಿಲ್ಲ, ಅದು ಉದ್ಯಮವಾಗಿ ಪರಿವರ್ತನೆ ಆಗಿದೆ. ಮುಖ ನೋಡಿ ಮಣೆ ಹಾಕುತ್ತಿದ್ದ ಕಾಲ ಹೋಯಿತು. ಈಗ ನೋಟು ನೋಡಿ ಓಟು ಹಾಕುವ ಕಾಲ ಬಂದಿದೆ. ಹಾಗಾಗಿ ದುಡ್ಡಿದ್ದವನು ದೊಡ್ಡಪ್ಪ ಅಂತಾ ಎಲ್ಲರೂ ಅವನ ಮುಂದೆ ನಾಲಿಗೆ ಚಾಚಿ ಜೊಲ್ಲು ಸುರಿಸುತ್ತಾ, ನಿಂತು ಬಿಡುತ್ತಾರೆ. ವಾಮಮಾರ್ಗದಲ್ಲಿ ಹಣ ಸಂಪಾದಿಸಿದ ಜನರು ಜನರ ದೌರ್ಬಲ್ಯ ಅರಿತು ಇವರ ಮುಂದೆ ನೋಟಿನಲ್ಲಿ ತಮ್ಮ ಮುಖಕ್ಕೆ ತಣ್ಣಗೆ ಗಾಳಿ ಬೀಸಿಕೊಳ್ಳುತ್ತಾ, ನೋಟು ಚೆಲ್ಲಿ ಓಟು ಪಡೆದು ಅಧಿಕಾರಕ್ಕೆ ಬಂದೇ ಬೀಡುತ್ತಾರೆ. ನೂರು ಕೋಟಿ ಚೆಲ್ಲಿದ ವ್ಯಾಪಾರಿ ಸಾವಿರ ಕೋಟಿ ಮಾಡದೇ ಸುಮ್ಮನಿರುತ್ತಾನೆಯೇ.. ಈ ಸತ್ಯ ಅರಿಯದ ನಮ್ಮ ಜನ ಗೂಬೆಗಳಾಗಿ ಕೊನೆಗೆ ಅವನ ಮುಖವನ್ನು ಮಿಕಮಿಕ ಅಂತಾ ನೋಡುತ್ತಾ ನಿಂತು ಬಿಡುತ್ತಾರೆ. ಇದು ನಿರಂತರ ನಡೆಯುವ ಡ್ರಾಮಾ.

modi-2

ಬೆಲೆ ಕಳೆದು ಕೊಂಡ ನೋಟುಗಳು:

ಹತ್ತು ವರ್ಷದಲ್ಲಿ ದಿಡೀರ್ ಎಂದು ರೂಪಾಯಿ ಅಪಮೌಲ್ಯವಾಗಲು ಕಾರಣ ಏನು ? ಬೆಲೆಗಳೆಕೆ ದಿನೇ ದಿನೇ ಹೆಚ್ಚಾಗುತ್ತಿವೆ ? ಬಡವ ಶ್ರೀಮಂತರ ನಡುವಿನ ಅಂತರ ಆಕಾಶ ಮತ್ತು ಭೂಮಿಯಷ್ಟು ಅಂತರ ಏಕಾಯಿತು ? ಎನ್ನುವ ನೂರಾರು ಪ್ರಶ್ನೆಗಳಿಗೆ ಒಂದೇ ಉತ್ತರ ’ಹಣ’.. ’ಹಣ’ ’ಹಣ’.

ಈ ಹಣ ಎನ್ನುವ ರಕ್ಕಸನ ಹಾವಳಿ ಎಷ್ಟು ಆಗಿತ್ತೆಂದರೆ. ಆಸ್ಪತ್ರೆಗಳಲ್ಲಿ ಸತ್ತ ಹೆಣವನ್ನು ಕೊಡದೇ, ಹಟದಿಂದ ಕೂರುವಷ್ಟು ಹಣವೇ ಅಮೂಲ್ಯವಾಗಿತ್ತು. ತಾಯಿ ಮಗುವನ್ನು ಹೆರಲು, ಶವವನ್ನು ಹೂಳಲು ಹೀಗೆ ಬದುಕಿನ ಎಲ್ಲಾ ಸ್ತರಗಳಲ್ಲೂ ಹಣವೇ ಪ್ರಧಾನವಾಗಿತ್ತು. ದುಡ್ಡಿಗಾಗಿ ಜನ ಮನುಷ್ಯತ್ವವನ್ನೇ ಮರೆತಿದ್ದರು. ದಿನಗಳು ಕಳೆದಂತೆ ದುಡ್ಡಿನ ಮಹತ್ವ ಹೆಚ್ಚುತ್ತಾ ಹೋದಂತೆ ಎಲ್ಲರೂ ಹಣದ ವ್ಯಾಮೋಹದಲ್ಲಿ ಸಿಲುಕಿ ಬಿಟ್ಟರು. ಇಲ್ಲದವರು ನಾನಾ ಮಾರ್ಗಗಳ ಮೂಲಕ ಹಣ ಸಂಪಾದನೆಗೆ ಮುಂದಾದರೆ.. ಇದ್ದವರು ವಾಮ ಮಾರ್ಗದಲ್ಲಿ ದುಪ್ಪಟ್ಟು, ತ್ರಿಪಟ್ಟು ಬೆಳೆಸಿಕೊಳ್ಳುವ ತಂತ್ರದಲ್ಲಿ ತೊಡಗಿದರು.. ಕುಂಭಕರ್ಣನಂತೆ ಮಲಗಿ ಏಳುವ ಆದಾಯ ಇಲಾಖೆಗೆ ಹೆದರಿ ಬೇನಾಮಿ ಹೆಸರಲ್ಲಿ ಆಸ್ತಿ ಅಂತಸ್ತುಗಳು ಎದ್ದು ನಿಂತವು. ಆಕಾಶ ಮುಟ್ಟಿದ ಈ ಹಣದ ಭೂತ ಇಂದು ದಿಡೀರ್ ಎಂದು ನೆಲಕ್ಕೆ ಅಪ್ಪಳಿಸಿ ಬಿದ್ದಿದೆ. ಒಂದಿಷ್ಟು ಯೋಚಿಸಲು ಸಮಯವೂ ಸಿಗದಂತೆ ಎಲ್ಲವೂ ಮಣ್ಣಾಗಿದೆ. ಅಕ್ರಮ ಹಣ ಸಂಪಾದಿಸಿ ಬೀಗುತ್ತಿದ್ದ ಶ್ರೀಮಂತರ ಪಾಲಿಗೆ ನಿದ್ರೆಯಲ್ಲೂ ಬೆಚ್ಚುವ ಸಿಂಹಸ್ವಪ್ನ ದಿನಗಳಿವು.

ಹಾಗಾದರೆ ಅಷ್ಟೋಂದು ಹಣ ಅಕ್ರಮವಾಗಿ ಶೇಖರಿಸಲ್ಪಟ್ಟಿತ್ತೇ ? ಎನ್ನುವ ಪ್ರಶ್ನೆ ನಮ್ಮ ಜನರು ಕೇಳ ಬಹುದು. ಹೌದು, ರಾಜಕಾರಣಿಗಳು, ಉನ್ನತ ಮಟ್ಟದ ಅಧಿಕಾರಿಗಳು, ಕಾಳಸಂತೆಕೋರರು, ಸಗಟು ವ್ಯಾಪಾರಿಗಳು, ರಿಯಲ್‌ಎಸ್ಟೇಟ್ ವ್ಯಾಪಾರಿಗಳು, ಮಾಫಿಯಾ ಜನರು.. ಹೀಗೆ ಸಾಲು ಸಾಲು ಬಲಿಷ್ಠ ಜನರು ಹಣವನ್ನು ಮೂಟೆಗಳ ಕಟ್ಟಿ ತಮ್ಮ ಗೊತ್ತಾದ ಗುಪ್ತ ಸ್ಥಳಗಳಲ್ಲಿ ಎಸೆದಿರುವ ಉದಾಹರಣೆಗಳು ಸಾಕಷ್ಟಿವೆ. ಅವು 5೦೦ ಮತ್ತು 1೦೦೦ ನೋಟುಗಳ ಕಂತೆಗಳು. ಇಂತಹ ಹಣ ನಮ್ಮ ದೇಶದಲ್ಲಿ ಲಕ್ಷ ಲಕ್ಷ ಕೋಟಿಗಳಷ್ಟು ಯಾವುದೋ ಕತ್ತಲೆ ಮೂಲೆಯಲ್ಲಿ ಮುದುರಿಕೊಂಡು, ಕೊಸರಿಕೊಂಡು, ಕೊಳೆಯುತ್ತಾ, ಬಿದ್ದಿದೆ ಎಂದರೆ ಅಚ್ಚರಿ ಎನಿಸಬಹುದು. ಲೋಕದ ಜನರ ಹಸಿವ ಹಿಂಗಿಸಲು ರೈತ ಭೂತಾಯಿಗೆ ಬೆವರ ಹರಿಸಿ, ದುಡಿದು ಕುಸಿದು ಮಣ್ಣಾದರೂ ಬಿಡಿಗಾಸು ಬಿಚ್ಚದೇ ಹಣವನ್ನೇ ಹಾಸಿಗೆ ಮಾಡಿಕೊಂಡ ಜನರ ಮುಖ ಇವತ್ತು ಹಿಂಗುತಿಂದ ಮಂಗನಂತಾಗಿದೆ. ಇದು ಆಗಲೇ ಬೇಕಿತ್ತು. ಆಗಿದೆ. ಈಗಲೇ ಆಗಿದ್ದು ಒಳ್ಳೆಯದೇ ಆಯಿತು. ಮುಂದೆ ತಡವಾಗಿದ್ದರೆ ಮತ್ತಷ್ಟು ಅವಾಂತರ, ಅನ್ಯಾಯ, ಅಕ್ರಮ, ಅತ್ಯಾಚಾರಗಳು ನಡೆದುಹೋಗುತ್ತಿದ್ದವು. ಕುರುಡು ಕಾಂಚಾಣ ಎಡವಿ ಬಿದ್ದಿದ್ದು ಒಳ್ಳೆ ಲಕ್ಷಣ.

modi-4

ಇನ್ನೂ ಮುಗಿದಿಲ್ಲ, ಮತ್ತೆ ಇದೆ ಮಾರಿ ಹಬ್ಬ:

ಹೌದು, ಮೋದಿಯ ನವಗ್ರಹ ಚಾಣಾಕ್ಷ್ಯತನ ಇಷ್ಟಕ್ಕೆ ಮುಗಿಲಿಲ್ಲ. ಅವರ ಮತ್ತೊಂದು ಅಸ್ತ್ರ ಪ್ರಯೋಗವಾಗಲಿದೆ. ಕಪ್ಪುಸಾಮ್ರಾಜ್ಯಕ್ಕೆ ಮತ್ತೊಂದು ಆಘಾತ ಕಾದಿದೆ. ಅವರ 9 ಮ್ಯಾಜಿಕ್ ಸಂಖ್ಯೆ ಅವರಿಗೆ ಧನಾತ್ಮಕ ಫಲಿತಾಂಶ ನೀಡಲಿದೆ. ಈಗ ಬಹಳ ಜಾಣತನದಿಂದ ಬದುಕಿದೆ ಬಡಜೀವ ಎಂದು ಸಮಾಧಾನದ ಪಟ್ಟುಕೊಳ್ಳುವ ಕಾಳಧನಿಕರೇ ಎಚ್ಚರ! ನಿಮಗೆ ಇನ್ನೊಂದು ಬರೆ ಬೀಳಲಿದೆ. ಇದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ಅಲ್ಲಿ ಇಲ್ಲಿ ತೊಡಗಿಸಿ, ಬಂಗಾರ, ಆಸ್ತಿ ಖರೀದಿ ಮಾಡಿದ್ದೇನೆ ಎಂದು ನಿಟ್ಟುಸಿರು ಬಿಟ್ಟರೆ ನಿಮ್ಮಂತಹ ದಡ್ಡರು ಬೇರೆ ಯಾರೂ ಇಲ್ಲ. ಈಗಾಗಲೇ ಎಲ್ಲಾ ವ್ಯವಹಾರಗಳಿಗೂ ಆಧಾರ್‌ಕಾರ್ಡ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಪಡಿಸಲಾಗಿದೆ. ಪಡಿತರ ವ್ಯವಸ್ಥೆಗೆ ಆಧಾರ್‌ಕಾರ್ಡ್ ಸಂಖ್ಯೆಯನ್ನು ನಮೂದಿಸಿದ್ದರಿಂದ ಲಕ್ಷಾಂತರ ಅಕ್ರಮ ಕಾರ್ಡ್‌ಗಳು ಬಯಲಾಗಿವೆ. ಈದೇ ಮಾದರಿಯಲ್ಲೇ ಮುಂದೆ ಎಲ್ಲಾ ವ್ಯವಹಾರಗಳಿಗೂ ಆಧಾರ್‌ಕಾರ್ಡ್ ಲಿಂಕ್ ಮಾಡುವ ಸಾಧ್ಯತೆ ಇದೆ. ಚಿನ್ನಾಭರಣ, ಆಸ್ತಿ, ಸೈಟ್, ಮನೆ, ವೆಹಿಕಲ್ ಖರೀದಿಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡಲಾಗುತ್ತದೆ. ಮುಂದೆ ಆದಾರ್‌ಕಾರ್ಡ್ ನಮ್ಮ ದೇಶದ ಗುರುತಿನ ಸಂಖ್ಯೆಯ ಎಪಿಕ್ ಕಾರ್ಡ್ ಆಗುವುದರಿಂದ ಸಮಗ್ರ ಮಾಹಿತಿ ಇದರಲ್ಲಿರುತ್ತದೆ. ಈಗ ನೀವು ಖರೀದಿಸಿರುವ ಎಲ್ಲಾ ಆಸ್ತಿಗಳ ಮಾಹಿತಿ ಆಧಾರ್‌ಕಾರ್ಡ್‌ಗೆ ಸಮೂದಿಸಬೇಕು. ನಂತರ ಆಧಾಯ ಇಲಾಖೆಯಿಂದ ಬರುವ ನೋಟಿಸ್‌ಗೆ ಈ ಆಸ್ತಿ ಖರೀದಿಗೆ ಹಣ ಹೇಗೆ ಬಂತು, ಅಥವಾ ಎಲ್ಲಿಂದ ಬಂತು ಎನ್ನುವ ದಾಖಲೆ ಸಮೇತ ಉತ್ತರ ನೀಡಬೇಕು. ಇಲ್ಲಾ ಮೂರು ಪಟ್ಟು ದಂಡ ತೆರಬೇಕು. ಈಗಾಗಲೇ ಆದಾಯ ಇಲಾಖೆಯಲ್ಲಿ ಘೋಷಿಸಿಕೊಂಡು ತೆರಿಗೆ ಕಟ್ಟಿದವರಿಗೆ ಇದರ ಯಾವುದೇ ಬಾಧೆ ಇರುವುದಿಲ್ಲ. ನುಣುಚಿಕೊಳ್ಳಲು ಯತ್ನಿಸುವ ತೆರಿಗೆವಂಚಕರಿಗೆ ಮೋಧಿ ಚಾಣಾಕ್ಷತನದಿಂದ ಛಡಿ ಏಟು ನೀಡಲಿದ್ದಾರೆ ಎಚ್ಚರ!!!

ಶ್ರಮದ ಹಣಕೆ, ಬೆಲೆ ನೀಡಿದ ಪ್ರಧಾನಿ ಮೋಧಿ..

ಪ್ರಪಂಚದ ಗಮನ ಸೆಳೆದ ಈ ಕಪ್ಪುಹಣದ ಮೇಲಿನ ನೈತಿಕ ಯುದ್ಧ ಭವಿಷ್ಯದಲ್ಲಿ ದೇಶದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಕಲ್ಪಸಿಕೊಡಲಿದೆ. ಮೋಧಿಯ ದಿಟ್ಟತನಗಳಲ್ಲಿ ಇದು ಮಹತ್ತರವಾದದು. ಎಂದೆಂದಿಗೂ ನೆನಪಿನಿಂದ ಮಾಸದೇ ದಾಖಲೆಯಾಗಿರುವಂತಾದ್ದು. ಸಮಾನ್ಯ ಜನರಿಗೆ ಮೋಧಿ ಕೊಟ್ಟ ಬಹುದೊಡ್ಡ ಉಡುಗೊರೆ ಎಂದು ಹೇಳಬಹುದು. ಹಣದ ವ್ಯಾಮೋಹದಲ್ಲಿ ಏನೆಲ್ಲಾ ಅಕ್ರಮಗಳು, ಅನೈತಿಕಗಳು ನಡೆಯುತ್ತಿದ್ದವು ಅವು ಇನ್ನೂ ಮುಂದೆ ನಡೆಯಲಾರವು. ಎಲ್ಲಾ ತರಹದ ಸಿದ್ಧತೆ ಮಾಡಿಕೊಂಡೇ ಈ ಅಕ್ರಮ ಆರ್ಥಿಕ ಪ್ರಗತಿಗೆ ಮೌನವಾಗಿ ಧಾಳಿಯಟ್ಟುಬಿಟ್ಟರು ಮೋಧಿ. ಹಾಗಾಗಿ ದೇಶದ ಎಲ್ಲಾ ವಲಯಗಳಲ್ಲೂ ಇಂದು ಮೋಧಿ ಶಬ್ಬಾಷ್‌ಗಿರಿ ಪಡೆದಿದ್ದಾರೆ.

ಈಗ ಸುಲಭವಾಗಿ ಬಂದ ಹಣ ತನ್ನ ತಾತ್ಕಾಲಿಕ ಮಹತ್ವ ಕಳೆದುಕೊಂಡು ಶ್ರಮದ ಫಲದಿಂದ ಬಂದ ಹಣವೇ ಮಹತ್ವ ಎನಿಸಿದೆ. ಬಡವರೂ ಸಹ ತಮ್ಮ ಬಳಿ ಇರುವ ಅಲ್ಪಸ್ವಲ್ಪದ ಹಣವೇ ಅಮೂಲ್ಯ ಎನಿಸುವಂತೆ ಮೋಧಿ ಬದಲಾವಣೆ ತಂದು ಬಿಟ್ಟಿದ್ದಾರೆ. ಸಮಾನ್ಯ ಜನರ ಬಳಿ ಲಕ್ಷ್ಮೀ ಸಮಾನವಾದ ಹಣಕ್ಕೆ ಹೆಚ್ಚು ಗೌರವ ಮತ್ತು ಮಹತ್ವ ಇತ್ತು ಆದರೆ ಈ ಕಪ್ಪುಹಣದ ಹಾವಳಿಯಿಂದ ಎಲ್ಲೋ ಒಂದು ಕಡೆ ಲೋಪ ಆಗುತ್ತಿತ್ತು ಎನಿಸಿತ್ತು. ಜನರ ಬಳಕೆಗೆಬಾರದ ಲಕ್ಷ್ಮೀ ಇಂದು ಬೆಳಕಿಗೆ ಬಂದಂತಾಗಿದೆ. ಕಾಳಧನಿಕರ ಕೈಯಲ್ಲಿ, ಉಸಿರು ಬಿಗಿಕಟ್ಟಿ ಕೈಕಟ್ಟಿಸಿಕೊಂಡು, ಯಾವುದೋ ಕೊಳೆತ ಕೊಠಡಿಯ ಕತ್ತಲೆಯ ಮೂಲೆಯಲ್ಲಿ ಕೊಸರಿಕೊಂಡು ನರಳುತ್ತಾ, ಮಲಗಿದ್ದ ಲಕ್ಷ್ಮಿ ಇಂದು ಮೈಕೊಡವಿ ಎದ್ದು ನಿಂತಿದ್ದಾಳೆ ಎನಿಸುತ್ತಿದೆ. ಬಡವರ ಪಾಲಿಗೆ ಬಂಗಾರದ ಬಾಗಿಲು ತೆಗೆದ ದಿನ ನವಂಬರ್ 9, 2೦16. ಇದರಿಂದ ಸಮಾಜದ ಮೇಲೆ ಬಾರೀ ಪರಿಣಾಮ ಉಂಟಾಗಲಿದೆ.

modi-3

ಕತ್ತಲೆಯಲ್ಲೇ ಕರಗಿ ಬಿಟ್ಟ ಕಪ್ಪು ಹಣ:

ಯಾವ ಯಾವ ರೀತಿಯ ಅಕ್ರಮದಿಂದ ಹಣ ಸಂಪಾದಿಸಬೇಕೋ ಅಂತಹ ಎಲ್ಲಾ ವಾಮಮಾರ್ಗಗಳನ್ನು ಅನುಸರಿಸಿ, ಸಂಪಾದಿಸಿಟ್ಟ ಕೋಟ್ಯಾಂತರ ಹಣ.. ಜತನದಿಂದ ಕಾಪಾಡಿಕೊಂಡು ಬಂದ ಮೂಟೆಗಟ್ಟಲೆ ದುಡ್ಡು ಇಂದು ಕಸಕ್ಕೆ ಸಮಾನವಾಗಿ ನಿಂತಿದೆ. ಹೊರಗೆ ತೆಗೆಯುವಂತಿಲ್ಲ. ಇದ್ದೂ ಪ್ರಯೋಜನವಿಲ್ಲ. ಯಾವುದೇ ತಂತ್ರ ಉಪಯೋಗಿಸಿದರೂ ಸಿಕ್ಕಿ ಬೀಳುವುದು ಗ್ಯಾರಂಟಿ. ಇರುವ ಹಣವನ್ನೂ ಘೋಷಿಸಿಕೊಂಡು ಬ್ಲಾಕ್‌ಮನಿ ವೈಟ್ ಮಾಡಿಕೊಂಡರೆ ಬಚಾವ್ ಆದರೆ, ಅದರ ಕಾಲ ಮುಗಿದಿದೆ. ಆಸೆ, ದುರಾಸೆ ಮತ್ತು ಭಯಗಳ ನಡುವೆ ದಿಕ್ಕು ಕಾಣದ ಸ್ಥಿತಿಯಲ್ಲಿ ಅಕ್ರಮವಾಗಿ ಸಂಪಾದಿಸಿದ, ಅಕ್ರಮ ಹಣ ಹಾಗೆಯೇ ಕತ್ತಲಲ್ಲಿ ಕರಗಿಹೋಗಿಬಿಡುತ್ತವೆ. ಹೀಗೆ ಕತ್ತಲೆಯಲ್ಲಿ ಕರಗಿ ಹೋಗುವ ಕಪ್ಪು ಹಣದ ಪ್ರಮಾಣ ಲಕ್ಷ ಲಕ್ಷ ಕೋಟಿ ಎಂದರೂ ಅಚ್ಚರಿ ಪಡಬೇಕಿಲ್ಲ.

ಒಂದೇ ರಾತ್ರಿ ಸುಟ್ಟು ಕರಕಲಾದ ಖೋಟಾನೋಟುಗಳು:

ಸರ್ಕಾರವೇ ಬಿಡುಗಡೆ ಮಾಡಿರುವ ವ್ಯವಹಾರದಿಂದ ಸಂಪಾದಿಸಿರುವ ಇದೂವರೆಗೂ ಚಲಾವಣೆಯಲ್ಲಿದ್ದ ಅಧಿಕೃತ ನೋಟುಗಳೇ ಇಂದು ಬೆಲೆ ಕಳೆದುಕೊಂಡು ಕಾಗದಕ್ಕೂ ಕಡೆಯಾಗಿರುವಾಗ ಇನ್ನೂ ಖೋಟಾನೋಟುಗಳ ದಂಧೆ ಮಾಡುವ ಜನರ ಬಳಿಯಿರುವ ಕೋಟ್ಯಾಂತರ ರೂಪಾಯಿ ಖೋಟಾನೋಟುಗಳ ಗತಿ ಏನು? ಇದ್ದರೆ ತಲೆ ನೋವು ಹೆಚ್ಚು ಎಂದು ಅವುಗಳನ್ನು ಮೂಟೆಗಳ ಸಮೇತ ಸುಟ್ಟು ಇಲ್ಲದಂತೆ ಮಾಡಿ ನೆಮ್ಮದಿಯಾಗಿ ಉಸಿರಾಡುವುದೊಂದೆ ಈಗ ಕಾಳಧನಿಕರಿಗೆ, ಕಾಳಸಂತೆಕೋರರಿಗೆ ಉಳಿದಿರುವ ಮಾರ್ಗ. ನವಂಬರ್ 9, 1೦ ಮತ್ತು 11ರಂದು ಮೂರು ದಿನಗಳ ಕಾಲ ನಿದ್ದಯಿಲ್ಲದೇ ಪರದಾಡಿದ ಭ್ರಷ್ಟರ ಪರಿಸ್ಥಿತಿ ಹೇಳತೀರದು. ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಅಕ್ರಮ ಸಂಪಾದನೆ ಮಾಡಿ ಗುರುತಿಸಿಕೊಂಡಿರುವ ವ್ಯಕ್ತಿಗಳ ಹತ್ತಿರ ದೃಶ್ಯ ಮಾಧ್ಯಮದ ಕೆಮಾರಗಳು ಸುಳಿದಾಡಿದ್ದರೆ ಒಳ್ಳೆಯ ಸುದ್ದಿಯ ರಸದೌತಣ ಸಿಗುತ್ತಿತ್ತು. ಮೋಧಿಯವರು ಬಡವರ ಪರ ಇಲ್ಲ. ಅವರದು ಕಾರ್ಪೋರೇಟ್ ಬುದ್ದಿ, ಅವರು ಬಂಡವಾಳಶಾಯಿಗಳ ಪರವಾಗಿ ಇದ್ದಾರೆ ಎನ್ನುವ ಅಪಸ್ವರಗಳು ಕೇಳಿಬರುತ್ತಿರುವ ದಿನಗಳಲ್ಲಿ ಭ್ರಷ್ಟರಿಗೆ ಮತ್ತು ಕಪ್ಪುಹಣ ಹೊಂದಿರುವ ಹಣವಂತರಿಗೆ ಮೋಧಿ ಶಾಕ್ ಕೊಟ್ಟು ಬಿಟ್ಟರು. ಇದು ಅಂತಿಂತ ಶಾಕ್ ಅಲ್ಲಾ ಇನ್ನೂ ಹತ್ತಾರು ವರ್ಷ ನೆನಪಿಸಿಕೊಳ್ಳುವಂತಹ ದೊಡ್ಡ ಶಾಕ್, ಮೋಧಿಯ ಬ್ಲಾಕ್ ಮನಿ ಶಾಕ್.

9ರ ಮ್ಯಾಜಿಕ್.. ಮೋಧಿಯ ಲಾಜಿಕ್.. ಬ್ಲಾಕ್ ಮ್ಯಾಜಿಕ್
ನವಂಬರ್ 9 ಕಾಳಧನಿಕರಿಗೆ ಗ್ರಹ ಬಡಿದ ದಿನ. ನವಗ್ರಹಗಳಲ್ಲಿ 9ನೇ ಗ್ರಹ ಮಂಗಳ. ತುಂಬಾ ಪವರ್‌ಫುಲ್ ಗ್ರಹ ಇದು. ಲೋಕ ಕಲ್ಯಾಣದ ದೃಷ್ಟಿಯಿಂದ ಹಿಡಿದ ಹಟ ಬಿಡದ ಮೋದಿಯ ಪ್ರಯತ್ನದಿಂದ ಉತ್ತಮ ಪ್ರತಿಫಲ ದೊರೆಯುವುದು ಗ್ಯಾರಂಟಿ. ಸಂಖ್ಯಾ ಶಾಸ್ತ್ರದ ಪ್ರಕಾರ 9 ಅತ್ಯುತ್ತಮ ಸಂಖ್ಯೆ. ಪರಿಣಾಮಕಾರಿ ಸಂಖ್ಯೆ ಕೂಡ. ಮೋದಿಯ 9ರ ಸಂಖ್ಯೆಯ ತಂತ್ರ ಈಗ ಅರ್ಥ ಆಗಬೇಕಿದೆ.
ಹಳೆಯ ನೋಟುಗಳನ್ನು ರದ್ದು ಪಡಿಸುವ ಮೂಲಕ ದೇಶದಲ್ಲಿ ಅಕ್ರಮ ವ್ಯವಸ್ಥೆಯನ್ನು ಆಳುತ್ತಿದ್ದ ಕಾಳಧನಿಕರಿಗೆ ಎಚ್ಚರಿಕೆ ನೀಡುವುದರ ಜೊತೆಗೆ ಇಡೀ ಭ್ರಷ್ಟ ವ್ಯವಸ್ಥೆಗೆ ದೊಡ್ಡ ಸವಾಲು ಹೊಡೆದ ಮೋದಿ ದಿಟ್ಟತನಕ್ಕೆ ಕಾರಣ ನಂ. 9.
ದೇಶದಲ್ಲಿ ಕಪ್ಪುಹಣಕ್ಕೆ ಸಡ್ಡುಹೊಡೆದುದೇ ಅಲ್ಲಾ ಭ್ರಷ್ಟವ್ಯವಸ್ಥೆಯ ವಿರುದ್ಧವೂ ಸಮರ ಸಾರಿದ ದಿನ, ನ್ಯಾಯವಾದ ಬದುಕಿಗೆ ಶುಭಾರಂಭ ಹೇಳಿದ ದಿನ ನವಂಬರ್, 9, 2016. ಇದು ಮಹತ್ವವಾದ ದಿನ. 2016 ಕೂಡಿದರೆ 9, ನವಂಬರ್ ತಿಂಗಳು ೯, ತಾರೀಖು 9. ಈ ದಿನ, ಮಾಸ ಮತ್ತು ವರ್ಷ ಕೂಡಿದರೂ ಬರುವ ಸಂಖ್ಯೆ 9. 9 +9+ (2016) 9= 27, 2+7=9. ಹೇಗಿದೆ ಮೋಧಿಯವರ ೯ರ ತಂತ್ರ.

modi-6

ನಾನಾ ರೂಪಾಂತರದಲ್ಲಿ ಅಕ್ರಮ ಸಂಪಾದನೆ: ಬೇನಾಮಿ ಸರ್ಕಾರದ ಪಾಲು.

ಈಗ ನಮ್ಮಲ್ಲಿರುವ ನೋಟುಗಳನ್ನು ಬ್ಯಾನ್ ಮಾಡಿದಾಕ್ಷಣ ಮೋಧಿ ನಮ್ಮ ಸಂಪತ್ತನ್ನು ಕರಗಿಸಲು ಸಾಧ್ಯವಿಲ್ಲ. ಈಗಾಗಲೇ ನಮ್ಮಲ್ಲಿದ್ದ ಕಪ್ಪು ಹಣವನ್ನು ಎಲ್ಲೆಲ್ಲಿ ವಿನಿಯೋಗಿಸಬೇಕೋ ಅಲ್ಲಲ್ಲಿ ಜೋಪಾನವಾಗಿ ಇಡಲಾಗಿದೆ. ನಮ್ಮನ್ನೇನು ಮಾಡಲು ಸಾಧ್ಯವಿಲ್ಲ ಎಂದು ಕಪ್ಪುಸಮಾಜದ ಕಾಳಧನಿಕರು ಅನೇಕರು ಸಮಾಧಾನ ಪಟ್ಟುಕೊಂಡಿರುವುದು ಸತ್ಯ.

ಹೌದು, ಕಳೆದ ಐದು ವರ್ಷಗಳಿಂದ ಈ ಕಪ್ಪುಹಣ ನಾನಾ ರೂಪದಲ್ಲಿ ಈಗಾಗಲೇ ರೂಪಾಂತಗೊಂಡಿದೆ. ಎಲ್ಲಾ ಕಡೆಯಲ್ಲೂ ಹೂಡಿಕೆಯೂ ಆಗಿದೆ. ತಮ್ಮಲ್ಲಿದ್ದ ಹೇರಳವಾದ ಮೂಟೆಗಟ್ಟಲೆ ತೆರಿಗೆವಂಚಿತ ಕಪ್ಪುಹಣವನ್ನು ಕಾಳಧನಿಕರು ಭೂಮಿ ಖರೀದಿಯಲ್ಲಿ, ವಾಣಿಜ್ಯ ಆಸ್ತಿಗಳ ಖರೀದಿಯಲ್ಲಿ, ವಾಹನ ಖರೀದಿಯಲ್ಲಿ, ಚಿನ್ನದ ಬಿಸ್ಕತ್‌ಗಳು, ಚಿನ್ನಾಭರಣ, ಸಣ್ಣ ಸಣ್ಣ ಚೀಲಗಳಲ್ಲಿ ಡೈಮಂಡ್ ಸೇರಿದಂತೆ ಇತರೆ ಬೆಲೆ ಬಾಳುವ ಹರಳುಗಳ ಖರೀದಿಯಲ್ಲಿ ಈಗಾಗಲೇ ತೊಡಗಿಸಿಬಿಟ್ಟಿದ್ದಾರೆ. ಕೆಲವು ರಾಜಕಾರಣಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಕೃಷಿ ಜಮೀನು ಕೊಳ್ಳಲು, ಲೇ ಔಟ್‌ಗಳ ನಿರ್ಮಾಣ, ಅಪಾರ್ಟ್‌ಮೆಂಟ್ ನಿರ್ಮಾಣ, ಬಡ್ಡಿಗೆ ಹಣ ನೀಡುವ ಹಾಗೂ ಬೇರೆ ಬೇರೆ ರೂಪಗಳಲ್ಲಿ ಹಣ ತೊಡಗಿಸಿ ಬಿಟ್ಟಿದ್ದಾರೆ.

ಇವರನ್ನೇನು ಮೋಧಿ ಮಾಡಬಲ್ಲರು ಎಂದು ಪ್ರಶ್ನಿಸಿ, ಮೀಸೆ ತಿರುವ ಜನರೂ ಇದ್ದಾರೆ. ಆದರೆ ಮೋದಿ ಈ ದೇಶದೊಳಗಿನ ಅಕ್ರಮ ಮತ್ತು ಭ್ರಷ್ಟರ ಅಕ್ರಮ ಸಂಪಾದನೆ ಹಾಗೂ ಕಾಳಧನಿಕರ ಮೇಲೆ ಪ್ರಯೋಗಿಸಿದ ಸರ್ಜಿಕಲ್ ಸ್ಟ್ರ್ಯಕ್ ದಿಡೀರ್ ಅಂತಾ ಮಾಡಿದ್ದಲ್ಲ. ಇದಕ್ಕೆ ಪೂರ್ವ ತಯಾರಿ ಬಹಳ ದಿನಗಳ ಹಿಂದಿನಿಂದಲೇ ನಡೆದಿದೆ. ಇದರಿಂದ ಆಗಬಹುದಾದ ಎಲ್ಲಾ ಪರಿಣಾಮಗಳನ್ನು ಲೆಕ್ಕಹಾಕಿ ಅದಕ್ಕೆ ತಕ್ಕ ಪಾಠ ಕಲಿಸುವ ಸಿದ್ಧತೆಯಲ್ಲೂ ಮೋದಿ ಇದ್ದಾರೆ. ಕಾಳಧನಿಕರು ಚಾಪೆ ಕೆಳಗೆ ನುಸಿದರೆ, ಅವರು ರಂಗೋಲೆ ಕೆಳಗೆ ನುಸಿಯುವ ಎಲ್ಲಾ ತಂತ್ರವನ್ನು ಬಲ್ಲವರಾಗಿದ್ದು, ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೂ ಎರಡು ವರ್ಷದಲ್ಲಿ ಎಲ್ಲವೂ ಅಧಿಕೃತವಾಗುತ್ತವೆ. ಬೇನಾಮಿ ಹೆಸರಿನಲ್ಲಿರುವ ಎಲ್ಲಾ ಆಸ್ತಿ, ವ್ಯವಹಾರಗಳೂ ಬಯಲಾಗಿ ಅವು ಸರ್ಕಾರದ ಪಾಲಾಗುತ್ತವೆ. ಇನ್ನೂ ಅಕ್ರಮವಾಗಿ ಮಾಡುವ ಎಲ್ಲಾ ಆಟಗಳಿಗೂ ಕಡಿವಾಣ ಬೀಳಲಿದೆ. ನ್ಯಾಯವಾಗಿದ್ದನ್ನು ಮಾತ್ರ ದಕ್ಕಿಸಿಕೊಳ್ಳಬೆಕು ಅಂತಾ ದಿನಗಳು ನಮ್ಮ ಮುಂದೆ ಇದೆ. ಈ ದೇಶದ ಶ್ರೀಸಾಮಾನ್ಯರೂ ಸೇರಿದಂತೆ ನೆಮ್ಮದಿ ಬದುಕುವ ಕಾಲ. ನ್ಯಾಯ ಮತ್ತು ನೀತಿಗೆ ಬೆಲೆ ಇರುವ ಉತ್ತಮಕಾಲ. ಅದು ಆದರ್ಶದ ದಿನಗಳು, ರಾಮರಾಜ್ಯದ ಕನಸಿನ ದಿನಗಳು. ನಾವೂ ಆ ಕಾಲ ಬರಲಿ ಎಂದು ಆಶಿಸೋಣವೇ..

-ತಿಪಟೂರುಕೃಷ್ಣ -ತಿಪಟೂರುಕೃಷ್ಣ ಪತ್ರಕರ್ತ, ಪ್ರಗತಿಪರ ಚಿಂತಕ ಮತ್ತು ಹೋರಾಟಗಾರ.
-ತಿಪಟೂರುಕೃಷ್ಣ ಪತ್ರಕರ್ತ, ಪ್ರಗತಿಪರ ಚಿಂತಕ ಮತ್ತು ಹೋರಾಟಗಾರ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...