Oyorooms IN

Sunday, 20th August, 2017 10:54 PM

BREAKING NEWS

Columns

ಹರೆಯ ಬಂತು ಜೋಕೆ

ಕಾದ ಕಬ್ಬಿಣ ಹೇಗೆ ಬಗ್ಗಿಸಬಹುದೋ ಅದೇ ರೀತಿ ಈ ಹದಿಹರೆಯದಲ್ಲಿ ಸರಿದಾರಿಗೂ ತರಬಹುದು. ಹಾದಿ ತಪ್ಪಿಸಲೂಬಹುದು. ಟೀನೇಜ್ ಎಂದರೆ ಹದಿಹರೆಯದ , ಅಪ್ರಾಪ್ತ ಎಂಬ ಅರ್ಥವಿದೆ. ಹಾಗಾದರೆ ಏನು ಇದರ ಅರ್ಥ? ಹದಿಹರೆಯದ ಮಕ್ಕಳು ಎಂದರೆ ೧೨ ವರ್ಷದ ನಂತರ ಅಂದರೆ ಹದಿಮೂರನೇ ವಯಸ್ಸಿನಿಂದ ಹದಿನೆಂಟರ ವಯಸ್ಸಿನ ವರೆಗೆ ಹದಿಹರೆಯದ ವಯಸ್ಸು ಎನ್ನಲಾಗಿದೆ. ಅದನ್ನೇ ಆಂಗ್ಲ ಭಾಷೆಯಲ್ಲಿ ಟೀನೇಜ್ ಎಂದರೆ xರ್ಟೀನ್ ನಿಂದ ನೈನ್ಟೀನ್ವರೆಗಿನ ವಯಸ್ಸು . ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಕಾಲಿಡುವ ಹಂತ ಇದು. ಈ ವೇಳೆ ಪ್ರತಿ ವಿಚಾರದಲ್ಲೂ ಕುತೂಹಲ. ಕೆಲ ದೈಹಿಕ ಬದಲಾವಣೆಗಳು ಮಾನಸಿಕವಾಗಿ ಕಾಡಲಾರಂಭಿಸುತ್ತವೆ. ಅದರಲ್ಲೂ ಲೈಂಗಿಕ ವಿಚಾರಗಳು ತಲೆಯೇರಿ ಕೂರುತ್ತವೆ. ಅಷ್ಟೇ ಅಲ್ಲ, ಮಾನಸಿಕವಾಗಿ ತೀರಾ ಬಲಹೀನರಾಗುವ ವಯಸ್ಸಿದು.

ಹೃದಯದ ಹೆಬ್ಬಾಗಿಲಿಗೆ ತೋರಣ ಕಟ್ಟಿ ಹೂವಿನ ಘಮಲಿನ ಅರವಳಿಕೆಯಲ್ಲಿ ಮೈನವಿರೇಳಿಸುವ ಶೃಂಗಾರದ ಕನಸು ಹೆಣೆಯುತ್ತ ಅರಿವಿಲ್ಲದೆ,ಅರಿವಾಗದಂತೆ ಹೃದಯ ಸಿಂಹಾಸನದ ಮೆಟ್ಟಿಲು ಒಂದೊಂದಾಗಿ ಹತ್ತಿ ತಳವೂರಿದ ಕಾಲದ ನೆನೆಪು ಎಂದಾದರೂ ಮರೆಯಲು ಸಾಧ್ಯವೇ?. ಅದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣವದು .ಹೆಣ್ಣಾಗಲಿ-ಗಂಡಾಗಲೀ ಹರೆಯದ ಹೊಸಿಲಲ್ಲಿ ಮನಸ್ಸು ಬೆಳೆದಂತೆಲ್ಲ ಕನಸೂ ಬೆಳೆಯುವುದು ಸ್ವಾಭಾವಿಕ. ಅದಕ್ಕೆ ದಿನಕ್ಕೊಂದು ರೆಕ್ಕೆ ಪುಕ್ಕ. ಬಣ್ಣ ಬಣ್ಣದ ಓಕುಳಿಯ ತವರು, ಹರೆಯದ ಕನಸುಗಳು ನೂರೆಂಟು. ಅದು ಮಾತಿನಲ್ಲಿ ಅಥವಾ ಅಕ್ಷರಗಳಲ್ಲಿ ಯಾರಾದರು ವರ್ಣಿಸಲು ಸಾಧ್ಯವೆ? ಇಲ್ಲವೆಂದೇ ಹೇಳಬೇಕು. ಹರೆಯದ ಪಾತ್ರೆಯಲ್ಲಿ ಪ್ರೀತಿಯೆಂಬ ಹುಟ್ಟು , ಮತ್ತದು ಹುಟ್ಟುವ ಕಾಲ ವಸಂತ ಋತು, ಚೈತ್ರ ಮಾಸ. ಈ ಮಾಸ, ಋತುವಿನಲ್ಲಿ ಮಾಮರ ಚಿಗುರಿ ಕೋಗಿಲೆಯ ಇಂಪಾದ ಗಾನ ಮುಂಜಾನೆಯ ಹಕ್ಕಿಗಳ ಕಲರವದಲ್ಲಿ ಅದ್ದಿ ತೆಗೆಯುತ್ತದೆ. ಅದೇ ಪೃಕೃತಿಯ ಹರೆಯವೆಂದರು ತಪ್ಪಾಗಲಾರದು. ಶೃಂಗಾರಕ್ಕೆ ಇನ್ನೊಂದು ಹೆಸರೇ ಪ್ರಕೃತಿಯ ಸೌಂದರ್ಯ. ಯಾರಿರಲಿ ಇಲ್ಲದಿರಲಿ, ಕಾಲ ತನ್ನ ಕಾಯಕ ಮುಂದುವರೆಸಿಕೊಂಡು ಹೋಗುವಂತೆ ಈ ಹರೆಯ ಕೂಡ . ಆಯಾ ಕಾಲ ಕಾಲಕ್ಕೆ ದೇಹವೆಂಬ ದೇಗುಲದಲ್ಲಿ ಮಂದಾರತಿ ಬೆಳಗುವ ಕಾಯಕ ತನ್ನಷ್ಟಕ್ಕೆ ನಡೆಯುತ್ತದೆ. ಮೇಲು ಕೀಳೆಂಬ ತಾರತಮ್ಯ ಇಲ್ಲ ಇಲ್ಲಿ. ಆ ಜಾತಿ ಈ ಜಾತಿ ಭೇಧ-ಭಾವವೂ ಇಲ್ಲ ತಿಳಿಯಾದ ಕೊಳ ಅದು. ನಭೋಮಂಡಲದಲ್ಲಿ ಉದಯಿಸುವ ಭಾರ್ಗವನ ಹೊಂಗಿರಣದ ಜಳಕು ಹಾದು ಪಳ ಪಳ ಹೊಳೆಯುವ ಮುತ್ತಂತಿರುವದೇ ಹರೆಯ,
ಹರೆಯ ಬಂತೆಂದರೆ ಸಾಕು, ಶುರುವಾಗುತ್ತೆ ಇದರ ಬಗ್ಗೆ ಕಾಳಜಿ,ಆಸ್ಥೆ. ಮೊದಲು ತನ್ನ ಬಗ್ಗೆ ತನಗೆ ಹೆಮ್ಮೆ, ಬದಲಾಗುತ್ತಿರುವ ದೇಹ ಸೌಂದರ್ಯ, ಕಲ್ಪನೆ ಕೂಡಾ ಮಾಡಲಸಾಧ್ಯವಾದ ಅರಿವು ಮನ ಹೊಕ್ಕಂತೆಲ್ಲ ಚಿತ್ರ ವಿಚಿತ್ರ ಭಯ, ಏನೋ ಆತಂಕ, ಮನಸ್ಸೆಲ್ಲ ಗೊಂದಲ. ಯಾರಲ್ಲಿಯೂ ಹೇಳಿಕೊಳ್ಳಲಾಗದ ನಾಚಿಕೆ, ಸಂಕೋಚ. ತನ್ನನ್ನೆ ತಾನು ತದೇಕ ಚಿತ್ತದಿಂದ ಕನ್ನಡಿಯ ಮುಂದೆ ನಿಂತು ಅದೆಷ್ಟು ನೋಡಿಕೊಂಡರೂ ಸಾಲದು. ಶೃಂಗಾರಕ್ಕೆ ಹೊತ್ತಿನ ಅರಿವಿಲ್ಲ. ಇರುವವರೆಲ್ಲ ತನ್ನ ಕಡೆ ನೋಡಬೇಕು, ಮೆಚ್ಚುಗೆ ಹೇಳಬೇಕು, ಹೀಗೆಲ್ಲಾ ಒಳಗೊಳಗೆ ಖುಷಿ ಪಡುವ ಸಂಭ್ರಮ.
ಹರೆಯ ಹೆಣ್ಣಿಗೊಂದು ರೀತಿ ಅರಿವಾದರೆ ಗಂಡಿಗೆ ಇನ್ನೊಂದು ರೀತಿ ಅರಿವು. ಆದರೆ ಸ್ವಭಾವದಲ್ಲಿ ಅರಿವಿನ ಹಂತ ತಲುಪಿದಾಗ ಇಬ್ಬರ ನಡೆ ನೋಡುಗರು ಗಮನಿಸುವಷ್ಟು ಎದ್ದು ಕಾಣುತ್ತದೆ. ನಡೆ,ನುಡಿ,ಹಾವ-ಭಾವ, ಮಾತು-ಮೌನ, ನಗು-ಹಾಸ್ಯ, ಹುಸಿ ಕೋಪ ಒಂದಾ, ಎರಡಾ ಎಲ್ಲದರ ಒಪ್ಪಾದ ಸಮ್ಮಿಲನದ ಪ್ರೌಢಾವಸ್ಥೆಯಲ್ಲಿ ಮಿನುಗುವ ತೇರು ಈ ಹರೆಯವೆಂಬ ಚೈತ್ರ ಮಾಸ. ಮನಸ್ಸು ದೇಹ ಪುಳಕಗೊಳ್ಳುವ ಋತುಗಾನ.

ಯುವ ಮನಸ್ಸಿನ ಹತ್ತು ಹಲವು ಮುಖಗಳು
ಹರೆಯದ ಹುಚ್ಚುತನದ ಭಾವನೆಗಳು ಮನಸ್ಸಿನ ಸ್ವಾಸ್ಥ್ಯ ಕೆಡಿಸಿ ಹೆಂಡ ಕುಡಿದ ಮಂಗನ ಹಾಗೆ ನಮ್ಮನ್ನು ಮಾಡುತ್ತದೆ. ಬದುಕಿನ ಏಳಿಗೆಯ ಮೆಟ್ಟಿಲು ಹತ್ತುವ ಸಮಯದಲ್ಲಿ ಪ್ರೀತಿಯ ಮಹಲು ಏರಲು ಪ್ರಯತ್ನಿಸುತ್ತೇವೆ. ಜಾರಿ ಬಿದ್ದಾಗಲೇ ಪ್ರಪಾತದ ಅರಿವುಂಟಾಗುತ್ತದೆ. ಇದಕ್ಕೆ ಸಣ್ಣ ಉದಾಹರಣೆಗಳು ಇಲ್ಲಿದೆ, ನೋಡಿ

*ಕವಿತಾ ಆಗಷ್ಟೇ ತನ್ನ ಹರೆಯದ ಹುಚ್ಚು ಆಸೆಗಳಿಗೆ ತನ್ನ ಮನಸ್ಸನ್ನು ಪರದೆಯಾಗಿಸಿದ್ದಳು, ಮೈನೆರೆದು ಏಳೆಂಟು ತಿಂಗಳುಗಳು ಕಳೆದಿದ್ದಿರಬಹುದು. ಪ್ರಾಯದ ಬಿಸುಪಿಗೆ ಹರೆಯದ ಆಸೆಗಳು ಗರಿಗೆದರಿದ್ದವು. ಕನಸುಗಳಲ್ಲಿಯೂ ಕಚಗುಳಿ ಇಡುವ ಅವಳ ರಾಜಕುಮಾರನ ಕಲ್ಪನೆಗಳು ಅವಳನ್ನು ರೋಮಾಂಚನಗೊಳಿಸುತ್ತಿದ್ದವು. ಆಗಷ್ಟೇ ಹತ್ತನೆ ತರಗತಿ ಓದುತ್ತಿದ್ದರೂ ಕಾಣುವ ಕನಸುಗಳಿಗೇನೂ ಕಡಿಮೆಯಿರಲಿಲ್ಲ. ಅಷ್ಟಲ್ಲದೆ ದ.ರಾ.ಬೇಂದ್ರೇಯವರು ಹುಚ್ಚುಕೋಡಿ ಮನಸು,ಹದಿನಾರರ ವಯಸು ಎಂದು ಹೇಳಿದ್ದಾರೆಯೇ.
ಮನೆ ಕಡೆ ಆಗರ್ಭ ಶ್ರೀಮಂತರಲ್ಲದಿದ್ದರೂ ಅವಳ ತಂದೆ ಮಗಳಿಗೇನೂ ಕಡಿಮೆ ಮಾಡಿರಲಿಲ್ಲ. ತಂದೆಯದು ಸ್ವಂತ ಉದ್ಯಮವಾದುದರಿಂದ ತಾಯಿ ಕೂಡ ಅವರಿಗೆ ಹೆಗಲು ಕೊಟ್ಟಿದ್ದಳು. ಈ ಕಾರಣದಿಂದಲೇ ಏನೋ ಕವಿತಾಗೆ ಸ್ವಲ್ಪ ಅತಿಯೇನಿಸುಷ್ಟೇ ಸ್ವಾತಂತ್ರ್ಯ ಸಿಕ್ಕಿತ್ತು. ಅವಳ ದೇಹದಲ್ಲಾದ ಬದಲಾವಣೆಗಳು ಆ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿಸಿಕೊಳ್ಳೆಂದು ಆಕೆಯನ್ನು ಪ್ರೇರೆಪಿಸುತ್ತಿದ್ದವು. ಕನಸಿನಲ್ಲಿನ ರಾಜಕುಮಾರನನ್ನು ಈಗ ಎದುರಿಗೆ ಸಿಗುತ್ತಿದ್ದ ಹುಡುಗರ ಚರ್ಯೆಯಲ್ಲಿ ಹುಡುಕುತ್ತಿದ್ದಳು. ಅವಳ ವಯಸ್ಸಿನ ಅಪ್ರಬುದ್ಧತೆಯೋ ಏನೋ ಸ್ವಲ್ಪ ಸಿನಿಮೀಯ ಹೀರೋಯಿಸಂ ತೋರಿಸಿದ ಹುಡುಗರೆಲ್ಲಾ ಅವಳ ಕನಸಿನ ರಾಜಕುಮಾರನಿಗೆ ತಾಳೆಯಾಗುತ್ತಿದ್ದರು. ಅವಳ ಶಾಲೆಯಲ್ಲಿಯೇ ಕಲಿತ ಹಳೆಯ ವಿದ್ಯಾರ್ಥಿ ಚರಣ , ಸ್ವಲ್ಪ ಒರಟು ಸ್ವಭಾವದ ಹುಡುಗ ಆದರೆ ಎತ್ತರದ ನಿಲುವು ಮತ್ತು ಆಕರ್ಷಕ ಮೈಕಟ್ಟು ಹೊಂದಿದ್ದನು. ಅವನಿಗೆ ಕ್ರಿಕೇಟ್ ಎಂದರೆ ಒಂದು ರೀತಿಯ ಹುಚ್ಚು, ತಕ್ಕ ಮಟ್ಟಿಗೆ ಒಳ್ಳೆಯ ಆಟಗಾರನೆ, ಆ ಕ್ರಿಕೆಟ್ ಹುಚ್ಚಿನಿಂದಲೇ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿಕೊಂಡು, ಈಗ ಬೀದಿ ಅಲೆಯುತ್ತಿದ್ದ, ಅವನ ಹಿಂದೆ ಅವನಂತವರ ದೊಡ್ಡ ದಂಡೇ ಇತ್ತು. ಅವನಿಂದಾಗಿ ಅವರೆಲ್ಲಾ ಕೆಟ್ಟಿದ್ದರೋ, ಇಲ್ಲ ಅವರೆಲ್ಲರಿಂದಾಗಿ ಅವನು ಕೆಟ್ಟಿದ್ದನೋ ತಿಳಿಯದು.
ಇಂತಹ ಹುಡುಗರೇ ಹರೆಯದ ಹುಡುಗಿಯರ ಮನಸ್ಸಿಗೆ ಬೇಗ ಲಗ್ಗೆಯಿಡುವುದೆಂದು ಕಾಣುತ್ತದೆ. ಯಾವುದೋ ಜಗಳದಲ್ಲಿ ಪ್ರಾರಂಭವಾದ ಅವರ ಪರಿಚಯ ಕ್ರಮೇಣ ಆತ್ಮೀಯತೆಯಾಗಿ , ನಂತರದಲ್ಲಿ ಪ್ರೀತಿಯಾಗಿ ಬದಲಾಗಿತ್ತು. ಅವಳಿಗೆ ಅವನ ಆ ಒರಟುತನ , ಆತ ಅವಳಿಗಾಗಿ ಮಾಡಿಕೊಳ್ಳುತ್ತಿದ್ದ ಹೊಡೆದಾಟಗಳು, ಅವನಿಗೆ ಅವಳ ಮೇಲಿದ್ದ ಅಗಾಧ ಪ್ರೀತಿಯ ಕುರುಹುಗಳಂತೆ ಭಾಸವಾಗುತ್ತಿದ್ದವು. ಜೊತೆಗೆ ಮೊಬೈಲ್ ನಲ್ಲಿ ಸಂದೇಶಗಳು ಮತ್ತು ಕರೆಗಳು ಸರಾಗವಾಗಿ ಹರಿದಾಡುತ್ತಿದ್ದವು. ಅವರಿಬ್ಬರಿಗೂ ಪ್ರತಿಕ್ಷಣವೂ ಸಂಪರ್ಕದಲ್ಲಿದ್ದೇವೆ ಎನಿಸುವಷ್ಟರ ಮಟ್ಟಿಗೆ ಒಬ್ಬರನೊಬ್ಬರು ಹಚ್ಚಿಕೊಂಡಿದ್ದರು. ಅವರ ಪ್ರೀತಿಯ ಅಮಲೋ ಏನೋ ಆಕೆ ತನ್ನ ಹತ್ತನೆಯ ತರಗತಿಯನ್ನು ಪಾಸು ಮಾಡಲು ತುಂಬಾ ಕಷ್ಟ ಪಡಬೇಕಾಯ್ತು. ಪ್ರೇಮ ಕುರುಡು ಎನ್ನುತ್ತಾರೆ ಆದರೆ ಪ್ರೀತಿಯಲ್ಲಿ ಬಿದ್ದವರು ತಮ್ಮ ಸಂಗಾತಿಯ ಕೋರೆಗಳ್ನು ಗುರ್ತಿಸುವಲ್ಲಿ ಕುರುಡರಾಗುತ್ತಾರೆ. ಅದರಂತೆ ಅವನ ಕೆಟ್ಟ ಚಟಗಳು ಅವಳ ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ. ಕವಿತಾ ಚರಣ ನ ಮೇಲೆ ತುಂಬಾ ಭಾವನಾತ್ಮಕವಾಗಿ ಅವಲಂಬಿತಳಾಗಿದ್ದಳು. ತನ್ನ ಅಪ್ಪ ಅಮ್ಮ ಸಣ್ಣದಾಗಿ ಗದರಿದರೂ ಸಾಕು, ಅವನ ಸಾಂಗತ್ಯ ಬಯಸುತ್ತಿದ್ದಳು. ಅದು ಹದಿ ಹರೆಯದವರ ಬಲಹೀನತೆ, ಅದಕ್ಕಾಗಿಯೇ ಬೆಳೆದ ಮಕ್ಕಳನ್ನು ತುಂಬಾ ಕಾಳಜಿಯಿಂದ ನಡೆಸಿಕೊಳ್ಳಬೇಕಾಗುತ್ತದೆ. ಆ ಕಾಳಜಿ ಮತ್ತು ಪ್ರೀತಿ ಹೆತ್ತವರಿಂದ ದೊರೆಯದಿದ್ದಾಗ ಮಕ್ಕಳು ಅದನ್ನು ಮತ್ತೊಬ್ಬರಲ್ಲಿ ಅರಸುತ್ತಾರೆ. ಆಗಲೇ ಮಕ್ಕಳು ಹಾದಿ ತಪ್ಪುವ ಸಂಭವ ಜಾಸ್ತಿ.


ಕವಿತಾ ಕಡಿಮೆ ಅಂಕ ಪಡೆದಿದ್ದ ಕಾರಣ ಕಾಲೇಜ್ ನಲ್ಲಿ ಸೀಟು ಗಿಟ್ಟಿಸಕೊಳ್ಳಲು ಪರದಾಡುವಂತಾಯ್ತು. ಕಾಲೇಜ್ ಸೇರಿದ ಮೇಲಂತೂ ಅವಳನ್ನು ಹಿಡಿಯುವವರೇ ಇಲ್ಲದಂತಾಯಿತು. ಕಾಲೇಜ್ ನ ತರಗತಿಗಳಿಗೆ ಗೈರಾಗಿ ಚರಣ ನೊಂದಿಗೆ ಬೈಕೇರಿ ಕುಳಿತುಬಿಡುತ್ತಿದ್ದಳು. ನಗರದ ಎಲ್ಲಾ ಚಿತ್ರಮಂದಿರಗಳು ಮತ್ತು ಉದ್ಯಾನವನಗಳನ್ನು ಅದಾಗಲೇ ಸಂದರ್ಶಿಸಿ ಆಗಿತ್ತು. ಅವರ ಈ ಪ್ರಣಯದಾಟ ಅವರ ಅಪ್ಪ ಅಮ್ಮಂದಿರ ಗಮನಕ್ಕೆ ಬರದಿದ್ದುದೇ ಸೋಜಿಗ. ಇಷ್ಟೆಲ್ಲವುಗಳ ನಡುವೆ ಕವಿತಾ ತನ್ನ ಪ್ರಥಮ ಪಿ.ಯು.ಸಿಯನ್ನು ಪಾಸ್ ಮಾಡಿದ್ದೇ ಒಂದು ಸಾಧನೆಯಾಗಿತ್ತು. ದ್ವಿತೀಯ ಪಿ.ಯು.ಸಿ ಗೆ ಕಾಲಿಟ್ಟರೂ ಆಕೆಗೆ ಓದಿನ ಬಗ್ಗೆ ಗಾಂಭೀರ್ಯತೆ ಬಂದಿರಲಿಲ್ಲ. ಏನಾದರಾಗಲಿ ಚರಣನೊಂದಿಗೆ ಸುತ್ತುವುದೇ ಸುಖವೆಂದು ಭಾವಿಸಿದ್ದಳು. ಈ ಕಾರಣದಿಂದಲೇ ಆಕೆ ತನ್ನ ಪೂರ್ವಭಾವಿ ಪರೀಕ್ಷೆಗಳನ್ನೂ ತಪ್ಪಿಸಿಕೊಂಡಳು. ಆಕೆಯ ಗೈರು ಹಾಜರಿಯ ಬಗ್ಗೆ ಪ್ರಾಂಶುಪಾಲರಿಂದ ಕವಿತಾಳ ಪೋಷಕರಿಗೆ ತಿಳಿದಾಗ ಅವಳ ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಯಾವತ್ತೂ ಕವಿತಾಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕದ ಪೋಷಕರು ಅವಳಿಗೆ ತೀರಾ ಬಿಗಿ ಮಾಡಿದರು. ಆದರೆ ಅವರಿಗೆ ಕವಿತಾ ಪ್ರೀತಿಯಲ್ಲಿ ಬಿದ್ದಿರುವುದು ತಿಳಿಯಲಿಲ್ಲ.
ಈ ವಿಷಯದ ಬಗ್ಗೆ ಚರಣ ನೊಂದಿಗೆ ಮಾತನಾಡಲು ಅವನನ್ನು ಕಾಣಲು ಕವಿತಾ ತಡಕಾಡಿದಳು . ಅದು ಹೇಗೋ ಧೈರ್ಯ ಮಾಡಿ ಉಪಾಯದಿಂದ ಅವನನ್ನು ಭೇಟಿಯಾದಳು. ಇಬ್ಬರು ಸೇರಿ ದೂರದಲ್ಲಿನ ಪ್ರವಾಸಿ ತಾಣಕ್ಕೆ ಹೋಗಿ ಮಾತನಾಡುವದೆಂದು ತೀರ್ಮಾನಿಸಿ , ಹೊರಟರು. ಅಲ್ಲಿನ ನಿರ್ಜನವಾದ ಪ್ರಶಾಂತ ವಾತಾವರಣ ಅವರ ಮಾತುಕತೆಗೆ ಪ್ರಶಸ್ತವೆನಿಸಿತ್ತು. ಮನೆಯಲ್ಲಿನ ಕಟ್ಟು ನಿಟ್ಟಿನ ವಾತಾವರಣದಿಂದ ಬೇಸತ್ತಿದ್ದ ಕವಿತಾಳಿಗೆ ಚರಣ ನ ಸಾಮೀಪ್ಯ ಹಾಯ್ ಎನಿಸಿತ್ತು. ಅವಳು ಮನೆಯಲ್ಲಿನ ಬಿಗುವಾದ ವಾತಾವರಣ ತಮ್ಮ ಪ್ರೀತಿಯ ಬಗ್ಗೆ ತಿಳಿಸುವಂತೆ ಮಾಡಿಬಿಡಬಹುದು ಎಂದು ಹೇಳಿ ಕಣ್ಣೀರಾಗಿದ್ದಳು. ತಮ್ಮ ಪ್ರೀತಿಯ ಬಗ್ಗೆ ಅವಳ ಮನೆಯಲ್ಲಿ ತಿಳಿದರೆ ದೊಡ್ಡ ರಾದ್ಧಾಂತವೇ ಆಗಿಬಿಡುತ್ತದೆಂಬುದನ್ನು ಮನಗಂಡ ಚರಣ ಸಣ್ಣದಾಗಿ ನಡುಗಿದ್ದ. ಆದರೂ ಅದನ್ನು ತೋರಗೋಡದೆ ಅವಳನ್ನು ಅಪ್ಪಿ ಸಂತೈಸುವ ಪ್ರಯತ್ನ ಮಾಡಿದನು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಬ್ಬರೂ ಅಧೀರರಾಗಿಬಿಟ್ಟರು. ಅಂತಹ ಒಂದು ವಿಷಮ ಘಳಿಗೆಯಲ್ಲಿ ಅವರಿಬ್ಬರ ಮನಸ್ಸುಗಳು ಹಳಿ ತಪ್ಪಿದವು. ಏಕಾಂತದ ತಾಣವಾದ್ದರಿಂದ ಅವರ ದೇಹದ ಹರೆಯದ ಬಿಸುಪಿಗೆ ಬೆವರ ಹನಿಗಳು ಧಾರಾಕಾರವಾಗಿ ಹರಿದಿದ್ದವು. ಎರಡೂ ಮನಸ್ಸುಗಳು ತಮಗೆ ಅರಿವೇ ಇಲ್ಲದೆ ಕಾಲು ಜಾರಿದ್ದವು. ನಂತರದ ದಿನಗಳಲ್ಲಿ ಚರಣ ಕವಿತಾಳೊಂದಿಗೆ ಮಾತನ್ನೇ ಕಡಿಮೆ ಮಾಡಿದ್ದನು. ಈ ಎಲ್ಲಾ ಫಟನೆಗಳಿಂದ ಕಂಗೆಟ್ಟಿದ್ದ ಕವಿತಾಳಿಗೆ ತಾನು ಕಾಲು ಜಾರಿದುದರ ಕುರುಹು ತನ್ನ ಗರ್ಭದಲ್ಲಿ ಚಿಗುರೊಡೆಯುತ್ತಿದೆ. ಎಂಬ ವಿಷಯ ಸಿಡಿಲೆರಗಿದಂತಾಗಿತ್ತು. ಅವಳ ಮನಸ್ಸು ಖಿನ್ನತೆಗೆ ಜಾರಿಬಿಟ್ಟಿತ್ತು. ಓದೂ ಬೇಡ, ಸುತ್ತುವುದೂ ಬೇಡ,ಜೀವನವೂ ಬೇಡ ಎನಿಸುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಚರಣ ಕೂಡ ಜೊತೆಗಿರದಿದ್ದುದು ಅವಳನ್ನು ಹೈರಾಣಾಗಿಸಿತು. ಕಡೆಗೆ ಮನೆಯವರಿಗೆ ಸತ್ಯವನ್ನು ತಿಳಿಸಲೂ ಆಗದೆ, ಎದುರಿಸಲೂ ಆಗದೇ ಹುಚ್ಚು ಮನಸ್ಸು ಆತ್ಮಹತ್ಯೆಗೆ ಶರಣಾಯಿತು. ಇತ್ತ ಚರಣ ಕೂಡ ಆತ್ಮಹತ್ಯೆಗೆ ವಿಫಲ ಯತ್ನ ಮಾಡಿ ಆಸ್ಪತ್ರೆಗೆ ಸೇರುವಂತಾಯಿತು.
ಇದು ಒಂದು ತರದ ಸಮಸ್ಯೆಯಾದರೆ, ಇದಕ್ಕಿಂತ ಭಿನ್ನವಾದ ಸಹಸ್ರ ಸಮಸ್ಯೆಗಳು ಪ್ರತಿನಿತ್ಯ ನಮ್ಮ ಕಣ್ಣೆದುರಲ್ಲೇ ನಡೆಯುತ್ತವೆ.

*ಪ್ರವೀಣ ಒಬ್ಬ ವಿದ್ಯಾವಂತ, ಬುದ್ದಿವಂತ ಜೀವನದಲ್ಲಿ ಏನನ್ನಾದರೂ ಸಾಧಿಸ ಬಲ್ಲೇ ಎಂಬ ಛಲ ಉಳ್ಳವನು. ಚಿಕ್ಕವಯಸ್ಸಿನಿಂದಲೇ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದವನು. ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಹೆಚ್ಚಿನ ಕುತೂಹಲ ಅವನಿಗೆ, ಹೊಸದಾಗಿ ತಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಿಚ್ಚಿ ತಯಾರಿಸಿರುವ ಬಗೆಯನ್ನು ತಿಳಿದು ಮತ್ತೇ ಜೋಡಿಸುವುದು. ಅವುಗಳಲ್ಲಿ ಹೊಸದಾಗಿ ಪ್ರಯೋಗಗಳನ್ನು ಮಾಡುವುದು. ಅವನ ಹವ್ಯಾಸವಾಗಿತ್ತು. ಇಷ್ಟೇಲ್ಲ ಜಾಣನಾದ ಪ್ರವೀಣಗೆ ತಂದೆ ತಾಯಿಯರ ಪ್ರೀತಿ ಬಂಧು ಬಳಗದವರ ಭಾಂಧವ್ಯ ಬಿಟ್ಟರೆ ಬೇರೆ ಯಾವುದಕ್ಕೂ ಕೊರತೆ ಇರಲಿಲ್ಲ. ಪ್ರವೀಣನ ತಂದೆ-ತಾಯಿಯರು ಒಂದು ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಉದ್ಯೋಗಸ್ಥರಾಗಿದ್ದು, ಸಾಕಷ್ಟು ಹಣವಂತರಾಗಿದ್ದರು, ಮಗ ಕೇಳುವುದಕ್ಕೂ ಮುಂಚೆಯೇ ಎಲ್ಲವನ್ನು ತಂದು ಕೊಡುತ್ತಿದ್ದ ಇವರು ಅವನಿಗೆ ಪ್ರೀತಿ-ಮಮತೆ, ಬಾಂಧವ್ಯದ ಸವಿ ಕೊಡುವಲ್ಲಿ ವಿಫಲರಾಗಿದ್ದರು. ಅಲ್ಲದೇ ಅವನನ್ನು ಬೇರೆ ಯಾರೊಂದಿಗೂ ಬೆರೆಯಲು ಬಿಡುತ್ತಿರಲಿಲ್ಲ. ಯಾವಾಗಲೂ ಓದು , ಶಿಸ್ತು ಅಂತಾ ಅವನನ್ನು ಮನೆಯಿಂದ ಹೊರಗೆ ಬಿಡುತ್ತಿರಲಿಲ್ಲ. ಮೊದ ಮೊದಲು ಪ್ರವೀಣ ಈ ವಾತಾವರಣಕ್ಕೆ ಒಗ್ಗಿಕೊಂಡಂತೆ ಕಂಡರೂ, ದೊಡ್ಡವನಾಗುತ್ತಾ ತನ್ನ ಸಹಪಾಠಿಗಳು-ಸಮವಯಸ್ಕರು ಸ್ವತಂತ್ರವಾಗಿ ಸ್ವಚ್ಛಂದವಾಗಿ ಇರುವದನ್ನು ಕಂಡು ಅವನ ಮನಸಲ್ಲಿ ತಾನು ಹಾಗೇ ಇರಬೇಕೆಂದು ಬಯಸುತ್ತಿದ್ದ. ಇದೇ ಸಮಯಕ್ಕೆ ಅವರ ಮನೆಯ ಎದುರು ಇರುವ ಖಾಲಿ ಮನೆಗೆ ಸುಮಾರು ೨೦-೨೨ ವರ್ಷದ ವ್ಯಕ್ತಿಯೊಬ್ಬ ಬಾಡಿಗೆಗೆ ಬರುತ್ತಾನೆ. ತಾನು ವಿದ್ಯಾರ್ಥಿ ಎಂದು, ಮನೆಯಲ್ಲಿನ ಬಡತನದಿಂದಾಗಿ ಓದು ಮುಂದುವರಿಸಲಾಗುತ್ತಿಲ್ಲ, ಅದಕ್ಕೆ ಇಲ್ಲಿಯೇ ಪಾರ್ಟ ಟೈಮ ಕೆಲಸ ಹುಡುಕಿಕೊಂಡು ಓದು ಮುಂದುವರಿಸುವ ಆಸೆ ಹೊತ್ತು ಪಟ್ಟಣಕ್ಕೆ ಬಂದಿರುವದಾಗಿ ಅಲ್ಲಿನ ನೆರೆ ಹೊರೆಯವರಿಗೆ ಹೇಳಿಕೊಳ್ಳುತ್ತಾನೆ. ಹುಡುಗನು ಒಳ್ಳೆಯವನಾಗಿ ಕಂಡದ್ದರಿಂದ ಅಲ್ಲಿದ್ದವರು ಅವನು ಒಂಟಿಯಾಗಿದ್ದರೂ ವಠಾರದಲ್ಲಿರುವದಕ್ಕೆ ಒಪ್ಪಿಕೊಳ್ಳುತ್ತಾರೆ. ಅದು ಅಲ್ಲದೆ ನೆರೆ- ಹೊರೆಯವರಿಗೆ ಸಣ್ಣ ಪುಟ್ಟ ಸಹಾಯ ಮಾಡುತ್ತಾ ಎಲ್ಲರ ಮನಸ್ಸನ್ನು ಗೆಲ್ಲುತ್ತಾನೆ ಆ ಹುಡುಗ. ಈ ಹೊತ್ತಿಗಾಗಲೇ ಪ್ರವೀಣ ತನ್ನ ಹತ್ತನೇ ತರಗತಿ ಮುಗಿಸಿ ಪಿಯುಸಿ ಗೆ ಸೇರಿಕೊಂಡಿರುತ್ತಾನೆ. ತನಗೂ ಮನೆಯಲ್ಲಿ ಒಬ್ಬನಿಗೆ ಓದಲಿಕ್ಕೆ ಬೇಜಾರುಗುತ್ತೇ , ಅದಕ್ಕೆ ಎದುರು ಮನೆಯ ಹುಡುಗನ ಜೊತೆ ಓದಿಕೊಳ್ಳಲು ಹೋಗುವದಾಗಿ ತಂದೆ- ತಾಯಿಗೆ ತಿಳಿಸಿದಾಗ, ಅವರು ಕೂಡಾ ಹುಡುಗ ಒಳ್ಳೆಯವನಾಗಿ ಕಂಡಿದ್ದರಿಂದ ತಮ್ಮ ಮಗನನ್ನು ಅಲ್ಲಿಗೆ ಓದಲು ಕಳಿಸುತ್ತಾರೆ. ಹೀಗೆ ಪ್ರವೀಣ ಆ ಹುಡುಗನ ಜೊತೆ ಸೇರಿ ಓದುವ ನೆಪ ಮಾಡಿ ಅವನ ಜೊತೆ ಹರಟೆ ಹೊಡೆಯುವುದು, ಕಾಲ ಕಳೆಯುವುದು , ಹೊರಗಡೆ ಸುತ್ತಾಡುವುದು ಶುರುವಾಗುತ್ತೆ, ಇದು ಅವನಿಗೆ ಮಜವೆನಿಸಿ ಒಂದೊಂದು ದಿನ ರಾತ್ರಿ ತುಂಬಾ ಓದುವದಿದೆ ಎಂದು ಅಲ್ಲಿಯೇ ಮಲಗಿ ಬೆಳಿಗ್ಗೆ ಬರುವುದು ಮಾಡುತ್ತಿರುತ್ತಾನೆ. ಈ ನಡುವೆ ಪ್ರವೀಣ ಅವನೊಂದಿಗೆ ಸೇರಿ ಬೇಜಾರು ಕಳೆಯಲೆಂದು ಆಡುತ್ತಿದ್ದ ಇಸ್ಪೀಟ್ ಆಟ ಈಗ ಬೆಟ್ಟಿಂಗ್‌ವರೆಗೂ ಬೆಳೆದುಬಿಟ್ಟಿರುತ್ತದೆ, ಜೊತೆಗೆ ಕುಡಿಯುವುದು, ಸೀಗರೆಟ್ ಸೇದುವುದು ಎಲ್ಲವನ್ನೂ ಕಲಿತಿರುತ್ತಾನೆ. ಹರೆಯದ ವಯಸ್ಸಿನಲ್ಲಿ ಉಂಟಾಗುವ ಉನ್ಮಾದಗಳಿಗೆ ಸಿಲುಕಿ ಪ್ರವೀಣ ಬಲಿಯಾಗುತ್ತಿರುತ್ತಾನೆ, ಹಾಗೂ-ಹೀಗೂ ಮಾಡಿ ಪ್ರಥಮ ಪಿಯುಸಿ ಪಾಸು ಮಾಡಿದ ಮಗನ ಫಲಿಂತಾಶ ನೋಡಿ ತಂದೆ-ತಾಯಿಯರು ಮಗನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡು , ಅವನನ್ನು ಮೊದಲಿಂತೆ ಕಟ್ಟುನಿಟ್ಟಾಗಿ ಇಡಲು ಪ್ರಯತ್ನಿಸುತ್ತಾರೆ.

ಖರ್ಚಿಗೆ ಹಣವನ್ನು ಕೊಡುವದನ್ನು ನಿಲ್ಲಿಸಿ, ತನಗೆ ಬೇಕಾದನ್ನು ಕೇಳಿದರೆ ತಾವೇ ಕೊಡಿಸುವದಾಗಿ ಹೇಳುತ್ತಾರೆ. ಇದರಿಂದ ಪ್ರವೀಣ ರೋಸಿ ಹೋಗುತ್ತಾನೆ. ಇದೇ ಬೇಜಾರಿನಲ್ಲಿ ಎದುರು ಮನೆ ಹುಡುಗನ ಹತ್ತಿರ ಹೋಗುತ್ತಾನೆ, ಆಗ ಅವನು ಗಡಿಯಾರಕ್ಕೆ ಮತ್ತು ಟಾರ್ಚಗಳಿಗೆ ಹಾಕಿ ವೇಸ್ಟ ಆದ ಸೆಲ್ ಗಳಿಗೆ ಅದೇನೋ ತುಂಬುತ್ತಿರುತ್ತಾನೆ. ಅದು ಏನು ಎಂಬುದು ಪ್ರವೀಣಗೆ ತಿಳಿಯದು. ಆದರೂ ತಾನು ಸಹಾಯ ಮಾಡುವದಾಗಿ ಅವನೊಂದಿಗೆ ಕೈ ಜೋಡಿಸುತ್ತಾನೆ. ಏನಿದು ಎಂದು ಕೇಳಿದಾಗ ಹಾರಿಕೆಯ ಉತ್ತರ ನೀಡಿ ಹುಡುಗ ಸುಮ್ಮನಾಗುತ್ತಾನೆ. ಪ್ರವೀಣ ಮನೆಯಲ್ಲಿ ನಡೆದ ವಿಚಾರವನ್ನು ಹೇಳಿ ತನ್ನ ದುರಭ್ಯಾಸಗಳನ್ನು ಈಡೇರಿಸಿಕೊಳ್ಳಲಾಗದೇ ಹುಚ್ಚು ಹಿಡಿದವನಂತೆ ಗೋಳಾಡುವದನ್ನು ನೋಡಿ ಆ ಹುಡುಗ ಪ್ರತಿ ದಿನ ತಾನು ಅವನಿಗೆ ದುಡ್ಡು ಕೊಡುತ್ತಿರುತ್ತಾನೆ. ಅದಕ್ಕೆ ಪ್ರವೀಣ ಅವನಿಗೆ ಋಣಿಯಾಗಿ ಅವನ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಗ ತಾನು ಸೆಲ್ ಗಳಲ್ಲಿ ತುಂಬುವುದು ಮದ್ದು ಎಂದು ತಿಳಿಯುತ್ತಾನೆ. ಈ ಕೆಲಸದಿಂದಲೇ ತನಗೆ ಹಣ ದೊರೆಯುತ್ತಿದ್ದುದಾಗಿ ಆ ಹುಡುಗ ಹೇಳಿದಾಗ ತನಗೂ ಆ ಕೆಲಸವನ್ನು ಒಪ್ಪಿಸಿಕೊಡುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಇಬ್ಬರೂ ಸೇರಿ ಈ ಕೆಸಲ ಮಾಡುತ್ತಾರೆ. ಬಂದ ಹಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಪ್ರವೀಣ ತನ್ನ ಪಾಲಿಗೆ ಬರುವ ಹಣವನ್ನು ಆ ಹುಡುಗನ ಹತ್ತಿರ ಕೊಡುತ್ತಾನೆ. ಖರ್ಚಿಗೆ ಬೇಕಾದಾಗ ತೆಗೆದುಕೊಳ್ಳುತ್ತಿರುತ್ತಾನೆ. ಮೊದಲು ಅಲ್ಪ ಸ್ವಲ್ಪ ಇದ್ದ ಕೆಲಸ ದಿನದಿನಕ್ಕೆ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಾ, ಭಯಾನಕ ಸ್ಮಂಗ್ಲಿಂಗ್ ವ್ಯವಹಾರ ಮತ್ತು ನಕ್ಸಲ್ಶೆಟ್‌ಗಳ ಜೊತೆಗೆ ಸಂಬಂಧ ಬೆಳೆಯುವತ್ತ ಸಾಗುತ್ತದೆ. ಇಷ್ಟಾದರೂ ಪ್ರವೀಣನ ತಂದೆ-ತಾಯಿಯರಿಗಾಗಲೀ, ನೆರೆ-ಹೊರೆಯವರಿಗಾಗಲಿ ಇವರ ಬಗ್ಗೆ ಸುಳಿವೆ ಇರುವದಿಲ್ಲ. ಮೊದಲೇ ಹೊಸ ಹೊಸ ಪ್ರಯೋಗಗಳನ್ನು ಮಾಡುವಲ್ಲಿ ಉತ್ಸುಕನಾಗಿದ್ದ ಪ್ರವೀಣ ಮತ್ತು ಆ ಹುಡುಗ ಸೇರಿ ಅತೀ ಬಲಿಷ್ಠವಾದ ಸ್ಪೋಟಕವೊಂದನ್ನು ತಯಾರಿಸಿ ನಕ್ಸಲೈಟ್ಸ ಗೆ ನೀಡುವಲ್ಲಿ ಯಶಸ್ವಿಯಾಗುತ್ತಾರೆ. ಅದಕ್ಕೆ ಪ್ರತಿಯಾಗಿ ಅವರಿಂದ ಸಾಕಷ್ಟು ಹಣವನ್ನು ಪಡೆದಿರುತ್ತಾರೆ.
ಈ ಸಮಯಕ್ಕೆ ಪ್ರವೀಣ ತಂದೆ-ತಾಯಿ ಕೆಲಸದ ನಿಮಿತ್ಯ ಬೇರೆ ಊರಿಗೆ ಹೋಗುವ ಪ್ರಸಂಗ ಎದುರಾಗುತ್ತೆ, ಇರುವ ಒಬ್ಬ ಮಗನನ್ನು ಅವರು ನಂಬಿಕೆಯಿಂದ ಎರಡು ದಿನಗಳ ಮಟ್ಟಿಗೆ ಆ ಹುಡುಗನ ಜೊತೆ ಬಿಟ್ಟು ತಾವು ಪ್ರವಾಸ ಕೈಗೊಳ್ಳುತ್ತಾರೆ. ಪ್ರವೀಣ ತಂದೆ-ತಾಯಿ ಇಲ್ಲದಿರುವ ಖುಷಿಯಲ್ಲಿ ಅನಿಗೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗಿ ಕುಡಿದು ಕುಣಿದು ಕುಪ್ಪಳಿಸಿ ಹರೆಯದ ಅಮಲಿನಲ್ಲಿ ತೇಲುತ್ತಿರುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಅಘಾತಕಾರಿಯಾದ ಸುದ್ದಿಯೊಂದು ಅವನ ಕಿವಿಗೆ ಬೀಳುತ್ತದೆ. ಅದೇ ಅವನ ತಂದೆ-ತಾಯಿ ಪ್ರಯಾಣಿಸುತ್ತಿದ್ದ ರೈಲು ಸ್ಪೋಟಗೊಂಡಿದ್ದು, ಅದರಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ಜನ ಮರಣ ಹೊಂದಿದ್ದು, ಅವನ ತಂದೆ-ತಾಯಿ ಕೂಡಾ ಸತ್ತು ಹೋಗಿರುತ್ತಾರೆ. ಅಷ್ಟೇ ಅಲ್ಲದೇ ಆ ಸ್ಪೋಟಗೊಂಡಿದ್ದಕ್ಕೆ ಕಾರಣ ಇವನು ತಯಾರಿಸಿಕೊಟ್ಟಿದ್ದ ಬಲಿಷ್ಟವಾದ ಸ್ಪೋಟಕ ವಸ್ತು ಎನ್ನುವುದು ಸೋಜಿಗದ ಸಂಗತಿ. ಪ್ರವೀಣ ತನ್ನ ತಂದೆ-ತಾಯಿ ತನ್ನನ್ನು ಕಟ್ಟು-ನಿಟ್ಟಾಗಿ ಇಟ್ಟಿರುವದಕ್ಕೆ ಬೇಜಾರಾಗಿ ಅವರನ್ನು ದ್ವೇಷಿಸುವದನ್ನು ಬಿಟ್ಟರೆ ಅವರನ್ನು ಮಾನಸಿಕವಾಗಿ ತುಂಬಾ ಪ್ರೀತಿಸುತ್ತಿದ್ದ, ಪ್ರತಿದಿನ ಅವರಿಗೆ ನಮಸ್ಕಾರ ಮಾಡದೇ ಹೊರ ಹೋಗುತ್ತಿರಲಿಲ್ಲ, ದಿನಕ್ಕೆ ಒಂದು ಸಲವಾದರೂ ಅವರ ಕೈ ತುತ್ತಿನೂಟ ಮಾಡದೇ ಇರುತ್ತಿರಲಿಲ್ಲ. ಅದನ್ನೆಲ್ಲ ನೆನೆಸಿಕೊಂಡು ಅಳುವದಕ್ಕಾಗದೆ ಒದ್ದಾಡತೊಡಗಿದ. ತಾನು ಮಾಡಿದ ತಪ್ಪಿಗಾಗಿ ಮನದಲ್ಲೇ ಮರುಗ ತೊಡಗಿದ. ತಾನು ಮಾಡಿದ ಕೆಲಸ ತನ್ನ ತಂದೆ-ತಾಯಿಯನ್ನೇ ಬಲಿ ತೆಗೆದುಕೊಂಡಿರುವದು ಅವನಿಗೆ ನಾಚಿಗೇಡಿನ ಸಂಗತಿಯಾಗಿತ್ತು. ಇಷ್ಟೋತ್ತಿಗಾಗಲೇ ಪೋಲಿಸರು ಆ ಸ್ಪೋಟದ ಬಗ್ಗೆ ತನಿಖೆ ನಡೆಸಿದ್ದರು. ಇತ್ತ ಆ ಹುಡುಗ ಊರಿಗೆ ಹೋಗಿ ತಂದೆ-ತಾಯಿಗೆ ಹಣ ಕೊಟ್ಟು ಬರುವದಾಗಿ ಹೇಳಿ ಹೋದವ ೧೫ ದಿನಗಳಾದರೂ ಇತ್ತ ಕಡೆ ತಲೆ ಸಹ ಹಾಕಿರಲಿಲ್ಲ. ಪ್ರವೀಣ ಟಿ.ವಿಯಲ್ಲಿ ಬರುವ ಸ್ಪೋಟದ ಬಗೆಗಿನ ವಿಚಾರಗಳನ್ನು ಕೇಳಿ ನಡುಗತೊಡಗಿದ, ಪೋಲಿಸರ ಕಾರ್ಯಾಚರಣೆ ದಿನದಿಂದ ದಿನಕ್ಕೆ ಜೋರಾಗಿಯೇ ನಡೆದಿತ್ತು, ಅದನ್ನು ಕಂಡು ಪ್ರವೀಣ ಮನೆ ಬಿಟ್ಟು ಹೊರಗಡೆ ಹೋಗುವ ಧೈಂiiವನ್ನೆ ಮಾಡಿರಲಿಲ್ಲ, ತಂದೆ-ತಾಯಿ ಶವ ಸಂಸ್ಕಾರಕ್ಕೂ ಸಹ. ಅವರಿಬ್ಬರನ್ನು ಅನಾಥ ಶವಗಳೆಂದು ಪರಿಗಣಿಸಿ ಪೋಲಿಸರು ಸಂಸ್ಕಾರ ಮಾಡಿದ್ದನ್ನು ಟಿ.ವಿ ಸುದ್ದಿಯಿಂದಲೇ ತಿಳಿದುಕೊಂಡ ಪ್ರವೀಣ ಮಾನಸಿಕವಾಗಿ ಕುಗ್ಗಿ ಹೋದ. ಮುಂದೆನೂ ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಪೋಲಿಸರು ಅವನನ್ನು ಹುಡುಕಿ ಬಂಧಿಸಿದರು. ಅಲ್ಲದೇ ಕಠಿಣ ಶಿಕ್ಷೆಯನ್ನು ವಿಧಿಸಿದರು. ಇವನ ಜೊತೆ ಇದ್ದ ಆ ಹುಡುಗನನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದರು. ಅವನಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆಗ ಪ್ರವೀಣನಿಗೆ ತಿಳಿದ ಮತ್ತೊಂದು ಸಂಗತಿ ಇನ್ನೂ ರೋಚಕವಾಗಿತ್ತು, ಅದೇನೆಂದರೆ ತಮ್ಮ ಮನೆ ಎದುರು ಬಾಡಿಗೆ ಬಂದ ಹುಡುಗ ಕೂಡ ಒಬ್ಬ ಶ್ರೀಮಂತ ಮನೆತನದಿಂದ ಬಂದವನಾಗಿದ್ದು, ಕೋಟ್ಯಾಧಿಪತಿಗಳ ಒಬ್ಬನೆ iಗನಾಗಿದ್ದ, ಈ ಸ್ಪೋಟವಷ್ಟೇ ಅಲ್ಲದೆ ಇಂತಹ ಅನೇಕ ಸ್ಪೋಟಕ ವಸ್ತುಗಳನ್ನು ಸರಬರಾಜು ಮಾಡುವಲ್ಲಿ ನಕ್ಸಲೈಟ್ಸ ಜೊತೆ ಕಾರ್ಯ ಮಾಡಿದ್ದ ಎಂಬುದು.
ಇವರಿಬ್ಬರ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅಪರಾಧ ನಿಗ್ರಹ ತಂಡ ಇಷ್ಟು ಚಿಕ್ಕವಯಸ್ಸಿನಲ್ಲೇ ದೇಶಕ್ಕೆ ಮಾರಕವಾಗುವ ಇಂತಹ ಕೆಲಸ ಮಾಡಲು ಹೇಗೆ ಸಾಧ್ಯ.

ಇವರ ಕುಟುಂಬದಲ್ಲಿ, ಪರಿಸರದಲ್ಲಿ ಇಂತಹ ಕಾರ್ಯಗಳು ಜರುಗುತ್ತಿರಬಹುದಾ! ಎಂಬುದನ್ನು ಪರಿಶೀಲಿಸಿದಾಗ, ಮಾನಸಿಕ ತಜ್ಞರಿಂದ ಇವರ ಮನಸಿನ ಸ್ಥಿತಿಯ ಬಗ್ಗೆ ಅಧ್ಯಯನ ಮಾಡಿದಾಗ ತಿಳಿದು ಬಂದಿದ್ದು ಒಂದೇ ವಿಚಾರ ಹರೆಯದಲ್ಲಿನ ಹುಚ್ಚು ಆಸೆಗಳಿಗೆ, ಉತ್ಸಾಹ, ಪ್ರಚೋದನೆ, ಉನ್ಮಾದಗಳಿಗೆ ಸಿಲುಕಿ ಮಾಡಿದ ತಾವೇ ತಂದುಕೊಂಡ ದುರವಸ್ಥೆ ಇದಾಗಿರುತ್ತದೆ.
ಇಲ್ಲಿ ತಿಳಿಯಬೇಕಾದ ಒಂದು ಸಂಗತಿ ಎಂದರೆ ಮುಖ್ಯವಾಗಿ ಹರೆಯದಲ್ಲಿ ಉಂಟಾಗುವ ಯಾವ ತಲ್ಲಣ ತವಕಗಳು ಶಾಶ್ವತವಲ್ಲ, ಅನುಭವವಿಲ್ಲದ ಹುಚ್ಚು ಯೋಚನೆಗಳ ಬೆನ್ನು ಹತ್ತಿ ಓಡಿದರೆ ಅದು ಮರಿಚೀಕೆಯ ಬೆನ್ನು ಹತ್ತಿದಂತೆ, ಕೊನೆಯಲ್ಲಿ ಸಿಗುವುದೇನು ಇಲ್ಲ ಕಳೆದುಕೊಳ್ಳುವುದೇ ಹೆಚ್ಚು. ಹದಿಹರೆಯದವರಲ್ಲಿ ಅತೀ ಹೆಚ್ಚಿನ ಉತ್ಸಾಹವಿರುವುದರಿಂದ ಬೇಗ ಪ್ರಚೋದನೆಗಳಿಗೆ ಈಡಾಗುತ್ತಾರೆ. ಹಾಗಾಗಿ ಅವರಲ್ಲಿ ಅತೀಯಾದ ಸಂತೋಷ ಅಥವಾ ಒಂಟಿತನ, ಬಹಿರ್ಮುಖತೆ ಅಥವಾ ಅಂತರ್ಮುಖತೆ , ತೀರಾಕುತೂಹಲ ಅಥವಾ ಬೇಜಾರು, ಆತ್ಮವಿಶ್ವಾಸ ಅಥವಾ ಅನುಮಾನ ಹೀಗೆ ನಾನಾಭಾವಗಳು ಕಾಡುತ್ತವೆ. ಈ ಹದಿವಯಸ್ಸಿನಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ.
*ಪೋಷಕರಿಂದ ಸ್ವತಂತ್ರ ಜೀವನ
*ಗಂಡು-ಹೆಣ್ಣು ಇಬ್ಬರೊಡನೆಯೂ ಹೊಸ ಸಾಮಾಜಿಕ ಸಂಬಂಧ ಬೆಳೆಸುವುದು.
*ಹೊಸ ಬದುಕಿಗೆ ಬದಲಾಗುತ್ತಿರುವ ಪಾತ್ರಗಳಿಗೆ ಹೊಂದಾಣಿಕೆ.
*ಭವಿಷ್ಯತ್ತಿನ ಗುರಿಗಳ ಬಗ್ಗೆ ನಿರ್ಧಾರ
*ಜವಾಬ್ದಾರಿಯುತ ಪ್ರಜೆಯಾಗುವ ಸಿದ್ದತೆ
*ನೈತಿಕ ಮೌಲ್ಯಗಳು ಹಾಗೂ ನಂಬಿಕೆಗಳ ಆಧಾರದ ಬದುಕಿನ ಬಗ್ಗೆ ಚಿಂತನೆ
*ತನ್ನದೇ ಆದ ಅಸ್ತಿತ್ವ ಬೆಳೆಸಿಕೊಳ್ಳುವುದು.
ಜೊತೆಗೆ ವಿಭಿನ್ನವಾದ ತಲ್ಲಣ-ತವಕಗಳು, ಅಭದ್ರತೆ, ಚೆಲ್ಲಾಟ, ಸಂಬಂಧಗಳ ಹುಸಿತನಗಳು ಹದಿಹರೆಯದವರಲ್ಲಿ ಕಂಡುಬರುತ್ತವೆ.
ಬಾಲ್ಯದ ಭದ್ರತೆಯನ್ನು ತೊಡೆದು ಹಾಕಿ ಸ್ವತಂತ್ರವಾಗಿ ಬದುಕಲು ಯೋಚಿಸುವ ಮುನ್ನ ತಾನು ಯಾರು , ಎತ್ತ ಸಾಗುತ್ತಿದ್ದೇನೆ ಎಂಬ ಸ್ಪಷ್ಟವಾದ ಕಲ್ಪನೆಗಳಿರಬೇಕು. ಈ ಆರಂಭದ ಹರೆಯದಲ್ಲಿ ಅಂದರೆ ೯ ರಿಂದ ೧೪ ವರ್ಷ ವಯಸ್ಸಿನಲ್ಲಿ ದೇಹದಲ್ಲಿ ಸಾಕಷ್ಟು ಹೊಸ ಬದಲಾವಣೆಗಳಾಗುತ್ತಿರುತ್ತವೆ.

*ಹೆಣ್ಣು ಮಕ್ಕಳಲ್ಲಿ ಮಾಸಿಕ ಸ್ರಾವದ ಚಕ್ರ ಆರಂಭವಾಗುತ್ತದೆ.
*ಜನನಾಂಗಗಳು ಹೆಚ್ಚು ಕ್ರೀಯಾಶೀಲವಾಗುತ್ತವೆ.
*ಸರಿಯಾದ ಪೋಷಣೆ ಹಾಗೂ ಆರೋಗ್ಯದ ಬಗ್ಗೆ ಒಳ್ಳೆಯ ಕಾಳಜಿ ವಹಿಸಿದರೆ ಒಳ್ಳೆಯ ಎತ್ತರ ಹಾಗೂ ಲೈಂಗಿಕವಾಗಿಯೂ ಬೇಗ ಪ್ರಬುದ್ಧರಾಗುತ್ತಾರೆ.
*ಪ್ರಬುದ್ಧತೆಯ ಮಟ್ಟ ಗಂಡು ಹೆಣ್ಣಿನಲ್ಲಿ ಭಿನ್ನವಾಗಿ ಕಂಡು ಬರುತ್ತದೆ.
*ಯಾವುದಾದರೂ ವ್ಯಕ್ತಿಯನ್ನು ಗಾಢವಾಗಿ ಹಚ್ಚಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಮಹಿಳೆಯನ್ನೂ,ಗಂಡು ಮಕ್ಕಳು ಪುರುಷರನ್ನೂ ಹೆಚ್ಚು ಹೆಚ್ಚು ಹಚ್ಚಿಕೊಳ್ಳುತ್ತಾರೆ. ಈ ವ್ಯಕ್ತಿ ಈ ಹರೆಯದವರ ದೃಷ್ಟಿಯಲ್ಲಿ ಹೆಚ್ಚು ಸಾಧಿಸಿದವರು,ನಾಯಕರು ಆಗಿರುತ್ತಾರೆ.
*ತ್ವರಿತಗತಿಯಲ್ಲಿ ಆಗುವ ಬದಲಾವಣೆಗಳಿಂದಾಗಿ ಸ್ವಚಿತ್ರಣ ಹಾಗೂ ವ್ಯಕ್ತಿತ್ವದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.

ವರ್ತನೆಯಲ್ಲಿ ಭಿನ್ನತೆ :- *ತಮ್ಮನ್ನೇ ವಿಚಿತ್ರವಾಗಿ ನೋಡುತ್ತಾರೆ ಹಾಗೂ ತಮ್ಮ ಬಗ್ಗೆ ಅತೀವ ಜಾಗೃತರಾಗಿರುತ್ತಾರೆ.
*ಹೆಣ್ಣು ಮಕ್ಕಳು ಹೆಚ್ಚು ಹೊತ್ತು ಕನ್ನಡಿಯ ಮುಂದೆ ನಿಲ್ಲುತ್ತಾರೆ. ಅಲಂಕಾರ ಮಾಡಿಕೊಳ್ಳುವದರಲ್ಲಿ ಹೆಚ್ಚಿ ಆಸಕ್ತಿ ವಹಿಸುತ್ತಾರೆ. ಹುಡುಗರ ಗಮನ ಸೆಳೆಯುವದರ ಬಗ್ಗೆ ಕಾತುರರಾಗಿರುತ್ತಾರೆ.
*ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಬೇಗ ಬೆಳೆಯುವದರಿಂದ ತಮಗಿಂತ ಸ್ವಲ್ಪ ಹಿರಿಯರಾದ ಗಂಡು ಹುಡುಗರೊಡನೆ ಹೆಚ್ಚು ಬೆರೆಯುತ್ತಾರೆ. ಹಾಗೂ ಅವರ ಗಮನ ಸೆಳೆಯಲು ಬಯಸುತ್ತಾರೆ.
*ಈ ಹರೆಯದವರು ತಮ್ಮ ತಂದೆ-ತಾಯಿಗೆ ಉಪಾಧ್ಯಾಯರಿಗೆ ಯಾವುದು ಕಿರಿಕಿರಿ ಉಂಟು ಮಾಡುತ್ತದೆ. ಎಂಬುದು ಸೂಕ್ಷ್ಮವಾಗಿ ತಿಳಿಯುತ್ತದೆ. ತಿಳಿದಿದ್ದರೂ ಕೂಡ ಅವರಿಗೆ ಕಿರಿಕಿರಿ ಮಾಡಲೆಂದೇ ಅಸಭ್ಯವಾಗಿ ವರ್ತಿಸುತ್ತಾರೆ.
ಉದಾಹರಣೆಗೆ-
*ಎಲ್ಲೆಂದರಲ್ಲಿ ವಸ್ತುಗಳನ್ನು ಬಿಸಾಡುವುದು
*ಅವಿಧೇಯತೆಯಿಂದ ನಡೆದುಕೊಳ್ಳುವುದು
*ಕೆಟ್ಟ ಭಾಷೆಯನ್ನು ಬಳಸುವುದು
*ಸಂಗೀತವನ್ನು ಜೋರಾಗಿ ಹಾಕುವುದು
*ಪೋನಿನಲ್ಲಿ ಗಂಟೆಗಟ್ಟಲೆ ಬೇಕಾದ , ಬೇಡವಾದ ವಿಷಯಗಳ ಬಗ್ಗೆ ಮಾತನಾಡುವುದು.
*ಹೋಂವರ್ಕ ಮಾಡದೇ ಇರುವುದು
*ಮನೆ ಕೆಲಸದಲ್ಲಿ ನೆರವಾಗದೇ ಇರುವುದು

ಹದಿ-ಹರೆಯದವರ ಆರೋಗ್ಯ ಸಮಸ್ಯೆ :- ಹತ್ತರಿಂದ ಹದಿನೆಂಟರ ನಡುವಿನ ತಾರುಣ್ಯ ಅಥವಾ ಹದಿಹರೆಯದ ವಯೋಮಾನ ಎನ್ನುವುದು ಜೀವನದ ಅತ್ಯಂತ ಸವಾಲಿನ ಮತ್ತು ಸಮ್ಮೋಹಕ ಕಾಲಾವಧಿ. ಹದಿಹರೆಯ ಎನ್ನುವುದು ಸ್ವಯಂ ನೀರಿಕ್ಷೇ, ಏಕಾಂತದ ಅಪೇಕ್ಷೆ, ಸ್ವಂತಿಕೆಯ ಸಂಘರ್ಷ, ಸಹವರ್ತಿಗಳ ಆಕರ್ಷಣೆ ಮತ್ತು ಕೆಲವು ಬಾರಿ ಕುಟುಂಬದ ಸದಸ್ಯರ ಜೊತೆಗಿನ ಘರ್ಷಣೆಗಳ ಗುಣಲಕ್ಷಣಗಳನ್ನು ಒಳಗೊಂಡಿರುವ ಬದುಕಿನ ಒಂದು ಸಂಕೀರ್ಣ ಘಟ್ಟ .ಇಷ್ಟು ಮಾತ್ರ ಅಲ್ಲ, ತಾರುಣ್ಯ ಅನ್ನುವುದು ಪ್ರಯೋಗಶೀಲತೆಯು, ಪ್ರಶ್ನೆ ಮಾಡುವ , ಭಾವನಾತ್ಮಕ ಏರಿಳಿತಗಳ , ಅಪಾಯಗಳಿಗೆ ಮೈಯೊಡ್ಡುವ ಪ್ರವೃತ್ತಿಯನ್ನು ಹೊಂದಿರುವ ಬದುಕಿನ ಆವೇಗದ ಹಂತ.
ಬೆಳವಣಿಗೆಯ ಹಂತಗಳ ಆಧಾರದ ಮೇಲೆ ಹದಿಹರೆಯವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ- ಆರಂಭಿಕ(10ರಿಂದ 13ರ ವಯೋಮಾ), ಮಧ್ಯಮ (14 ರಿಂದ 16 ವರ್ಷಗಳು) ಮತ್ತು ಅನಂತರದ ತಾರುಣ್ಯ (17 ರಿಂದ 20ರ ನಡುವಿನ ವಯಸ್ಸು), ನರಜೀವ ವಿಜ್ಞಾನದ ಪ್ರಕಾರ ತಾರುಣ್ಯದ ಹಂತದಲ್ಲಿ ಮೆದುಳು ಓರಣಗೊಳ್ಳುವಿಕೆ,(ಮೈಲಿನೇಶನ್) ಭ್ರೂಣದಲ್ಲಿ ನರತಂತುಗಳಿಗೆ ಮಯಲಿನ್ ಆವರಣ ರೂಪುಗೊಳ್ಳುವ ಪ್ರಕ್ರೀಯೆ,ಮತ್ತು (ಮೆಚುರೇಷನ್)ವಿಕಸನ ಪ್ರಕ್ರೀಯೆಗಳಿಗೆ ಒಳಪಡುತ್ತದೆ. 21 ರಿಂದ 24 ವಯಸ್ಸಿನ ನಡುವೆ ಆ ಪ್ರಕ್ರೀಯೆಯು ಪೂರ್ಣಗೊಳ್ಳುತ್ತದೆ. ಈ ವಯೋವರ್ಗದಲ್ಲಿ ಮೆದುಳಿನಲ್ಲಿ ಇರುವ ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿದ ಲಿಂಬಿಕ್ ಸಿಸ್ಟಂ ಎಂಬ ನರಜಾಲವು , ತುಲನಾತ್ಮಕವಾಗಿ (ಫ್ರಿಫ್ರಾಂಟಲ್ ಲೋಬ್) ಭಾವನೆಗಳ ನಿಯಂತ್ರಣ ಮತ್ತು ತೀರ್ಮಾನವನ್ನು ಕೈಗೊಳ್ಳುವಲ್ಲಿ ಹೆಚ್ಚು ವಿಕಸನಗೊಳ್ಳುತ್ತವೆ.
ಈ ಕಾರಣದಿಂದಾಗಿ ಹದಿ-ಹರೆಯದಲ್ಲಿ ವ್ಯಕ್ತಿಗಳು ಹೆಚ್ಚು ಭಾವುಕರಾಗಿ ಮತ್ತು ಸಂವೇದನಾಶೀಲರಾಗಿ ವರ್ತಿಸುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ,ಅವಿಭಕ್ತ ಕುಟುಂಬ ವ್ಯವಸ್ಥೆಯು ಮಾಯವಾದ ಕಾರಣ, ಹೆತ್ತವರ ಮಾರ್ಗದರ್ಶನದ ಕೊರತೆ, ಮಾಧ್ಯಮಗಳ ಅನಿಯಂತ್ರಿತ ಪ್ರದರ್ಶನ, ಹೆಚ್ಚುತ್ತಿರುವ ಸ್ಪರ್ಧಾ ಮನೋಭಾವ, ಸ್ವಾರ್ಥಪರತೆ, ಕೊಳ್ಳುಬಾಕುತನ ಮತ್ತು ಸ್ವಂತಿಕೆಗಳ ಕಾರಣದಿಂದಾಗಿ ಹದಿ-ಹರೆಯದವರು ಮತ್ತು ಅವರ ಪೋಷಕರ ದುಶ್ಚಟಗಳು, ಜೀವನಶೈಲಿಯ ಅಸಹಜತೆಗಳು, ಲೈಂಗಿಕ ಸ್ವಚ್ಚಂದತೆ ಮತ್ತು ಜಾಲತಾಣ (ಇಂಟರ್‌ನೆಟ್)ವ್ಯಸನಗಳಂತಹ ಒತ್ತಡದ ಸಂದರ್ಭ/ಸದಾವಕಾಶಗಳು ಹೊಸ ಅಪಾಯಗಳಿಗೆ ಒಡ್ಡಿಕೊಳ್ಳುವಂತಾಗಿದೆ.

ಹರೆಯದ ಮಕ್ಕಳ ಪೋಷಕರಿಗಿರಬೇಕಾದ ಗುಣಗಳು;-

ಈ ಬದಲಾದ ಹಂತದಲ್ಲಿ ಪ್ರತಿಯೊಬ್ಬರದೂ ನೂರು ತಲ್ಲಣಗಳಿಗೆ ಸಿಲುಕಿ ಛಿದ್ರಗೊಂಡ ಜಗತ್ತು,ಆ ಜಗತ್ತಿನಲ್ಲಿ ಗಟ್ಟಿಯಾಗಿ ನೆಲೆಯೂರಲಾಗದ ಅಭದ್ರತೆಯಲ್ಲಿ ಹದಿಹರೆಯದವರು ನರಳುತ್ತಾರೆ. ಇಂದಿನ ಆಧುನಿಕ ಜೀವನ ಶೈಲಿ ಯುವಜನರಲ್ಲಿ ತಂದಿಟ್ಟ ಗೊಂದಲ,ತಲ್ಲಣಗಳು ಮತ್ತು ಸಾಂಸ್ಕೃತಿಕ, ಕೌಟುಂಬಿಕ ಬಿರುಕುಗಳು ಯುವಜನರ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ. ಈ ತಲ್ಲಣಗಳು ಶಾಂತವಾಗಿರಬೇಕಾದರೆ ಸಾಕಷ್ಟು ಸಿದ್ದತೆ ಬೇಕು. ಬಾಲ್ಯಾವಸ್ಥೆಯಲ್ಲಿ ಮಕ್ಕಳು ತಂದೆತಾಯಿಯರನ್ನು , ಉಪಾಧ್ಯಾಯರನ್ನು ಹೆಚ್ಚು ಆಶ್ರಯಿಸುತ್ತಾರೆ. ಚಿಕ್ಕವರಿದ್ದಾಗ ಮಕ್ಕಳಿಗೆ ಪೋಷಕರು ಪ್ರತಿಬಾರಿ ತಮ್ಮ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಮತ್ತು ನೀತಿಗಳನ್ನು ತಿಳಿಸಿಕೊಡುವಲ್ಲಿ ನಿರತರಾಗಿರುತ್ತಾರೆ. ಮಕ್ಕಳು ಬೆಳೆಯುವ ಹಂತದಲ್ಲಿಯೂ ಪೋಷಕರು ಸಾಕಷ್ಟು ವಿಷಯಗಳನ್ನು ತಮ್ಮ ಮಕ್ಕಳಿಂದ ತಿಳಿದುಕೊಳ್ಳುತ್ತಾರೆ. ಆದರೆ ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟೊಡನೆ ಸಾಕಷ್ಟು ಪ್ರಬುದ್ಧರಾಗಿರುವಂತೆ ವರ್ತಿಸುತ್ತಾರೆ. ಮತ್ತು ವಯೋಮಾನದಲ್ಲಿ ಅವರೊಂದಿಗೆ ವ್ಯವಹರಿಸುವುದು ಪೋಷಕರಿಗೆ ಕೊಂಚ ಕಷ್ಟವಾಗುತ್ತದೆ. ಇದಕ್ಕಾಗಿ ಪೋಷಕರು ಕೆಲವು ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇದರಿಂದ ಮಾತ್ರ ಹದಿಹರೆಯದ ಮಕ್ಕಳನ್ನು ನಿಭಾಯಿಸಲು ಪೋಷಕರೂ ಸಮರ್ಥರಾಗುತ್ತಾರೆ ಮತ್ತು ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ.

* ಹದಿ ಹರೆಯದವರ ಗುಣಲಕ್ಷಣಗಳಲ್ಲಿ ಪರಿವರ್ತನೆಯ ಹಂತ, ಬುದ್ದಿವಂತಿಕೆಯ ಮತ್ತು ಸಾಮರ್ಥ್ಯದ ವಿಶೇಷ ಮಟ್ಟದಲ್ಲಿರುವ ವಯೋಮಾನ, ಸ್ವಂತಿಕೆಯ ಬಗ್ಗೆ ಗೊಂದಲವನ್ನು ಹೊಂದಿರುವುದು, ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳದಿರುವುದು, ಸ್ವಾತಂತ್ರ್ಯ ಪ್ರವೃತ್ತಿಯ ಒಲವು,ಏನಾದರೂ ಮಾಡಿ ಗಮನವನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸುವದು,ಭಾವನೆಗಳ ಹತೋಟಿ ಇಲ್ಲದಿರುವಿಕೆ, ಸ್ವಯಂ-ನಿಯಂತ್ರಣದ ಕೊರತೆ ಮುಖ್ಯವಾಗಿದ್ದು , ಈ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಹೆತ್ತವರು ಹಿತಾಸಕ್ತಿಯನ್ನು ಹೊಂದಿರಬೇಕು ಮತ್ತು ಅವರ ಚಟುವಟಿಕೆಯ ಮೇಲೆ ಒಂದು ಕಣ್ಣಿಟ್ಟಿರಬೇಕು. ಒಂದು ವೇಳೆ ಹೆತ್ತವರು ಅಥವಾ ಪೋಷಕರು ತಮ್ಮ ಈ ಕರ್ತವ್ಯದಲ್ಲಿ ಹಿಂದುಳಿದರೆ ಹದಿ-ಹರೆಯದವರು ತಮ್ಮ ಸ್ನೇಹಿತರ ಒತ್ತಡಗಳಿಗೆ ಒಳಗಾಗಬಹುದು ಅಥವಾ ಅವರು ತಮ್ಮ ವಾಸ್ತವಿಕ ಸಾಮರ್ಥ್ಯವನ್ನು ಗುರುತಿಸುವದರಲ್ಲಿ ಹಿಂದೆ ಬೀಳಬಹುದು, ಶೈಕ್ಷಣಿಕ ಸಾಧನೆಯಲ್ಲಿ ಹಿಂದೆ ಬೀಳಬಹುದು, ಅವರಲ್ಲಿ ಹೊಂದಾಣಿಕೆಯ ಕೌಶಲ್ಯಗಳ ಕೊರತೆ, ಸ್ವಂತಿಕೆಯ ಕೊರತೆ ,ಆತ್ಮಗೌರವದ ಕೊರತೆ,ಅಸಹಜ/ಅಪಾಯಕಾರಿ ನಡುವಳಿಕೆ ಮತ್ತು ಮಾನಸಿಕ ಸಮಸ್ಯೆಗಳ ಅಪಾಯವು ಹೆಚ್ಚಾಗಬಹುದು.

*ತಾಳ್ಮೆ- ಹದಿಹರೆಯವೆಂದರೆ ತವಕ,ತಲ್ಲಣಗಳು,ತಿರುಗಿ ಮಾತನಾಡುವ ಸ್ವಭಾವಗಳು ಮಕ್ಕಳಲ್ಲಿ ಕಂಡು ಬರುವುದು ಸಾಮಾನ್ಯ. ಆದರೆ ಇದು ನಿಮಗೆ ತಾಳ್ಮೆಯ ಪಾಠ ಕಲಿಸುತ್ತದೆ. ಈ ಸಮಯದಲ್ಲಿ ತಾಳ್ಮೆಯಿಂದ ಇದ್ದಷ್ಟು ಉತ್ತಮ. ನೀವು ಹೊಸ ಕಟ್ಟು ಪಾಡುಗಳನ್ನು ಮಾಡಿದರೆ ಮಕ್ಕಳು ಅದನ್ನು ಸದಾ ಮೀರಲು ಯತ್ನಿಸುತ್ತಾರೆ. ಇದರಿಂದ ನೀವು ಹತಾಶೆಗೊಳಗಾಗುತ್ತಿರಿ. ಮತ್ತು ಕೋಪೋದ್ರೇಕಗೊಳ್ಳುತ್ತೀರಿ. ಆದ್ದರಿಂದ ಸಾಧ್ಯವಾದಷ್ಟು ತಾಳ್ಮೆಯಿಂದ ಇದ್ದರೆ ಪೋಷಕರಿಗೆ ಒಳ್ಳೆಯದು.

*ಕ್ಷಮಾಗುಣ- ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ತಪ್ಪುಗಳನ್ನು ಮಾಡುವುದು ಸಹಜ.ಕೆಲವೊಮ್ಮೆ ಈ ತಪ್ಪು ದೊಡ್ಡ ಪ್ರಮಾಣದಲ್ಲೇ ಇರುತ್ತದೆ. ಆದರೆ ಅದಕ್ಕಾಗಿ ಅವರಿಗೆ ಕಠಿಣ ಶಿಕ್ಷೆ ನೀಡುವ ಬದಲು ಕ್ಷಮೆ ತೋರಿಸಿ ಬಿಟ್ಟು ಬಿಡಿ. ನಿಮ್ಮ ಕ್ಷಮಾಗುಣವೇ ಅವರಿಗೆ ಪಾಠವಾಗಬೇಕು. ಬೈದು ಶಿಕ್ಷಿಸುವ ಬದಲು ತಾಳ್ಮೆಯಿಂದ ಅವರು ಮಾಡಿರುವ ತಪ್ಪಿನ ಬಗ್ಗೆ ಅವರಿಗೆ ತಿಳಿಸಿ ಹೇಳಿದಾಗ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಯತ್ನಿಸಬಹುದು. ಕ್ಷಮಾ ಗುಣ ತುಂಬಾ ಸವಾಲಿನ ಕೆಲಸ .ಆದರೆ ಮಕ್ಕಳಿಗೆ ಪ್ರಬುದ್ಧತೆಯ ಪಾಠ ಕಲಿಸಲು ಇದೊಂದೆ ಉತ್ತಮ ಮಾರ್ಗವಾಗಿದೆ.

*ಪ್ರಾಮಾಣಿಕತೆ-ಹರೆಯದ ಮಕ್ಕಳು ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದರೆ ಮೊದಲು ಪೋಷಕರು ಮಾದರಿ ವ್ಯಕ್ತಿಯಾಗಿರಬೇಕು. ಇದರ ಮೊದಲ ಹೆಜ್ಜೆಯಾಗಿ ಮಕ್ಕಳೊಂದಿಗೆ ಮತ್ತು ಇನ್ನಿತರರೊಂದಿಗೆ ಪ್ರಾಮಾಣಿಕವಾಗಿ ವರ್ತಿಸಿ.ಮಕ್ಕಳು ಕೂಡಾ ಇದನ್ನು ಅನುಕರಿಸುವಂತೆ ಮಾಡಬೇಕು. ಇದರಿಂದ ಪೋಷಕರು ಮತ್ತು ಮಕ್ಕಳ ಭಾಂಧವ್ಯದಲ್ಲಿ ನೇರ ಸ್ವಭಾವ ಮತ್ತು ಪ್ರಾಮಾಣಿಕತೆ ಸಹಜವಾಗಿ ಬೆಳೆಯುತ್ತದೆ.

ಇಂದು ನಗರ ಪ್ರದೇಶಗಳಲ್ಲಿ ಒತ್ತಡದ ಬದುಕಿನಿಂದಾಗಿ ಹದಿ ಹರೆಯದ ಮಕ್ಕಳ ಖಿನ್ನತೆಯ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿದೆ. ಪೋಷಕರು ಇಬ್ಬರೂ ದುಡಿಯುವ ಭರಾಟೆಯಲ್ಲಿ ಮಕ್ಕಳ ಕಡೆ ಹೆಚ್ಚು ಗಮನ ಹರಿಸಲು ಪೋಷಕರಿಗೆ ಸಮಯ ಸಿಗುವುದಿಲ್ಲ. ಮೇಲ್ವರ್ಗದ ಸಮಾಜದಲ್ಲಿ ಪೋಷಕರು ಅವರ ಫಾಸ್ಟ್ ಲೈಫನಿಂದ ಮಕ್ಕಳನ್ನು ಅಸಹಜವಾಗಿ ಬೆಳೆಸಿರುತ್ತಾರೆ. ಸಿಕ್ಕಾಪಟ್ಟೆ ಸ್ವಾತಂತ್ರ್ಯ ಕೊಡುತ್ತಾರೆ. ಅವರಿಗೆ ದುಡಿಯುವ ತುಡಿತ ಬಿಟ್ಟರೆ ಬೇರೇನೂ ಇರುವುದಿಲ್ಲ. ಮಕ್ಕಳು 90% ಕ್ಕಿಂತ ಹೆಚ್ಚು ಅಂಕ ಗಳಿಸಬೇಕು ಎಂಬುದಷ್ಟೇ ಅವರ ನಿಲುವು.ಆದರೆ ಮಕ್ಕಳಿಗೆ ನಿಜವಾದ ಜೀವನ ಪಾಠ ಸಿಗುವಂತೆ ಮಾಡಲು ಪೋಷಕರ ಹತ್ತಿರ ಸಾಮರ್ಥ್ಯ ಏನೂ ಇರುವುದಿಲ್ಲ. ಇಂದು ವೈಜ್ಞಾನಿಕವಾಗಿ, ಸಾಮಾಜಿಕವಾಗಿ, ಜಾಗತೀಕವಾಗಿ,ಹೀಗೆ ಯಾವುದೆಲ್ಲ ಕ್ಷೇತ್ರದಲ್ಲಿ ಮುಂದುವರಿದರೂ ಕೂಡ ಮಾನಸಿಕವಾಗಿ ಸಧೃಡರಾಗಿಲ್ಲ. ಯಾವುದೆಲ್ಲ ಕ್ಷೇತ್ರದಲ್ಲಿ ಏನೆಲ್ಲ ಸಾಧಿಸಿದರೂ, ಮಕ್ಕಳ ಮನಸ್ಸನ್ನು ಸಂಪೂರ್ಣವಾಗಿ ಸಂತುಷ್ಟಗೊಳಿಸುವಷ್ಟು ಚತುರತೆ ಇಂದಿನ ಪೋಷಕರಿಗಿಲ್ಲ ಎನ್ನುವುದು ವಿಷಾದಕರ ಸಂಗತಿ.
ಬದುಕಿನ ಇತರೆಲ್ಲಾ ಅನುಭವಗಳಿಗಿಂತ ಪೋಷಕತ್ವದ ಹಂತದಲ್ಲಿ ಮನುಷ್ಯ ಕಲಿಯಬೇಕಾದ ಗುಣಗಳು ಸಾಕಷ್ಟಿವೆ.ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಹಾಗೂ ಶಾರೀರಿಕ ಪರಿವರ್ತನೆ ಸಹಜ. ಈ ಸಮಯದಲ್ಲಿ ಅವರ ಮನಸ್ಸು ತುಂಬಾಸೂಕ್ಷ್ಮವಾಗಿರುತ್ತದೆ. ಈ ಮನಸ್ಥತಿಯನ್ನು ನಿಭಾಯಿಸುವ ಮತ್ತು ಅವರಲ್ಲಿ ಶಕ್ತಿ,ಧೈರ್ಯವನ್ನು ತುಂಬುವಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಹಿರಿದಾಗಿದೆ. ಹರೆಯದ ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಶಿಕ್ಷಕರು ಕೂಡಾ ಮಾನಸಿಕ ಒತ್ತಡದಿಂದ ದೂರವಿದ್ದು , ನಿರ್ಮಲ ಮನಸ್ಸಿನಿಂದ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಲಿಕೆ ಪ್ರಾರಂಭಿಸಬೇಕು. ಒಮ್ಮೆ ಮಕ್ಕಳು ತಪ್ಪು ಮಾಡಿದರೆ ಗದರುವಾಗಲೂ ಭಾಷೆಯನ್ನು ಸಂಯಮದಿಂದ ಬಳಸಬೇಕು. ಭಾವಿ ಪ್ರಜೆಯ ನಿರ್ಮಾತ್ರಕರಾದ ಶಿಕ್ಷಕರು ತಮ್ಮ ಬೌದ್ಧಿಕ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳದೇ ಇದ್ದಲ್ಲಿ ಶಾಲೆಗಳ ತರಗತಿಗಳನ್ನು ನಿರ್ವಹಣೆ ಮಾಡಲು ಕಷ್ಟವಾಗಿ ಮಕ್ಕಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.


ಯುವಕ-ಯುವತಿಯರಿಗೊಂದು ಕಿವಿಮಾತು-

ಕೈಯಲ್ಲೊಂದು ಮೊಬೈಲ್,ಜತೆಯಲ್ಲೊಬ್ಬರು ಸ್ನೇಹಿತರು ಸಿಕ್ಕಿದರೆ ಸಾಕು. ನಾವೊಂದು ದೊಡ್ಡ ಜನ ಎನ್ನುವ ಭಾವ ಮನದ ಮೂಲೆಯಲ್ಲಿ ಇಣುಕಲು ಶುರುವಾದಾಗ ಏನೋ ಹೇಳಲಾಗದ ತಲ್ಲಣ,ತಳಮಳಗಳು ಉದ್ಭವಿಸಲು ಹವಣಿಸುತ್ತವೆ. ಈ ಮರಳು ಮನಸ್ಸಿಗೆ ಆಸೆಗಳು ಜಾಸ್ತಿ, ವಾಸ್ತವದಿಂದ ದೂರವಾಗಿ ಕಲ್ಪನಾ ಲೋಕಕ್ಕೆ ಮನಸ್ಸು ಹತ್ತಿರವಾಗುತ್ತದೆ. ಹದಿ ವಯಸ್ಸು ಕನಸಿಗೆ ವೇದಿಕೆಯಾಗುತ್ತದೆ. ಬಾಲ್ಯದಲ್ಲಿ ಅಪೂರ್ಣಗೊಂಡಿದ್ದ ಭಾವಗಳು ಯೌವ್ವನದಲ್ಲಿ ಚಿಗುರಿ ಹೊಸ ರಂಗಿನ ಲೋಕಕ್ಕೆ ಕರೆದೊಯ್ಯುತ್ತವೆ. ಈ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಾವು ಮಾಡುತ್ತಿರುವ ತಪ್ಪು ಏನು ಎಂಬುದು ತಮಗೂ ಗೊತ್ತಿರುತ್ತೇ, ತಮ್ಮೊಳಗಿನ ಗುಟ್ಟು, ತಾನು ಮಾಡ್ತಾ ಇರೋದು ಸರಿಯಲ್ಲ ಎಂದು ಗೊತ್ತಿದ್ದರೂ ಕೂಡ ಹುಚ್ಚು ಮನಸ್ಸಿನ ಹವಣಿಕೆಗಳಿಗೆ ಬೆಂಬಲ ಕೊಟ್ಟು ತಮಗೆ ಗೊತ್ತಿಲ್ಲದೆಯೇ ಎಡವಿ ಬಿದ್ದರೆ, ತಮ್ಮ ಈ ಅಸಹಾಯಕತೆಯನ್ನು ಇನ್ನೊಬ್ಬರು ದುರುಪಯೋಗಪಡಿಸಿಕೊಳ್ಳುತ್ತಾರೆ. ಆ ಕ್ಷಣಕ್ಕೆ ಇದು ತಮಗೆ ಅರ್ಥವೇ ಆಗುವುದಿಲ್ಲ. ಕಾರಣ ಒಂದು ಪ್ರಶ್ನೆಯನ್ನು ತಮ್ಮ ಮನಸ್ಸಿಗೆ ಕೇಳಿಕೊಳ್ಳಿ . ಹೆಜ್ಜೆ ಹೆಜ್ಜೆಗೂ ಬದಲಾಗುತ್ತಿರುವ ನಮ್ಮ ಮನೋಸ್ಥಿತಿಯು ಹರೆಯದ ಹುಚ್ಚು ತಲ್ಲಣಗಳನ್ನು ನಿಭಾಯಿಸಲು ಸಜ್ಜುಗೊಂಡಿದೇಯಾ? ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥವಾಗಿದೆಯಾ? ಇಂದು ಮೊಬೈಲ್,ಫೇಸ್ ಬುಕ್, ವಾಟ್ಸಾಪ್, ಜಾಗತಿಕ ಜಾಲತಾಣ ಗಳ ಬಳಕೆಯಿಂದ ಜಗತ್ತೆ ಅಂಗೈಯಲ್ಲಿ ಇರುವಂತೆ ಭಾಸವಾಗುತ್ತಿದೆ ನಿಜ, ಆದರೆ ಇವುಗಳ ಅತೀಯಾದ ಬಳಕೆಯಿಂದಾಗಿ ಸಂಬಂಧಗಳಲ್ಲಿ ಯಾವ ಸ್ವಾರಸ್ಯವೂ ಉಳಿದಿಲ್ಲ, ಪ್ರೀತಿ-ಪ್ರೇಮ, ನೈಜತೆಗಳಿಗೆ ಯಾವ ಬೆಲೆಯೂ ಇಲ್ಲದಂತಾಗಿದೆ. ಇಂದು ದಿನಪತ್ರಿಕೆಗಳಲ್ಲಿ ಪ್ರತಿ ದಿನ ಒಂದಿಲ್ಲೊಂದು ಅಘಾತಕಾರಿ ಸಂಗತಿಗಳನ್ನು ಓದುತ್ತಲೇ ಇರುತ್ತೇವೆ. ಈ ಆಧುನಿಕ ಸಂಪರ್ಕ ಸಾಧನಗಳ ಬಳಕೆಯಿಂದಾಗಿ ಎಷ್ಟೋ ಜನ ಅಮಾಯಕ ಯುವಕ ಯುವತಿಯರು ದುಷ್ಟರ ಮಾತಿಗೆ ಮರುಳಾಗಿ ತಮ್ಮನ್ನೆ ಕಳೆದುಕೊಂಡ ಹಲವಾರು ಘಟನೆಗಳನ್ನು ಕೇಳಿದ್ದೇವೆ, ಕಣ್ಣಾರೆ ಕಂಡಿದ್ದೇವೆ. ಪ್ರೀತಿ ಮಾತಿಗೆ ಮರುಳಾಗಿ ಬ್ಲ್ಯಾಕ್‌ಮೇಲ್ ನಂತಹ ಸಂಕಷ್ಟಗಳಿಗೆ ತುತ್ತಾಗಿದ್ದಾರೆ, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾರೆ, ಮಾಡದಿರುವ ತಪ್ಪಿಗೆ ಜೀವನ ಪೂರ್ತಿ ಶಿಕ್ಷೆ ಅನುಭವಿಸುತ್ತಿದ್ದಾರೆ, ಹೊರ ಪ್ರಪಂಚದ ಅರಿವೆ ಇಲ್ಲದೇ ಜೀವಂತ ಶವಗಳಾಗಿ ಬದುಕುತ್ತಿದ್ದಾರೆ.
ಹರೆಯದ ಹುಚ್ಚು ಮನಸ್ಥಿತಿಗೆ ಬಲಿಯಾಗಿ ತಮ್ಮನ್ನು ತಾವು ಕಳೆದುಕೊಂಡು ,ಪೋಷಕರ ಮನಸ್ಸನ್ನು ಘಾಸಿಗೊಳಿಸುವ ಯುವಕ-ಯುವತಿಯರಲ್ಲಿ ನನ್ನ ಮನವಿ ,ಯಾವ ಪೋಷಕರು ತಮ್ಮ ಮಕ್ಕಳಿಗೆ ಕೆಡುಕನ್ನು ಬಯಸುವದಿಲ್ಲ. ಯಾವ ಮಕ್ಕಳಿಗೂ ಹೆತ್ತವರು ದುಃಖವನ್ನು ಕೊಡಲಾರರು, ಕೊಟ್ಟರು ಅದು ಕ್ಷಣಿಕ ಮಾತ್ರ, ಮಕ್ಕಳು ಆ ಕ್ಷಣ ಅನುಭವಿಸಿದ ನೋವಿನ ಎರಡರಷ್ಟು ದುಃಖವನ್ನು ಪೋಷಕರು ಅನುಭವಿಸಿರುತ್ತಾರೆ. ಕೊಟ್ಟ ನೋವಿನ ಹತ್ತರಷ್ಟು ಪ್ರೀತಿಯನ್ನು ಮಕ್ಕಳಿಗೆ ತೋರಿಸುತ್ತಾರೆ. ಹುಚ್ಚು ಮನಸ್ಸಿನ ಬೆನ್ನು ಹತ್ತಿ ಯಾರಿಗೂ ನೋವುಂಟು ಮಾಡದಿರಿ. ಹರೆಯದ ಗಾಳಕ್ಕೆ ಸಿಕ್ಕ ಮೀನುಗಳು ನೀವಾಗದಿರಿ.

ಶ್ರೀಮತಿ. ಸುನಂದಾ ಸಿ ಭರಮನಾಯ್ಕರ (ಡಿ.ಇ.ಒ)
ರಾಮದುರ್ಗ, ಜಿಲ್ಲೆ: ಬೆಳಗಾವಿ,

Columns ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...