Oyorooms IN

Sunday, 20th August, 2017 10:54 PM

BREAKING NEWS

Columns

ಬದುಕು- ಭಾವನೆಗಳ ಸುತ್ತ

  life-3

ಭಾವನೆಗಳು ಮನುಷ್ಯನ ಜೀವನದ ಭಾಗಗಳು. ಭಾವನೆಗಳೇ ಇಲ್ಲದೇ ಬದುಕು ಸಾಗಿಸುವುದು ಕಷ್ಟ. ಹುಟ್ಟಿನಿಂದ ಹಿಡಿದು ಸಾವಿನವರೆಗೂ ಮನುಷ್ಯ ಭಾವನೆಗಳ ಅಸ್ತಿತ್ವದಲ್ಲೆ ಬದುಕಬೇಕು. ನಮ್ಮೆಲ್ಲರಿಗೂ ಭಾವನೆಗಳು ಸಹಜವೇ? ಹೌದು ಸಂತೋಷ, ದುಃಖ, ಕೋಪ,ಮತ್ಸರ , ಆತಂಕ ಇತ್ಯಾದಿ ಭಾವನೆಗಳು ಜೀವನದ ಸಹಜ ಗತಿಯ ಓಟದಲ್ಲಿ ಮೈಲೇಜು ಹೆಚ್ಚಿಸುವಂತಹವು. ಭಾವನೆಗಳು ಮನುಷ್ಯನನ್ನು ಬಂಧಿಸುತ್ತವೆಯೋ ಅಥವಾ ಮನುಷ್ಯನೇ ಭಾವನೆಗಳಲ್ಲಿ ಬಂಧಿಯಾಗುತ್ತಾನೋ ಎನ್ನುವುದು ತಿಳಿಯದು, ಆದರೆ ಮನುಷ್ಯನ ಆಚಾರ, ವಿಚಾರ, ಕಾರ್ಯ ಭಾವನೆಗಳೊಂದಿಗೆ ಬೆಸೆದುಕೊಂಡಿರುತ್ತವೆ. ಭಾವನೆಗಳಿಲ್ಲದ ವ್ಯಕ್ತಿಯೇ ಇಲ್ಲ ಎಂದರೆ ತಪ್ಪಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಭಾವಲೋಕವಿರುತ್ತದೆ. ಅಲ್ಲಿ ಅವರ ಕಲ್ಪನೆಗಳು, ಕನಸುಗಳು,ಆಸೆಗಳು, ವಿಚಾರಗಳು ಜೀವ ತಳೆಯುತ್ತವೆ. ಒಂದು ವೇಳೆ ಬುದ್ದಿ ಮಾತ್ರದಿಂದಲೇ ಆಕಾಂಕ್ಷೆ, ಚಿಂತನೆಗಳು ಹುಟ್ಟಿಕೊಂಡರೂ ಅವುಗಳಿಗೆ ನೀರೆರೆದು ಪೋಷಿಸುವುದು ವ್ಯಕ್ತಿಯ ಭಾವಧಾರೆ.
ಪರಸ್ಪರ ಭಾವನೆಗಳನ್ನು ಕೊಟ್ಟು ತೆಗೆದುಕೊಂಡಾಗ ಸಂಬಂಧಗಳು ಭದ್ರವಾಗುತ್ತವೆ. ಆದರೆ ಈ ಸಂಬಂಧಗಳ ಮಧ್ಯದಲ್ಲಿ ಭಾವನೆಗಳ ತಿಕ್ಕಾಟವೂ ಹೆಚ್ಚಿನದೇ ಇರುತ್ತದೆ. ಆತ್ಮೀಯತೆಯನ್ನು ನೀಡುವ ಪ್ರೀತಿ, ಕಾಳಜಿ ಒಮ್ಮೊಮ್ಮೆ ಸಮಸ್ಯೆಯನ್ನೂ ಸೃಷ್ಟಿಸಿಬಿಡಬಹುದು! ಸಂಘ ಜೀವಿಗಳಾದ ನಾವು ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ , ಹಂಚಿಕೊಳ್ಳುತ್ತಾ ಜೀವನವನ್ನು ಹಗುರಮಾಡಿಕೊಳ್ಳುತ್ತೇವೆ. ಹೀಗೆ ಭಾವನೆಗಳ ವಿನಿಮಯವಾದಾಗ ಮಾತ್ರ ಮನುಷ್ಯ ಉತ್ಸಾಹಿಯಾಗಿರಬಲ್ಲ. ವಿವೇಕಿಯಾಗಿರಬಲ್ಲ. ಎಷ್ಟೋ ಸಲ ಮತ್ತೊಬ್ಬರ ನಿಂದನೆ ಮಾತುಗಳಿಗೆ ಹೆದರಿ ಮನಸ್ಸಿನ ಭಾವನೆಗಳನ್ನು ಹೊರಹಾಕದೇ ಇದ್ದಾಗ ಮಾನಸಿಕ ಸ್ಥಿತಿ ಹದಗೆಡುತ್ತದೆ. ಅಲ್ಲದೇ, ಮನುಷ್ಯ ತನ್ನ ಸಂಯಮವನ್ನು ಮೀರಿ ನಡೆಯಲು ಪ್ರಾರಂಭಿಸುತ್ತಾನೆ.

ಕಾಡುವ ಭಾವ ;- ಬಾಳ ಸಂಗಾತಿಗಳು ಭಾವನೆಗಳಿಲ್ಲದೆ ಬದುಕನ್ನು ಕಲ್ಪಸಿಕೊಳ್ಳಲು ಸಾಧ್ಯವಿಲ್ಲ. ಭಾವನೆಗಳಿಲ್ಲದ ಬಾಳು ಪರಿಮಳವಿಲ್ಲದ ಪುಷ್ಪದಂತೆ: ತೆರೆಗಳಿಲ್ಲದ ಕಡಲಂತೆ: ಅಲೆಗಳಿಲ್ಲದ ಕೊಳದಂತೆ: ಅಂತೆಯೇ ಮನುಷ್ಯನ ಎದೆಯಾಳದಲ್ಲಿ ಹತ್ತಾರು ಭಾವಾನುಭಾವಗಳು ಕೆಲವು ಸ್ಥಾಯಿ, ಹಲವು ಸಂಚಾರಿ! ದಂಪತಿಯ ನಡುವೆ ಚೂರೂ ಗುಟ್ಟು ಮಾಡದವರು ಕೂಡ ತಮ್ಮ ಅಂತರಾಳದ ಭಾವನೆಗಳನ್ನು ಹೇಳಿಕೊಳ್ಳುವುದಿಲ್ಲ. ಹೇಳಿಕೊಳ್ಳಲು ಸಂಕೋಚವಿರಬಹುದು ಅಥವಾ ಸಂಗಾತಿ ಎದುರು ಸಿಟ್ಟು ಅಸಮಾಧಾನ ತೋಡಿಕೊಂಡರೆ ಮಾತಿಗೆ ಮಾತು ಬೆಳೆದು ಇನ್ನೊಂದು ಗೊಂದಲ ಸೃಷ್ಟಿಯಾಗುತ್ತದೆ ಅಂತಲೋ ಅಥವಾ ಹೇಳಿಕೊಂಡರೂ ಪ್ರಯೋಜನವಿಲ್ಲ ಅನ್ನುವ ನಿರ್ಲಕ್ಷ್ಯವೂ ಇರಬಹುದು. ಆದರೆ ಹೀಗೆ ಮನಸ್ಸಲ್ಲೇ ಉಳಿದು ಹೋಗುವ ಅವ್ಯಕ್ತ ಭಾವನೆಗಳಿವೆಯಲ್ಲ ಅವು ಹೀಗೆ ಬಂದು ಹಾಗೆ ಹೋಗುವುದಿಲ್ಲ. ಅಂದರೆ ಅವುಗಳ ಆಯಸ್ಸು ಬೇಗ ಮುಗಿದು ಹೋಗವಂಥದ್ದಲ್ಲ, ಮತ್ತೇ ಮತ್ತೇ ಕಾಡುತ್ತವೆ. ಅದುಮಿಟ್ಟ ಭಾವನೆಗಳು ಆತ್ಮವಿಶ್ವಾಸ, ಆತ್ಮಗೌರವ , ಆತ್ಮ ಪ್ರೀತಿಯ ಮೇಲೆ ಪ್ರಭಾವ ಬೀರುತ್ತದೆ. ವೈಯಕ್ತಿಕ ನೆಲೆಯಲ್ಲಿ ಒಂದು ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಲು ಇದು ಧಕ್ಕೆ ಉಂಟು ಮಾಡಬಹುದು. ಮನಸೊಳಗಿನ ಬೇಸರ ನಿಮ್ಮ ಮಾತಲ್ಲಿ ವ್ಯಕ್ತವಾಗದಿದ್ದರೂ ನಿಮ್ಮ ವರ್ತನೆ , ಅಭಿರುಚಿಯಲ್ಲೆಲ್ಲ ಎದ್ದು ಕಾಣುತ್ತದೆ. ಅದೊಂದು ಅಸಹಜ ರೂಪ ಪಡೆದುಕೊಂಡು ಸಂಬಂಧವೊಂದರ ನೆಮ್ಮದಿ ಕೆಡಿಸಬಹುದು, ಅದೇ ಮುಂದುವರಿದು ಮಾನಸಿಕ ಸಮಸ್ಯೆ ರೂಪದಲ್ಲಿ ಕೂಡ ಎದುರಾಗಬಹುದು. ಪ್ರೀತಿಯ /ಸ್ನೇಹದ ಆರಂಭದಲ್ಲಿ ಮದುವೆಯಾದ ಹೊಸತರಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದು ಉತ್ಕಟವಾಗಿರುತ್ತದೆ. ಒಬ್ಬರಿಗೊಬ್ಬರಲ್ಲಿ ಆದರ-ಗೌರವಗಳು ಬೆಳೆಯಲು ಅದು ಅವಶ್ಯಕ. ಆದರೆ ದಿನಗಳೆದಂತೆ ಉತ್ಕಟತೆ ಕಡಿಮೆಯಾಗಿ ಜವಾಬ್ದಾರಿ ಹೆಚ್ಚುತ್ತದೆ. ಮೊದಲಿನಷ್ಟು ಸುತ್ತಾಟ, ಪ್ರೇಮ ನೀವೆದನೆ ಕಡಿಮೆಯಾಗಬಹುದು. ಅಂದ ಮಾತ್ರಕ್ಕೆ ಅಲ್ಲಿ ಪರಸ್ಪರ ಪ್ರೀತಿ ಕಡಿಮೆಯಾಯಿತು ಅಂತಲ್ಲ. ಭಾವನೆಗಳ ಅಭಿವ್ಯಕ್ತಿಯ ಮಾಧ್ಯಮ ಬದಲಾಗಿರುತ್ತದೆ. ಅಷ್ಟೇ. ಅದನ್ನು ಅರ್ಥ ಮಾಡಿಕೊಳ್ಳುವ ಜಾಣ್ಮೆ ನಮಗಿರಬೇಕು.

life-2

ಸಮಸ್ಯೆಯ ಗಂಟು ಕಗ್ಗಂಟಾಗದಿರಲಿ:- ಒಂದಿಷ್ಟು ವರ್ಷಗಳ ನಂತರದ ದಾಂಪತ್ಯ ಆರಂಭದ ದಿನಗಳಷ್ಟು ಕುತೂಹಲ ಉಳಿಸಿಕೊಂಡಿರದೆ ಇರಬಹುದು, ಮೊದಲ ಸ್ಪರ್ಶದಲ್ಲಿದ್ದ ರೋಮಾಂಚನ ಈಗಲೂ ಇಲ್ಲದೆ ಇರಬಹುದು. ಹಾಗಂತ ಅಲ್ಲಿಗೆ ನಿಮ್ಮ ಸುಂದರ ದಾಂಪತ್ಯ ಮುಗಿದು ಹೋಗುವುದಿಲ್ಲ. ನಿಮ್ಮ ಸಂಗಾತಿಗೆ ಮುಂಚಿನಷ್ಟು ಸಮಯ ಕೊಡಲಿಕ್ಕಾಗುತ್ತಿಲ್ಲದಿರಬಹುದು. ಅದನ್ನೇ ನೀವು ನಿರ್ಲಕ್ಷ್ಯ ಅಂದುಕೊಳ್ಳುತ್ತೀರ. ಪ್ರೀತಿ ಕಡಿಮೆಯಾಗಿದೆ ಅಂತ ಅನುಮಾನ ಪಡುತ್ತೀರ. ಆದರೆ ಅದನ್ನು ಮನಸ್ಸಿನೊಳಗೆ ಇಟ್ಟುಕೊಂಡು ಕೊರಗುವ ಬದಲು ನೇರವಾಗಿ ಹೇಳಿ. ಅನಂತರ ನೀವು ಅಂದುಕೊಂಡಿದ್ದು ಸುಳ್ಳಾ ಅಥವಾ ನಿಜವಾ ಅನ್ನುವುದನ್ನು ಪರಸ್ಪರ ಮಾತನಾಡಿ ನಿರ್ಧರಿಸಿ . ಮೊದಲು ಒಳಗೊಳಗೆ ಉರಿಯುವ ಭಾವನೆಗಳನ್ನು ಮೊದಲು ತಣ್ಣಗೆ ಮಾಡಿಕೊಳ್ಳಿ . ನಿಮ್ಮ ಸಂಬಂಧದೊಳಗಿನ ನಿರ್ಲಕ್ಷ್ಯ , ಅಸಮಾಧಾನ, ಅನುಮಾನ, ಯಾವುದನ್ನೂ ಮನsಸ್ಸಿನಲ್ಲಿಟ್ಟುಕೊಂಡು ಕೊರಗಬೇಡಿ. ಬದುಕಿನಲ್ಲಿ ಪರಿಸ್ಥಿತಿ, ವಯಸ್ಸಿಗೆ ತಕ್ಕಂತೆ ಬದಲಾವಣೆ ಅನ್ನೊದು ಸಹಜ. ಅದಕ್ಕೆ ತಕ್ಕಂತೆ ನಾವು ಬದುಕನ್ನು ಬದಲಾಯಿಸಿಕೊಳ್ಳಲೇಬೇಕು ಅಂತೆನಿಲ್ಲ. ಆದರೆ ಅನಿವಾರ್ಯ ಅನ್ನೋ ಕ್ಷಣವನ್ನು ಪರಸ್ಪರ ಒಪ್ಪಿಕೊಂಡು ಬದುಕುತ್ತೀರಲ್ಲ ಅದೇ ನಿಜವಾದ ಜೀವನ. ಇದನ್ನು ಹೊಂದಾಣಿಕೆ ಅಂದುಕೊಳ್ಳಬೇಕಿಲ್ಲ. ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಕಲೆ ಇಬ್ಬರಿಗೂ ಕರತವಾಗಿರಬೇಕು. ಕಳೆದು ಹೋದದ್ದೇ ಬೇಕು ಅನ್ನೋದು ಸುಂದರ ಬದುಕಾಗಿಸಿಕೊಳ್ಳುವ ಸೂತ್ರವಲ್ಲ. ನೋವು, ನಲಿವು ಅನ್ನುವುದು ಮನಸ್ಥಿತಿಯ ಮೇಲೆ ಅವಲಂಬಿvವಾಗಿರುತ್ತದೆ..

life-1

ವಯಸ್ಸಾಗುವುದು ಪ್ರಕೃತಿಯ ಸಹಜ ಪ್ರಕ್ರೀಯೆ. ದೇಹದಲ್ಲಿ ವೃದ್ಧಾಪ್ಯ ತರುವ ಬದಲಾವಣೆಗಳು ಸುಲಭವಾಗಿ ಕಾಣುವಂತಹವು. ಕೆಲವೊಮ್ಮೆ ಮರೆಮಾಚಲು ಬರುವಂಥಹವು, ಆದರೆ ಮನಸ್ಸಿಗೂ ವಯಸ್ಸಾಗುತ್ತದೆ. ಎಂಬುದು ಹಲವರಿಗೆ ಗೊತ್ತಿರದ ಸಂಗತಿ. ಮಿದುಳು-ಮನಸ್ಸುಗಳ ಶಕ್ತಿ ಹಲವು ವಿಧದಲ್ಲಿ ಕುಂದುತ್ತದೆ. ತಾರುಣ್ಯದಲ್ಲಿ ಇರುವ ಧೈರ್ಯ , ಯಾರ ಸಹಾಯವೂ ಇಲ್ಲದೇ ಬದುಕಬಲ್ಲೆ ಎಂಬ ವಿಶ್ವಾಸ ಕಡಿಮೆಯಾಗುತ್ತದೆ. ಸಾವಿನ ಚಿಂತೆ , ಅನಾರೋಗ್ಯದ ಭಯ ಕಾಡುತ್ತದೆ. ಇತ್ತಿಚಿನ ದಿನಗಳಲ್ಲಿ ಮಕ್ಕಳು ತಂದೆ- ತಾಯಿಯರ ಅಗತ್ಯಗಳ ಬಗ್ಗೆ ಯೋಚಿಸದೇ, ಭಾವನಾತ್ಮಕವಾಗಿ ಸ್ಪಂದಿಸದೇ, ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಭರದಲ್ಲಿ ಅವರತ್ತ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಅಲ್ಲದೆ ಅವರನ್ನು ಮನೆಯ ವಾತಾವರಣದಿಂದ ದೂರ ಮಾಡಿ ವೃದ್ಧಾಶ್ರಮಕ್ಕೊ, ಶಾಂತಿಧಾಮಕ್ಕೊ ಸೇರಿಸುತ್ತಿದ್ದಾರೆ, ಹೀಗೆ ಮನೆಯಿಂದ ದೂರವಾದ ಹಿರಿಯರಲ್ಲಿ ಒಂಟಿತನ, ಗೋಡೆಗಳೊಡನೆ ಮಾತನಾಡಬೇಕಾದ ಸಂದರ್ಭ,ನಾವು ಯಾರಿಗೂ ಬೇಡ ಎಂಬ ಭಾವನೆ, ಕುಟುಂಬದವರ ನಿರ್ಲಕ್ಷ್ಯ ಇವು ವರ್ಗ ಭೇದವಿಲ್ಲದೇ ಕಂಡುಬgರುತ್ತಿವೆ.. ಇಂತಹ ಪರಿಸ್ಥಿತಿ ಉದ್ಭವವಾಗುವುದಕ್ಕೆ ಹಲವು ಕೌಟುಂಬಿಕ ಕಾರಣಗಳು ಇರುತ್ತವೆ. ನಡವಳಿಕೆ ಮೂಲಕ ನಿರ್ಲಕ್ಷ್ಯ ಮಾಡುವ ಮಗ, ಮಗಳು,ಸೊಸೆ,ಅಳಿಯ,ಮೊಮ್ಮಕ್ಕಳು ತಮ್ಮ ಅಸಹನೆಯನ್ನು ತೋರಿಸಲು ಸಾಧ್ಯವಿದೆ. ವೃದ್ಧಾಪ್ಯದ ಅತೀಸೂಕ್ಷ್ಮ ಮನಸ್ಸು ಬೇಗ ನೋವಿಗೀಡಾಗುವ ಭಾವನಾತ್ಮಕ ಸ್ಥಿತಿ ಈ ಅಸಹನೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಒಂಟಿತನಕ್ಕೆ ಒಳಗಾಗುವ ಅಪಾಯ ಇರುತ್ತದೆ.

ಹಂಚಿಕೊಳ್ಳಲಾರದ ಭಾವನೆಗಳು; ನಾವು ಮನುಷ್ಯರು ಸಂಘ ಜೀವಿಗಳಾಗಿದ್ದಾಗ ನಮ್ಮ ಭಾವನೆಗಳನ್ನು ಹಂಚಿಕೊಂಡು ಜೀವನವನ್ನು ಹಗುರಮಾಡಿಕೊಳ್ಳುತ್ತೇವೆ. ನಮ್ಮ ನೋವುಗಳಿಗೆ ಧ್ವನಿಕೊಟ್ಟು ಮತ್ತೆ ಬರುವ ತೊಂದರೆಗಳಿಗೆ ಎದೆ ಕೊಡುತ್ತೇವೆ. ಈ ಹಂಚಿಕೊಳ್ಳುವಿಕೆ ಜೀವನದ ಬಹಳ ದೊಡ್ಡ ವಿಷಯ. ಯಾರಿಗೆ ತಮ್ಮ ಸುಖ-ದುಃಖಗಳನ್ನು ಹೇಳಿಕೊಳ್ಳಲಾಗುವುದಿಲ್ಲವೋ, ಮತ್ತೊಬ್ಬರೊಡನೆ ಬದುಕಲು ಸಾಧ್ಯವಾಗುವುದಿಲ್ಲವೋ ಅಂಥವರು ತಮ್ಮದೇ ಭಾವನೆಗಳ ಬೆಂಕಿಯಲ್ಲಿ ಬೆಂದುಹೋಗುತ್ತಾರೆ. ಕರಕಲಾಗಿ ಹೋಗುತ್ತಾರೆ. ಬಹಳಷ್ಟು ಜನ ಆತ್ಮಹತ್ಯೆಗೆ ಮನ ನೀಡುತ್ತಾರೆ. ಹಂಚಿಕೊಂಡು ಬದುಕುವುದು ಜೀವನದ ಯಶಸ್ಸಿನ ಗುಟ್ಟು.

ದಿಢೀರನೆ ಮನೆ ತೊರೆದು ಹೋಗುವ ಮಕ್ಕಳ ಮನದ ಭಾವನೆಗೆ , ಅರ್ಥವಾಗದ ಅಥವಾ ಸಹಿಸಲಾಗದ ಅಪಮಾನ ಕಾರಣವೆನ್ನುವುದು ಸಾಮಾನ್ಯ, ಆದರೆ ಈ ಸ್ಥಿತಿಗತಿಗಳಷ್ಟೇ ನಿಜವಾಗಿಯೂ ಮನೆಬಿಟ್ಟು ಓಡಿಹೋಗುವಂತೆ ಮಾಡಬಲ್ಲದೇ? ಈ ಪ್ರಶ್ನೆಗೆ ಉತ್ತರ ಹೇಳುವುದು, ಹುಡುಕುವುದು ಸ್ವಲ್ಪ ಕಷ್ಟವೇ, ಏಕೆಂದರೆ ನಿಜವಾಗಿಯೂ ಅಪಮಾನ ಎದುರಿಸದೇ ಬೆಳೆಯುವ ಮಕ್ಕಳು ಇರಲಾರರು. ಸಾಮಾಜಿಕ ವರ್ತನೆಗಳ ಗ್ರಹಿಕೆಗೆ ಇದರ ಅಗತ್ಯವಿರುತ್ತದೆ. ಕೆಲ ಸಂದರ್ಭಗಳಲ್ಲಿ ಉತ್ಪ್ರೇಕ್ಷೆ ಭ್ರಮೆ, ಹುಸಿ ಕಲ್ಪನೆಗಳಿಂದ ತುಂಬಿರುವ ಭಾವನೆಗಳಾಗಿರುತ್ತವೆ. ಗೊಂದಲ, ಗಡಿಬಿಡಿಗಳಿರದ ಕುಟುಂಬಗಳ ಮಕ್ಕಳೂ ಸಹ ಮನೆತೊರೆಯುವದಕ್ಕೆ ಇದು ಕಾರಣವಾಗಿರಬಲ್ಲದು. ಅಂತಹ ಮಕ್ಕಳು ಮನಸ್ಸಿನಲ್ಲಿ ಆತ್ಮೀಯರು ನಿಂದಿಸಿದರು, ಪ್ರೀತಿ ಸಿಗುತ್ತಿಲ್ಲ, ಸಹಪಾಠಿಗಳು ಉದಾಸೀನ ಮಾಡುತ್ತಿದ್ದಾರೆ. ಶಾಲೆಯಲ್ಲಿ ಹಿಂಸೆ ಎನ್ನುವಂತಹ ಸಂಗತಿಗಳು ಬೇರೊಂದು ಜಗತ್ತಿನತ್ತ ಕಣ್ಣು ಹಾಯಿಸುವಂತೆ ಮಾಡುತ್ತದೆ. ಅದೊಂದು ರೀತಿಯ ಹೊಸ ಪಯಣ. ಒಳ ಆಲೋಚನೆಗಳಿಗೆ ಮಣಿದು ಮುನ್ನುಗ್ಗುವಂತಹ ಛಲದ ಪ್ರವಾಸ . ಹತ್ತಿರದವರಿಂದ ದೂರವಾಗುವಂತಹ ಈ ಬಯಕೆ ಗಾಳಿ ತುಂಬಿದ ಬಲೂನಿನಂತೆ. ಮನಬಂದತ್ತ ನಡೆಯುತ್ತಾರೆ.

ನೊಂದ ಮನಸ್ಸಿನ ಭಾವೆನಗಳು ಬೆಂದು ಕಣ್ಣೀರಾಗಿ ಸುರಿಯುತ್ತವೆ. ಮಕ್ಕಳ ನಿಜವಾದ ಭಾವನೆಗಳು, ನೋವುಗಳು ಹಾಗೂ ಅಪಮಾನಗಳನ್ನು ನಾವು ಂಥಾರ್ಥವಾಗಿ ಪರಿಗಣಿಸುವುದಿಲ್ಲ. ಅವನ್ನು ತಮಾಷೆಯಾಗಿ ಹಗುರವಾಗಿ ಸ್ವೀಕರಿಸುತ್ತೇವೆ. ಮಕ್ಕಳಿಗೆಂತ ಚಿಂತೆ? ಅವಕ್ಕೆಂತ ಟೆನ್ಸ್ಯನ್ ? ಅವಕ್ಕೇನು ಗೊತ್ತಾಗುತ್ತೆ? ಎಂಬುದೇ ಹಿರಿಯರ ಸಿದ್ದ ಉತ್ತರ. ಹೀಗಾಗಿ ಹಿರಿಯರ ಅಗತ್ಯಗಳು ಭಾವನೆಗಳು ನಿಜ: ಮಕ್ಕಳದ್ದಲ್ಲ ಎಂದು ಭಾವಿಸುತ್ತೇವೆ. ಹಿರಿಯರು ಖುಷಿಯಲ್ಲಿದ್ದಾಗ ಮಕ್ಕಳನ್ನು ಜೀವಂತ ಬೊಂಬೆಗಳೆಂದು ತಿಳಿದು ಮುದ್ದು ಮಾಡುತ್ತಾರೆ. ಪ್ರೀತಿ ತೋರುತ್ತಾರೆ. ಆದರೆ ಅವರ ಮನಸ್ಸು ಕೆಟ್ಟಿರುವಾಗ ಅದೇ ಮಕ್ಕಳನ್ನು ನಿರ್ಜೀವ ಬೊಂಬೆಗಳೆಂದು ಪರಿUಣಿಸುತ್ತಾರೆ. ಬೊಂಬೆಯನ್ನು ಕಿಟಕಿಯಿಂದಾಚೆಗೆ ಎಸೆದಂತೆ , ಮಹಡಿಯಿಂದ ಕೆಳಗೆ ಬೀಳಿಸಿದಂತೆ, ಕಾಲಿನಿಂದ ಮೆಟ್ಟಿದಂತೆ ಮಕ್ಕಳ ಭಾವನೆಗಳನ್ನು ಕಡೆಗಣಿಸುತ್ತಾರೆ. ಕಣ್ಮಣಿಗಳು ಕಣ್ಣಕಸವಾಗುತ್ತಾರೆ.

life

ಭಾವನೆಗಳನ್ನು ಬಚ್ಚಿಟ್ಟು ಬಳಲುವುದೇಕೆ?: *ಮೋಹನ ಒಬ್ಬ ಅನಾಥ ಮಗು ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದ ಮಗು .ಅನಾಥಾಶ್ರಮದಲ್ಲಿ ಬೆಳೆದರೇನಂತೆ ಅವನಿಗೂ ಮನಸ್ಸಿದೆ .ಅವನಲ್ಲೂ ಭಾವನೆಗಳಿವೆ , ಆದರೆ ಅವುಗಳನ್ನು ಯಾರ ಹತ್ತಿರ ವ್ಯಕ್ತಪಡಿಸಬೇಕೆಂಬುದೆ ತಿಳಿಯದೇ ಒಂದು ದಿನ ರಿಮ್ಯಾಂಡ ಹೋಂ. ಸೇರಿದ ಘಟನೆ ಎಂಥವರ ಕಣ್ಣಲ್ಲೂ ನೀರು ತರಿಸುವಂಥಹದು. ಏಕೆಂದರೆ ಮೋಹನ ಒಬ್ಬ ಮುಗ್ಧ ಹುಡುಗ, ಯಾವುದೇ ವಿಷಯವನ್ನಾದರೂ ಅತ್ಯಂತ ಸೂಕ್ಷ್ಮವಾಗಿ ವಿಚಾರಿಸುವಂತವ, ಯಾವುದನ್ನು ಅಷ್ಟು ಬೇಗನೆ ಒಪ್ಪಿಕೊಳ್ಳದಿರುವ ಗುಣ, ಎಲ್ಲವನ್ನು ಪರಾಮರ್ಶಿಸಿ ನೋಡುವ ಗುಣ, ಯಾರೇ ತಪ್ಪು ಮಾಡಿದರೂ ಅದು ತಪ್ಪು ಎಂದು ಹೇಳುವ ಗುಣ,ಹೀಗಾಗಿ ಅವನ ನೇರ ನಡೆ ನುಡಿಯಿಂದ ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ. ಹೀಗಿದ್ದಾಗ ಅವನು ಪೋಲಿಸರಿಂದ ಬಂಧಿತನಾಗಿ ರಿಮ್ಯಾಂಡ ಹೋಂ. ಸೇರಿದ ಘಟನೆ ಎಲ್ಲರಿಗೂ ಅಚ್ಚರಿ ತರಿಸುವಂಥದಾಗಿತ್ತು.

ಅನಾಥಾಶ್ರಮದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಶಾಲಿನಿ ಟೀಚರ್ ಗೆ ಸೋಹಿಲ್ ಎಂಬ ಮಗ ಇದ್ದ. ಅವನು ಮೋಹನ ವಯಸ್ಸಿನವನೆ ಆಗಿದ್ದ. ಸೋಹಿಲ್ ಆಗಾಗ ತಾಯಿಯೊಡನೆ ಆಶ್ರಮಕ್ಕೆ ಬರುವುದು, ಆಶ್ರಮದ ಮಕ್ಕಳೊಂದಿಗೆ ಆಟವಾಡುವುದು ಮಾಡುತ್ತಿದ್ದ. ಅದರೊಂದಿಗೆ ಶಾಲಿನಿಗೆ ಟೀಚರ್ ಗೆ ವಿವಾಹವಾಗಿ ತುಂಬಾ ದಿನಗಳಾದ ಮೇಲೆ ಸೋಹಿಲ್ ಹುಟ್ಟಿದ್ದರಿಂದ ತುಂಬಾ ಮುದ್ದಾಗಿ ಬೆಳೆಸಿದ್ದರು. ಅಷ್ಟೇ ಪ್ರೀತಿಸುತ್ತಿದ್ದರು. ಅವನು ಇಷ್ಟ-ಕಷ್ಟಗಳನ್ನು ಅವನು ಹೇಳುವದಕ್ಕಿಂತ ಮುಂಚೆಯೆ ಪೂರೈಸುತ್ತಿದ್ದರು. ಸೋಹಿಲ್ ಆಶ್ರಮಕ್ಕೆ ಬಂದಾಗ ಶಾಲಿನಿ ಸಹಿತ ಅವನೊಂದಿಗೆ ಸೇರಿ ಆಟವಾಡುವುದು. ಅವನಿಗೆ ತುತ್ತು ಮಾಡಿ ಉಣಿಸುವುದು. ಬಿದ್ದು ನೋವು ಮಾಡಿಕೊಂಡರೆ ಎದೆಗವಚಿಕೊಂಡು ಸಾಂತ್ವನ ಹೇಳುವುದು, ಮುತ್ತಿಕ್ಕಿ ಮುದ್ದಿಸುವುದು, ಹೀಗೆ ಮಗನ ಮೇಲಿನ ಪ್ರೀತಿಯಿಂದ ಸುತ್ತಲಿನ ಪ್ರಪಂಚವನ್ನೆ ಮರೆಯುತ್ತಿದ್ದ ಶಾಲಿನಿಗೆ ತಾನಿರುವು ಅನಾಥ ಮಕ್ಕಳ ಮಧ್ಯದಲ್ಲಿ ಎಂಬ ಪರಿವೆಯೆ ಇರಲಿಲ್ಲ. ಆ ಮಕ್ಕಳಿಗೂ ಭಾವನೆಗಳಿರುತ್ತವೆ. ಅವರಿಗೂ ತಂದೆ-ತಾಯಿಯರ ಪ್ರೀತಿ ಬೇಕಾಗಿರುತ್ತದೆ, ಅವರು ಅಮ್ಮನ ಮಡಿಲಲ್ಲಿ ಮಲಗಬಯಸುತ್ತಾರೆ. ಲಾಲಿ ಹಾಡು ಕೇಳಲು ಇಚ್ಚಿಸುತ್ತಾರೆ. ಇದರ ಬಗ್ಗೆ ಗಮನ ಹರಿಸದೆ ತನ್ನಷ್ಟಕ್ಕ ತಾನು ಸೋಹಿಲ್ ನೊಂದಿಗೆ ಇರುವುದನ್ನು ಕಂಡ ಮೋಹನ ಮನಸ್ಸಿನಲ್ಲಿ, ತನ್ನ ತಂದೆ-ತಾಯಿಯನ್ನು ನೋಡಬೇಕೆಂಬ ಬಯಕೆ ಹುಟ್ಟುತ್ತದೆ. ಗೊತ್ತೆ ಇರದ ತಂದೆ ತಾಯಿಯನ್ನು ಎಲ್ಲಿಂದ ಹುಡುಕುವುದು. ದಿನಗಳೆದಂತೆ ಮೋಹನ ಮನಸ್ಸಿನಲ್ಲಿ ಶಾಲಿನಿ ಟೀಚರ ತನ್ನನ್ನು ತನ್ನ ಮಗನಂತೆ ಮುದ್ದಿಸಬೇಕೆಂದು ಆಸೆ ಪಡತೊಡಗಿದ. ಆದರೆ ಅದನ್ನು ಬಾಯಿ ಬಿಟ್ಟು ಹೇಳುವ ಹಾಗಿಲ್ಲ. ಯಾರಿಗಾದರೂ ಹೇಳಿದರೂ ಏನಾದರೂ ಅನ್ನಬಹುದು ಅಂತಾ ಮನದಲ್ಲಿ ಹುಟ್ಟಿದ ಭಾವನೆಗಳನ್ನು ಅದುಮಿಟ್ಟುಕೊಳ್ಳುತ್ತಾ ಬಂz. ಭಾವನೆಗಳನ್ನು ವ್ಯಕ್ತಪಡಿಸಲಾಗದೇ ಮೌನವಾಗಿರತೊಡಗಿದ, ಒಬ್ಬೊಬ್ಬನೆ ಅಳುವುದು, ತನ್ನ ತಾಯಿ ತನ್ನ ಎತ್ತಿಕೊಂಡಿದಾಳೆ ಅಂತ ಮರ ಏರಿ ಕೂಡುವುದು, ಏನೇನೋ ವಿಚಾರ ಮಾಡುತ್ತಾ ಒಮ್ಮಿಂದೊಮ್ಮೆಲೆ ಚೀರುವುದು ಮಾಡತೊಡಗಿದ, ಶಾಲಿನಿ ಮತ್ತು ಸೋಹಿಲ್ ರ ವಾತ್ಸಲ್ಯಮಯ ಸಂಬಂಧ ನೋಡಿ ಅದು ತನಗೆ ದಕ್ಕುತ್ತಿಲ್ಲ ಎಂಬ ಭಾವ ಅವನನ್ನು ಉದ್ರೇಕಾವಸ್ಥೆಗೆ ಒಯ್ಯುತ್ತಿತ್ತು, ಹೀಗೆ ಉದ್ರೇಕಾವಸ್ಥೆಗೆ ತಿರುಗಿದ ಸಮಯದಲ್ಲಿ ನನಗೆ ದೊರೆಯದ ಆ ವಾತ್ಸಲ್ಯ, ಪ್ರೀತಿ ಇನ್ನಾರಿಗೂ ಬೇಡ ಅಂತ ಶಾಲಿನಿ ಟೀಚರ್ ಗೆ ಜೋರಾಗಿ ಕಲ್ಲಿನಿಂದ ಹೊಡೆದ ಆ ಹೊಡೆತಕ್ಕೆ ಟೀಚರ್ ಗೆ ತುಂಬಾ ಗಾಯವಾಯಿತು. ಆಸ್ಪತ್ರೆ ಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಇದು ಒಂದು ಸಣ್ಣ ಉದಾಹರಣೆಯಷ್ಟೇ ಇಂತಹ ಎಷ್ಟೋ ಘಟನೆಗಳು ನಮ್ಮ ಸುತ್ತಮುತ್ತಲೇ ನಡೆಯುತ್ತಿರುತ್ತವೆ. ಅವುಗಳನ್ನು ನಾವ್ಯಾರು ಗಮನಿಸುವುದೇ ಇಲ್ಲ, ಗಮನಿಸಿದರೂ ನಮಗೂ ಅದಕೂ ಯಾವ ಸಂಬಂಧವೂ ಇಲ್ಲ ಅಂತ ಸುಮ್ಮನಾಗಿಬಿಡುತ್ತೇವೆ.

*ಸಂಜು ಈಗೀಗ ಉಗುರು ಕಚ್ಚುವ ಅಭ್ಯಾಸ ಮಾಡಿಕೊಂಡಿದ್ದಾನೆ. ಅವನ ತಾಯಿ ಹಾಗೇ ಮಾಡಬೇಡ .ಅದು ದುರಭ್ಯಾಸ ಎಂದು ಹೇಳಿದರು ಕೇಳುವುದಿಲ್ಲ. ತಂದೆ ರಾಮಯ್ಯ ಶಿಸ್ತಿನ ಮನುಷ್ಯ ಸಿಟ್ಟು ಬಂದರೆ ಮುಖ ಮೋರೆ ಎನ್ನದೆ ಬಾರಿಸುತ್ತಾರೆ. .ತಂದೆ ಹೊಡೆಯಲು ಕೈ ಎತ್ತುವಾಗಲೆಲ್ಲ ಯಾಕೆ ಹೋಡೀತಿರಿ? ಎಂದು ಕೇಳಬೇಕೆನ್ನಿಸುತ್ತದೆ ಸಂಜುಗೆ. ಆದರೆ ಹಾಗೇ ಕೇಳುವುದು ಅವಿಧೇಯತೆ, ತಂದೆಗೆ ತೋರುವ ಅಗೌರವ ಎಂದು ಉಕ್ಕಿ ಬರುವ ಭಾವನೆಗಳನ್ನು ಹತ್ತಿಕ್ಕಿ ಕೊಳ್ಳುತ್ತಲೇ ಬಂದಿದ್ದಾನೆ. ಪ್ರೀತಿಯ ಅಮ್ಮನಲ್ಲೂ ಆತ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಹೋಗಲಿಲ್ಲ ಅಮ್ಮ ಏನು ಹೇಳುತ್ತಾಳೋ ಅವಳು ಅಪ್ಪನ ಪಕ್ಷ ವಹಿಸಿದರೆ ಎಂಬ ಭಯ ಬೇರೆ , ಹೀಗೆ ಭಾವನೆಗಳನ್ನು ಹತ್ತಿಕ್ಕುವಾಗಲೆಲ್ಲ ಉಮೇಶ ಉಗುರು ಕಚ್ಚುತ್ತಾನೆ. ಅದೀಗ ಅವನಿಗೆ ಅಭ್ಯಾಸವೇ ಆಗಿಬಿಟ್ಟಿದೆ.

*ರಂಜನಿಗೆ ಮುರಳಿಯನ್ನು ಕಂಡರೆ ಬಹಳ ಇಷ್ಟ, ಕವಿತೆ, ಭಾಷಣ,ನಾಟಕ, ಆಟೋಟ , ಪಾಠ ಹೀಗೆ ಎಲ್ಲದರಲ್ಲೂ ಮುಂದಿರುವ ಮುರಳಿಯನ್ನು ಮದುವೆಯಾಗಬೇಕೆಂಬ ಬಯಕೆ. ಆದರೆ ಐ ಲವ್ ಯು ಅಂತ ಹೇಳುವುದು ಹೇಗೆ? ಹಾಗೆ ಹೇಳಿದರೆನಿನ್ನ ಬುದ್ದಿ ಇಷ್ಟೇನು! ನಾನು ನಿನ್ನನ್ನು ಸಹೋದರಿ ಎಂದು ಭಾವಿಸಿದ್ದೆ ಎಂದು ಆತ ಹೇಳಿದರೆ ಏನೇ ಆಗಲಿ ಮನದಾಳದ ಬಯಕೆ ಹೇಳಿಯೇ ಬಿಡೋಣ, ಎಂದು ರಂಜನಿ ನಿತ್ಯ ಸಂಕಲ್ಪ ಮಾಡಿದರೂ ಅವನೆದುರಿಗೆ ತನ್ನ ಭಾವನೆಗಳನ್ನು ತೋಡಿಕೊಳ್ಳಲಾಗದೇ ಮುಗುಳ್ನಗೆ ಸೂಸಿ ಮುಂದೆ ಹೋಗಿ ಬಿಡುತ್ತಿದ್ದಳು. ಕಾಲೇಜ್ ಮುಗಿದ ಸಮಯದಲ್ಲಿ ಮುರಳಿ ಮದುವೆಯ ಕರೆಯೋಲೆ ಕೊಟ್ಟಾಗ ತನಗೆ ತಾನೇ ಮೋಸ ಮಾಡಿಕೊಂಡ ಭಾವನೆಗಳು ಕಾಡದಿರಲಿಲ್ಲ.

*ಸುಮಾರು ೭೦ ರ ಆಸು ಪಾಸಿನ ರಂಗೇಗೌಡರು ತಮ್ಮ ಹರೆಯದ ವಯಸ್ಸಿನಲ್ಲಿ ತುಂಬಾ ಗತ್ತು-ಗಮ್ಮತ್ತಿನಿಂದ ಬದುಕಿದವರು, ಜಮೀನ್ದಾರಿಕೆ ವಂಶದಿಂದ ಬಂದ ಇವರು ಜಮೀನಿನ ಜವಾಬ್ದಾರಿಯನ್ನೆಲ್ಲ ತಾವೇ ಸ್ವತಃ ಮುಂದೆ ನಿಂತು ಮಾಡುತ್ತಿದ್ದರು. ಯಾರಿಗೂ ಕೆಲಸ ಮಾಡಲು ಬಿಡುತ್ತಿರಲಿಲ್ಲ, ಯಾರು ಮಾಡಿದ ಕೆಲಸವೂ ಇವರಿಗೆ ಸರಿ ಬರುತ್ತಿಲಿಲ್ಲ, ಹೀಗಾಗಿ ತಾವೇ ಮಾಡುತ್ತಿದ್ದ ಗೌಡರಿಗೆ ವಯಸ್ಸಾದಂತೆ ಸ್ವಲ್ಪ ಅರಳು ಮರಳು ಶುರುವಾಯಿತು. ಕೆಲಸ ಮಾಡಲು ಶಕ್ತಿ ಕಡಿಮೆಯಾಯಿತು. ಪಟ್ಟಣದಲ್ಲಿ ಇಂಜಿನೀಯರ ಆಗಿ ಕೆಲಸ ಮಾಡುತ್ತಿದ್ದ ಗೌಡರ ಮಗ ತಂದೆಯ ಈ ಸ್ಥಿತಿಯನ್ನು ಕಂಡು ಅಪ್ಪನ ಮೇಲಿನ ಮಮತೆಯಿಂದ ತಾಯಿಯನ್ನು ಕಳೆದುಕೊಂಡಾಗಿದೆ. ಇಳಿ ವಯಸ್ಸಿನಲ್ಲಿ ನಿಮ್ಮ ಸೇವೆಯನ್ನಾದರೂ ಮಾಡುವ ಭಾಗ್ಯವನ್ನು ನಮಗೆ ಕೊಡಿ ಅಂತಾ ಹೇಳಿ ಜಮೀನನ್ನೆಲ್ಲ ಊರವರಿಗೆ ಉಳುಮೆ ಮಾಡುವಂತೆ ಹೇಳಿ ತಂದೆಯನ್ನು ಪಟ್ಟಣಕ್ಕೆ ಕರೆತರುತ್ತಾನೆ. ಹಳ್ಳಿಗಾಡಿನಲ್ಲಿ ಜೀವನ ನಡೆಸಿದ ಗೌಡರಿಗೆ ಪೀಟೆಯ ಜೀವನ ಮುಜುಗರವನ್ನುಂಟು ಮಾಡುತ್ತದೆ. ಆ ಪರಿಸ್ಥಿತಿಗೆ ಹೊಂದಿಕೊಳ್ಳಲು ತುಂಬಾ ಕಷ್ಟ ಪಡುತ್ತಾರೆ. ಸೊಸೆ ಕೂಡ ಹೊರಗೆ ದುಡಿಯಲು ಹೋಗುತ್ತಿದ್ದು, ಮೊಮ್ಮಕ್ಕಳು ಮುಂಜಾನೆ ಶಾಲೆಗೆ ಹೋದರೆ ಸಂಜೆಗೆ ಎಲ್ಲರೂ ಸೇರುತ್ತಿದ್ದರು. ಸಂಜೆ ಎಲ್ಲರೂ ಸೇರಿದರೂ ಯಾರು ಒಬ್ಬರಿಗೊಬ್ಬರು ಮಾತನಾಡದಷ್ಟು ಬ್ಯೂಸಿಯಾಗಿ ಬಿಡುತ್ತಿದ್ದರು. ಮಕ್ಕಳು ಹೋಂ ವರ್ಕ ಮಾಡುವದರಲ್ಲಿ, ಮಗ ತನ್ನ ಆಫೀಸ್ ಕೆಲಸದಲ್ಲಿ, ಸೊಸೆ ಅಡುಗೆ ಮಾಡುವುದರಲ್ಲಿ, ಹೀಗೆ ! ಇದು ಗೌಡರಿಗೆ ತುಂಬಾ ವೇದನೆ ಉಂಟು ಮಾಡಿತು.

ಊರ ಮುಂದಿನ ಕಟ್ಟೆಗೆ ಕೂತು ಗಂಟೆಗಟ್ಟಲೇ ಮಾತು ಹೇಳಿದ ಗೌಡರು ಇಂದು ನಾಲ್ಕು ಗೋಡೆಗಳ ಮಧ್ಯೆ ಏನನ್ನು ಯಾರೊಂದಿಗೆ ಮಾತನಾಡಿಯಾರು? ಹೊರಗೆ ವಾಯುವಿಹಾರಕ್ಕೆ ಹೋಗೋಣವೆಂದರೆ ಅದರ ರೂಢಿಯು ಗೌಡರಿಗಿಲ್ಲ, ಪಟ್ಟಣದ ರೀತಿ-ನೀತಿ ಹೇಗಿದೆಯೋ ಏನೋ ಯಾರಾದರೂ ನನ್ನ ನೋಡಿ ನಕ್ಕರೆ ಎಂಬ ಭಯದಿಂದ ಅವರು ಮನೆಯಿಂದ ಹೊರ ಹೋಗುವ ವಿಚಾರವನ್ನು ಮಾಡಿರಲಿಲ್ಲ. ಇದೇ ಪರಿಸ್ಥಿತಿ ಮುಂದುವರಿದಾಗ, ಗೌಡರು ತಮ್ಮ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಗೊಂಬೆಗಳ ಹತ್ತಿರ, ಗೋಡೆಗಳ ಹತ್ತಿರ ಹಂಚಿಕೊಳ್ಳಲಾರಂಭಿಸಿದರು, ಬರುಬರುತ್ತಾ ಅದು ಅವರಿಗೆ ಅಭ್ಯಾಸವೇ ಆಯಿತು, ಮೊದಮೊದಲು ಯಾರು ಇಲ್ಲದಾಗ ತಮ್ಮ ಭಾವನೆಗಳನ್ನು ಹೇಳುತ್ತಿದ್ದವರು , ಇತ್ತಿತ್ತಲಾಗಿ ಯಾರು ಇದಾರೋ ಇಲ್ಲವೋ ಎಂಬ ಪರಿವೆ ಇಲ್ಲದೆ ಗೋಡೆಗಳ ಜೊತೆ ಮಾತನಾಡತೊಡಗಿದರು. ಅಲ್ಲದೇ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಲು ಏನೆನೆಲ್ಲಾ ಮಾಡಬಹುದು ಅಂತಾ ಯೋಚಿಸಿ ಹೂಕುಂಡದಲ್ಲಿರುವ ಮಣ್ಣನ್ನು ತೆಗೆದು ಮನೆಯಲ್ಲಿ ಹರಡಿ , ಕೈಗೆ ಸಿಕ್ಕಿದ ಕಾಳುಗಳನ್ನು ಅದರಲ್ಲಿ ಚೆಲ್ಲಿ, ನೀರು ಹಾಕಿ ನಾನು ಉಳುಮೆ ಮಾಡಿದೆ , ಈ ವರ್ಷ ಉತ್ತಮ ಬೆಳೆ ಬರುತ್ತೆ ಅಂತಾ , ಮಗ ಸೊಸೆ ಮನೆಗೆ ಬರುವದರಲ್ಲಿ ಮನೆಯನ್ನೆಲ್ಲ ಗಲೀಜು ಮಾಡಿಬಿಟ್ಟಿರುತ್ತಿದ್ದರು. ಇದನ್ನು ನೋಡಿದ ಮಗನಿಗೆ ತಂದೆಯ ಈ ಸ್ಥಿತಿಯನ್ನು ಜೀರ್ಣೀಸಿಕೊಳ್ಳಾಗಲಿಲ್ಲ. ಕೊನೆಗೆ ಮಾನಸಿಕ ತಜ್ಞರ ಸಹಾಯದಿಂದ ತಂದೆಯ ಆರೋಗ್ಯ ಸರಿಪಡಿಸಿ ತಾವು ಅವರೊಂದಿಗೆ ಹಳ್ಳಿಯಲ್ಲಿಯೆ ವಾಸವಾದರು.

life-4

ಭಾವನೆಗಳನ್ನು ಹೊರಹಾಕುವುದು ಹೇಗೆ?:  ಉದಾಹರಣೆಗೆ, ವೈವಾಹಿಕ ಜೀವನದಲ್ಲಿ ಗಂಡ-ಹೆಂಡತಿಯ ನಡುವೆ ಅಕ್ಕರೆ, ವಾತ್ಸಲ್ಯವಿರಬೇಕು. ಆದರೆ ಅದು ಅತಿಯಾದರೆ ಮನಸ್ಸು ಕಿರಿಕಿರಿ ಅನುಭವಿಸುತ್ತದೆ. ಗಂಡ ತನ್ನನ್ನು ಅಕ್ಕರೆಯಿಂದ ಕಾಣಬೇಕು, ಪ್ರೀತಿಯಿಂದ ಮಾತನಾಡಿಸುತ್ತಿರಬೇಕು, ತನ್ನೊಂದಿಗೇ ಇರಬೇಕು ಎಂಬೆಲ್ಲ ವಿಚಾರಗಳು ಅಸಹಜ ಎನಿಸುತ್ತವೆ. ಅದೇ ರೀತಿ ಗಂಡನು ಕೂಡ ಪದೇ ಪದೇ ಹೆಂಡತಿಯ ಕುರಿತಾಗಿ ಅತಿಯಾದ ಕಾಳಜಿ ತೋರಿಸುವುದು, ಅವಳ ಪ್ರತೀ ಚಲನವಲನವನ್ನೂ ಗಮನಿಸುವುದು ಮಾಡಿದರೆ ಅಲ್ಲಿ ಎರಡು ಮನಸ್ಸುಗಳಿಗೂ ನೋವಾಗುತ್ತದೆ. ಪ್ರೀತಿ, ಕಾಳಜಿ ಮಮತೆಯು ಅವರಿಬ್ಬರಲ್ಲಿ ಅತಿಯಾಗಿ ಇರುವುದರಿಂದಲೇ ಅವರಿಬ್ಬರೂ ಪರಸ್ಪರ ಹಾಗೆ ವರ್ತಿಸಿದ್ದಿರಬಹುದು! ಆದರೆ ಒಂದು ಹಂತದಲ್ಲಿ ಅವುಗಳು ಅಷ್ಟೊಂದು ಅಗತ್ಯವೇ ಎಂಬ ತರ್ಕದ ಪ್ರಶ್ನೆ ಉಂಟಾಗಿ ಬಾಂಧವ್ಯ ಕೆಡಲೂಬಹುದು. ವಾಸ್ತವಕ್ಕೆ ಹೊಂದಿಕೊಂಡು ಬದುಕುವುದು ಅನಿವಾರ್ಯ. ಆದ್ದರಿಂದ ಭಾವನೆಗಳು ವಾಸ್ತವಕ್ಕೆ ತಕ್ಕಂತೆ ಅಭಿವ್ಯಕ್ತಿಗೊಳ್ಳಬೇಕು.

ಭಾವನೆಗಳನ್ನು ಹೊರ ಚೆಲ್ಲಿ ಮನಸ್ಸಿನ ಒಳಗಿರುವದನ್ನೆಲ್ಲ ಸುಲಭವಾಗಿ ಹೇಳಲು ಪ್ರಯತ್ನಿಸಿ. ಯಾರ ಬಳಿಯೂ ಹೇಳಲಿಕ್ಕಾಗುತ್ತಿಲ್ಲ ಎಂದರೆ ಕನ್ನಡಿ ಎದುರು ನಿಂತು ಹೇಳಿ. ಇಲ್ಲವಾದರೆ ಮನಸ್ಸಿನಲ್ಲಿದ್ದುದನ್ನು ಅಕ್ಷರ ರೂಪದಲ್ಲಿ ಹೊರಚೆಲ್ಲಬಹುದು. ಕವನ,ಕತೆ, ಲೇಖನ ಯಾವುದೇ ರೂಪದಲ್ಲಾದರೂ ಸರಿಯೇ.

ಸಾಮಾಜಿಕ ಶಿಷ್ಟಾಚಾರವನ್ನು ಮುಂದೆ ಮಾಡಿಕೊಂಡು ಕೆಲವರು ತಮ್ಮ ಸಹಜ ಸೆಲೆಯ ಭಾವನೆಗಳನ್ನು ಯಾರೊಡನೆಯು ಹಂಚಿಕೊಳ್ಳದೆ, ಅದುಮಿಟ್ಟುಕೊಳ್ಳುತ್ತಾರೆ. ಗಂಡಸು ಅಳುವುದೇ, ಹೆಂಗಸು ನಗುವುದೇ ಇತ್ಯಾದಿ ಟೀಕೆಗಳಿಗೆ ಹೆದರಿ ಅಳುವುದು , ನಗುವುದನ್ನು ಕೈಬಿಡುತ್ತಾರೆ. ಅಹಿತಕರ ಅನುಭವ ನೋವು ಇತ್ಯಾದಿಗಳನ್ನು ಮರೆಯುವ ಬದಲು ಸುಪ್ತ ಪ್ರಜ್ಞೆಯ ನಿಗೂಢವನ್ನು ಗಮನಿಸುತ್ತಾರೆ. ಇದರ ಪರಿಣಾಮವಾಗಿಯೋ ಏನೋ ದಮನ ಒಂದು ರಕ್ಷಣಾ ತಂತ್ರವಾಗಿ ಪರಿಣಮಿಸುತ್ತದೆ. ಈ ಅಹಂ ರಕ್ಷಣಾ ತಂತ್ರ ಹಿತಮಿತವಾಗಿದ್ದರೆ. ಅಪಾಯವಿಲ್ಲ ಮಿತಿ ಮೀರಿದರೆ ಮಾನಸಿಕ ಕಾಯಿಲೆಗೆ ಕಾರಣವಾಗಬಹುದು. ಭಾವನೆಗಳನ್ನು ಅತೀಯಾಗಿ ವ್ಯಕ್ತಪಡಿಸುವ ಬದಲು ಶುಚಿ-ರುಚಿಗಳೊಂದಿಗೆ ಹಿತಮಿತವಾಗಿ ಪ್ರಕಟಿಸುವುದು ಸೂಕ್ತ. ಭಾವನೆಗಳನ್ನು ಅದುಮಿಟ್ಟುಕೊಂಡು ಕುದಿಯುವುದು ತರವಲ್ಲ. ಹೀಗೆ ಭಾವನೆಗಳನ್ನು ಅದುಮಿಟ್ಟುಕೊಳ್ಳುವುದರಿಂದ ವ್ಯಕ್ತವಾಗದೆ ಹಾಗೇ ಉಳಿದು ಬಿಡುತ್ತವೆ. ಆದರೆ ಹಾಗೆ ಹೆಪ್ಪುಗಟ್ಟಿದ ಭಾವನೆಗಳು ಒತ್ತಡದ ತಾಪಕ್ಕೆ ಪ್ರವಾಹದ ರೂಪದಲ್ಲಿ ಹೇಗೆ ಬೇಕಾದರೂ ಹರಿಯಬಹುದು. ಆದ್ದರಿಂದ ಒಂದು ಹನಿ ಪ್ರೀತಿಯ ಸೆಲೆ ಬತ್ತದಂತೆ ಭಾನೆಗಳನ್ನು ಹರಿಬಿಟ್ಟುಬಿಡಿ.

ಭಾವನೆಗಳ ಅಭಿವ್ಯಕ್ತಿಯಲ್ಲಿ ಸಹಜತೆ ಇರಬೇಕು. ನಿಮ್ಮಷ್ಟಕ್ಕೆ ನೀವೆ ನೊಂದುಕೊಳ್ಳದೆ, ಹೇಳುವುದನ್ನು ಚುಟುಕಾಗಿ ಹೇಳಿ ಹಗುರಾಗಿ ಬಿಡಿ, ನೇತ್ಯಾತ್ಮಕ ಭಾವನೆಗಳು ಮನಸ್ಸನ್ನು ಮುತ್ತದಂತೆ ನೋಡಿಕೊಳ್ಳಿ, ಕೀಳು ಭಾವನೆಗಳನ್ನು ದಮನಿಸುವ ಬದಲು ಉದಾತ್ತೀಕರಿಸಿ ವ್ಯಕ್ತಿತ್ವ ವನ್ನು ಉನ್ನತ ನೆಲೆಗೆ ಕೊಂಡೊಯ್ಯಿರಿ.

*ಸಾಮಾಜಿಕ ಸಭ್ಯತೆ ದೃಷ್ಟಿಯಿಂದ ಭಾವನೆಗಳನ್ನು ವಿಪರೀತ ಅದುಮಿಟ್ಟಕೊಳ್ಳಬೇಡಿ. ಅದುಮಿಟ್ಟ ಭಾವನೆಗಳು ವಿಕೃತ ರೂಪದಲ್ಲಿ ಸ್ಪೋಟಿಸುತ್ತವೆ.

* ಕೋಪ-ತಾಪ, ನಗು-ಅಳು ಇತ್ಯಾದಿ ಭಾವನೆಗಳನ್ನು ಹಿತಮಿತ ಪ್ರಮಾಣದಲ್ಲಿ ಪ್ರಕಟಿಸಿ.

* ನಿಮ್ಮ ಮನಸ್ಸನ್ನು ಪದೇ ಪದೇ ಮುತ್ತುವ ನಿರ್ದಿಷ್ಟ ಭಾವನೆಗಳನ್ನು ದಮನಿಸಬೇಡಿ, ತೀರ ಆತ್ಮೀಯರೂ, ನಂಬಿಗಸ್ಥರೂ ಆದವರ ಜೊತೆ ಹಂಚಿಕೊಳ್ಳಿ, ಡೈರಿಯಲ್ಲಿ ಬರೆಯುತ್ತಿರಿ.

*ವೈಫಲ್ಯಗಳನ್ನು ಒಳಗಿಟ್ಟುಕೊಂಡು ಕೊರಗುವುದು ಬೇಡ ಅನ್ಯರ ಟೀಕಾಸ಼ಗಳ ಬಗ್ಗೆ ಚಿಂತೆಯೇ ಬೇಡ. ಎಲ್ಲವನ್ನೂ ಎಲ್ಲರನ್ನೂ ತುಂಬಾ ಗಂಭೀರವಾಗಿ ಸ್ವೀಕರಿಸುವುದೂ ಬೇಡ.

* ಭಾವ ತುಮುಲತೆ ಒಳಗಾಗಿ ಆತ್ಮಹತ್ಯೆಯಂತ ನಿರ್ಧಾರಗಳು ಬೇಡ ಜಗತ್ತಿನಲ್ಲಿ ನನ್ನನ್ನು ಇಷ್ಟಪಡುವವರು ಒಬ್ಬರಾದರೂ ಇದ್ದಾರೆ ಎಂಬ ನಂಬಿಕೆ ನಿಮ್ಮಲ್ಲಿರಲಿ. ಈ ನಂಬಿಕೆಯೇ ರಕ್ಷಕ.

life-5

ಮನೋವಿಜ್ಞಾನಿಗಳು ಭಾವನೆಗಳನ್ನು ಸಕಾರಾತ್ಮಕ ಹಾಗೂ ನಕಾರಾತ್ಮಕ ಎಂದು ಎರಡು ಬಗೆಯಾಗಿ ವಿಂಗಡಿಸುತ್ತಾರೆ. ಸಂತೋಷ , ಸ್ವೀಕಾರ, ಆಶ್ಚರ್ಯ, ನೀರಿಕ್ಷೆ ಮೊದಲಾದ ಸಕಾರಾತ್ಮಕ ಭಾವನೆಗಳನ್ನು ಹೆಚ್ಚು ಹೆಚ್ಚಾಗಿ ಪ್ರೋತ್ಸಾಹಿಸಿದಾಗ , ಆತ್ಮ ವಿಶ್ವಾ, ಧೈರ್ಯ, ಆತ್ಮ ಸಮ್ಮಾನ , ಮುನ್ನುಗ್ಗುವ ಇತ್ಯಾದಿ ಗುಣಗಳು ಬೆಳೆಯುತ್ತವೆ. ಮನಸ್ಸಿಗೆ ಸಂತೋಷವನ್ನು vಂದು ಕೊಡುತ್ತವೆ. ಭಯ, ಕೋಪ, ಆತಂಕ ಖಿನ್ನತೆ ಇತ್ಯಾದಿ ನಕಾರಾತ್ಮಕ ಭಾವನೆಗಳ ದೆಸೆಯಿಂದ ಜೀವನದಲ್ಲಿ ಅಪಾರ ಬೆಲೆ ತೆರಬೇಕಾಗುತ್ತದೆ. ಈ ಭಾವನೆಗಳು ಅಧಿಕವಾದರೆ ಕೀಳರಿಮೆ ಬೆಳೆಯುತ್ತದೆ. ಕಾರ್ಯದಕ್ಷತೆ, ಹಾಗೂ ವಾಸ್ತವದ ಗ್ರಹಿಕೆ ಕುಂದುತ್ತದೆ. ಅಸಹಾಯಕತೆ,ನಿರಾಶೆ, ಅಸಮರ್ಥತೆ ನಿರುಪಯುಕ್ತ ವಿಚಾರಗಳು ಮನಸ್ಸನ್ನು ತಲುಪಿ ಬಾಳನ್ನು ಗೋಳಾಗಿಸುತ್ತದೆ. ಅಜೀರ್ಣ,ಉಸಿರಾಟದ ತೊಂದರೆ ರಕ್ತದೊತ್ತಡ ನಿದ್ರಾಹೀನತೆ, ಆಯಾ, ಏಕಾಗ್ರತೆ ಕೊರತೆ, ಅಸಹನೆ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ. ಈ ನಕಾರಾತ್ಮಕ ಭಾವನೆಗಳು ತೀವ್ರಗೊಂಡರೆ ಆಕ್ರೋಶ, ಹಿಂಸೆ ಕ್ರೌರ್ಯ ಸಮಾಜ ವಿದ್ರೋಹಿ ಚಟುವಟಿಕೆಗಳು, ಆಸ್ತಿ-ಪಾಸ್ತಿ ನಾಶಗೊಳಿಸುವುದು, ಆತ್ಮಹತ್ಯೆ ಇತ್ಯಾದಿ ಸಂಭವಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರು ಸಾಧ್ಯವಾದಷ್ಟು ಸಕಾರಾತ್ಮಕ ಭಾವನೆಗಳನ್ನು ಹೆಚ್ಚು ಹೆಚ್ಚು ಬೆಳೆಸಿಕೊಳ್ಳಲು ಯತ್ನಿಸಬೇಕು.

ಈಗ ತಾನೇ ಹುಟ್ಟಿದ ಮಗು ಭಾವಾತೀತ. ಆದರೆ ಕ್ರಮೇಣ ಹಸಿವಾದಾಗ ಕಿರುಚುತ್ತದೆ. ನೋವಾದಾಗ ಅಳುತ್ತದೆ. ಸಮಯ ಕಳೆದಂತೆ ಪರಿಚಿತರನ್ನು ಕಂಡು ಮುಗುಳ್ನಗುತ್ತದೆ. ಕ್ರಮೇಣ ಎಲ್ಲ ಬಗೆಯ ಭಾವನೆಗಳನ್ನು ಕಲಿತು ಪ್ರಕಟಿಸುತ್ತದೆ. ಭಾವಾಭಿವ್ಯಕ್ತಿಗೆ ತಂದೆ-ತಾಯಿ ಹಾಗೂ ಗುರು-ಹಿರಿಯರನ್ನು ಅನುಸರಿಸುತ್ತದೆ. ಸಂಸ್ಕಾರ ಗುಣಮಟ್ಟದ ಶಿಕ್ಷಣ , ಸಾಹಿತ್ಯ, ಸಂಗೀತ ಹಾಗೂ ಲಲಿತಕಲೆಗಳ ಸಂಪರ್ಕ ಇತ್ಯಾದಿಗಳ ಮೂಲಕ ಭಾವಾಭಿವ್ಯಕ್ತಿಯ ವಿಧಾನವನ್ನು ವ್ಯಕ್ತಿಗಳು ರೂಢಿಸಿಕೊಳ್ಳಬಹುದಾದರೂ ಮೂಲ ಮನೋವೃತ್ತಿಯಲ್ಲಿ ಹೆಚ್ಚಿನ ಬದಲಾವಣೆಯಾಗದು.

ಆನೆಗೆ ಅಂಕುಶ ಹಾಕುವಂತೆ , ಕುದುರೆಯ ಲಗಾಮು ಹಿಡಿದೆಳೆಯುಂತೆ , ಭಾವಾಭಿವ್ಯಕ್ತಿಯನ್ನು ನಿಗ್ರಹಿಸಬೇಕು ಇಲ್ಲವಾದರೆ ವಿನಾಶ ತಪ್ಪಿದ್ದಲ್ಲ. ಆದುದರಿಂದ ನಮ್ಮ ಹಿರಿಯರು ಇಂದ್ರೀಯ ನಿಗ್ರಹಕ್ಕೆ ಮತ್ತು ಅರಿಷಡ್ವರ್ಗಗಳ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಆಧುನಿಕ ಮನೋವಿಜ್ಞಾನಿಗಳು ಕೂಡ ಬುದ್ದಿ ಸೂಚ್ಯಂಕಕ್ಕೆ ಕೊಟ್ಟಷ್ಟೇ ಮಹತ್ವವನ್ನು ಈಗ ಭಾವ ಸೂಚ್ಯಂಕಕ್ಕು ನೀಡುತ್ತಿದ್ದಾರೆ.

ಇಂದಿನ ಆಧುನಿಕ ಯುಗದಲ್ಲಿ ಇಂಟರ್ ನೆಟ್, ಮೋಬೈಲ್ ಇತ್ಯಾದಿ ತಂತ್ರಜ್ಞಾನಗಳು ಭಾವನೆಗಳ ಸೇತುವೆಯಾದ ಮೇಲೆ ನಮ್ಮ ಜವಾಬ್ದಾರಿ ಹೆಚ್ಚಿದೆ. ಕ್ಷಣಿಕ ಭಾವನೆಗಳೊಂದಿಗೆ ರಾಜಿಯಾಗದೆ, ಬಾಂಧವ್ಯಕ್ಕೆ ಹೆಚ್ಚಿನ ಮನ್ನಣೆ ಕೊಡಬೇಕು. ವಾಸ್ತವದ ನೆಲೆಗಟ್ಟಿನಲ್ಲಿ, ತರ್ಕದ ಚೌಕಟ್ಟಿನಲ್ಲಿ ಭಾವನೆಗಳು ವ್ಯಕ್ತಗೊಂಡಾಗ ಬದುಕು ಸುಂದರ ಹಾಗೂ ಅರ್ಥಪೂರ್ಣ ಎನಿಸಿಕೊಳ್ಳುತ್ತದೆ. ಭಾವನೆ ಹಾಗೂ ಜಾಣತನ ಹಾಲು- ಜೇನಿನಂತೆ ಬೆರೆತಾಗ ಸುಖ ಜೀವನ ನಮ್ಮದಾಗುತ್ತದೆ. ಅಲ್ಲವೇ?

ಶ್ರೀಮತಿ. ಸುನಂದಾ ಸಿ  ಭರಮನಾಯ್ಕರ (ಡಿ.ಇ.ಒ)  ರಾಮದುರ್ಗ, ಜಿಲ್ಲೆ: ಬೆಳಗಾವಿ,
ಶ್ರೀಮತಿ. ಸುನಂದಾ ಸಿ ಭರಮನಾಯ್ಕರ (ಡಿ.ಇ.ಒ)
ರಾಮದುರ್ಗ, ಜಿಲ್ಲೆ: ಬೆಳಗಾವಿ,

Columns ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...