Oyorooms IN

Monday, 26th June, 2017 4:04 PM

BREAKING NEWS

ಹಬ್ಬದ ಆಚರಣೆ ಹಾಗೂ ಹಿನ್ನೆಲೆ

ಆಯುಧ ಪೂಜೆ ಹಾಗೂ ವಿಜಯದಶಮಿ

 cvc
ಆಶ್ವಯುಜ ಮಾಸ ಶುಕ್ಲ ಪಕ್ಷ ಪಾಡ್ಯದಿ೦ದ ಶುರುವಾಗುವ ಹಬ್ಬವೇ ನವರಾತ್ರಿ/ದಸರಾ. ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳೂ ವಿಶೇಷ ಸ್ಥಾನ ಪಡೆದುಕೊಂಡಿದೆ. ಈ ಹತ್ತು ದಿನಗಳಲ್ಲಿ ಸ್ನಾನ-ಜಪ-ದಾನಗಳು ಪ್ರಧಾನ ಪಾತ್ರ ವಹಿಸುತ್ತದೆ

“ಆಯುಧ ಪೂಜೆ” ದಸರಾದಲ್ಲಿ ಆಚರಿಸಲ್ಪಡುವ ಒಂದು ಮುಖ್ಯ ಹಬ್ಬ. ಒಂಭತ್ತನೇ ದಿವಸ ಅoದರೆ ನವಮಿಯಂದು ಈ ಹಬ್ಬವನ್ನು ಆಚರಿಸಲ್ಪಡುತ್ತದೆ. ಇದಕ್ಕೆ ಇರುವ ಮತ್ತೊ೦ದು ಹೆಸರು”ಮಹಾನವಮಿ”.ಪಾಂಡವರು ಅಜ್ಞಾತವಾಸವನ್ನು ಮುಗಿಸಿ ಮರಳಿ ಬರುವಾಗ “ಶಮೀ ವೃಕ್ಷ”ದಲ್ಲಿ ಇಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದ ದಿವಸವಾದ್ದರಿಂದ ಇದಕ್ಕೆ “ಆಯುಧ ಪೂಜೆ” ಎಂಬ ಹೆಸರು ಬಂದಿತು.

ಇದೆ ಪ್ರತೀಕದಂತೆ ರಾಜ ಮಹಾರಾಜರುಗಳು ತಮ್ಮನ್ನು ಸಂರಕ್ಷಿಸುತ್ತಿದ್ದ ಶಸ್ತ್ರಗಳನ್ನು, ಆಯುಧಗಳನ್ನು ಪೂಜೆ ಸಲ್ಲಿಸುತ್ತಿದ್ದರು. ಪ್ರಸ್ತುತ ಕಾಲದಲ್ಲಿ ಜನಸಾಮಾನ್ಯರು ತಾವು ದಿನಬಳಕೆಯಲ್ಲಿ ಬಳಸುವ ವಸ್ತುಗಳು, ಯಂತ್ರಗಳು, ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದೆ ಸಂದರ್ಭದಲ್ಲಿ “ಶಮೀ ವೃಕ್ಷ”ಕ್ಕೂ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆಯಲ್ಲಿದೆ.
ಆಯುಧ ಪ್ರಾರ್ಥನ –
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ |
ಛುರಿಕೆ ರಕ್ಷಮಾಂ ನಿತ್ಯಂ ಶಾಂತಿಂ ಯಚ್ಚ ನಮೋಸ್ತು ತೇ |

ವಿಜಯ ದಶಮಿ
ಆಶ್ವಯುಜ ಮಾಸ ಶುಕ್ಲ ಪಕ್ಷ ದಶಮಿಯಂದು ಆಚರಿಸುವ ಹಬ್ಬಕ್ಕೆ “ವಿಜಯ ದಶಮಿ” ಎಂದು ಕರೆಯುತ್ತಾರೆ. ಇದೇ ದಿವಸ ಶ್ರೀಹರಿಯ ಆಜ್ಞೆಯಂತೆ “ವಾಯುದೇವರು” “ಮಧ್ವಾಚಾರ್ಯ”ರಾಗಿ ಅವತರಿಸಿದ ದಿವವಾದ್ದರಿಂದ ಈ ದಿನವನ್ನು “ಮಧ್ವ ಜಯಂತಿ” ಎಂದೂ ಕರೆಯುತ್ತಾರೆ. ಹಿಂದೂ ಪುರಾಣಗಳ ಪ್ರಕಾರ ವಿಜಯ ದಶಮಿಯ ಮಹತ್ವಗಳು ಈ ಕೆಳಕಂಡಂತೆ ಇವೆ

೧) ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಹನುಮಂತ ಮತ್ತು ಸುಗ್ರೀವರ ನೇತೃತ್ವದ ವಾನರ ಸೈನ್ಯದೊಂದಿಗೆ ಲಂಕೆಗೆ ಹೋಗಿ ಸೀತಾಮಾತೆಯ ರೂಪದಲ್ಲಿದ್ದ ವೇದವತಿಯನ್ನು ಅಪಹರಿಸಿದ್ದ ರಾವಣನನ್ನು ಸಂಹರಿಸಿದ ದಿವಸ. ಇದರ ಪ್ರತೀಕವಾಗಿ ಇಂದೂ ಸಹ ವಿಜಯ ದಶಮಿಯಂದು ಹಲವೆಡೆ ರಾವಣ, ಕುಂಭಕರ್ಣ ಹಾಗು ಮೇಘನಾಥನ ಪ್ರತಿಕೃತಿಗಳನ್ನು ದಹಿಸಿ ಸಂಭ್ರಮಿಸುತ್ತಾರೆ.

cvc-1

೨) ದುರ್ಗಾದೇವಿ/ಚಾಮುಂಡೇಶ್ವರಿ ಇದೇ ದಿವಸ ಮಹಿಷಾಸುರನನ್ನು ಸಂಹರಿಸಿದ ದಿವಸ. ಮಹಿಷನ ರೂಪದಲ್ಲಿದ್ದ ಅಸುರನು ಒಮ್ಮೆ ದೇವಲೋಕಕ್ಕೆ ನುಗ್ಗಿ ಸ್ವರ್ಗಾಧಿಪತಿಯನ್ನು ಮತ್ತು ಇತರೆ ದೇವತೆಗಳಿಗೆ ತೊಂದರೆ ನೀಡುತ್ತಿದ್ದಾಗ ಲಕ್ಷ್ಮಿ ದೇವಿಯು ದುರ್ಗಾದೇವಿ/
ಚಾಮುಂಡೇಶ್ವರಿಯ ಅವತಾರವೆತ್ತಿ ಒಂಭತ್ತು ದಿವಸಗಳ ಕಾಲ ಅವನ ಜೊತೆ ಸೆಣಸಿ ಹತ್ತನೇ ದಿವಸ ಆ ಮಹಿಷನನ್ನು ಮತ್ತು ಅವನ ಜೊತೆ ಇತರ ಅಸುರನನ್ನು ಸಂಹರಿಸಿದ ದಿವಸ. ಆದ್ದರಿಂದ ಈ ದಿವಸವನ್ನು “ವಿಜಯ ದಶಮಿ” ಎಂದು ಆಚರಿಸುತ್ತಾರೆ.

೩) ಅಜ್ಞಾತವಾಸದ ಬಳಿಕ ಪಾಂಡವರು ತಾವು “ಶಮೀ ವೃಕ್ಷ” ದಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ಮರಳಿ ಪಡೆದು, ವಿರಾಟನಗರದ ಮೇಲೆ ದಂಡೆತ್ತಿ ಬಂದ ಕೌರವರ ವಿರುದ್ಧ ಜಯಗಳಿಸಿದ ದಿವಸ. ಇದೇ ಸಂದರ್ಭದಲ್ಲಿ ಶಮೀ ವೃಕ್ಷ/ ಬನ್ನಿ ವೃಕ್ಷವನ್ನು ವಿಶೇಷವಾಗಿ ಪೂಜಿಸಲ್ಪಡುತ್ತದೆ. ಶಮೀ ವೃಕ್ಷದ ಎಲೆಗಳನ್ನು ಸಂಪತ್ತಿನ ಪ್ರತೀಕವಾಗಿ ಹಂಚಿಕೊಳ್ಳುತ್ತಾರೆ. ಇದರ ಹಿನ್ನಲೆ ನಮ್ಮನ್ನು ತ್ರೇತಾಯುಗಕ್ಕೆ ಕರೆದೊಯ್ಯುತ್ತದೆ.

ಹಿಂದೆ ತ್ರೇತಾಯುಗದಲ್ಲಿ ಅಯೋಧ್ಯನಗರದಲ್ಲಿ “ಕೌಸ್ತ “ಎಂಬ ಬ್ರಾಹ್ಮಣ ವಿದ್ಯಾರ್ಥಿಯು “ವರಂತನು” ಎಂಬ ಗುರುವಿನ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದನು. ವಿದ್ಯಾಭ್ಯಾಸ ಮುಗಿದ ಬಳಿಕ ಕೌಸ್ತನು ಗುರುವಿನ ಬಳಿ ಬಂದು ಗುರುಗಳೇ ನಾನು ಗುರುದಕ್ಷಿಣೆ ನೀಡಬೇಕು ಎಂದಿದ್ದೇನೆ. ತಾವು ತಮಗೆ ಏನು ಬೇಕು ಎಂದು ತಿಳಿಸಿದರೆ ಅದನ್ನು ತಂದು ಅರ್ಪಿಸುವೆ ಎಂದನು.

ಮೊದಲಿಗೆ ಗುರುಗಳು ನಾನು ಯಾವುದೇ ದಕ್ಷಿಣೆಯನ್ನು ಅಪೇಕ್ಷಿಸದೆ ನಿನಗೆ ವಿದ್ಯಾಭ್ಯಾಸ ನೀಡಿದ್ದೇನೆ. ನನಗೆ ಏನೂ ಬೇಡ ಎಂದರು. ಆದರೆ ಕೌಸ್ತನು ಇಲ್ಲ ತಾವು ಸ್ವೀಕರಿಸಲೇ ಬೇಕು ಎಂದು ಪಟ್ಟು ಹಿಡಿದಾಗ ಅವನಿಗೆ ಬುದ್ಧಿ ಕಲಿಸಲು ಗುರುಗಳು ತನಗೆ 140 ಬಂಗಾರದ ನಾಣ್ಯಗಳನ್ನು ನೀಡಬೇಕು ಎಂದು ಕೇಳಿದರು. ತಾವು ಕಲಿಸಿದ 140ವಿಷಯಗಳಿಗೆ ಒಂದೊಂದು ಬಂಗಾರದ ನಾಣ್ಯ ಎಂದು ತಿಳಿಸಿದರು.

ಇದನ್ನು ನಿರೀಕ್ಷಿಸಿರದ ಕೌಸ್ತನು ಕಂಗಾಲಾಗಿ ಶ್ರೀರಾಮಚಂದ್ರನ ಬಳಿ ಬಂದು ನಡೆದ ಸಂಗತಿಯನ್ನು ವಿವರಿಸಿ ತನಗೆ ೧೪೦ ನಾಣ್ಯಗಳು ಬೇಕೆಂದು ಕೇಳಿದನು. ಆಗ ಶ್ರೀರಾಮಚಂದ್ರನು ತನಗೆ ಪ್ರಿಯವಾದ ಶಮೀ ವೃಕ್ಷದ ಬಳಿ ಕೌಸ್ತನಿಗೆ ನಿಂತಿರಲು ಹೇಳಿದನು. ಕೌಸ್ತನು ಮೂರು ದಿವಸಗಳ ಕಾಲ ಅಲ್ಲೇ ನಿಂತಿದ್ದನು. ನಂತರ ಶ್ರೀರಾಮಚಂದ್ರನು ಸಂಪತ್ತಿನ ಅಧಿಪತಿ ಕುಬೇರನಿಗೆ ತಿಳಿಸಿ ಆ ಶಮೀ ವೃಕ್ಷದ ಎಲೆಗಳನ್ನು ಬಂಗಾರದ ನಾಣ್ಯಗಳಾಗಿ ಪರಿವರ್ತಿಸಿದನು.

ಇದರಿಂದ ಸಂತಸಗೊಂಡ ಕೌಸ್ತನು ಗುರುಗಳು ಕೇಳಿದಷ್ಟು ನಾಣ್ಯಗಳನ್ನು ಅವರಿಗೆ ಕೊಟ್ಟು ಮಿಕ್ಕ ನಾಣ್ಯಗಳನ್ನು ದಾನ ಮಾಡಿದನು. ಅಂದಿನಿಂದ ಶಮೀ/ಬನ್ನಿ ಎಲೆಗಳನ್ನು ಸಂಪತ್ತಿನ ಪ್ರತೀಕವಾಗಿ ಪೂಜಿಸುತ್ತಾರೆ.

“ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ/
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯವಾದಿನೀ”

cvc-11
ಶರನ್ನವರಾತ್ರಿಯ 9 ದಿನಗಳ ಪೈಕಿ 9ನೇ ದಿನವಾದ ನವಮಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೈಸೂರು ಅರಸರು, ವಿಜಯನಗರದರಸರು ಅಂದು ತಮ್ಮ ಶಸ್ತ್ರಾಗಾರದಲ್ಲಿದ್ದ ಎಲ್ಲ ಶಸ್ತ್ರಾಸ್ತ್ರಗಳಿಗೆ, ವಾಹನಗಳಿಗೆ, ರಥ, ಖಡ್ಗ, ಕುದುರೆ, ಆನೆಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ, ತಮ್ಮನ್ನು ಆಪತ್ಕಾಲದಲ್ಲಿ ರಕ್ಷಿಸುವ ಈ ಎಲ್ಲಕ್ಕೂ ಕೃತಜ್ಞತೆ ಸಲ್ಲಿಸುತ್ತಿದ್ದರು.

ಇಂಥ ಒಂದು ವಿಶಿಷ್ಟ ಸಂಪ್ರದಾಯವನ್ನು ಮತ್ತೆಲ್ಲೂ ನೋಡಲು ಸಾಧ್ಯವೇ ಇಲ್ಲ. ನಮ್ಮನ್ನು ವರ್ಷವಿಡೀ ನಾವು ಬಯಸಿದ ಸ್ಥಳಕ್ಕೆ ಕರೆದೊಯ್ಯುವ ವಾಹನಗಳಿಗೆ ಅದೂ ನಿರ್ಜೀವ ವಸ್ತುಗಳಿಗೆ ಪೂಜೆ ಸಲ್ಲಿಸುವುದು ಕರ್ನಾಟಕದಲ್ಲಿ ಮಾತ್ರವೇ ಸಾಧ್ಯ. ಅಂಥ ಶ್ರೀಮಂತ
ಸಂಸ್ಕೃತಿಯ ನೆಲೆ ಕರ್ನಾಟಕಕ್ಕಿದೆ.

ಅಶ್ವಾರೂಢರಾದ ಮೈಸೂರು ಅರಸರಾದ ಶ್ರೀ ಜಯಚಾಮರಾಜ ಒಡೆಯರ್, ಮೈಸೂರು ಮಹಾರಾಜರು ದಸರಾ ಮಹೋತ್ಸವದ 10 ದಿನಗಳ ಉತ್ಸವದ ೯ನೇ ದಿನ ಅಂದರೆ ಮಹಾನವಮಿಯ ದಿನವನ್ನು ಆಯುಧಪೂಜೆ ಎಂದೇ ಆಚರಿಸುತ್ತಿದ್ದರು.ತಮ್ಮನ್ನು ಶತ್ರುಗಳಿಂದ ರಕ್ಷಿಸಲು ನೆರವಾಗುತ್ತಿದ್ದ ಯುಧಗಳಿಗೆ ಪೂಜೆ ಮಾಡುತ್ತಿದ್ದ ಕಾರಣ ಈ ಉತ್ಸವಕ್ಕೆ ಆಯುಧಪೂಜೆ ಎಂದೇ ಹೆಸರು ಬಂದಿದೆ. ಅಂದು ಕೇವಲ ಆಯುಧಗಳಿಗಷ್ಟೇ ಅಲ್ಲದೆ, ತಮಗೆ ಯುದ್ಧದಲ್ಲಿ ಮತ್ತು ದೈನಂದಿನ ಕಾರ್ಯದಲ್ಲಿ ನೆರವಿಗೆ ಬರುತ್ತಿದ್ದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಎತ್ತಿನ ಗಾಡಿ, ರಥ, ಆನೆ ಗಾಡಿ, ಕುದುರೆಗಾಡಿಗಳಿಗೂ ಪೂಜೆ ಸಲ್ಲಿಸುತ್ತಿದ್ದರು. ಬಳಿಕ ಪಟ್ಟದ ಕುದುರೆ ಏರಿ ಸವಾರಿಯನ್ನೂ ಮಾಡುತ್ತಿದ್ದರು ಎಂದು ಮೈಸೂರಿನ ಹಿರಿಯರು ಹೇಳುತ್ತಾರೆ. ಇಂದಿಗೂ ಅನೂಚಾನವಾಗಿ ಅದೇ ಪರಂಪರೆ ಮೈಸೂರು ಅರಮನೆಯಲ್ಲಿ ನಡೆದುಕೊಂಡು ಬಂದಿದೆ.

ಇಂದಿಗೂ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇರುವ ಚಾಕು, ಕತ್ತರಿಯೇ ಮೊದಲಾದ ಆಯುಧಗಳಿಗೆ ಪೂಜೆ ಸಲ್ಲಿಸಿ, ತಮ್ಮ ಬಳಿ ಇರುವ ವಾಹನಗಳಿಗೆ ಯಥಾಶಕ್ತಿ ಪೂಜೆ ಸಲ್ಲಿಸುತ್ತಾರೆ. ಅಂಗಡಿ, ಮಳಿಗೆಗಳಲ್ಲಿ ಕೂಡ ತಕ್ಕಡಿಯಿಂದ ಹಿಡಿದು ಎಲ್ಲ ಸಾಧನ ಸಲಕರಣೆಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ.

ವಾಹನ ಮಾಲಿಕರು ನವಮಿಯ ದಿನ ತಮ್ಮ ವಾಹನಗಳನ್ನು ತೊಳೆದು, ಒರೆಸಿ, ಸಿಂಗರಿಸಿ, ಹೂ, ಕುಂಕುಮ, ಅರಿಶಿನದಿಂದ ಪೂಜಿಸಿ, ಅದಕ್ಕೆ ನಿಂಬೆ ಹಣ್ಣು ಇಲ್ಲವೆ ಕುಂಬಳ ಕಾಯಿ ಒಡೆದು ಇದನ್ನೇ ಬಲಿಯಾಗಿ ಸ್ವೀಕರಿಸಿ ತಮಗೆ ಸನ್ಮಂಗಳವನ್ನುಂಟು ಮಾಡುವಂತೆ
ಪ್ರಾರ್ಥಿಸುತ್ತಾರೆ.

ಸಾರಿಗೆ ವಾಹನ ಚಾಲಕರು, ತಮ್ಮ ವಾಹನಗಳಿಗೆ ಹೂವಿನಿಂದ ಬಗೆ ಬಗೆಯ ಅಲಂಕಾರ ಮಾಡುತ್ತಾರೆ. ಚಿತ್ತಾರದ ಬಣ್ಣದ ಕಾಗದ ಅಂಟಿಸಿ ಸಿಂಗರಿಸುತ್ತಾರೆ. ತಮ್ಮ ಗೆಳೆಯನಿಗಿಂಥ ತಾನು ಚೆನ್ನಾಗಿ ವಾಹನ ಸಿಂಗರಿಸಬೇಕೆನ್ನುವ ಪೈಪೋಟಿಯೂ ನಡೆಯುತ್ತದೆ

ಪ್ರಿಂಟಿಂಗ್ ಪ್ರೆಸ್‌ಗಳು, ಗ್ಯಾರೇಜ್‌ಗಳು, ವಾಹನ ಮಾರಾಟ ಮಾಡುವ ಷೋರೂಂಗಳು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ. ಬಾಳೆಕಂದು, ಮಾವಿನಸೊಪ್ಪು, ಹೂವಿನಿಂದ ಅಲಂಕೃತಗೊಂಡಿವೆ. ಚಿನ್ನಾರಿ ಕಾಗದದ ಅಲಂಕಾರ ಮನಸೂರೆಗೊಳ್ಳುತ್ತಿದೆ

ಹಬ್ಬದ ಆಚರಣೆ ಹಾಗೂ ಹಿನ್ನೆಲೆ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...