Oyorooms IN

Tuesday, 25th April, 2017 3:51 AM

BREAKING NEWS

ಜಿಲ್ಲಾ ಸುದ್ದಿಗಳು

ತುಮಕೂರು ನಗರದ ಮೇಲೆ ಜೆಡಿಎಸ್ ಕಣ್ಣು..! ಅದಕ್ಕೆ ಸುಳ್ಳು ಹಬ್ಬಿಸಿದರು..!!

ತುಮಕೂರು: ಜಿಲ್ಲೆಯಲ್ಲಿ ರಾಜಕೀಯ ಹಿಡಿತವನ್ನು ಹೊಂದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ , ಜಿಲ್ಲೆಯಲ್ಲಿ ಅತಿ ಹೆಚ್ಚು ಶಾಸಕ ಸ್ಥಾನಗಳನ್ನು ಗಳಿಸಿದ್ದು, ಮುಂಬರುವ ಚುನಾವಣೆಯಲ್ಲಿ ತುಮಕೂರು ನಗರದಲ್ಲಿಯೂ ಗೆಲುವು ಸಾಧಿಸಲು ಕಸರತ್ತು ಆರಂಭಿಸಿದ್ದು, ಕಾಂಗ್ರೆಸ್ ನ ಪ್ರಭಾವಿ ಶಾಸಕರೊಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮಾತುಕತೆ ಆರಂಭವಾಗಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ತುಮಕೂರು ನಗರವನ್ನು ಹೊರತುಪಡಿಸಿ ಉಳಿದ 10 ತಾಲ್ಲೂಕಿನಲ್ಲಿಯೂ ಗೆಲುವು ಸಾಧಿಸಿರುವ ಜೆಡಿಎಸ್ ಗೆ ತುಮಕೂರು ನಗರದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತುಮಕೂರು ನಗರದಲ್ಲಿ ಜೆಡಿಎಸ್ ಪತಾಕೆಯನ್ನು ಹಾರಿಸಲು, ಈಗಿನಿಂದಲೇ ತಯಾರಿ ಆರಂಭಿಸಿದ್ದು, ಮಾಜಿ ಸಚಿವ ಚೆನ್ನಿಗಪ್ಪ ಅವರು ತುಮಕೂರು ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿಸಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ವಿಧಾನ ಪರಿಷತ್ ಚುನಾವಣೆಯ ನಂತರ ಕಾಂಗ್ರೆಸ್ ಮುಖಂಡರಲ್ಲಿ ಶುರುವಾಗಿದ್ದ ಆಂತರಿಕ ಕಚ್ಚಾಟದಿಂದಾಗಿ ಮುಂದಿನ ಚುನಾವಣೆಗೂ ಮುಂಚೆಯೇ ಕಾಂಗ್ರೆಸ್ ತೊರೆಯಲು ಪಕ್ಷದ ಪ್ರಭಾವಿ ಶಾಸಕರು ತಯಾರಾಗಿದ್ದು, ತಮ್ಮ ಮೂಲ ಪಕ್ಷ ಜೆಡಿಎಸ್ ಸೇರ್ಪಡೆಯಾಗುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎನ್ನಲಾಗಿದ್ದು, ಪ್ರಭಾವಿ ಕಾಂಗ್ರೆಸ್ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ವರಿಷ್ಠರು ಕೆಲ ಷರತ್ತುಗಳನ್ನು ಹಾಕಿದ್ದಾರೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.

ತುಮಕೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗೆ ಸಹಾಯ ಮಾಡಬೇಕೆನ್ನುವುದು ಜೆಡಿಎಸ್ ವರಿಷ್ಠರ ಬೇಡಿಕೆಯಾದರೆ, ಪ್ರಭಾವಿ ಶಾಸಕರು ತಮ್ಮ ಪುತ್ರನಿಗೆ ವಿಧಾನ ಪರಿಷತ್ ನಲ್ಲಿ ಸ್ಥಾನ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದ್ದಾರಂತೆ, ತುಮಕೂರು ನಗರ ಕ್ಷೇತ್ರದಲ್ಲಿ ಜೆಡಿಎಸ್ ಗೆ ಹೇಳಿಕೊಳ್ಳುವಂತಹ ಮುಖಂಡರು ಇಲ್ಲದೇ ಇರುವುದರಿಂದ ಮುಂದಿನ ಚುನಾವಣೆಗೆ ಪ್ರಭಾವಿ ಶಾಸಕರನ್ನೇ ಇಲ್ಲಿಂದ ಕಣಕ್ಕಿಳಿಸುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.

ತುಮಕೂರು ನಗರದಲ್ಲಿ ಪ್ರಭಾವಿ ಶಾಸಕರನ್ನು ಕಣಕ್ಕೆ ಇಳಿಸಬೇಕೋ, ಬೇಡವೋ ಎನ್ನುವ ಬಗ್ಗೆ ಕೊನೆ ಕ್ಷಣದಲ್ಲಿ ತೀರ್ಮಾನ ಕೈಗೊಳ್ಳಲು ವರಿಷ್ಠರು ನಿರ್ಧರಿಸಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಬಹುತೇಕ ಸಚಿವರಾಗುವ? ಶಾಸಕ ಸುರೇಶ್ ಗೌಡ ಅವರನ್ನು ಸೋಲಿಸಲು ಜೆಡಿಎಸ್ ಈಗಾಗಲೇ ರಣತಂತ್ರ ರೂಪಿಸಿದ್ದು, ಕಾಂಗ್ರೆಸ್ ನ ಪ್ರಭಾವಿ ಶಾಸಕರು ಪಕ್ಷಕ್ಕೆ ಸೇರ್ಪಡೆಗೊಳ್ಳುವುದರಿಂದ ಅವರ ಬೆಂಬಲಿಗರನ್ನು ಪಕ್ಷದತ್ತ  ಸೆಳೆಯುವುದು ಸುಲಭವಾಗುವುದಲ್ಲದೇ, ಈ ಬಾರಿ ಜನರು ಗ್ರಾಮಾಂತರ ಕ್ಷೇತ್ರದಲ್ಲಿ  ಜೆಡಿಎಸ್  ಕಡೆ ಒಲವು ತೋರುತ್ತಿರುವುದರಿಂದ ಮಾಜಿ ಸಚಿವ ಚೆನ್ನಿಗಪ್ಪ ಪುತ್ರ ಗೌರಿಶಂಕರ್ ಗೆಲುವು ಖಚಿತಗೊಳ್ಳಲಿದೆ ಎನ್ನುವ ವ್ಯಾಖ್ಯಾನಗಳು ಹರಿದಾಡುತ್ತಿವೆ.

ಇನ್ನೂ ತುಮಕೂರು ನಗರ ಕ್ಷೇತ್ರದಲ್ಲಿ ಜೆಡಿಎಸ್ ಗೆ ಎರಡು ರಾಷ್ಟ್ರೀಯ ಪಕ್ಷಗಳು ಎದುರಾಳಿಯಾದರು, ಆಡಳಿತ ವಿರೋಧಿ ಅಲೆ ತುಮಕೂರು ನಗರ ಕ್ಷೇತ್ರದಲ್ಲಿ ಹೆಚ್ಚಾಗಿದ್ದು, ಕಾಂಗ್ರೆಸ್ ಗೆಲ್ಲುವುದು ಕಷ್ಟಸಾಧ್ಯ ಎನ್ನುವ ಮಾತುಗಳು ಹರಿದಾಡುತ್ತಿದ್ದು, ಬಿಜೆಪಿಯಲ್ಲಿನ ಮೂಲ, ವಲಸೆ ಹಾಗೂ ಕೆಜೆಪಿ, ಬಿಜೆಪಿ ವೈಮನಸ್ಯಗಳು ಹೆಚ್ಚಾಗಿರುವುದು ಹಾಗೂ ಕೆಜೆಪಿಯಿಂದ ಬಂದವರಿಗೆ ಪದಾಧಿಕಾರಿಗಳ ನೇಮಕದಲ್ಲಿಯೂ ಪ್ರಾಮುಖ್ಯತೆ ನೀಡಿರುವುದು ಪಕ್ಷಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ.

ಮಾಜಿ ಸಂಸದ ಜಿ.ಎಸ್.ಬಸವರಾಜು ಅವರು ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಅವರನ್ನು ತುಮಕೂರು ನಗರ ಅಥವಾ ಗುಬ್ಬಿಯಿಂದ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಸಲು ಯೋಚಿಸಿದ್ದು, ಈ ನಿಟ್ಟಿನಲ್ಲಿ ಪಕ್ಷದ ಸಂಘಟನಾ ಕಾರ್ಯಗಳು ನಡೆಯುತ್ತಿವೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ. ತುಮಕೂರು ನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗಿದ್ದು, ತುಮಕೂರಿನಲ್ಲಿ ಟಿಕೆಟ್ ಸಿಗದೇ ಇದ್ದರೆ ಗುಬ್ಬಿಯಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಜಿಎಸ್ ಬಿ ಟೀಂ ಆಲೋಚನೆ ನಡೆಸಿದೆ.

ಗುಬ್ಬಿಯಲ್ಲಿ ಪಕ್ಷಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಅಧಿಕ ಮತಸಿಕ್ಕಿದ್ದು ಅದಕ್ಕೆ ಕಾರಣ ಬೆಟ್ಟಸ್ವಾಮಿ ಅವರು, ಇವರ ನಡುವೆ ಈ ಬಾರಿ ಇನ್ನಿಬ್ಬರು ಮುಖಂಡರು ವಿಧಾನಸಭಾ ಅಭ್ಯರ್ಥಿಗಳಾಗಲು ತಯಾರಿ ನಡೆಸಿರುವುದು ಜಿ.ಎಸ್.ಬಸವರಾಜು ಹಾಗೂ ಜ್ಯೋತಿಗಣೇಶ್ ಅವರಿಗೆ ನುಂಗಲಾರದ ತುತ್ತಾಗಿದ್ದು, ಚುನಾವಣಾ ಸ್ಪರ್ಧಿಗಳಾಗಬೇಕೆನ್ನುವ ಮುಖಂಡರನ್ನು ಈಗಿನಿಂದಲೇ ಪಕ್ಷದಿಂದ ಹೊರಹಾಕಲು ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಮೇಲಿಂದ ಮೇಲೆ ಗುಬ್ಬಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಕೆಲ ಮುಖಂಡರನ್ನು ಪಕ್ಷದ ಉಚ್ಚಾಟಿಸಿದ್ದಾರೆ, ಇದು ಮೂಲ ಬಿಜೆಪಿ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ.

ತುಮಕೂರು ಹಾಗೂ ಗುಬ್ಬಿಯಲ್ಲಿ ಟಿಕೆಟ್ ದಕ್ಕಿಸಿಕೊಳ್ಳುವುದು ಜಿಎಸ್ ಬಿ ಹಾಗೂ ಜ್ಯೋತಿ ಗಣೇಶ್ ಅವರಿಗೆ ಕಷ್ಟವಾಗಲಿದೆ. ತುಮಕೂರು ನಗರದಲ್ಲಿನ ಪಕ್ಷದ ಕಾರ್ಯಕರ್ತರಲ್ಲಿಯೇ ಗೊಂದಲವೆಬ್ಬಿಸಿ ಅದರ ಲಾಭ ಪಡೆಯಲು ಮುಂದಾಗಿದ್ದು, ಈ ನಿಟ್ಟಿನಲ್ಲಿಯೇ  ಮಾಜಿ ಸಚಿವ ಸೊಗಡು ಶಿವಣ್ಣ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಸುದ್ದಿಯನ್ನು ಹರಿಯಬಿಟ್ಟಿದ್ದಾರೆ, ಇಂತಹ ಕುತಂತ್ರಗಳನ್ನು ಏನೇ ಮಾಡಿದರು ಶಿವಣ್ಣ ಅವರು ಎದೆಗುಂದುವುದಿಲ್ಲ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಮಾಜಿ ಸಚಿವ ಚೆನ್ನಿಗಪ್ಪ ಹಾಗೂ ಸೊಗಡು ಶಿವಣ್ಣ ಭೇಟಿಗೆ ವಿಶೇಷ ಅರ್ಥ ಕಲ್ಪಿಸಿ, ಸೊಗಡು ಶಿವಣ್ಣ ಜೆಡಿಎಸ್  ಸೇರುತ್ತಾರೆ ಎಂದು ಹಸಿಸುಳ್ಳು ಹೇಳುತ್ತಿದ್ದಾರೆ, ಪಕ್ಷವನ್ನು ಜಿಲ್ಲೆಯಲ್ಲಿ ಸಮರ್ಥವಾಗಿ ಕಟ್ಟಿದ ಶಿವಣ್ಣನವರು ಪಕ್ಷ ತೊರೆಯುವುದಿಲ್ಲ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ, ಆದರೆ ಸ್ಥಾನ ಕಂಡು ಕೊಳ್ಳಲು ಹೆಣಗಾಡುತ್ತಿರುವ ಜ್ಯೋತಿಗಣೇಶ್ ಅವರು ಈ ಹಿಂದೆ ನೊಟೀಸ್ ನೀಡಿ, ರಾಜ್ಯ ಕಾರ್ಯಕಾರಿಣಿಯಲ್ಲಿ ಛೀಮಾರಿ ಹಾಕಿಸಿಕೊಂಡ ನಂತರ, ಚೆನ್ನಿಗಪ್ಪ-ಸೊಗಡು ಶಿವಣ್ಣ ಭೇಟಿಯನ್ನು ವೈಯಕ್ತಿಕವಾಗಿ ಬಿಜೆಪಿ ವರಿಷ್ಠರ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಿದ್ದಾರೆ ಎನ್ನಲಾಗುತ್ತಿದ್ದು, ಜಿಎಸ್ ಬಿ- ಸೊಗಡು ಕಲಹದಲ್ಲಿ  ಬಿಜೆಪಿಗೆ ನಷ್ಟವಾಗುತ್ತಿದೆ.

ತುಮಕೂರು ನಗರದಲ್ಲಿ ಗೆಲ್ಲುವ ಕನಸು ಕಾಣುತ್ತಿರುವ ಜೆಡಿಎಸ್ ಗೂ ಕಾಂಗ್ರೆಸ್ ನ ಪ್ರಭಾವಿ ಶಾಸಕರು, ತುಮಕೂರು ನಗರದಲ್ಲಿ ಜೆಡಿಎಸ್  ಗೆಲುವು ಕಷ್ಟವಾಗಲಿದೆ ಎನ್ನುವ ಮಾತನ್ನೇ ಹೇಳಿದ್ದಾರೆ, ತುಮಕೂರು ನಗರದಲ್ಲಿ ಕಾಂಗ್ರೆಸ್ ದುರಾಡಳಿತ ಹಾಗೂ ಆಡಳಿತ ವಿರೋಧಿ ಅಲೆಯಿಂದಾಗಿ ಜನರು ಶಿವಣ್ಣ ಅವರತ್ತ ಒಲವು ತೋರುತ್ತಿದ್ದಾರೆ ಎನ್ನುವ ಮಾತುಗಳನ್ನು ಹೇಳಿದ್ದಾರೆ ಎನ್ನುವ ಸುದ್ದಿಗಳು ರಾಜಕೀಯ ವಲಯದಲ್ಲಿ ಜೋರಾಗಿದ್ದು, ಚುನಾವಣೆ ಘೋಷಣೆಯಾದ ನಂತರವಷ್ಟೇ ಸ್ಪಷ್ಟತೆ ಗೋಚರವಾಗಲಿದೆ ಎನ್ನಲಾಗುತ್ತಿದೆ.

  • ಎಎನ್ನಾರ್

English summary: jds party want to win in tumakuru city, cheap publicity in bjp

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...