Oyorooms IN

Sunday, 20th August, 2017 10:49 PM

BREAKING NEWS

ಪ್ರಮುಖ ಸುದ್ದಿಗಳು

ಪ್ರವಾಸಿ ಬರಹ : ಕೊಡಗಿನ ಮಳೆಗಾಲದ ಬೆಡಗಿಯರು ಇವರು

neelakandi1madanda abbi

ಚಾರಣ ಮಾಡಲು ಹೊರಡುವ ಉತ್ಸಾಹಿಗಳಿಗೆ ಕೊಡಗಿನ ಜಲಧಾರೆಗಳು ಹುರುಪು ತುಂಬುವುದಂತು ನೂರಕ್ಕೆ ನೂರರಷ್ಟು ಸತ್ಯ. ಏಕೆಂದರೆ ಇಲ್ಲಿರುವ ಹೆಚ್ಚಿನ ಜಲಧಾರೆಗಳು ಬೆಟ್ಟಗುಡ್ಡಗಳ ನಡುವೆ ಹುದುಗಿವೆ. ಅವುಗಳತ್ತ ನಡೆದು ಹೋಗುವುದು ಅನಿವಾರ್ಯ. ಹಾಗಾಗಿ ಜಲಧಾರೆಗಳತ್ತ ತೆರಳಿದರೆ ಚಾರಣ ಮಾಡಿದ ಅನುಭವವಾಗುವುದು ಖಂಡಿತಾ.

“ನಡೆದು ನೋಡು ಕೊಡಗಿನ ಬೆಡಗು” ಎಂಬ ಕವಿವಾಣಿ ಜಲಧಾರೆಗಳನ್ನು ವೀಕ್ಷಿಸಲು ಹೊರಡುವ ನಿಸರ್ಗ ಪ್ರೇಮಿಗಳಿಗೆ ಹೇಳಿ ಬರೆಯಿಸಿದಂತಿದೆ. ನಗರ ನಾಗರಿಕತೆಯ ಗಂಧಗಾಳಿಗೆ ಒಳಗಾಗದೆ ದಟ್ಟ ಕಾಡಿನ ನಡುವೆ… ಮತ್ಯಾರದೋ ಕಾಫಿ, ಏಲಕ್ಕಿ ತೋಟಗಳಲ್ಲಿ… ತಮ್ಮ ಪಾಡಿಗೆ ತಾವು ಎಂಬಂತೆ ಭೋರ್ಗರೆದು ಧುಮುಕಿ ಹೋಗುವ ಜಲಧಾರೆಗಳನ್ನು ಹತ್ತಿರ ಹೋಗಿ ವೀಕ್ಷಿಸುವುದು ಹಾಗೂ ಕ್ಯಾಮರಾದಲ್ಲಿ ಸೆರೆ ಹಿಡಿಯವುದು ಅಷ್ಟು ಸುಲಭವಲ್ಲ. ಹತ್ತಾರು ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸುವ, ಬೆಟ್ಟಗುಡ್ಡಗಳನ್ನೇರುವ, ಅಷ್ಟೇ ಅಲ್ಲ ರಕ್ತ ಹೀರಲು ಬರುವ ಜಿಗಣೆಗಳೊಂದಿಗೆ ಹೋರಾಡಲು ಸಿದ್ಧರಾಗಿರಬೇಕು. ಹಾಗಿದ್ದರೆ ಮಾತ್ರ ಜಲಪಾತದ ಸೊಬಗನ್ನು ಸನಿಹದಿಂದ ಸವಿಯಬಹುದು.

neelakandi.2

ಹಾಗೆನೋಡಿದರೆ ಕೊಡಗಿನಲ್ಲಿರುವ ಜಲಧಾರೆಗಳ ಪೈಕಿ ಹೆಚ್ಚಿನವುಗಳು ಅಲ್ಪಾಯುಷಿಗಳು. ಇವುಗಳು ಮಳೆಗಾಲದಲ್ಲಿ ಮಾತ್ರ ಭೋರ್ಗರೆದು ಧುಮುಕಿ ತಮ್ಮ ಚೆಲುವನ್ನು ಪ್ರದರ್ಶಿಸುತ್ತವೆಯಾದರೂ ಮಳೆಗಾಲ ಕಳೆದು ಬೇಸಿಗೆ ಬರುತ್ತಿದ್ದಂತೆಯೇ ತನ್ನ ಚೆಲುವು ಕಳೆದುಕೊಂಡು ಅದೃಶ್ಯವಾಗಿ ಬಿಡುತ್ತವೆ. ಹಾಗಾಗಿ ಈ ಜಲಧಾರೆಗಳನ್ನು ಮಳೆಗಾಲದ ಬೆಡಗಿಯರು ಎಂದರೆ ತಪ್ಪಾಗಲಾರದು.

ಇನ್ನು ಇಲ್ಲಿರುವ ಜಲಪಾತಗಳ ಪೈಕಿ ಹೆಸರುವಾಸಿಯಾದ ಜಲಪಾತವೆಂದರೆ ಮಡಿಕೇರಿ ಬಳಿಯಿರುವ ಅಬ್ಬಿ ಜಲಪಾತ. ಇದು ನಗರಕ್ಕೆ ಹತ್ತಿರವಿರುವುದರಿಂದ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಜಲಪಾತವಾಗಿದೆ. ಮಡಿಕೇರಿಯಿಂದ ಸುಮಾರು 8ಕಿ.ಮೀ. ದೂರದಲ್ಲಿದ್ದು, ಈ ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. ವಾಹನ ನಿಲುಗಡೆಯ ಸ್ಥಳದಿಂದ ಕಾಫಿ ತೋಟದ ಮಧ್ಯೆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದರೆ ಅಬ್ಬಿ ಜಲಪಾತದ ಸನಿಹಕ್ಕೆ ಹೋಗಬಹುದು.

Mallalli Falls

ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಫಾಲ್ಸ್‌ಗೆ ಇಟ್ಟು ಜೆಸ್ಸಿ ಫಾಲ್ಸ್ ಎಂದು ಕರೆದಿದ್ದರು. ಮಳೆಗಾಲದಲ್ಲಿ ಕುಂಬದ್ರೋಣ ಮಳೆ ಸುರಿದು ನದಿ ಉಕ್ಕಿಹರಿದಾಗ ಜಲಪಾತ ರೌದ್ರಾವತಾರ ತಾಳುತ್ತದೆ.

ಮಂಗಳೂರು ರಸ್ತೆಯಲ್ಲಿ ಸಾಗಿದಾಗ: ಇನ್ನು ಮಡಿಕೇರಿಯಿಂದ ಮಂಗಳೂರು ಕಡೆಗೆ ನಾವು ಹೊರಟರೆ ದಾರಿಯುದ್ದಕ್ಕೂ ಬೆಟ್ಟಗಳ ಮೇಲೆ ಪುಟ್ಟ ಜಲಧಾರೆಗಳು ಕಾಣಸಿಗುತ್ತವೆಯಾದರೂ ಅವುಗಳ ನಡುವೆ ಹಲವು ನೋಡತಕ್ಕ ಜಲಧಾರೆಗಳಿವೆ. ಮಂಗಳೂರು ರಸ್ತೆಯಲ್ಲಿ ಸಿಗುವ ಮದೆನಾಡಿನಿಂದ ಮುಂದೆ ಜೋಡುಪಾಲ ಸಿಗುತ್ತದೆ.

ಇಲ್ಲಿಗೆ ಸಮೀಪವೇ ಉಂಬುಳ್‌ಗುಂಡಿ ಜಲಧಾರೆಯಿದೆ. ಇದು ಸುತ್ತಲಿನ ಬೆಟ್ಟಗುಡ್ಡಗಳಿಂದ ಹರಿದು ಬರುವ ನದಿಯಿಂದ ಸೃಷ್ಟಿಯಾದ ಜಲಪಾತವಾಗಿದೆ. ಅಲ್ಲಿಂದ ಮುಂದಕ್ಕೆ ತೆರಳಿದರೆ ತಿರುವಿನಲ್ಲೊಂದು ಜಲಪಾತ ಕಾಣಸಿಗುತ್ತದೆ.

ಈ ಜಲಪಾತವನ್ನು ಎಲ್ಲರೂ ಜೋಡುಪಾಲ ಜಲಪಾತ ಎಂದೇ ಕರೆಯುತ್ತಾರೆ. ರಸ್ತೆ ಬದಿಯಲ್ಲಿರುವುದರಿಂದ ಈ ಜಲಪಾತದ ನೋಟ ಎಲ್ಲರಿಗೂ ಲಭ್ಯವಾಗುತ್ತದೆ. ಸುಮಾರು ಎಪ್ಪತೈದು ಅಡಿಯಷ್ಟು ಎತ್ತರದಿಂದ ಕಣಿವೆಗೆ ಧುಮುಕುವ ಜಲಪಾತದ ಸೌಂದರ್ಯ ವನ್ನು ವೀಕ್ಷಿಸಿದಾಗ ರೋಮಾಂಚನವಾಗುತ್ತದೆ. ಈ ಜಲಪಾತ ಮಡಿಕೇರಿಯಿಂದ ಸುಮಾರು 18 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಮುಂದಕ್ಕೆ ಸಂಪಾಜೆಯತ್ತ ತೆರಳಿದಾಗ ಕೊಯನಾಡು ಸಿಗುತ್ತದೆ. ಇಲ್ಲಿರುವ ಸೇತುವೆಯ ಎಡಭಾಗದ ರಸ್ತೆಯಲ್ಲಿ ಸುಮಾರು ಐದು ಕಿ.ಮೀ. ಸಾಗಿದರೆ ಕಲ್ಯಾಳ ಜಲಪಾತ ಸಿಗುತ್ತದೆ.

ಈ ಜಲಪಾತ ವಿವಿಧ ಹಂತಗಳಲ್ಲಿ ಸುಮಾರು ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಮುಂದೆ ಸಂಪಾಜೆಯತ್ತ ತೆರಳಿದರೆ ಅಲ್ಲಿಂದ ಮುಂದೆ ಲೈನ್ಕಜೆ ಎಂಬಲ್ಲಿ ಖಾಸಗಿ ತೋಟದಲ್ಲಿ ಲೈನ್ಕಜೆ ಎಂಬ ಜಲಪಾತವಿದೆ.

ಮನಸ್ಸೆಳೆಯುವ ಮಲ್ಲಳ್ಳಿ ಫಾಲ್ಸ್: ಇನ್ನು ಮಡಿಕೇರಿಯಿಂದ ಸೋಮವಾರಪೇಟೆ ಕಡೆಗಿನ ರಸ್ತೆಯಲ್ಲಿ ಹೊರಟರೆ ನಮಗೆ ಹಟ್ಟಿಹೊಳೆ ಸಿಗುತ್ತದೆ ಅಲ್ಲಿಂದ ೮ಕಿ.ಮೀ. ದೂರ ಹೋದರೆ ಮುಕ್ಕೋಡ್ಲು ಎಂಬ ಜಲಪಾತವನ್ನು ತಲುಪಬಹುದು.

ಈ ಜಲಪಾತ ಎಂಬತ್ತು ಅಡಿಯಷ್ಟು ಎತ್ತರದಿಂದ ಹತ್ತು ಅಡಿಯಷ್ಟು ಅಗಲವಾಗಿ ಧುಮುಕುತ್ತಾ ತನ್ನ ಚೆಲುವನ್ನು ವೀಕ್ಷಕರಿಗೆ ತೆರೆದಿಡುತ್ತದೆ. ಇದಕ್ಕೂ ಮೊದಲು ಮಕ್ಕಂದೂರಿಗೆ ಮೂರು ಕಿ.ಮೀ. ದೂರದ ಹಾಲೇರಿಯಲ್ಲಿ ಕುಪ್ಪೆಹೊಳೆ ಎಂಬ ಪುಟ್ಟಜಲಪಾತವಿದೆ.

ಸುಮಾರು 40  ಅಡಿ ಎತ್ತರದಿಂದ ಇಪ್ಪತ್ತು ಅಡಿ ಅಗಲವಾಗಿ ಧುಮ್ಮಿಕುವ ಈ ಜಲಪಾತ ಮಕ್ಕಂದೂರು ಹಾಗೂ ತಂತಿಪಾಲ ಕಡೆಯಿಂದ ಹರಿದು ಬರುವ ಕುಪ್ಪೆಹೊಳೆಯಿಂದ ಸೃಷ್ಟಿಯಾಗಿದೆ. ಇದನ್ನು ನೋಡಿದ ಬಳಿಕ ಮತ್ತೆ ಸೋಮವಾರಪೇಟೆ ಕಡೆಗೆ ಹೊರಟರೆ ಮಾದಾಪುರ ಸಿಗುತ್ತದೆ. ಅಲ್ಲಿಂದ ಗರ್ವಾಲೆಗೆ ತೆರಳಿದರೆ ಮೂರು ಕಿ.ಮೀ.ದೂರದಲ್ಲಿ ಮೇದುರಜಲಪಾತವಿದೆ. ದಟ್ಟ ಕಾಡಿನ ನಡುವೆ ಇರುವ ಈ ಜಲಪಾತ ಸುಮಾರು ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ.

ಸೋಮವಾರಪೇಟೆಗೆ ತೆರಳಿದರೆ ಅಲ್ಲಿಂದ ಶಾಂತಳ್ಳಿ ಕಡೆಗಿನ ರಸ್ತೆಯಲ್ಲಿ ಸುಮಾರು 8 ಕಿ.ಮೀ. ದೂರದಲ್ಲಿ ಅಬ್ಬಿಮಠ ಬಾಚಳ್ಳಿ ಗ್ರಾಮ ಸಿಗುತ್ತದೆ. ಅಲ್ಲಿ ಮುಖ್ಯ ರಸ್ತೆಯಿಂದ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಜಲಪಾತವೊಂದು ಕಾಣಸಿಗುತ್ತದೆ. ಒಂದೆಡೆ ತೋಟಗಳು ಮತ್ತೊಂದೆಡೆ ಗದ್ದೆ ಬಯಲು ಇದರ ನಡುವೆ ನಿರ್ಮಿತವಾಗಿರುವ ಜಲಪಾತವನ್ನು ಸ್ಥಳೀಯರು ಬಾಚಳ್ಳಿ ಅಬ್ಬಿ ಎಂದು ಕರೆಯುತ್ತಾರೆ.

ಮುಖ್ಯ ರಸ್ತೆಯಲ್ಲಿ ಶಾಂತಳ್ಳಿಗೆ ತೆರಳಿ ಅಲ್ಲಿಂದ ಮುಂದೆ ಹೋದರೆ ಹಂಚಿನಳ್ಳಿ ಸಿಗುತ್ತದೆ. ಅಲ್ಲಿ ಬಲಕ್ಕೆ ಮಣ್ಣು ರಸ್ತೆಯಲ್ಲಿ ನಾಲ್ಕು ಕಿ.ಮೀ. ಸಾಗಿದರೆ ಮಲ್ಲಳ್ಳಿ ಜಲಪಾತವನ್ನು ತಲುಪಬಹುದು. ಈ ಜಲಪಾತವು ನೂರೈವತ್ತು ಅಡಿಯಷ್ಟು ಎತ್ತರದಿಂದ ಎಂಬತ್ತು ಅಡಿ ಅಗಲವಾಗಿ ಧುಮುಕುತ್ತದೆ.

ಕೊಡಗಿನ ತಾಲೂಕು ಕೇಂದ್ರಗಳಲ್ಲೊಂದಾದ ವೀರಾಜಪೇಟೆಗೆ ತೆರಳಿದರೆ ಅಲ್ಲಿಂದ ೫೫ಕಿ.ಮೀ. ದೂರದಲ್ಲಿ ಇರ್ಪು ಜಲಪಾತವಿದೆ. ಈ ಜಲಪಾತವನ್ನು ನೋಡಬೇಕಾದರೆ ಗೋಣಿಕೊಪ್ಪ ಕುಟ್ಟ ಮಾರ್ಗದಲ್ಲಿ ಇರ್ಪು ಎಂಬಲ್ಲಿಗೆ ತೆರಳಬೇಕು. ಇರ್ಪುವಿನ ರಾಮೇಶ್ವರ ದೇಗುಲದಿಂದ ಮುಕ್ಕಾಲು ಕಿ.ಮೀ. ದೂರದಲ್ಲಿ ಇರ್ಪು ಜಲಪಾತವಿದೆ. ಪವಿತ್ರ ಜಲಧಾರೆಯಾಗಿರುವ ಇದು ಪ್ರಥಮ ಹಂತದಲ್ಲಿ ಸುಮಾರು ಎಪ್ಪತ್ತು ಅಡಿ ಎತ್ತರದಿಂದ ಧುಮುಕಿ ಬಳಿಕ ಚಿಕ್ಕಾತಿ ಚಿಕ್ಕ ಜಲಪಾತವಾಗಿ ಹರಿದು ಹೋಗುತ್ತದೆ.

ಜಲಪಾತಗಳ ಕೇಂದ್ರ ಸ್ಥಾನ ನಾಪೋಕ್ಲು: ಮಡಿಕೇರಿಯಿಂದ ನಾಪೋಕ್ಲುಗೆ ತೆರಳಿದರೆ ಅಲ್ಲಿಗೆ ಸನಿಹದಲ್ಲಿ ಹಲವಾರು ಜಲಪಾತಗಳಿವೆ. ನಾಪೋಕ್ಲುವನ್ನು ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ಅಲ್ಲಿಂದ ತೆರಳಿ ನಾವು ಜಲಪಾತಗಳ ವೀಕ್ಷಣೆ ಮಾಡಬಹುದಾಗಿದೆ. ಭಾಗಮಂಡಲ ರಸ್ತೆಯಲ್ಲಿ ಬಲ್ಲಮಾವಟಿಗೆ ತೆರಳಿದರೆ ಅಲ್ಲಿಂದ ಎಡಕ್ಕೆ ಪೆರೂರು ಕಡೆಗೆ ಹೆಜ್ಜೆ ಹಾಕಿದರೆ ದೇವರಗುಂಡಿ ಜಲಪಾತವನ್ನು ತಲುಪಬಹುದು. ಅರವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ವಿಶಾಲ ಕೆರೆಯೊಳಗೆ ನೀರು ಚಿಮ್ಮುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಅದೇ ಮುಖ್ಯ ರಸ್ತೆಯಲ್ಲಿ ಭಾಗಮಂಡಲಕ್ಕೆ ತೆರಳಿದರೆ ಭಾಗಮಂಡಲ ಸುತ್ತಮುತ್ತ ಕೆಲವು ಜಲಪಾತಗಳನ್ನು ನಾವು ನೋಡಬಹುದು. ಭಾಗಮಂಡಲ ಆಸ್ಪತ್ರೆಯ ಹಿಂಭಾಗದ ರಸ್ತೆಯಲ್ಲಿ ೩ಕಿ.ಮೀ ತೆರಳಿದರೆ ತಣ್ಣಿಮಾನಿ ಪಾರೆಕಟ್ಟು ಜಲಪಾತ ಸಿಗುತ್ತದೆ. ಇದು ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ.

ಭಾಗಮಂಡಲದಿಂದ ಕರಿಕೆಯತ್ತ ತೆರಳಿದರೆ ಅಲ್ಲಿ ಹಲವಾರು ಮಳೆಗಾಲದ ಜಲಪಾತಗಳು ಕಾಣಸಿಗುತ್ತವೆ. ಇವು ಮಳೆಗಾಲದಲ್ಲಿ ಮಾತ್ರ ಗೋಚರಿಸುತ್ತವೆ. ಇವುಗಳ ನಡುವೆ ಬಾಚಿಮಲೆ ಜಲಪಾತವೂ ಒಂದಾಗಿದೆ. ಈ ಜಲಪಾತ ರಸ್ತೆ ಬದಿಯಲ್ಲಿದ್ದು, ಸುಮಾರು ಎಂಬತ್ತು ಅಡಿ ಎತ್ತರದಿಂದ ಧುಮುಕುತ್ತದೆ.

ಭಾಗಮಂಡಲದಿಂದ ಮಡಿಕೇರಿ ರಸ್ತೆಯಲ್ಲಿ ತೆರಳಿದರೆ ಚೆಟ್ಟಿಮಾನಿ ಸಿಗುತ್ತದೆ. ಇಲ್ಲಿರುವ ಪ್ರಾಥಮಿಕ ಶಾಲೆಯ ಬಳಿಯ ರಸ್ತೆಯಲ್ಲಿ 2ಕಿ.ಮೀ. ತೆರಳಿದರೆ ಪೋಲಮಾನಿ ಸಿಗುತ್ತದೆ. ಪೋಲಮಾನಿ ರಸ್ತೆಯಲ್ಲಿ ಮೂರು ಕಿ.ಮೀ. ದೂರದಲ್ಲಿ ದಾಸನಕಾಡು ಜಲಪಾತವಿದೆ. ಇದು ಮೂವತ್ತು ಅಡಿ ಎತ್ತರದಿಂದ ಧುಮುಕುತ್ತದೆ. ಇಲ್ಲಿಗೆ ಒಂದೂವರೆ ಕಿ.ಮೀ. ದೂರದಲ್ಲಿ ಸುಮಾರು ಇಪ್ಪತೈದು ಅಡಿಯಷ್ಟು ಎತ್ತರದಿಂದ ಧುಮುಕುವ ಬೋಳುಗಲ್ಲು ಮೊಟ್ಟೆ ಎಂಬ ಮತ್ತೊಂದು ಜಲಪಾತವಿದೆ.

ಒಂದೇ ಸ್ಥಳದಲ್ಲಿ ಮೂರು ಜಲಪಾತ: ನಾಪೋಕ್ಲುವಿನಿಂದ ಚೆಯ್ಯಂಡಾಣೆಗೆ ತೆರಳಿದರೆ ಅಲ್ಲಿಂದ 2ಕಿ.ಮೀ. ದೂರದಲ್ಲಿ ಚೇಲಾವರ ಗ್ರಾಮ ಸಿಗುತ್ತದೆ. ಚೇಲಾವರದಲ್ಲಿ ನಯನಮನೋಹರ ಮೂರು ಜಲಧಾರೆಗಳಿವೆ. ತಡಿಯಂಡಮೋಳ್ ಪರ್ವತ ಶ್ರೇಣಿಯ ಬೆಟ್ಟದಿಂದ ಹರಿದು ಬರುವ ಬಲಿಯಟ್ರನದಿ ಹಾಗೂ ಚೋಮನಕುಂದುವಿನಿಂದ ಹರಿದು ಬರುವ ಸೋಮನ ನದಿಯಿಂದ ಸೃಷ್ಟಿಯಾಗಿರುವ ಈ ಜಲಧಾರೆಗಳು ಖಾಸಗಿ ತೋಟದಲ್ಲಿದೆ.

ಬಲಿಯಟ್ರನದಿಯಿಂದ ಸೃಷ್ಟಿಯಾಗಿರುವ ಜಲಪಾತವು ನೂರು ಅಡಿಯಷ್ಟು ಎತ್ತರದಿಂದ ಎಂಬತ್ತು ಅಡಿಯಷ್ಟು ಅಗಲವಾಗಿ ಧುಮುಕುತ್ತದೆ. ಮತ್ತೊಂದು ಸೋಮನನದಿಯಿಂದ ಸೃಷ್ಟಿಯಾಗಿರುವ ಜಲಧಾರೆಯು ಐವತ್ತು ಅಡಿಯಷ್ಟು ಎತ್ತರದಿಂದ ಮೂರು ಹಂತವಾಗಿ ಧುಮುಕುತ್ತದೆ. ಇಲ್ಲಿಯೇ ಮತ್ತೊಂದು ಪುಟ್ಟ ಜಲಪಾತವೂ ಇದೆ.

ನಾಪೋಕ್ಲುವಿನಿಂದ ಕಕ್ಕಬೆಗೆ ತೆರಳಿದರೆ ಅಲ್ಲಿಂದ ಯುವಕಪಾಡಿಯ ನಾಲ್ಕುನಾಡು ಅರಮನೆ ಸಮೀಪಕ್ಕೆ ಬಂದರೆ ಎದುರಿನಲ್ಲಿಯೇ ಜಲಪಾತ ಕಾಣಸಿಗುತ್ತದೆ. ಇದರ ಸೌಂದರ್ಯವೇನಿದ್ದರೂ ಮಳೆಗಾಲದಲ್ಲಿ ಮಾತ್ರ. ಇಪ್ಪತ್ತು ಅಡಿ ಎತ್ತರವಿರುವ ಜಲಪಾತ ಮಳೆಗಾಲದಲ್ಲಿ ಭೋರ್ಗರೆದು ಧುಮುಕಿ ಮನಕ್ಕೆ ಮುದನೀಡುತ್ತದೆ. ನಾಲ್ಕುನಾಡು ಅರಮನೆಯ ಮುಂದಿನ ರಸ್ತೆಯಲ್ಲಿ ಸುಮಾರು ೪ಕಿ.ಮೀ. ಮಣ್ಣು ರಸ್ತೆಯಲ್ಲಿ ಸಾಗಿದರೆ ಮಾದಂಡ ಅಬ್ಬಿ ಜಲಪಾತವನ್ನು ತಲುಪಬಹುದು. ಸುಮಾರು ನೂರೈವತ್ತು ಅಡಿಗಿಂತಲೂ ಎತ್ತರದಿಂದ ಕಂದಕಕ್ಕೆ ಧುಮುಕುವ ಜಲಧಾರೆಯನ್ನು ಗುಡ್ಡ ಹತ್ತಿ ನೋಡಬೇಕಾಗುತ್ತದೆ.

ಕಕ್ಕಬ್ಬೆಯಿಂದ ಕಬ್ಬಿನಕಾಡು ಎಂಬಲ್ಲಿಗೆ ತೆರಳಿ ಅಲ್ಲಿಂದ ಬಲಕ್ಕೆ ಏರು ಹಾದಿಯಲ್ಲಿ ೪ಕಿ.ಮೀ. ಸಾಗಿದರೆ ಅಪ್ಪಾರಂಡ ಸುರೇಶ್ ಚಂಗಪ್ಪ ಅವರ ಮನೆ ಸಿಗುತ್ತದೆ. ಅಲ್ಲಿಂದ ಮತ್ತೆ 3ಕಿ.ಮೀ. ನಡೆದರೆ ಬೆಟ್ಟಗುಡ್ಡಗಳ ನಡುವೆ ಧುಮ್ಮಿಕ್ಕುವ ನೀಲಕಂಡಿ ಜಲಪಾತ ಸಿಗುತ್ತದೆ. ಪಾತಿ ನದಿಯಿಂದ ಸೃಷ್ಟಿಯಾಗಿರುವ ಈ ಜಲಪಾತ ಸುಮಾರು ಇನ್ನೂರು ಅಡಿಯಷ್ಟು ಎತ್ತರದಿಂದ ಧುಮುಕಿ ಚೆಲುವು ಪ್ರದರ್ಶಿಸುತ್ತದೆ.

ಅಜ್ಞಾತ ಜಲಪಾತಗಳು: ಮಡಿಕೇರಿಯಿಂದ ಸಿದ್ದಾಪುರ ರಸ್ತೆಯಲ್ಲಿ ತೆರಳಿದರೆ ಚೆಟ್ಟಳ್ಳಿ ಬಳಿ ಮುಖ್ಯ ರಸ್ತೆಯಲ್ಲಿಯೇ ಜಲಪಾತವೊಂದು ಕಾಣಸಿಗುತ್ತದೆ. ಇದನ್ನು ಚೆಟ್ಟಳ್ಳಿ ಫಾಲ್ಸ್ ಎಂದೇ ಸ್ಥಳೀಯರು ಕರೆಯುತ್ತಾರೆ.

ಕೊಡಗಿನಲ್ಲಿ ಇನ್ನು ಹಲವಾರು ಜಲಪಾತಗಳು ದಟ್ಟಕಾಡಿನ ನಡುವೆ, ಇನ್ಯಾರದ್ದೋ ಕಾಫಿ, ಏಲಕ್ಕಿ ತೋಟಗಳ ನಡುವೆ ಅಡಗಿ ಕುಳಿತಿದ್ದು, ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆ ಸುರಿದಾಗ ಮೈಕೈ ತುಂಬಿಕೊಂಡು ಚೆಲುವು ಪ್ರದರ್ಶಿಸುತ್ತವೆ. ಪಟ್ಟಣದಿಂದ ದೂರವಾಗಿ ರಸ್ತೆ ಸಂಪರ್ಕವೂ ಇಲ್ಲದಿರುವುದರಿಂದ ಅವು ಅಜ್ಞಾತ ಜಲಪಾತಗಳಾಗಿ ಉಳಿದುಹೋಗಿವೆ.

ಬಿ.ಎಂ.ಲವಕುಮಾರ್

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...