Oyorooms IN

Thursday, 17th August, 2017 5:03 PM

BREAKING NEWS

Columns

ಬದುಕಲ್ಲಿ ಇರಲಿ ಸ್ನೇಹಿತರೋರ್ವರು

16

ಮಾನವ ಸ್ನೇಹ ಜೀವಿ. ಸಮಾಜ ಜೀವಿ. ಅಷ್ಟೇ ಅಲ್ಲ ಸಮೂಹ ಜೀವಿ ಕೂಡ. ಯಾವ ಕಾರಣಕ್ಕೂ ಮನುಷ್ಯ ಒಂಟಿಯಾಗಿ ಬದುಕು ಸವೆಸಲು ಇಚ್ಚಿಸಲಾರ. ಏಕಾಂಗಿ ಬದುಕು ವ್ಯಕ್ತಿಯ ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಯಾರ ಗೆಳೆತನವೂ ಇಲ್ಲದೇ ಬದುಕುವುದು ಕೆಲವೊಂದು ಸಲ ಮನುಷ್ಯ ತನ್ನ ಮೇಲೆ ತಾನೇ ಜಿಗುಪ್ಸೆ ಹೊಂದುವಂತೆ ಮಾಡಿಬಿಡುತ್ತದೆ. ಯಾಕಪ್ಪ ಬೇಕು ಈ ಒಂಟಿ ಬದುಕು ಅನ್ನಿಸಿ ಬಿಡುತ್ತದೆ.ಇಂತಹ ಒಂಟಿ ಬದುಕಿಗೆ ಯಾರಾದರೂ ಒಬ್ಬರು ಒಳ್ಳೆಯ ಸ್ನೇಹಿತರು ಬೇಕೆ ಬೇಕು. ಮನಸಿನ ಅಂತರಾಳದಲ್ಲಿ ಹುದುಗಿ ಹೋದ , ಕಾಲನ ಕಾಲಡಿ ಸಿಲುಕಿ ಮನಸನ್ನು ನೋಯಿಸುವ, ತಂದೆ-ತಾಯಿ, ಮಡದಿ-ಮಕ್ಕಳು, ಗಂಡ-ಹೆಂಡತಿ, ಮನೆಯವರು, ಸಂಬಂಧಿಗಳು, ಅಕ್ಕ-ಪಕ್ಕದವರು ಇಂತಹವರ ಮುಂದೆ ಹೇಳಿಕೊಳ್ಳಲಾಗದೇ ಇರುವ ಎಷ್ಟೋ ವಿಷಯಗಳನ್ನು ಹಂಚಿಕೊಳ್ಳಲಿಕ್ಕಾದರೂ ಸ್ನೇಹಿತರು ಇರಬೇಕು.
ಎಷ್ಟೋ ಸಲ ಬದುಕೆ ಬೇಡವೆನಿಸಿದಾಗ ಗೆಳತಿ ಅಥವಾ ಗೆಳೆಯನ ಸ್ನೇಹ ನೀರಸವಾದ ಬದುಕನ್ನು ಬದಲಾಯಿಸಿ ಹೊಸ ಭರವಸೆಯನ್ನು ತುಂಬುತ್ತದೆ. ಯಾರೊಂದಿಗೂ ಹಂಚಿಕೊಳ್ಳಲಾಗದ ಮನದ ಮಾತನ್ನು ನಾವು ಗೆಳೆಯ/ಗೆಳತಿಯೊಂದಿಗೆ ಹಂಚಿಕೊಂಡು ಮನ ಹಗುರ ಮಾಡಿಕೊಳ್ಳಬಹುದು. ಅನೇಕ ಬಾರಿ ರಕ್ತ ಸಂಬಂಧಕ್ಕಿಂತಲೂ ಹೃದಯ ಸಂಬಂಧ ದೊಡ್ಡದು ಎಂಬ ಮಾತು ನಿಜವಾಗಿಬಿಡುತ್ತದೆ. ಹೃದಯ ಸಂಬಂಧ ಹಲವು ವೇಳೆ ವಿಶ್ವಾಸನೀಯವಾಗಿ ರಕ್ತ ಸಂಬಂಧಕ್ಕಿಂತಲೂ ಹೆಚ್ಚಾಗಿ ಗಟ್ಟಿಗೊಳ್ಳುತ್ತದೆ.

ಒಬ್ಬ ಹೆಣ್ಣಿಗೆ ಅವಳ ಮನದ ತುಮುಲವನ್ನು ಹೊರ ಹಾಕಲು ಮನದ ಖುಷಿಯಾಗಿರಲಿ, ನೋವಾಗಿರಲಿ ಅದನ್ನು ಹಂಚಿಕೊಳ್ಳಲು ಓರ್ವ ಆತ್ಮೀಯ ಗೆಳತಿ ಬೇಕು. ಆ ಗೆಳತಿ ನಮ್ಮನ್ನು ಅರಿಯುವವಳಾಗಿರಬೇಕು. ನಮ್ಮ ಭಾವನೆಗೆ ಸ್ಪಂದಿಸುವ ಗುಣದವಳಾಗಿದ್ದರೇ ಚೆನ್ನ. ಕಷ್ಟದಲ್ಲಿ ನೆರವಾಗುವಾಕೆ, ಖುಷಿಯಲ್ಲಿ ಸಂತಸ ಪಡುವಾಕೆ, ದಾರಿ ತಪ್ಪಿದರೆ ಎಚ್ಚರಿಸುವಾಕೆ, ಮೂರ್ಖತನದಿ ವರ್ತಿಸಿದಾಗ ಗದರಿಸುವಾಕೆ, ದುಃಖಿಸುವಾಗ ಸಾಂತ್ವನ ಪಡಿಸುವಾಕೆ ನಿಜವಾದ ಗೆಳತಿಯಾಗಲು ಅರ್ಹಳು. ಎಲ್ಲರೂ ಈ ಗೆಳತಿಯ ಸ್ಥಾನಕ್ಕೆ ಅರ್ಹರಲ್ಲ. ನಮ್ಮನ್ನು ಸುಮ್ಮನೆ ಹೊಗಳಿ (ಹಿಂದಿನಿಂದ ತೆಗಳಿ) ನಮ್ಮಿಂದ ಸಹಾಯ ಪಡೆದು, ನಮಗೆ ಸಂಕಷ್ಟ ಬಂದಾಗ ದೂರಕ್ಕೆ ಸರಿಯುವಾಕೆ, ನಮ್ಮ ಕಷ್ಟವನ್ನು ನೋಡಿ ಮಜಾ ಮಾಡುವಾಕೆಯನ್ನೇ ಎಂದಿಗೂ ಗೆಳತಿ ಎಂದು ಹೇಳಬಾರದು.

17

ಹಲವಾರು ದಿನಗಳ ಹಿಂದೆ ನನ್ನ ಗಮನಕ್ಕೆ ಬಂದ ಒಂದು ವಿಷಯ ನನ್ನನ್ನೆ ಬೆಚ್ಚಿ ಬೀಳುವಂತೆ ಮಾಡಿತು. ದ್ವಿತೀಯ ಪಿ.ಯು.ಸಿ ಯಲ್ಲಿ ಓದುತ್ತಿದ್ದ ನಯನಾ ಎಂಬ ಹುಡುಗಿ ತುಂಬಾ ಚೂಟಿ. ಅಷ್ಟೇ ಧೈರ್ಯವಂತೆ, ಜಾಣೆ ಕೂಡ ಆಗಿದ್ದರೂ ಸೂಕ್ಷ್ಮ ಸ್ವಭಾವದ ಹುಡುಗಿ. ಕಡು ಬಡತನದಲ್ಲಿ ಹುಟ್ಟಿ-ಬೆಳೆದರೂ ಅವಳ ಸಾಧನೆಗೇನೂ ಕೊರತೆ ಇರಲಿಲ್ಲ. ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದಲ್ಲಾಗಲೀ, ಸಾಂಸ್ಕೃತಿಕ ಚಟುವಟಿಕೆಗಳಲ್ಲಾಗಲೀ, ಸಾಮಾಜಿಕ ಕಾರ್ಯಗಳಲ್ಲಾಗಲೀ ಮುಂದಿರುತ್ತಿದ್ದ ನಯನಾ ಎಲ್ಲ ತರಗತಿಯಲ್ಲು ಫಸ್ಟ ರ್‍ಯಾಂಕ ಬರುತ್ತಿದ್ದವಳು. ದ್ವಿತೀಯ ಪಿ.ಯು.ಸಿ ಗೆ ಬಂದ ಮೇಲೆ ಯಾಕೋ ಮಂಕಾಗಿ ಬಿಟ್ಟಿದ್ದಳು. ಯಾವಾಗಲೂ ಭಯದಿಂದ ನಡುಗುತ್ತಿದ್ದಳು. ಸರಿಯಾಗಿ ಊಟ ನಿದ್ದೆ ಮಾಡದೇ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಕುಳಿತುಬಿಡುತ್ತಿದ್ದಳು. ಇದರಿಂದಾಗಿ ನಯನಾಳ ಅಪ್ಪ-ಅಮ್ಮ ತುಂಬಾ ಯೋಚನೆ ಮಾಡತೊಡಗಿದರು. ಮಗಳು ಒಮ್ಮಿಂದೊಮ್ಮಿಲೆ ಹೀಗೆಕೆ ಬದಲಾದಳು ಎಂಬುದು ಅವರ ಪಾಲಿಗೆ ಯಕ್ಷ ಪ್ರಶ್ನೆಯಾಗಿ ಕಾಡ ತೊಡಗಿತು. ಮಗಳು ಮೊದಲಿನಂತಾಗಲೀ ಎಂದು ದೇವರಿಗೆ ಹರಕೆ ಕಟ್ಟಿದರೂ, ತಮಗೆ ಗೊತ್ತಿದ್ದ ವೈದ್ಯರನ್ನೆಲ್ಲ ಭೇಟಿಯಾದರೂ ಕೂಡ ಏನು ಪ್ರಯೋಜನವಾಗಲಿಲ್ಲ. ದಿನದಿಂದ ದಿನಕ್ಕೆ ನಯನಾ ಕಾಲೇಜು ಎಂದರೆ ಭಯದಿಂದ ನಡುಗುತ್ತಾ ಕೊನೆಗೆ ಕಾಲೇಜಿಗೆ ಹೋಗುವದನ್ನೇ ನಿಲ್ಲಿಸಿದಳು. ಇದರಿಂದಾಗಿ ಮುಂದೆ ಮಗಳ ಓದು, ಜೀವನದ ಗತಿ ಹೇಗೆ ? ಎಂದು ನಯನಾಳ ತಂದೆತಾಯಿ ಚಿಂತಿಸತೊಡಗಿದರು. ಇವರ ಚಿಂತೆಯನ್ನು ಕಂಡ ಎದುರು ಮನೆ ಮಾಸ್ತರರೊಬ್ಬರು ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗುವಂತೆ ಸೂಚಿಸಿದಾಗ, ಸ್ವಲ್ಪವೂ ತಡಮಾಡದೇ ನಯನಾಳ ತಂದೆ ಅವಳನ್ನು ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋದರು. ಅಲ್ಲಿ ನಯನಾಳನ್ನು ಪರೀಕ್ಷಿಸಿದ ವೈದ್ಯರು ಅವಳಿಗೆ ಯಾವುದೇ ರೀತಿಯ ತೊಂದರೆಯಿಲ್ಲ, ಆದರೆ ಅವಳು ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾಳೆ, ಅವಳಿಗೆ ಏನಾದರೂ ತೊಂದರೆ ಇದೆಯಾ? ಯಾರಾದರೂ ಅವಳನ್ನು ಹೆದರಿಸಿದಾರಾ? ಏನನ್ನಾದರೂ ನೋಡಿ ಹೆದರಿದಾಳಾ? ಯಾವುದೋ ವಿಷಯವನ್ನು ಮನಸಲ್ಲೇ ಇಟ್ಟುಕೊಂಡು ಕೊರಗುತ್ತಿದ್ದಾಳೆ. ಅದು ಏನು ಅಂತಾ ನನಗೆ ತಿಳಿದರೆ,ನಾನು ಅವಳಿಗೆ ಚಿಕಿತ್ಸೆ ಕೊಡುತ್ತೇನೆ ಎಂದು ಹೇಳುತ್ತಾರೆ. ಆದರೆ ನಯನಾಳ ತಂದೆ-ತಾಯಿಯಿಂದ ಬಂದದ್ದು ಒಂದೇ ಉತ್ತರ, ಅವಳಿಗೆ ಏನು ತೊಂದರೆ ಇಲ್ಲ, ಯಾರೂ ಹೆದರಿಸಿಲ್ಲ, ಅಂತಾ. ಆಗ ಮಾನಸಿಕ ತಜ್ಞರು ಸ್ವಲ್ಪ ದಿನಗಳ ಮಟ್ಟಿಗೆ ಮಾತ್ರೆ ಕೊಟ್ಟು.ಅದು ಮುಗಿದ ತಕ್ಷಣ ಬರಲು ತಿಳಿಸುತ್ತಾರೆ.

18
ಹೀಗೆ ನಯನಾ ಮಾನಸಿಕವಾಗಿ ಬಳಲಿ ಮತಿಹೀನಳಂತೆ ವರ್ತಿಸುತ್ತಿರುವ ಸುದ್ದಿ ತಿಳಿದ, ಹೈಸ್ಕೂಲದಿಂದ ಪಿ.ಯು.ಸಿ ಪ್ರಥಮ ವರ್ಷದವರೆಗೂ ಅವಳೊಟ್ಟಿಗೆ ಓದಿದ ರೇಶ್ಮಾ ಅವಳನ್ನು ನೋಡಲು ಬರುತ್ತಾಳೆ. ನಯನಾಳನ್ನು ಕಂಡು ಕಣ್ಣು ತುಂಬಿ ಬಂದು ಅಳತೊಡಗುತ್ತಾಳೆ. ರೇಶ್ಮಾಳ ವರ್ತನೆ ಕಂಡು ನಯನಾಳಿಗಾಗಿ ಅವಳು ಪಡುತ್ತಿರುವ ದುಃಖವನ್ನು ಕಂಡು ನಯನಾಳ ತಂದೆ ವಿಚಾರಿಸುತ್ತಾರೆ.ಏನಮ್ಮಾ ರೇಶ್ಮಾ ನೀನಾದರೂ ಹೇಳು? ಅವಳಿಗೆ ಏನಾಯ್ತು ಅಂತಾ, ಇಬ್ಬರೂ ನಾಲ್ಕೈದು ವರ್ಷದಿಂದ ಕೂಡಿಯೇ ಕಲಿತಿದಿದ್ದೀರಾ, ನಯನಾಳ ಆತ್ಮೀಯ ಗೆಳತಿ ನೀನು, ನಮ್ಮೊಂದಿಗೆ ಹೇಳಿಕೊಳ್ಳಲಾರದ ವಿಷಯವೇನಾದರೂ ಇದೆಯಾ? ಅಂತಾ ಪರಿ ಪರಿಯಾಗಿ ಬೇಡಿಕೊಂಡಾಗ ,ರೇಶ್ಮಾ ಭಯ ಪಡುತ್ತಾ,ಅಳುತ್ತಾ, ಹೌದು ಅಂಕಲ್ ನಿಮ್ಮ ಹತ್ತಿರ ಒಂದು ವಿಚಾರ ಹೇಳಬೇಕು, ನಾವು10 ನೇ ತರಗತಿಯಲ್ಲಿ ಓದುತ್ತಿರುವಾಗ ನಾವು ಶಾಲೆಯಲ್ಲಿ ಸ್ಪೋರ್ಟ್ಸ ಗಾಗಿ ಪಕ್ಕದ ಹಳ್ಳಿಗೆ ಹೋದಾಗ ಅಲ್ಲಿ 2 ಜನ ಗಂಡು ಹುಡುಗರು ನಯನಾಳನ್ನು ತುಂಬಾ ರೇಗಿಸಿದರು .ಅವಳ ಜೊತೆ ಅನುಚಿತವಾಗಿ ವರ್ತಿಸಿದ್ದರಿಂದ ಅವಳು ಅವರನ್ನು ತರಾಟೆಗೆ ತೆಗೆದುಕೊಂಡು ತುಂಬಾ ಬೈಯದು ಬಂದಿದ್ದಳು. ಅದಾದ ಸ್ವಲ್ಪ ದಿನಗಳ ಮೇಲೆ ಆ ಹುಡುಗರು ಆಗಾಗ ಸ್ಕೂಲ ಹತ್ತಿರ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಅಲ್ಲದೇ ನಯನಾ ಒಬ್ಬಳೇ ಸಿಕ್ಕರೆ ಬೆದರಿಕೆ ಹಾಕತಿದ್ರು. ನಿನ್ನ ನೋಡ್ಕೋತಿವಿ ಅಂತಾ. ಮೊದ ಮೊದಲು ನಯನಾ ಸುಮ್ನೆ ಹೆದರಸ್ತಾರೆ ಅಂತಾ . ಕೇರ್ ಮಾಡಿರಲಿಲ್ಲ. ಆದರೆ ಅವರ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಯ್ತು .ಹೀಗಾಗಿ ನಯನಾ ಒಬ್ಬಳೆ ಎಲ್ಲೂ ಓಡಾಡೋಕೆ ಹೋಗಲಿಲ್ಲ. ನಾನು ಯಾವಾಗ್ಲೂ ಅವಳ ಜೊತೆಗೆ ಇರ್‍ತಿದ್ದೆ. ಈ ವಿಷಯವನ್ನು ತಮ್ಮ ಗಮನಕ್ಕೆ ತರಬೇಕೆಂದು ಸಾಕಷ್ಟು ಸಲ ಪ್ರಯತ್ನಿಸಿದೇವು. ಆದರೆ ತಾವು ಸಂಪ್ರದಾಯಸ್ಥರು. ಇಂತ ವಿಷಯ ಕೇಳಿ ನಮ್ಮ ಮನೇಲಿ ನನ್ನ ಶಾಲೆ ಬಿಡಿಸಿ ಮದುವೆ ಮಾಡಿಬಿಡ್ತಾರೆ ಕನೇ.ಅದಕ್ಕೆ ನಾ ಹೇಳಲ್ಲ ಮನೆಯಲ್ಲಿ ಅಂತ ಅಳತಿದ್ಲು. ಹೀಗೆ ಒಂದುವರೆ ವರ್ಷ ಕಳೀತು ಅಂಕಲ್. ಏನಾದರಾಗಲೀ ದಿನ ಹೆದರಿ ಹೆದರಿ ಸಾಯೋದಕ್ಕಿಂತ ಈ ವಿಷಯವನ್ನು ತಮಗೆ ತಿಳಿಸಲೇ ಬೇಕು ಅಂತಾ ವಿಚಾರ ಮಾಡಿದಾಗಲೇ ನಮ್ಮ ತಂದೆಗೆ ಟ್ರಾನ್ಸಫರ್ ಆಯ್ತು ಅಂಕಲ್. ನಾವು ಮನೆ ಶಿಫ್ಟ ಮಾಡೋಕು ಮುಂಚೆ ತಮಗೆ ಈ ವಿಚಾರ ತಿಳಿಸಲು ಬಂದಾಗ ತಾವು ೪ ದಿನಗಳ ಮಟ್ಟಿಗೆ ಬೇರೆ ಊರಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿರುವ ವಿಷಯ ತಿಳಿತು . ನಾನು ಹಾಗೇ ಹೋಗಿ ಬಿಟ್ಟೆ. ಅಂಕಲ್. ನಾನು ಇಲ್ಲಿಂದ ಹೋದ ಮೇಲೆ ನಯನಾ ಒಬ್ಬಳೆ ಆಗಿಬಿಟ್ಟಿದ್ದಾಳೆ, ಆಗ ಅವರಿಂದ ಏನಾದರೂ ತೊಂದರೆ ಆಗಿರಬಹುದು ಅಂಕಲ್, ಅಂತಾ ರೇಶ್ಮಾ ಮತ್ತೇ ಅಳೊದಕ್ಕೆ ಶುರು ಮಾಡಿದಾಗ .ಇದನ್ನೆಲ್ಲ ಕೇಳಿದ ನಯನಾಳ ತಂದೆ ತಾಯಿ ಅಘಾತವಾಗಿ ಸುಮ್ಮನೆ ಕುಳಿತಿದ್ದರು. ನಂತರ ಎಲ್ಲ ವಿಷಯವನ್ನು ಮಾನಸಿಕ ತಜ್ಞರಿಗೆ ಹೇಳಿ ಅವರಿಂದ ಸಲಹೆ ಪಡೆದ ಮೇಲೆ ನಯನಾ ಸುಮಾರು ದಿನಗಳ ಚಿಕಿತ್ಸೆಯಿಂದ ಮತ್ತೇ ಚೇತರಿಸಿಕೊಂಡು ಮೊದಲಿನಂತಾದಳು.

ಸುಶೀಲಾ ಒಬ್ಬ ಒಳ್ಳೆಯ ಗೃಹಿಣಿ,ಅವಳ ಗಂಡ ಬ್ಯಾಂಕನಲ್ಲಿ ಕ್ಲರ್ಕ. ಇವರ ಸಂಸಾರ ಚೆನ್ನಾಗಿತ್ತು. ಇಬ್ಬರು ಅನ್ಯೋನ್ಯವಾಗಿ ಇದ್ದರು. ಹೊರಗಿನವರು ಇದ್ದರೆ ಇವರ ತರಹ ಗಂಡ-ಹೆಂಡತಿ ಇರಬೇಕಪ್ಪ ಅನ್ನುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಸುಶೀಲಾ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಇವಳ ಆತ್ಮಹತ್ಯೆಯ ವಿಷಯ ನಿಗೂಢವಾಯಿತು. ಪೋಲಿಸರಿಗೆ ಈ ಆತ್ಮಹತ್ಯೆಯ ಹಿಂದಿನ ವಿಷಯವನ್ನು ಭೇಧಿಸುವದು ತುಂಬಾ ಕಷ್ಟವಾಯಿತು. ಹೇಗಾದರೂ ಮಾಡಿ ಈ ಪ್ರಕರಣವನ್ನು ಭೇದಿಸಲೇ ಬೇಕು ಎಂದು ಹಠ ತೊಟ್ಟ ಪೋಲಿಸರಿಗೆ ಕತ್ತಲೆಯಲ್ಲಿ ಬೆಳಕಿನ ಕಿರಣದಂತೆ ಗೋಚರಿಸಿದ್ದು, ಸುಶೀಲಾಳ ಗೆಳತಿ ಸಾವಿತ್ರಿ.

ಅವಳನ್ನು ವಿಚಾರಿಸಿದಾಗ ಇರುವ ಸತ್ಯವೆಲ್ಲ ಹೊರಗೆ ಬಂತು , ಅದೇ ಸುಶೀಲಾಳ ಸಂಸಾರದ ಗುಟ್ಟು. ಮದುವೆಯಾದ ಮೊದಮೊದಲು ಚೆನ್ನಾಗಿಯೆ ಇದ್ದ ಸುಶೀಲಾ ಸಂಸಾರ. ಸ್ವಲ್ಪ ದಿನಗಳ ನಂತರ ಇಬ್ಬರಲ್ಲು ಜಗಳ, ಸುಶೀಲಾಳ ಗಂಡ ಏನಾದರೂ ಒಂದು ನೆಪ ಮಾಡಿ ಅವಳೊಂದಿಗೆ ಜಗಳಾಡುವದು. ಮನೆ ಬಿಟ್ಟು ಹೋಗುವದು ಮಾಡುತ್ತಿದ್ದ. ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಒಂದೊಂದು ಸಲ ನಾಲ್ಕೈದು ದಿನಗಳವರೆಗೂ ಮನೆ ಕಡೆ ತಲೆ ಸಹ ಹಾಕ್ತಿರಲಿಲ್ಲ. ಇದರಿಂದ ಬೇಸತ್ತ ಸುಶೀಲಾ ಗಂಡ ನಾಲ್ಕೈದು ದಿನಗಳವರೆಗೆ ಮನೆಯಿಂದ ದೂರವಿರುವದು ಸರಿ ಅಲ್ಲ ಅಂತಾ, ಒಂದಿನ ಬ್ಯಾಂಕ ಮುಗಿಯುವ ಸಮಯಕ್ಕೆ ಅವನ ಮನವೊಲಿಸಿ ಮನೆಗೆ ಕರೆದುಕೊಂಡು ಬರಲು, ಬ್ಯಾಂಕ ಹತ್ರ ಮುಂದಿನ ಗೇಟಿನಲ್ಲಿ ದಾರಿ ಕಾಯುತ್ತಿರಬೇಕಾದರೆ. ಅವಳ ಗಂಡ ಅದೇ ಬ್ಯಾಂಕನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳನ್ನು ಬೈಕನಲ್ಲಿ ಕೂಡಿಸಿಕೊಂಡು ನೇರ ಅವಳ ಮನೆಗೆ ಹೋಗಿದ್ದನ್ನು ಕಂಡು ಗೋಳಾಡುತ್ತಾಳೆ. ಆವಾಗ ಅಲ್ಲೇ ಇದ್ದ ಸೆಕ್ಯೂರಿಟಿ ಹತ್ತಿರ ಅಪರಿಚಿತರಂತೆ ತನ್ನ ಗಂಡನ ಬಗ್ಗೆ ವಿಚಾರಿಸಿದಾಗ, ಅವರಿಬ್ಬರೂ ಪ್ರೀತಿಸುತ್ತಿದ್ದು, ಮದುವೆ ಸಹ ಆಗುವ ವಿಚಾರ ತಿಳಿಯುತ್ತೆ.ಇದರಿಂದ ಮತ್ತಷ್ಟು ಕುಗ್ಗಿದ ಸುಶೀಲಾ ನೇರ ಮನೆಗೆ ಬಂದು ಅನ್ಯಮನಸ್ಕಳಾಗಿ ಅಳುತ್ತಾ, ಕೂತಾಗ ಅವಳ ಗಂಡ ಬರ್‍ತಾನೆ. ಆಗ ಸುಶೀಲಾ ತಾನು ಬ್ಯಾಂಕ ಹತ್ತಿರ ನಡೆದ ವಿಚಾರ ಹೇಳಿ ಅವನೊಂದಿಗೆ ಜಗಳವಾಡುತ್ತಾಳೆ.

ಹೀಗೆ ಮುಂದುವರೆದರೆ ತಾನು ತನ್ನ ತವರಿಗೆ ಈ ವಿಚಾರವನ್ನು ತಿಳಿಸುವದಾಗಿ ಹೆದರಿಸುತ್ತಾಳೆ. ಅವಳ ಮಾತಿನಿಂದ ಬೆಚ್ಚಿದ ಅವಳ ಗಂಡ ಪ್ರತಿದಿನ ನೇರವಾಗಿ ಮನೆಗೆ ಬರುತ್ತಿದ್ದ, ಆದರೆ ಸರಿಯಾಗಿ ಮಾತು ಕತೆ ಇರಲಿಲ್ಲ. ಇಂತಹ ಸಮಯದಲ್ಲಿ ಸುಶೀಲಾ ಬಾಲ್ಯ ಸ್ನೇಹಿತ ಹಾಗೂ ಅವಳ ರಕ್ತ ಸಂಬಂಧಿಯಾದ ಸುರೇಶ ಅವರ ಮನೆಗೆ ಬರುತ್ತಾನೆ. ಮೊದಲಿನಿಂದಲೂ ಸುರೇಶ ಕುಟುಂಬಕ್ಕೂ, ಸುಶೀಲಾ ಕುಟುಂಬಕ್ಕೂ ಅಷ್ಟಕ್ಕಷ್ಟೇ, ಇದ್ದುದ್ದನ್ನು ಗಮನಿಸಿದ್ದ ಸುಶೀಲಾಳ ಗಂಡ ಇದನ್ನೇ ಪ್ಲಸ್ ಪಾಯಿಂಟ ಆಗಿ ಪರಿಗಣಿಸಿ ಸುಶೀಲಾಳ ಗಂಡ ಅವಳ ಮೇಲೆ ಇಲ್ಲ-ಸಲ್ಲದ ಆಪಾದನೆ ಮಾಡುತ್ತಾನೆ. ಇದೇ ವಿಷಯಕ್ಕಾಗಿ ದೊಡ್ಡ ರಂಪಾಟ ಮಾಡಿ ಅವಳನ್ನು ಹೊಡೆದು ಬಡಿದು ಮಾಡಿರುತ್ತಾನೆ. ಆದರೆ ಸುಶೀಲಾ ಈ ವಿಷಯ ತನ್ನ ತವರಿನವರಿಗೆ ತಿಳಿದರೆ ಇನ್ನೂ ತೊಂದರೆಯಾಗುತ್ತೇಂತ ತಿಳಿದು ಯಾರಿಗೂ ತಿಳಿಯದ ಹಾಗೇ ಗುಟ್ಟು ಮಾಡಿರುತ್ತಾಳೆ. ಆದರೆ ಮನೆಯಲ್ಲಿ ಗಂಡ ಮೇಲಿಂದ ಮೇಲೆ ಕೊಡುತ್ತಿದ್ದ ಚಿತ್ರಹಿಂಸೆಯನ್ನು ಸಹಿಸಿ ಸಹಿಸಿ ಸಾಕಾಗಿ ಹೋಗಿದ್ದ ಸುಶೀಲಾ ಆತ್ಮಹತ್ಯೆಮಾಡಿಕೊಳ್ಳುವ ಮುಂಚೆ ದಿನ ರಾತ್ರಿ ಸಾವಿತ್ರಿಗೆ ಪೋನ ಮಾಡಿ ತನ್ನೆಲ್ಲ ದುಃಖವನ್ನು ಹೇಳಿಕೊಂಡು ಅತ್ತಿದ್ದಳು. ಜೀವನವೇ ಬೇಸರವಾಗಿದೆ ಕನೇ ಎನ್ನುತ್ತಿದ್ದಳು ,ಆದರೆ ಎಂದೂ ಸಾಯುವಷ್ಟು ಹೇಡಿಯಾಗಿರಲಿಲ್ಲ ಸುಶೀಲಾ .ನಾನು ಸತ್ತರೆ ನನ್ನ ಗಂಡನಿಗೆ ಅನೂಕೂಲ ಆಗತ್ತೆ ಕನೇ ಅವಳ್ಯಾವಳೋ ಇದಾಳಲ್ಲ ಅವಳನ್ನು ತಂದಿಟ್ಕೋತಾರೆ. ಅದನ್ನ ತಪ್ಪಿಸೋಕ್ಕಾದರೂ ನಾ ಬದಕ್ತೀನಿ ಅಂತಿದ್ಲು ಸರ್.ಆದರೆ ಯಾಕೆ ಈ ರೀತಿ ಮಾಡಿಕೊಂಡ್ಲೋ ನಾ ಕಾಣೆ ಅಂತಾ ಹೇಳಿದ್ದನ್ನು ಕೇಳಿದ ಪೋಲಿಸರು ಅವಳ ಗಂಡನೇ ಈ ಕೊಲೆ ಮಾಡಿದ್ದೆಂದು ಗುರುತಿಸಿ ಅವನಿಗೆ ಶಿಕ್ಷೆ ಕೊಡಿಸುತ್ತಾರೆ.

19
ಇದನ್ನೆಲ್ಲ ಗಮನಸಿದಾಗ ನನಗನಿಸಿದ್ದು ಜೀವನದಲ್ಲಿ ಸ್ನೇಹಿತರೋರ್ವರು ಇರಲೇಬೇಕು ಅಂತ. ಆದರೆ ನಮ್ಮ ಜೀವನದಲ್ಲಿ ಕೆಡುಕುಗಳಿಗೆ ಪ್ರಚೋದನೆ ನೀಡುವ ಸ್ನೇಹಿತರಿರುವದು ಹಲವರಿಗೆ ತಿಳಿಯುವದೇ ಇಲ್ಲ. ನಾವು ಮಾಡಿದನ್ನೆಲ್ಲ ಸರಿ ಎಂದು.ನಗುನಗುತ್ತಾ ನಮ್ಮ ತಪ್ಪುಗಳನ್ನು ಸರಿ ಎಂದು ಎತ್ತಿ ತೋರಿಸುವ ಗೆಳೆಯ/ಗೆಳತಿಯನ್ನು ನಂಬುವುದೇ ಹೆಚ್ಚು. ತಪ್ಪನ್ನು ತಪ್ಪೇನ್ನುವ, ದಿಟ್ಟತನ ತೋರುವ ಗೆಳೆಯ/ಗೆಳತಿ ನಮ್ಮ ಶತ್ರುವಾಗುವುದು ಅಧಿಕ. ಗೆಳೆಯ/ಗೆಳತಿ ನಮ್ಮ ಮನದ ಕನ್ನಡಿಯಂತಿರಬೇಕು. ನಮ್ಮೊಳಗಿನ ಒಳ್ಳೆದೂ, ಕೆಟ್ಟದ್ದು ಎಲ್ಲವನ್ನು ಪ್ರತಿಬಿಂಬಿಸುವ ದರ್ಪಣದಂತೆ ಗೆಳೆಯ/ಗೆಳತಿಯ ಮನಸ್ಸಿರಬೇಕು.
ಹಲವು ವೇಳೆ ನಾವು ವಿರುದ್ದ ಲಿಂಗದ ವ್ಯಕ್ತಿಗಳನ್ನು ಗೆಳೆಯ/ಗೆಳತಿಯರೆಂದು ಆತ್ಮೀಯರನ್ನಾಗಿಸಿಕೊಳ್ಳುತ್ತೇವೆ. ಓರ್ವ ಪುರುಷ ತನ್ನ ಆಫೀಸಿನಲ್ಲಿ ಜೊತೆಗೆ ಕೆಲಸ ಮಾಡುವ ಸ್ತ್ರೀಯೊಂದಿಗೆ, ತನ್ನ ಬದುಕಿನ ಎಲ್ಲಾ ನೋವು-ನಲಿವುಗಳನ್ನು ಹಂಚಿಕೊಳ್ಳುತ್ತಾನೆ. ಅದೇ ತೆರನಾಗಿ ಸ್ತ್ರೀ ಕೂಡಾ ಒಬ್ಬ ಆತ್ಮೀಯ ಪುರುಷನೊಂದಿಗೆ ತನ್ನೆಲ್ಲ ಭಾವನೆಗಳನ್ನು ಹಂಚಿಕೊಳ್ಳುತ್ತಾಳೆ. ಅವರಿಬ್ಬರ ಸ್ನೇಹ ಪವಿತ್ರವಾಗಿರುತ್ತದೆ. ಕೇವಲ ಗೆಳೆತನ ಮಾತ್ರ ಅದಾಗಿರುತ್ತದೆ. ನಿಜವಾಗಿಯೂ ಸ್ತ್ರೀಯ ಪಾಲಿಗೆ ಗೆಳತಿಯಷ್ಟೇ ಆತ್ಮೀಯನಾಗಿ ಗೆಳೆಯನೂ ಇರಬಲ್ಲ, ಹಾಗೇ ಪುರುಷನಿಗೆ ಗೆಳೆಯನಷ್ಟೇ ಆತ್ಮೀಯವಾಗಿ ಗೆಳೆತಿಯೂ ಇರಬಲ್ಲಳು. ಅವರ ನಡುವೆ ಕೆಟ್ಟ ವಿಚಾರಗಳಿಗೆ ಆಸ್ಪದವಿರುವದಿಲ್ಲ. ಹೆಚ್ಚಾಗಿ ಸಹೋದ್ಯೋಗಿಗಳೊಂದಿಗೆ ಗಂಡು-ಹೆಣ್ಣು ಗೆಳೆತನದಿಂದ ಇರುತ್ತಾರೆ. ಕೆಲವು ಕಾಮಾಲೆ ಕಂಗಳಿಗೆ ಈ ಗೆಳೆತನದಲ್ಲಿ ಹಳದಿ ಬಣ್ಣ ಗೋಚರಿಸಲೂಬಹುದು. ಕ್ಲಾಸ್ಮೇಟ್ಸ್ ನೆರೆಕೆರೆಯವರು, ಸಹೋದ್ಯೋಗಿಗಳ ನಡುವೆಯೂ ನಿಷ್ಕಳಂಕವಾದ ಗೆಳೆತನ ಸಾಧ್ಯವಿದೆ. ಪರಸ್ಪರ ಮನದ ಭಾರ ಹಗುರವಾಗಿಸಲು ಮಾತ್ರವಲ್ಲ, ನೆರವಿಗೆ ಮಾರ್ಗದರ್ಶನಕ್ಕೆ ಒಂಟಿತನ ಹೋಗಲಾಡಿಸಲು ಗೆಳೆಯ/ಗೆಳತಿಯ ಸಂಪರ್ಕ ಬೇಕಾಗುತ್ತದೆ. ಪತಿಯೊಡನೆ, ಪತ್ನಿಯೊಡನೆ, ಹೆತ್ತಮ್ಮ, ಅಪ್ಪರೊಡನೆ ಹೇಳಿಕೊಳ್ಳಲಾಗದ ಅದೆಷ್ಟೋ ವೈಯಕ್ತಿಕ ವಿಷಯಗಳನ್ನು ನಾವು ಗೆಳತಿ/ಗೆಳೆಯನೊಡನೆ ಹೇಳುತ್ತೇವೆ. ಮಾನಸಿಕ ಹೊರೆ ಇದರಿಂದ ಕಡಿಮೆಯಾಗುತ್ತದೆ. ವಿಚಾರ ವಿನಿಮಯ ಮಾಡಿಕೊಳ್ಳುವದರಿಂದ ತಪ್ಪು ಸರಿ ಅಂಶ ಗೊತ್ತಾಗುತ್ತದೆ. ಗೆಳೆತನವೇ ಇಲ್ಲದೆ ಕೆಲವರು ಒಂಟಿಯಾಗಿಯೇ ಬದುಕಬಹುದು, ಆದರೆ ಮಾನಸಿಕ ಒತ್ತಡ ಅಂತಹವರಲ್ಲಿ ಅಧಿಕವಾಗಿರುತ್ತದೆ.
ಗೆಳೆಯನಾಗಲೀ,ಗೆಳತಿಯಾಗಲೀ ತನ್ನಲ್ಲಿ ವಿಶ್ವಾಸವಿರಿಸಿ ಹೇಳಿದ ರಹಸ್ಯ ಮಾತನ್ನು ಎಂದಿಗೂ ಬಹಿರಂಗ ಮಾಡಬಾರದು. ಕೋಪ ಬಂದಾಗ ಗೆಳೆಯ/ಗೆಳತಿಯು ಹೇಳಿದ ಅತೀ ರಹಸ್ಯವೆನಿಸಿದ ಗುಟ್ಟನ್ನು ರಟ್ಟು ಮಾಡುವ ಗುಣ ತುಂಬಾ ಕೆಟ್ಟದ್ದು.

ಗೆಳೆತನದ ಹೆಸರಿನಲ್ಲಿ ಎಲ್ಲರನ್ನೂ ನಂಬಬೇಡಿ ಜೋಕೆ … . . . .ಎಲ್ಲರೊಡನೆ ಮನದ ಮಾತು ಬಹಿರಂಗಪಡಿಸಲು ಹೋಗದಿರಿ. ಎಷ್ಟೋ ಸಲ ನಮ್ಮೊಂದಿಗೆ ಸ್ನೇಹದ ನಾಟಕವಾಡಿ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿಗಳ ಬಗ್ಗೆ ಸೂಕ್ಷ್ಮ ಗಮನವಿರಲಿ. ವಿಶ್ವಾಸಕ್ಕೆ ಇನ್ನೊಂದು ಹೆಸರೆ ಸ್ನೇಹ/ಗೆಳೆತನ. ತ್ಯಾಗ ಮತ್ತು ಸ್ಪೂರ್ತಿ ನೀಡುವವರೆ ನಿಜವಾದ ಗೆಳೆಯ/ಗೆಳತಿ. ಅತ್ಯುತ್ತಮ ಗೆಳೆಯ/ಗೆಳತಿ ಬದುಕಿನಲ್ಲಿ ನಮ್ಮ ಜೊತೆಗಿರುವುದೇ ದೊಡ್ಡ ಅದೃಷ್ಟವಾಗಿರುತ್ತದೆ.

ಶ್ರೀಮತಿ. ಸುನಂದಾ ಸಿ  ಭರಮನಾಯ್ಕರ (ಡಿ.ಇ.ಒ)  ರಾಮದುರ್ಗ, ಜಿಲ್ಲೆ: ಬೆಳಗಾವಿ,
ಶ್ರೀಮತಿ. ಸುನಂದಾ ಸಿ ಭರಮನಾಯ್ಕರ (ಡಿ.ಇ.ಒ)
ರಾಮದುರ್ಗ, ಜಿಲ್ಲೆ: ಬೆಳಗಾವಿ,

Columns ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...