Oyorooms IN

Sunday, 20th August, 2017 10:53 PM

BREAKING NEWS

Columns

ಮಾತು-ಮುತ್ತು


ಸಾಮಾನ್ಯವಾಗಿ ಮಾತು ಬೆಳ್ಳಿ, ಮೌನ ಬಂಗಾರ ಎಂದು ಹೇಳುವುದುಂಟು. ಅಂದರೆ ಮೌನವೇ ಶ್ರೇಷ್ಠ, ಮೌನದೊಂದಿಗೆ ಹೋಲಿಸಿದಾಗ ಮಾತು ಕನಿಷ್ಟ ಎಂಬುದು ಸಾಮಾನ್ಯ ತಿಳುವಳಿಕೆ. ಮನಸ್ಸಿನ ಆಲೋಚನೆಗಳು ಶಬ್ದ ತರಂಗಗಳಾಗಿ ರೂಪುಗೊಂಡು ಎಲ್ಲರಿಗೂ ಕೇಳುವಂತೆ ಪ್ರಕಟಗೊಳ್ಳುವ ಬಾಹ್ಯ ಅಭಿವ್ಯಕ್ತಿಯೇ ಮಾತು. ಮೌನ ಧರಿಸಿದಾಗ ಮಾತು ನಿಲ್ಲಬಹುದೇ ಹೊರತು , ಮನದ ಆಲೋಚನೆಗಳು ನಿಲ್ಲುವುದಿಲ್ಲ. ಮನಸ್ಸು ಹರಿಯುವ ನದಿಯ ನೀರಿದ್ದಂತೆ ಹರಿವ ನದಿಯು ನೀರನ್ನು ಹಾಗೆಯೇ ಹರಿಯಲು ಬಿಟ್ಟರೆ ಪೋಲಾಗುತ್ತವೆ. ಒಂದೆಡೆ ಜಲಾಶಯದಲ್ಲಿ ಸಂಗ್ರಹಿಸಿ ಕಾಲುವೆಯ ಮೂಲಕ ಹೊಲ ಗದ್ದೆಗಳಿಗೆ ಹರಿಸಿದರೆ ಬೆಳೆ ನಳನಳಿಸುತ್ತದೆ. ಮೌನಾವಸ್ಥೆಯಲ್ಲಿರುವ ಮನಸ್ಸು ಹಿಡಿದಿಟ್ಟ ಜಲಾಶಯದ ನೀರಿನಂತೆ ಏಕಾಗ್ರತೆಯನ್ನು ಸಾಧಿಸಿದ ಮನಸ್ಸಿನಲ್ಲಿ ಅದ್ಭುತ ಶಕ್ತಿ ಅಡಗಿರುತ್ತದೆ. ಬರೀ ಮಾತನಾಡದಂತೆ ಮೌನ ಧರಿಸುವುದೂ ಉಪಯುಕ್ತವಲ್ಲ.
ಮೌನವಾಗಿದ್ದ ಮಾತ್ರಕ್ಕೆ ಮನಸ್ಸು ಸುಮ್ಮನಿರುತ್ತದೆ ಎಂದಲ್ಲ. ಆಲೋಚನೆಗಳು ಇಳಿಜಾರಿನಲ್ಲಿ ಹರಿಯುವ ನದಿಯ ನೀರಿದ್ದಂತೆ. ಅವು ಹರಿಯುತ್ತಲೇ ಇರುತ್ತವೆ. ಮನೋವ್ಯಾಪಾರ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹರಿದಾಡುವ ಮನವ ಮಚ್ಚೇಲಿ ಹೊಡೆದು ನಿಲಿಸು ಮನುಜ ಎಂದು ಶಿಶುನಾಳ ಶರೀಫರು ಹೇಳುತ್ತಾರೆ. ಆದರೆ ಅದು ಅಷ್ಟು ಸುಲಭದ ಮಾತಲ್ಲ ಕೊಳದ ನೀರಿನಲ್ಲಿ ಮೌನವಾಗಿ ನಿಂತ ಬಕಪಕ್ಷಿಯದು ಧ್ಯಾನವಲ್ಲ. ತನ್ನ ಆಹಾರವಾದ ಮೀನನ್ನು ಹಿಡಿಯಲು ಅದು ಹಾಕುವ ಹೊಂಚಷ್ಟೇ. ಧ್ಯಾನಗೈಯುವ ನೆಪದಲ್ಲಿ ಯಾವ ಹೆಣ್ಣನ್ನು ನೆನೆವೆ? ಎನ್ನುತ್ತಾನೆ, ನಾಗಾನಂದ ನಾಟಕಕಾರ ಶ್ರೀಹರ್ಷ ನಾಂದಿ ಪದ್ಯದಲ್ಲಿ!
ಮಾತು ಮಾನವ ಸಮಾಜದ ಜೊತೆಗೆ ಶುರುವಾಯಿತೆನ್ನುತ್ತಾರೆ. ಬಲ್ಲವರು. ಅಕ್ಷರವಿಲ್ಲದ ಸಮಾಜಗಳು ಇಂದಿಗೂ ಹಲವಿದೆ. ಆದರೆ ಮಾತಿಲ್ಲದ ಸಮಾಜಗಳು ಎಲ್ಲಿಯೂ ಇಲ್ಲ. ಅಕ್ಷರಸ್ಥ ಸಮಾಜಗಳಲ್ಲೂ ಬರವಣಿಗೆಗಿಂತಾ ಮಾತಿನದೇ ಮೇಲುಗೈ. ನಾವೆಲ್ಲರೂ ಒಂದು ದ್ವೀಪವಾದರೆ ಮಾತು ನಮ್ಮನ್ನು ಸಾಗರೋಪಾದಿಯಲ್ಲಿ ಆವರಿಸಿದೆ. ಮಾತು ಗಾಳಿಯಲ್ಲಿ ತೇಲಿಹೋಗಬಾರದೆಂಬ ಇಚ್ಛೆಯಿಂದ ಜನ ಬರವಣಿಗೆಗೆ ಶುರು ಹಚ್ಚಿಕೊಂಡರು. ಬರವಣಿಗೆಗೆ ಶಾಸನದ ಶಕ್ತಿ ಬಂದಾಗ ಅದು ಬಲಿಷ್ಠ ವರ್ಗದ ಪಾಲಾಯಿತು. ಅಕ್ಷರ ಜ್ಞಾನ ತಿಳಿವಿನ ಹಾದಿಯನ್ನು ತೆರೆಯಿತು ನಿಜ! ಆದರೆ ಅದು ಅಧಿಕಾರದ ಬುನಾದಿಯೂ ಆಯಿತು. ಇತಿಹಾಸದಲ್ಲಿ ಬಹಳ ಸಲ ಅಕ್ಷರವಿಲ್ಲದ ಜನಾಂಗಗಳು , ಬಲಿಷ್ಠ ವರ್ಗಗಳ ದಬ್ಬಾಳಿಕೆಗೊಳಗಾಗಬೇಕಾಗಿ ಬಂತು.
ನಮ್ಮ ಮಾತಿನ ಅಂಗಗಳು ಉಸಿರು,,,,ನಾಲಗೆ,,,ಹಲ್ಲುಗಳೂ,,,,ತುಟಿಗಳು ಇತ್ಯಾದಿ– ಮಾತಿಗೆ ಹೇಳಿ ಮಾಡಿಸಿದಂತಿವೆ. ಅಳುವಿನಿಂದ ಶುರುವಾದ ನಮ್ಮ ಬದುಕು ಸುತ್ತಮುತ್ತಲ ಪ್ರಭಾವದಿಂದ ಮಾತು ಕಲಿಯುತ್ತಾ ಹೋಗುತ್ತದೆ. ಯಾವ ಭಾಷೆ ಅನ್ನುವುದು ನಮ್ಮ ಪರಿಸರದ ಮೇಲೆ ನಿಂತಿದೆ. ಮಾತಾಡುವ ಶಕ್ತಿ ಸ್ವಾಭಾವಿಕವಾದರೂ ಅದು ಕಲೆಯೂ ಹೌದು. ಆದ್ದರಿಂದ ಎಲ್ಲ ಕಲೆಗಳಲ್ಲಿರುವಂತೆ ಇಲ್ಲಿಯೂ ಕಲಿಕೆಯೆಂಬುದುಂಟು. ಎಲ್ಲ ಸಮಾಜಗಳಲ್ಲಿ ದೊಡ್ಡವರು ಮಕ್ಕಳಿಗೆ ಮಾತಿನ ಸರಿ-ತಪ್ಪುಗಳನ್ನು ಕಲಿಸುತ್ತಾರೆ. ಯಾರ ಜೊತೆ ಹೇಗೆ ಮಾತನಾಡಬೇಕು, ಎಲ್ಲಿ ಯಾವ ತರದ ಮಾತಾಡಬೇಕು ಇತ್ಯಾದಿಗಳು ನಾವು ಸಮಾಜದಿಂದ ಕಲಿಯುವದರ ಮುಖ್ಯ ಭಾಗ. ಈ ವಿವರಗಳ ಆಧಾರದ ಮೇಲೆ ಸಂಭೋಧನೆಗಳು, ಬಳಸಬೇಕಾದ ಶಬ್ದಗಳು ಬದಲಾಗುತ್ತಾ ಹೋಗುತ್ತವೆ.
ಮಾತಿನ ಬಗೆಗಿನ ಹಲವು ಉಪಯುಕ್ತ ತಾಕೀತುಗಳು, ಎಚ್ಚರಿಕೆಗಳು, ಸಲಹೆ-ಸೂಚನೆಗಳು ಗಾದೆ, ನಾಣ್ಣುಡಿಗಳ ಮೂಲಕ ನಮ್ಮನ್ನು ಪ್ರಭಾವಿಸುತ್ತವೆ. ಊಟ ಬಲ್ಲವನಿಗೆ ರೋಗವಿಲ್ಲ- ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುತ್ತಾನೆ ನಾಣ್ಣುಡಿಗಳ ಪಿತಾಮಹ ಸರ್ವಜ್ಞ.
ತಾನು ವಿದ್ಯೆಯ ಪರ್ವತವಾದದ್ದು ಮಾತಿನ ಬಲದಿಂದ ಎಂದು ಬೇರೆ ಹೇಳುತ್ತಾನೆ. ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ. ಮಾತಿನ ಕಲಾವಿದರಾದ ಕವಿಗಳು ಮಾತಿನ ಬಗ್ಗೆ ತಮ್ಮ ಒಳನೋಟಗಳನ್ನು ಮಾತಿನಲ್ಲಿ ಕಟ್ಟುತ್ತಾರೆ. ಮಾತೆಂಬುದು ಜ್ಯೋತಿರ್ಲಿಂಗ ಎನ್ನುತ್ತಾನೆ. ಅಲ್ಲಮ ಪ್ರಭು. ನುಡಿದರೆ ಮುತ್ತಿನ ಹಾರದಂತಿರಬೇಕೆನ್ನುತ್ತಾರೆ ಬಸವಣ್ಣವರು. ಮುತ್ತಿನಂಥ ಮಾತು ಎಂಬಲ್ಲಿ ಮಾತು ಮಧುರವಾಗಿರಬೇಕೆಂಬ ಸಲಹೆಯಿದೆ. ಬರೀ ಮಾತಿನಲ್ಲಿ ಹೊಟ್ಟೆ ತುಂಬುವುದಿಲ್ಲ. ಅನ್ನೋದು ಎಲ್ಲರಿಗೂ ಗೊತ್ತು. ವಸ್ತುನಿಷ್ಠವಾಗಿ ನೋಡಿದಾಗ ಮಾತು ನಿಜದ ಕನ್ನಡಿಯೇ ಹೊರತು ನಿಜವೇ ತಾನಲ್ಲ. ಇದು ನಮ್ಮೆಲ್ಲರಿಗೂ ಗೊತ್ತು. ಆದರೂ ಹಲವು ಸಲ ಮಾತು ನಿಜಕ್ಕಿಂತಲೂ ನಿಜವಾಗಿಬಿಡುತ್ತದೆ. ಈ ಅರ್ಥದಲ್ಲೇ ಹಿಟ್ಲರನ ಪ್ರಚಾರ ಮಂತ್ರಿಯಾಗಿದ್ದ ದಾ.ಗೋಬೆಲ್ಸ್ ಹೇಳುತ್ತಿದ್ದ.: ಒಂದು ಸುಳ್ಳನ್ನು ನೂರು ಸಲ ಹೇಳಿದರೆ ಅದೇ ನಿಜವಾಗುತ್ತದೆ. ಇದೇ ಸುಳ್ಳು ಪ್ರಚಾರಕರ ಮಂತ್ರ ಕೂಡ ಹೌದು.
ಅತಿಯಾಗಿ ಮಾತನಾಡುವವರ ಬಗ್ಗೆ ಎಚ್ಚರಿಸುವ ನಾಣ್ಣುಡಿಗಳಿವೆ. ಕೆಲವರು ಮಾತಿನಲ್ಲೇ ಮನೆಕಟ್ಟುತ್ತಾರೆ. ಸಾಮಾನ್ಯವಾಗಿ ಅತೀಯಾಗಿ ಮಾತನಾಡುವ ಹೆಂಗಸನ್ನು ಮಾತುಗಾತಿ ಮಲ್ಲಮ್ಮ ಹಾಗೆಯೇ ಬಂಡಲ್ ಹೊಡೆಯುವ ಗಂಡಸನ್ನು ಮಾತಿನ ಮಲ್ಲ ಎಂದು ಕರೆಯಲಾಗಿದೆ. ಇಂಥವರು ಮಾತಿನಲ್ಲೆ ಮರಳು ಮಾಡುತ್ತಾರೆ. ಮಾತಿನಲ್ಲೇ ಮೋಡಿ ಹಾಕುತ್ತಾರೆ. ತೀರಾ ಮಾತನಾಡದವನನ್ನು ನಂಬಲಾಗದಂತೆ: ಮಾತಾಡಲ್ಲ, ಮನೆ ಉಳಿಯಲ್ಲ, ಎಂಬ ನುಡಿಯಿಂದ ನಿಜಕ್ಕೆ ತೀರಾ ಹತ್ತಿರವಾಗಿ ಮಾತಾಡುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ದಿಟ್ಟ ನುಡಿಯ ವಚನಕಾರ ಅಂಬಿಗರ ಚೌಡಯ್ಯ ಹೀಗೆನ್ನುತ್ತಾನೆ, ಮಾತಿನ ಬಲದಿಂದ ವೇದಂಗಳಾದುವಲ್ಲದೆ ವೇದ ಸ್ವಯಂಭೂವಲ್ಲ ನಿಲ್ಲು: ಮಾತಿನ ಬಲದಿಂದ ಶಾಸ್ತ್ರಂಗಳಾದುವಲ್ಲದೇ ಶಾಸ್ತ್ರ ಸ್ವಯಂಭುವಲ್ಲ ನಿಲ್ಲು, ಹೀಗೆ ಪವಿತ್ರವೆಂದು ತಿಳಿಯಲಾದ ಯಾವುದೂ ಪರೀಕ್ಷೆಗೆ ಹೊರತಲ್ಲವೆಂಬ ಎಚ್ಚರಿಕೆ ನೀಡುತ್ತಾನೆ. ಭಗವಾನ್ ಬುದ್ದ ತನ್ನ ಧರ್ಮವನ್ನು ತಹಸ್ಸುಖಿ ಧಮ್ಮ ಎಂದು ಕರೆದ ಇದರ ಅರ್ಥಬಂದು ಮುಟ್ಟಿ ನೋಡಿ ಎಂದು. ತನ್ನ ಅಥವಾ ಯಾವುದೇ ಗುರುವಿನ ಮಾತನ್ನು ಪರೀಕ್ಷೆಯ ಒರೆಗಲ್ಲಿಗೊಡ್ಡಬೇಕೆಂದು ಸೂಚಿಸುತ್ತಾನೆ.
ಪರೀಖ್ಖಾತ್ ಗಾಹ್ಯಂ ಭಿಖ್ಖವೇ ಒಮ್ಮೆ ಬುದ್ದನ ಶಿಷ್ಯನೊಬ್ಬ ಕೇಳುತ್ತಾನೆ: ಭಂತೆ, ನೀವೊಂದು ಧರ್ಮವನ್ನು ಭೋಧಿಸುತ್ತೀರ, ಆ ನಾಥಪುತ್ರ (ಮಹಾವೀರ) ಇನ್ನೊಂದು ಧರ್ಮವನ್ನು ಭೋಧಿಸುತ್ತಾನೆ. ಮಖ್ಖಲಿ ಗೋಸಲ ಇನ್ನೊಂದು ಧರ್ಮ ಭೋಧಿಸುತ್ತಾನೆ. ನಾವು ಯಾವುದನ್ನು ನಿಜವೆಂದು ತಿಳಿಯಬೇಕು? ಅದಕ್ಕೆ ಬುದ್ದಗುರು ಹೀಗೆ ಉತ್ತರಿಸುತ್ತಾನೆ. ನನ್ನ ಮಾತನ್ನು ನಾನು ಹೇಳಿದೆನೆಂಬ ಕಾರಣಕ್ಕೆ ನಂಬಬೇಡ, ಇತರರ ಮಾತುಗಳನ್ನು ಇತರರು ಹೇಳಿದ ಕಾರಣಕ್ಕೆ ನಂಬಬೇಡ, ನನ್ನ ಮತ್ತು ಅವರ ಮಾತುಗಳನ್ನು ನಿನ್ನ ಅನುಭವದಲ್ಲಿ ಪರೀಕ್ಷಿಸಿ ಯಾವುದು ನಿಜವೆಂದು ನೋಡಿಕೊ- ಮಾತು ನಮ್ಮ ಒಳಹೊರಗುಗಳೆಲ್ಲೆಲ್ಲೂ ವ್ಯಾಪಿಸಿರುವದರಿಂದ ಅದರ ಬಗ್ಗೆ ಗಮನ ಕೊಡುವುದು ಸುಲಭವಲ್ಲ. ಮಾನವರಿಗೆ ಮಾತು ಉಸಿರಾಟದಷ್ಟೇ ಸಹಜ. ಉಸಿರಾಟದ ಬಗ್ಗೆ ಎಷ್ಟು ಜನ ನಿಗಾ ಮಾಡುತ್ತಾರೆ? ಇತರರೊಂದಿಗೆ ಮಾತಾಡದಿದ್ದಾಗ ನಮ್ಮ ಜೊತೆ ನಾವೇ ಒಳಗೊಳಗೆ ಮಾತಾಡಿಕೊಳ್ಳುತ್ತಿರುತ್ತೇವೆ. ಎಚ್ಚರದ ಗಳಿಗೆಗಳನ್ನು ದಾಟಿ ಕನಸಿನಲ್ಲೂ ಮಾತಾಡುತ್ತೇವೆ ಕೇಳಿಸಿಕೊಳ್ಳುತ್ತೇವೆ.
ಮಾತಿನ ಸರ್ವವ್ಯಾಪಕತೆಯ ಬಗ್ಗೆ ಹಿಂದಿನ ನಿಗಮಾಮಗಳು ಇಂದಿನ ದರ್ಶನಶಾಸ್ತ್ರಗಳು ಹೇಳುತ್ತವೆ. ಪಡುವಣದ ವಿದ್ವಾಂಸ ಲಕಾನ್ ನಮ್ಮ ಸುಪ್ತಪ್ರಜ್ಞೆಯೂ ಮಾತಿನ ಹಾಗೆ ರಚಿತವಾಗಿದೆಯೆನ್ನುತ್ತಾನೆ. ತಂತ್ರಗಳಾದರೋ ಮಾತಿನ ನಾಕು ನೆಗೆಗಳನ್ನು ಬಿಚ್ಚಿಡುತ್ತವೆ. ಕಿವಿಗೆ ಕೇಳುವ ಮಾತನ್ನು ವೈಖರಿ ವಾಕ್ ಎಂದು ಕರೆದಿವೆ. ಇದರಾಚೆಗೆ ನಮಗೆ ನಾವೇ ಪಿಸುಗುಟ್ಟಿಕೊಳ್ಳುವ ಮಾತಿನ ಬಗೆಯೊಂದಿಗೆ ಇದನ್ನು ಪಶ್ಯಂತಿ ಎಂದು ಕರೆಯಲಾಗಿದೆ. ಕಿವಿಗೆ ಕೇಳದಷ್ಟು ಸೂಕ್ಷ್ಮವಾದ ಮಾತಿನ ಬಗೆಯನ್ನು ಪರಾ ಎನ್ನಲಾಗಿದೆ. ಇವೆಲ್ಲಕ್ಕೂ ತಳದಲ್ಲಿ ಪರಾತ್ಪರ ವೆಂಬುದೊಂದಿದೆ. ಎಚ್ಚರದಿಂದ ಸುಪ್ತಪ್ರಜ್ಞೆಯ ವರೆಗೆ ಮಾತಿನ ನಾಕು ಪದರಗಳಿವೆ. ವಿಚಾರವಂತರು , ವಿಜ್ಞಾನಿಗಳು ಮಾತುಗಳನ್ನು ನಿಜದ ಒರೆಗಲ್ಲಿಗೊಡ್ಡಿ ನೋಡುತ್ತಾರೆ. ಮಾತಿನ ಮಿತಿಗಳನ್ನರಿತು ಅದನ್ನು ಸಮೀಪವಾಗಿಸಲು ಶ್ರಮಿಸುತ್ತಾರೆ. ಆದರೆ ಅನುಭಾವಿಗಳು ಮಾತಿನಾಚೆಗಿನ ಮೌನದಲ್ಲಿ ನಿಜವನ್ನರಸುತ್ತಾರೆ. ಬೊಮ್ಮವನು ಅರಿತವನು ಸುಮ್ಮನಾಗಿರಬೇಕು ! ಅನ್ನುತ್ತಾನೆ ಮಹಲಿಂಗ ರಂಗ. ನಿಜಗುಣ ಶಿವಯೋಗಿಗಳು ಕೊಂಡಾಡುವ ನಿರ್ಮಲ ಜ್ಯೋತಿ ಮಾತು ಮನಂಗಳಿಂದತ್ತತ್ತ ಎಂದಿದ್ದಾರೆ. ಆದರೆ ಮೌನದ ಕೊಂಡಾಟ ನಡೆಯುವುದು ಮಾತಿನಲ್ಲೇ ಆದ್ದರಿಂದ ಅನುಭಾವಿಗಳಿಗೆ , ಮುನಿಗಳಿಗೆ , ಸಿದ್ದರಿಗೆ, ಬುದ್ದರಿಗೆ, ಯಾರಿಗೂ ಮಾತಿನಿಂದ ಪೂರ್ತಿ ಬಿಡುಗಡೆಯಿಲ್ಲ. ನಂಬಿಗಸ್ಥರು ಆರಾಧಿಸುವ ದೇವ-ದೇವಿಯರೂ ಮಾತಿಗೊಳಗು. ಕಾಳಿದಾಸ ಮಾತನ್ನು ಶಕ್ತಿಯೆಂದೂ ಕೀರ್ತಿಸುತ್ತಾನೆ. ಯೋಗದ ಪ್ರಕಾರ ಮಾತನ್ನು ಮಂತ್ರವಾಗಿಸಿ ಮಂತ್ರವನ್ನು ಮೌನದಲ್ಲಿ ಮುಳುಗಿಸಬೇಕು. ಹಾಗೆ ಮುಳುಗಿದ ಮೇಲೆ ಯೋಗಿಗಳೂ ಮಾತಿನ ದಂಡೆಗೆ ವಾಪಸಾಗುತ್ತಾರೆ. ಸತ್ಯಗಳೂ ಸಾಪೇಕ್ಷವಾಗಿರುವ ಜಗತ್ತಿನಲ್ಲಿ ಮಾತಿನೊಳಗೆ ಹರಳುಗಟ್ಟಿರುವ ನಿಜಗಳೂ ಸಾಪೇಕ್ಷವೇ, ಸಮಾಜ ಬದಲಾದಂತೆ ಮಾತುಗಳ , ಶಬ್ದಗಳ ಪುನರ್ಮೌಲ್ವೀಕರಣ ನಡೆಯುತ್ತಲೇ ಇರುತ್ತದೆ.
ತೂಕದ ಮಾತು- ಈ ಭೂಮಿ ಮೇಳಿರುವ ಕೋಟ್ಯಾಂತರ ಜೀವಿಗಳಲ್ಲಿ ಮಾನವ ಪರಿಪೂರ್ಣವಾದ ಹಾಗೂ ವಿಭಿನ್ನವಾದವನು ಎನ್ನುವುದರಲ್ಲಿ ಎರಡು ಮಾತಿಲ್ಲ. ಆ ದೇವರ ಅಪರೂಪದ , ಅದ್ಭುತವಾದ ಪರಿಕಲ್ಪನೆಯ ಫಲವೇ ಈ ಮಾನವ ಸೃಷ್ಠಿ. ಮಾನವರಾದ ನಮಗೆ ಆಲೋಚನಾ ಶಕ್ತಿಯಿದೆ. ತರ್ಕಬದ್ಧವಾಗಿ ಯೋಚಿಸುವ ಹಾಗೂ ತನ್ನ ಭಾವನೆಗಳನ್ನು ಇತರರೊಡನೆ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪಡೆದಿದ್ದೇವೆ, ಭಾವನೆಗಳ ಅಭಿವ್ಯಕ್ತಿಗೆ ಮಾತು ಆ ದೇವರು ನಮಗಿತ್ತ ಅಪೂರ್ವ ಕೊಡುಗೆ. ಮುಗ್ಧ ಮನಸ್ಸಿನ ಮಗುವಿನ ತೊದಲುನುಡಿ ಕೇಳಲು ಹಿತ. ಹಾಗೇ ಜ್ಞಾನಿಯಾದವನ ಅನುಭವಜನ್ಯ ನುಡಿಗಳು ಅತ್ಯಮೂಲ್ಯವೆನ್ನಿಸುತ್ತವೆ. ಮಾತನಾಡುವುದು ಒಂದು ಕಲೆ ಎಲ್ಲರಿಗೂ ಈ ಕಲೆ ಒಲಿದಿರುವುದಿಲ್ಲ. ಈ ಅಪೂರ್ವವಾದ ಮಾತಿನ ಬಗ್ಗೆ ನಮ್ಮ ಹಿರಿಯರ ಅನುಭವಭರಿತ ಅಭಿಪ್ರಾಯಗಳು ನಮಗೆ ದಾರಿದೀಪ , ಸಂಸ್ಕಾರವಂತರಾಗಿ ಬದುಕಲು ಇವು ನಮಗೆ ಮಾರ್ಗದರ್ಶಿಯಾಗಿವೆ.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನೇಕು,
ನುಡಿಯೊಳಗಾನು ನಡೆಯದಿದ್ದರೆ ಮೆಚ್ಚ ನಮ್ಮ ಕೂಡಲಸಂಗಮದೇವ.
ಬಸವಣ್ಣನವರ ಈ ವಚನ ನಮ್ಮ ಮಾತು ಹೇಗಿರಬೇಕೆಂಬುದರ ಬಗ್ಗೆ ಪೂರ್ಣ ಮಾಹಿತಿ ನೀಡುವಂತಿದೆ. ಸುಂದರವಾದ ,ನಿಷ್ಕಲ್ಮಶವಾದ, ನೇರವಾದ ಮತ್ತು ಆತ್ಮ ಸಾಕ್ಷಿಗೆ ಒಪ್ಪುವ ಮಾತು ಆ ದೇವರಿಗೂ ಪ್ರೀತಿ ಎಂದಿದ್ದಾರೆ. ಈ ಜಗತ್ತಿನ ಎಲ್ಲಾ ಆಗುಹೋಗುಗಳಿಗೂ ಮಾತೇ ಕಾರಣ ಎಂಬ ಸರ್ವಜ್ಞನ ತ್ರಿಪದಿಯಂತೂ ಜನಜನಿತವಾಗಿದೆ.
ಮಾತಿನಿಂ ನಗೆ ನುಡಿಯು,
ಮಾತಿನಿಂ ಹಗೆ ಹೊಲೆಯು,
ಮಾತಿನಿಂ ಸರ್ವ ಸಂಪದವು,
ಜಗಕೆ ಮಾತೇ ಮಾಣಿಕವು ಸರ್ವಜ್ಞ,
ಇನ್ನು ನಮ್ಮ ಜನಪದರ ಅನುಭವದ ಮಾತು ನೊಡೋಣ.
ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು
ಮಾತೇ ಮುತ್ತು ಮಾತೇ ಮೃತ್ಯು.
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಗೆ ಜಗಳವಿಲ್ಲ.
ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು.
ಮಾತೇ ಸಂಪತ್ತು, ಮಾತೇ ಆಪತ್ತು.
ಮಾತೇ ಮಾಣಿಕ್ಯ.
ಕಳೆದು ಹೋದ ಕಾಲ, ಬಾಯಿಯಿಂದ ಜಾರಿ ಹೋದ ಮಾತು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಮಾತನಾಡುವಾಗ ಯೋಚಿಸಿ ಮಾತನಾಡುವುದು ಉತ್ತಮ. ಆಡಿದ ಮಾತಿಗೆ ಬದ್ಧರಾಗಿರುವುದು ನಮ್ಮ ಯೋಗ್ಯತೆಯನ್ನು ಹೆಚ್ಚಿಸುತ್ತದೆ. ಕ್ಷಣ ಚಿತ್ತ ಕ್ಷಣ ಪಿತ್ತವೆಂಬಂತೆ ಊಸರವಳ್ಳಿಯ ರೀತಿ ಮಾತು ಬದಲಿಸುವುದು ನಮ್ಮ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ. ನುಡಿಯಲ್ಲಿ ನಯ ಮತ್ತು ನಿಸ್ವಾರ್ಥತೆಯಿರಬೇಕು. ಕಲಾತ್ಮಕವಾಗಿ , ಸಂದರ್ಭೋಚಿತವಾಗಿ ಮಾತನಾಡುವ ಕಲೆಯನ್ನು ನಾವು ನಮ್ಮದಾಗಿಸಿಕೊಳ್ಳಬೇಕೆಂಬುದು ಮೇಲಿನ ಗಾದೆ ಮಾತುಗಳ ಅರ್ಥವಾಗಿದೆ.
ಮಾತು ಬೆಳ್ಳಿ, ಮೌನ ಬಂಗಾರ ಅಂತ ಒಂದು ಮಾತಿದೆ. ಇದರೊಳಗಿರುವ ತಮಾಷೆ ಎಂದರೆ- ಮೌನದ ಮಹಿಮೆಯನ್ನು ಹೇಳೊದಕ್ಕೂ ಮತ್ತೇ ನಾವು ಮಾತಿನ ಮೊರೆಯನ್ನೇ ಹೋಗಬೇಕು.ಇಂದು ಜಗವನ್ನು ಆಳುತ್ತಿರುವುದು ಮಾತೇ ಹೊರತು ಮೌನವಲ್ಲ, ಮೌನದ ಉಪಾಸಕರಾದ ಮುನಿಗಳು ಕೂಡ ಇಂದು ಮಾತಿನ ಗುಲಾಮರಾಗಿದ್ದಾರೆ. ಮಾತಿನ ಬಗ್ಗೆ ಇರುವ ಒಂದು ಜನಪದ ದೃಷ್ಟಾಂತ ನೆನಪಾಗ್ತಿದೆ.
ಒಂದು ಊರಿಗೆ ಒಬ್ಬ ರಾಜ. ಅವನಿಗೆ ತುಂಬಾ ವರ್ಷಗಳ ನಂತರ ಮಗ ಹುಟ್ಟಿದ . ಈ ಸಂಭ್ರಮವನ್ನು ಪುರಜನರೆಲ್ಲ ಹಬ್ಬದಂತೆ ಆಚರಿಸಬೇಕೆಂದು ರಾಜಾಜ್ಞೆ ಹೊರಡಿಸಿದ. ಆದರೆ ರಾಜನ ಈ ಸಂಭ್ರಮ ಬಹಳ ದಿವಸ ಉಳಿಯಲಿಲ್ಲ. ಏಕೆಂದರೆ ಮಗ ಮೂಗನಾಗಿದ್ದ. ರಾಜ ಈ ವಿಷಯ ಕೇಲಿ ವ್ಯಾಕುಲನಾದ . ಎಲ್ಲ ದೇವರ ಚಿತ್ತ ಎಂದು ಕೊಂಡು ಮೂಗ ಮಗನಿಗೆ ಎಲ್ಲ ಕ್ಷಾತ್ರ ವಿದ್ಯೆಗಳಲ್ಲೂ ತರಬೇತಿ ಕೊಡಿಸಿದ. ಒಮ್ಮೆ ಯುವರಾಜ ಸೈನಿಕರು ಮತ್ತು ಮಂತ್ರಿಯೊಂದಿಗೆ ಶಿಕಾರಿಗೆ ಹೋದ . ಅರೆಪೆಟ್ಟು ತಿಂದ ಜಿಂಕೆಮರಿಯೊಂದು ಚುಚ್ಚಿಕೊಂಡ ಬಾಣದೊಂದಿಗೆ ಓಡಿಹೋಗಿ ಪೊದೆಯಲ್ಲಿ ಅಡಗಿಕೊಂಡು ಬಿಟ್ಟಿತು. ಸೈನಿಕರೆಲ್ಲ ಹುಡುಕಿದರೂ ಸಿಗಲಿಲ್ಲ. ಆದರೆ ಚುಚ್ಚಿಕೊಂಡ ಬಾಣದ ನೋವು ತಾಳದ ಜಿಂಕೆಮರಿ ಆರ್ತನಾದಗೈದಾಗ ಸೈನಿಕರು ಅದರ ಜಾಡನ್ನು ಪತ್ತೆ ಹಚ್ಚುವಂತಾಯಿತು. ಆಗ ಜಿಂಕೆಮರಿಗೆ ಯುವರಾಜ ಹೇಳಿದ ನೀನ್ಯಾಕೆ ಮಾತಾಡಿದೆ? ನೀನು ಮಾತಾಡಿದ್ದರಿಂದಲೇ ಮೃತ್ಯು ಪಾಲಾದೆ. ಮಂತ್ರಿಗೆ ಯುವರಾಜ ಮಾತಾಡಿದ್ದನ್ನು ಕೇಳಿ ಸಂಭ್ರಮಾಶ್ಚರ್ಯವಾಗಿ ಬಂದು ರಾಜನಿಗೆ ಈ ವಿಷಯ ಅರುಹಿದ . ರಾಜನ ಸಂಭ್ರಮಕ್ಕೆ ಪಾರವೇ ಇಲ್ಲದಾಯಿತು. ಊರಲ್ಲಿ ಡಂಗೂರ ಸಾರಿಸಿ ಎಲ್ಲರೂ ಅರಮನೆ ಮುಂದೆ ಬಂದು ನೆರೆಯಬೇಕೆಂದೂ, ಯುವರಾಜನ ಮಾತುಗಳನ್ನು ಪುರಜನರು ಕಿವಿಯಾರೆ ಕೇಳಬೇಕೆಂದೂ ತಿಳಿಸಿದ .ಊರಜನರೆಲ್ಲ ಬಂದರು. ಯಾರೇನು ಮಾಡಿದರೂ ಯುವರಾಜ ಮಾತಾಡಲಿಲ್ಲ. ರಾಜನಿಗೆ ಅವಮಾನವಾಯಿತು. ಇದಕ್ಕೆ ಕಾರಣನಾದ ಮಂತ್ರಿಗೆ ಮರಣದಂಡನೆ ವಿಧಿಸಿದ .ಅವನನ್ನು ಕರೆದೊಯ್ಯುತ್ತಿದ್ದಾಗ ಯುವರಾಜ ಕರೆದು ಹೇಳಿದ, ನೀನ್ಯಾಕೆ ಮಾತಾಡಿದೆ? ನೀನು ಮಾತಾಡಿದ್ದರಿಂದಲೇ ಮೃತ್ಯು ಪಾಲಾದೆ ಅಂದ ಅನಗತ್ಯವಾಗಿ ಮಾತಾಡುವುದು ಮತ್ತು ಅತ್ಯಗತ್ಯವಿದ್ದಾಗಲೂ ಮಾತಾಡದೆ ಇರುವುದು ಇವುಗಳ ಅಪಾಯವನ್ನು ಈ ಕಥೆ ತುಂಬಾ ಧ್ವನಿಪೂರ್ಣವಾಗಿ ಹಿಡಿದಿಟ್ಟಿದೆ. ಹಾಗಾಗಿ ನಾವು ಕೂಡ ಆಡಲೇ ಬೇಕಿರುವ ಮತ್ತು ಆಡದಿದ್ದರೂ ನಡೆಯುವ ಮಾತುಗಳ ಬಗ್ಗೆ ಖಚಿತ ನಿಲುವು ಹೊಂದಿರುವುದು ಮುಖ್ಯವಾಗಿದೆ.
ನಮ್ಮ ತತ್ವಪದಕಾರ ಕಡಕೋಳ ಮಡಿವಾಳಪ್ಪನವರು ಮೂಕಾಗಿರಬೇಕೊ: ಜಗದೊಳು ಜ್ವಾಕ್ಯಾಗಿರಬೇಕೋ ಎಂದು ಹಾಡಿದ್ದಾರೆ. ಆಧುನಿಕ ಕಾವ್ಯದಲ್ಲೂ ಮಾತಿನ ಪ್ರಸ್ತಾಪವಿಲ್ಲದೆ ಇಲ್ಲ. ಶಬ್ದಗಾರುಡಿಗರಾದ ವರಕವಿ ಬೇಂದ್ರೆಯವರು ಮಾತು- ಮಾತು ಮಥಿಸಿ ಬಂತು ನಾದದ ನವನೀತ ಎಂದಿದ್ದಾರೆ. ಭಾಷೆ ಮತ್ತು ಸಂಸ್ಕೃತಿಗಳ ಕುರಿತ ಚಿಂತನೆಯ ಅನಂತಮೂರ್ತಿಯವರ ಒಂದು ಲೇಖನದ ಶಿರ್ಷಿಕೆಯೇ ಮಾತು ತಲೆಯೆತ್ತುವ ಬಗೆ ಅಂತ ಇದೆ. ನಮ್ಮ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರು ನೀನಾಡುವ ಮಾತು ಹೀಗಿರಲಿ ಗೆಳೆಯ: ಮೃದು ವಚನ ಮೂಲೋಕ ಗೆಲ್ಲುವುದು ತಿಳಿಯ ಎಂದು ಬರೆದುದಷ್ಟೇ ಅಲ್ಲದೆ ತಮ್ಮ ಮೃದುವಚನದಿಂದ ಮೂಲೋಕದ ಮನಸ್ಸನ್ನು ಗೆದ್ದೂ ತೋರಿದ್ದಾರೆ.
ಮಾತು ಎಂದು ಯಾವುದನ್ನ ಕರೆಯಬೇಕು?
ನಮ್ಮ ನಡುವಿನ ಮಾತುಗಳಲ್ಲಿ ಸಮಯ ತಿನ್ನುವ ಶಿಷ್ಟಾಚಾರದ ಮಾತುಗಳಿವೆ. ಆರೋಗ್ಯ ಕೆಡಿಸುವ ಅರ್ಥಹೀನ ಮಾತುಗಳಿವೆ , ಸಮಯಸಾಧಕ ಭಟ್ಟಂಗಿ ಮಾತುಗಳಿವೆ: ಹೊಟ್ಟೆ ತುಂಬಿದವರ ಪಟ್ಟಾಂಗದ ಮಾತುಗಳಿವೆ, ಕರುಳು ಕಿವುಚುವ ಮಾತ್ಸರ್ಯದ ಈಟಿ ಮಾತುಗಳಿವೆ, : ನಗುನಗುತ್ತಲೇ ಮಾನ ಹರಾಜು ಹಾಕುವ ಚಾಟಿ ಮಾತುಗಳಿವೆ: ಲೋಕವೆಲ್ಲದರ ಬಗ್ಗೆ ಹಗುರವಾಗಿ ಆಡಿಕೊಳ್ಳುವ ಬಾಯ್ತುರಿಕೆಯ ಮಾತುಗಳಿವೆ, ಅಯ್ಯೋ ಎಂದು ಮರುಗುವ ತುಟಿ ಸಹಾನುಭೂತಿಯ ಹುಸಿ ಮಾತುಗಳಿವೆ. ಇನ್ನೂ ಇಂತಹ ಹಲವಾರು ಪ್ರಭೇಧಗಳಿವೆ. ಇವೆಲ್ಲವನ್ನು ಮಾತು ಎಂದು ಕರೆಯಬಹುದೇ? ಯಾವುದು ಉಪಯುಕ್ತಕಾರಿಯೋ: ಯಾವುದು ಉತ್ಪಾದನಾಶೀಲವೋ ಅದು ಮಾತ್ರವೇ ಮಾತು ಎನ್ನಿಸಿಕೊಳ್ಳುವುದು.ಉಳಿದುದೆಲ್ಲ ಏನಿದೆ?ಅನರ್ಥವಾಗಿ ಆಯುಷ್ಯ ಕರಗಿಸುವ: ಚಾರಿತ್ರ್ಯ ನಾಶ ಮಾಡುವ ಕಾಲ ಹರಣಕಾರಿ ಕಸ ಮಾತ್ರ. ಹಾಗೆ ನೋಡಿದರೆ ನಾವಾಡುವ ಪ್ರತಿ ಮಾತು ನಮ್ಮ ವ್ಯಕ್ತಿತ್ವದ ಕಟ್ಟಡವನ್ನು ನಿರ್ಮಾಣ ಮಾಡುವಲ್ಲಿ ಬಳಕೆಯಾಗುವ ಒಂದೊಂದು ಇಟ್ಟಿಗೆಯಂತೆ. ನಿನ್ನೆ ಆಡಿದ ಮಾತು ಒಂದು ಇಟ್ಟಿಗೆ, ಇಂದು ಆಡುವ ಮಾತು ಒಂದು ಇಟ್ಟಿಗೆ ನಾಳೆ ಆಡಲಿರುವ ಮಾತು ಅದು ಮತ್ತೊಂದು ಇಟ್ಟಿಗೆ ಇವೆಲ್ಲ ಸೇರುತ್ತ, ಒಂದರ ಮೇಲೊಂದು ಪೇರುತ್ತ ನಮ್ಮ ವ್ಯಕ್ತಿತ್ವದ ಕಟ್ಟಡ ನಿರ್ಮಾಗೊಳ್ಳುತ್ತ ಸಾಗುತ್ತಿರುತ್ತದೆ. ನಿಜವಾದ ಅರ್ಥದಲ್ಲಿ ಮಾತುಗಳೇ ಅಲ್ಲದ ಅರ್ಥಹೀನ ಬಡಬಡಿಕೆಗಳು ಶಿಥಿಲವಾದ ಅರೆಬೆಂದ ಇಟ್ಟಿಗೆಗೆಳಂತೆ. ಇವುಗಳಿಂದ ನಿರ್ಮಾಣಗೊಂಡ ಕಟ್ಟಡ ಎಷ್ಟು ದಿವಸ ತಾನೇ ಗಟ್ಟಿಯಾಗಿರಲು ಸಾಧ್ಯ? ಇಂಥ ವ್ಯಕ್ತಿತ್ವದ ಕಟ್ಟಡ ಶಿಥಿಲವಾಗಿ ಕುಸಿದು ಬೀಳದೆ ಇರಲು ತಾನೆ ಹೇಗೆ ಸಾಧ್ಯ?
ಮಾತಿನ ಅಧಿದೇವತೆಯಾದ ಮಾತೆ- ಮಾತಿನ ದೇವತೆಯರಾದ ಮಹಿಳೆಯರತ್ತ ಬರೋಣ. ಸರಸ್ವತಿಗೆ ವಾಗ್ದೇವಿ ಎಂಬ ಮತ್ತೊಂದು ಹೆಸರಿದೆ. ವಾಕ್ ಎಂದರೆ ಮಾತು, ದೇವಿ ಎಂದರೆ ಒಡತಿ, ಅಧೀಪತಿ. ಮಾತಿನ ಅಧೀದೇವತೆ ಹೆಣ್ಣೇ ಆಗಿರುವದರಿಂದ ಇರಬೇಕು, ಮಾತೆಯರು ಮಹಾನ್ ಮಾತುಗಾರರೇ, ಅವರಿರುವಲ್ಲೆಲ್ಲ ಮಾತು ಮಾತು ಮಾತು, ಮಾತೇ ಮಾತು. ಅದಕ್ಕೆ ಅವರನ್ನು ಅನ್ವರ್ಥಕವಾಗಿ ಮಾತೆ ಅಂತ ಕರೆಯುತ್ತಿರಬಹುದೇ ಅಂತ ಅನುಮಾನ. ಕೇವಲ ಅರ್ಧ ಗಂಟೆಗೆ ಪೋನಿಟ್ಟ ಹೆಂಡತಿಯನ್ನು ಗಂಡ ಆಶ್ಚರ್ಯದಿಂದ ಏನಿವತ್ತು ಇಷ್ಟು ಚುಟುಕಾಗಿ ಮಾತು ಮುಗುಸಿಬಿಟ್ಟೆ? ಅಂದದ್ದಕ್ಕೆ ಓಹ್ ಅದಾ? ರಾಂಗ್ ನಂಬರ! ಎಂದ ಹೆಂಡತಿಯ ಜೋಕು ನಿಮಗೆ ಗೊತ್ತಿಲ್ಲದೆ ಏನಿಲ್ಲ, ರಾಂಗ್ ನಂಬರ ಜೊತೆಗೂ ಅರ್ಧಗಂಟೆ ಮಾತಾಡಬಲ್ಲ ಶಕ್ತಿ ಮತ್ತು ಆಸಕ್ತಿ ಮಾತೆಯರಿಗಷ್ಟೇ ಇರಲು ಸಾಧ್ಯ.
ಒಂದು ಸಮೀಕ್ಷೆ ಪ್ರಕಾರ ಗಂಡಸರು ದಿನವೊಂದಕ್ಕೆ ಆಂಗಿಕ ಸಂಜ್ಞೆಗಳು ಸೇರಿದಂತೆ ಗರಿಷ್ಟ ಎಂದರೆ ನಾಲ್ಕು ಸಾವಿರ ಪದಗಳನ್ನು ಬಳಸುತ್ತಾರಂತೆ. ಹೆಂಗಸರು ಏಳು ಸಾವಿರ! ಅಂದರೆ ಬಹುಶಃ ಗಂಡಸರ ದುಪ್ಪಟ್ಟು, ಅದೇ ಕಾರಣಕ್ಕೇ ಇರಬೇಕು ಹೆಂಗಸರು ಪ್ರಾಣಿ ಪಕ್ಷಿ, ನವಜಾತ ಶಿಶು , ಬಾಗಿಲು,ಕಿಟಕಿ ಅಷ್ಟೇ ಏಕೆ ಕಲ್ಲಿನ ಜೊತೆಗೂ ಮಾತಾಡುತ್ತಾರೆ. ಗಂಡಸರು ಹೀಗಲ್ಲ. ಅವರು ಮನುಷ್ಯರ ಜೊತೆಗೆ ಸರಿಯಾಗಿ ಮಾತಾಡಿದರೇ ದೊಡ್ಡ ಸಾಧನೆ.
ಹೆಂಗಸರು ಎಷ್ಟೆಲ್ಲ ಮಾತನಾಡುತ್ತಾರೆಂದರೆ ಅವರು ಪ್ರತಿಯೊಂದಕ್ಕೂ ಕೊಡುವ ಸೂಕ್ಷ್ಮ ವೀಕ್ಷಕ ವಿವರಣೆ ಹಲವಾರು ಸಲ ಗಂಡಸರಿಗೆ ರೇಜಿಗೆ ಎನಿಸುತ್ತದೆ. ಆದರೆ ಹಾಗಂತ ಹೇಳಿಕಾಗುತ್ಯೇ? ಹೇಳೊದು ಅಷ್ಟು ಸುಲಭದ ಮಾತೇ? ಅದಕ್ಕೆ ಒಬ್ಬ ಉತ್ತಮ ಕೇಳುಗ ಮಾತ್ರ ಉತ್ತಮ ಗಂಡನಾಗಬಲ್ಲ ಅಂತ ಅನುಭವಿಗಳುಹೇಳಿರೋದು ,. ಹೊಸದರಲ್ಲಿ ಎಲ್ಲರೂ ಒಳ್ಳೇ ಕೇಳುಗರೇ, ಆಮೇಲೆ? ಸುಮ್ಮನೆ ತಲೆಯಾಡಿಸುತ್ತ ಹೋಗುತ್ತಿರುತ್ತಾರೆ ಯಾವ ಒಂದು ಮಾತನ್ನೂ ತಲೆಯೊಳಗೆ ಇಳಿಸಿಕೊಳ್ಳದೆ. ಆದರೆ ಮಾತೆಯರ ಮಾತುಗಾರಿಕೆಯಿಂದ ಒಳ್ಳೆಯದೇ ಆಗಿದೆ ಎಂಬುದನ್ನು ಮರೆಯುವಂತಿಲ್ಲ. ಅವರೂ ನವಜಾತ ಶಿಶುಗಳೊಂದಿಗೂ ಮಾತಾಡಬಲ್ಲವರಾದ್ದರಿಂದಲೇ ಮಕ್ಕಳಿಗೆ ಬೇಗ ಮಾತು ಬರುತ್ತವೆ. ಏಕೆಂದರೆ ಭಾಷೆಯ ಕಲಿಕೆಯಲ್ಲಿ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆ ಎಂಬ ನಾಲ್ಕು ಹಂತಗಳಿದ್ದು ಈ ಪ್ರಕ್ರೀಯೆ ಶುರುವಾಗುವುದೇ ಆಲಿಸುವಿಕೆಯಿಂದ , ಹೆಂಗಸರೇನಾದರೂ ಈಗಿರುವಷ್ಟು ಮಾತುಗಾರರಾಗಿರದೆ ಇದ್ದಿದ್ದರೆ ಮಕ್ಕಳು ಮಾತಾಡುವದನ್ನು ಕಲಿಯಲು ಹತ್ತನೇ ವರ್ಷಕ್ಕೆ ಕಾಲಿಡಬೇಕಾಗುತ್ತಿತ್ತು.
ಮಾತು ಹೇಗಿರಬೇಕು? ನಮ್ಮ ಕೃತಿಗಳೇ ನಮ್ಮ ಮಾತಾಗಿರಬೇಕು. ಮಾತು ಎಂದರೆ ಬಾಹ್ಯ ಅಭಿವ್ಯಕ್ತಿಯ ರೂಪ. ಒಳಗಿನ ಕಸುವೆಲ್ಲ ಸೇರಿ ಹೂರಣವಾಗಿ ಹೊರಬಂದ ಕೃತಿಯೂ ಕೂಡ ಮತ್ತೊಂದು ಅರ್ಥದಲ್ಲಿ ನಮ್ಮ ಮಾತೇ ಅಲ್ಲವೇ? ಹಾಗಾಗಿ ಸಾಧ್ಯವಾದಷ್ಟು ನಮ್ಮ ಸೃಜನಶೀಲ ಸೃಷ್ಟಿಗಳೇ ನಮ್ಮ ಮಾತಾಗಬೇಕು: ನಮ್ಮ ಬರಹ, ಹಾಡು, ಚಿತ್ರ, ಶಿಲ್ಪಗಳು ಮಾತಾಡಬೇಕು. ಅಂಥ ಲಲಿತಕಲೆಗಳಲ್ಲಿ ತನ್ನನ್ನು ಪ್ರಕಟಿಸಿಕೊಳ್ಳಲಾಗದವನ ಮಾತು ಅವನ ಕೆಲಸದಲ್ಲಿ ಉತ್ಪಾದಕತೆಯಲ್ಲಿ , ವ್ಯಕ್ತಿಯಲ್ಲಿ ಅಭಿವ್ಯಕ್ತಿಗೊಳ್ಳಬೇಕು. ಈ ದೃಷ್ಟಿಯಿಂದ ನೋಡಲು ಸಾಧ್ಯವಾದಾಗ ಎಲ್ಲ ಬಗೆಯ ಸೃಷ್ಟಿಯೂ ಒಂದರ್ಥದಲ್ಲಿ ಮಾತೇ ಆಗುತ್ತದೆ. ಭೈರಪ್ಪನವರು ಒಮ್ಮೆ ತಮ್ಮ ಸಂದರ್ಶನದಲ್ಲಿ ಹೇಳಿದಂತೆ ಸೃಷ್ಟಿಗೆ ಮೌನದ ಅಗತ್ಯವಿದೆ. ಸೃಜನಶೀಲ ಮಾತು ತಲೆಯೆತ್ತಬೇಕಾದರೆ ಮೌನದ ಅಗತ್ಯವಿದೆ. ಮೌನದಲ್ಲಿ ನಮ್ಮ ಶಕ್ತಿ ಸಂಚಯವಾಗುತ್ತಾ ಹೋಗುತ್ತದೆ. ಈ ಸಂಚಯಿತ ಪ್ರಚ್ಛನ್ನಶಕ್ತಿಯೇ ಮಾತಿನ ಚಲನಶಕ್ತಿಗೆ ದ್ರವ್ಯವನ್ನು ಒದಗಿಸುತ್ತದೆ. ಹಾಗಾಗಿ ಮಾತು ಮತ್ತು ಮೌನಗಳು ಒಂದೇ ನಾಣ್ಯದ ಎರಡು ಮುಖಗಳು. ಮಾತು ಎಂಬುದು ಪ್ರಕಟಿತ ಮೌನವಾದರೆ: ಮೌನವೆಂಬುದು ಅದುಮಿಟ್ಟ ಮಾತಾಗಿದೆ.
ಕವಿ ಚನ್ನವೀರ ಕಣವಿಯವರ ಕವಿತೆಯ ಸಾಲೊಂದನ್ನು ಇಲ್ಲಿ ಉಲ್ಲೇಖಿಸಲು ಇಚ್ಛಿಸುತ್ತೇನೆ, ಈ ಕವಿತೆಯ ಶೀರ್ಷಿಕೆ ಮಾತು
ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತದ ಹೂವು ಸುರಿಸುವಂತೆ
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಸೃಷ್ಠಿ ಸಂಪೂರ್ಣತೆಯ ಬಿಂಬಿಪಂತೆ
ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ,
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ.
ಎಷ್ಟೋಂದು ಅಮೂಲ್ಯವಾದ ಸಾಲುಗಳು , ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಬಹು ಯೋಗ್ಯವಾದ ಬರಹಗಳು ನಾವು ಮಾತನಾಡುವಾಗ ಹಿರಿಯರ ಈ ನುಡಿಗಳನ್ನು ನೆನಪಿಸಿಕೊಳ್ಳುವುದು ಒಳ್ಳೆಯದು.
ಆದರೆ ಇಂದು ನಾವು ಬದುಕುತ್ತಿರುವ ಕಾಲ ಮಾತ್ರ ಬರಿಯ ಒಣ ಮಾತು, ಪ್ರದರ್ಶನಪ್ರೀಯತೆಗೆ ಸಾಕ್ಷಿಯಾಗಿ ನಿಂತಿದೆ. ಅಂತರ್ಜಾಲದಲ್ಲಿನ ತಾಣಗಳು ಈ ವಿದ್ಯಮಾನಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಸರ್ವಜ್ಞನು ಮತ್ತೊಂದು ತ್ರಿಪದಿಯಲ್ಲಿ ಆಡದೆ ಮಾಡುವು ರೂಢಿಯೊಳಗುತ್ತಮನು: ಆಡಿ ಮಾಡುವನು ಮಧ್ಯಮನು ಲೋಕದಲಿ: ಆಡಿಯೂ ಮಾಡದವ ಅಧಮ ಸರ್ವಜ್ಞ ಎಂದಿದ್ದಾನೆ. ಆಡಿ ಮಾಡುವವನು ಮತ್ತು ಆಡದೆಯೂ ಮಾಡದವನು ಇಬ್ಬರೂ ಸಾಧಕರಂತೂ ಹೌದು: ಆದರೆ ಅದನ್ನು ಆಡಿ ತೋರಿದ್ದಕ್ಕಾಗಿಯೇ ಒಬ್ಬನು ತನ್ನ ಸ್ಥಾನವನ್ನು ಮಧ್ಯಕ್ಕಿಳಿಸಿಕೊಂಡಿದ್ದಾನೆ. ಮತ್ತೊಬ್ಬನು ಆಡದೆ ಉತ್ತಮ ಸ್ಥಾನ್ಕಕೇರಿದ್ದಾನೆ. ಇನ್ನು ಆಡುವವರಲ್ಲೂ ಇಲ್ಲಿ ಎರಡು ವರ್ಗಗಳನ್ನು ಸರ್ವಜ್ಞ ಗುರುತಿಸಿದ್ದಾನೆ. ಆಡಿ ಮಾಡುವವನು: ಆಡಿಯೂ ಮಾಡದವನು, ಆಡಿ ತೋರಿದ ಒಂದೇ ಕಾರಣಕ್ಕಾಗಿ ಮುಂದೆ ಮಾಡಿ ತೋರಲಾಗದವನು ಅಧಮ ಎನಿಸಿಕೊಂಡಿದ್ದಾನೆ. ಒಂದು ವೇಳೆ ಅವನು ಆಡದೆ ಇದ್ದು ಆಗ ಮಾಡಿ ತೋರಲಾಗದಿದ್ದರೆ ಅದು ಅವನ ದೋಷವೇ ಅಲ್ಲ! ಹೇಗಿದೆ ಮಾತಿನ ಮರ್ಮ? ಅದಕ್ಕೆ ಸಂಸ್ಕೃತದಲ್ಲಿ ಮನಸಾ ಚಿಂತಿತಂ ಕಾರ್ಯಂ: ವಾಚ್ಯಂ ನೈವ ಪ್ರಕಾಶಯೇತ್ ಎನ್ನಲಾಗಿದೆ. ನಾಲಿಗೆ ಕುಲವನ್ನು ಹೇಳಿತು ಎಂಬುದು ನಮ್ಮ ಜನಪದರ ಮಾತು ನೂರಕ್ಕೆ ನೂರರಷ್ಟು ನಿಜ.
ನಮ್ಮ ಮಾತು ನಮ್ಮ ಮಟ್ಟವನ್ನು ತೋರುತ್ತದೆ. ಇದರರ್ಥ ಹೆಚ್ಚು ಮಾತನಾಡಿದರೆ ಹೆಚ್ಚಿನ ಮಟ್ಟವೆಂದಲ್ಲ. ಹೆಚ್ಚು ಹೆಚ್ಚು ಮಾತಾಡಿದಷ್ಟೂ ನಿಮ್ಮ ಮಟ್ಟ ಹೆಚ್ಚು ಸ್ಪಷ್ಟವಾಗಿ ಜನರಿಗೆ ತಿಳಿಯುತ್ತದೆ ಅಂತ. ಮಾತು ಒಂದು ಆಯುಧವಾಗಿದೆ. ಅzನ್ನು ಒಂದು ಚಾಕು ಎಂದು ಭಾವಿಸಿದರೆ ಚಾಕುವನ್ನು ತರಕಾರಿ ಹೆಚ್ಚಲು ಮತ್ತು ಕತ್ತು ಕುಯ್ಯಲು ಎರಡಕ್ಕೂ ಬಳಸಬಹುದಾಗಿದೆ. ಆಯುಧ ಹಿಡಿದವನಿಗೆ ಅದರ ಬಳಕ ತಿಳಿದಿರಬೇಕು. ಅಶ್ವಾರೋಹಿಯಾದವನಿಗೆ ಹಾದಿಯ ಅರಿವಿರಬೇಕು. ಇಲ್ಲಿ ಒಂದು ದೃಷ್ಟಾಂತ ನೆನಪಿಗೆ ಬರುತ್ತಿದೆ.
ಒಂದೂರಲ್ಲಿ ಒಬ್ಬ ಅರಸ ಇದ್ದ. ಅವನಿಗೆ ಸದಾ ಭವಿಷ್ಯದ ಬಗ್ಗೆ ಕುತೂಹಲ. ಬೇರೆ ಬೇರೆ ಜ್ಯೋತಿಷಿಗಳನ್ನು ಕರೆಯಿಸಿಕೊಂಡು ಅವರಲ್ಲಿ ತನ್ನ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವದರಲ್ಲಿ ಎಲ್ಲಿಲ್ಲದ ಆಸಕ್ತಿ. ಅವನ ಹತ್ತಿರ ಒಬ್ಬ ಯುವ ಜ್ಯೋತಿಷಿ ಬಂದ. ರಾಜ ತನ್ನ ಕೈ ಮುಂದೊಡ್ಡಿ ಹಸ್ತ ಭವಿಷ್ಯ ಹೇಳಲು ಕೇಳಿದ. ಆಗ ಯುವ ಜ್ಯೋತಿಷಿ ರಾಜನ ಹಸ್ತರೇಖೆಗಳನ್ನು ಓದಿ ಮಹಾರಾಜಾ, ನಿಮ್ಮದು ಅದ್ಭುತವಾದ ಭವಿಷ್ಯ, ನಿಮ್ಮ ಕಾಲದಲ್ಲಿ ರಾಜ್ಯವು ಸುಭಿಕ್ಷ ಪರ್ವವನ್ನು ಕಾಣಲಿದೆ, ಆದರೆ ಎಂದು ಸ್ವಲ್ಪ ಹೊತ್ತು ನಿಂತ. ಅದಕ್ಕೆ ರಾಜ ಏಕೆಂದು ಕೇಳಿದಾಗ ಆ ಜ್ಯೋತಿಷಿ ಆದರೆ ನಿಮ್ಮದು ಅಲ್ಪಾಯುಷ್ಯ ಎಂದ ಇದನ್ನು ಕೇಳಿ ಕುಪಿತನಾದ ರಾಜ ಅವನನ್ನು ಬಂಧಿಸಿ ಸೆರೆಮನೆಯಲ್ಲಿಡುವಂತೆ ಆಜ್ಞಾಪಿಸಿದ.
ನಂತರ ಕೆಲದಿನಗಳ ನಂತರ ಮತ್ತೊಬ್ಬ ಅನುಭವಿ ಜ್ಯೋತಿಷಿಯು ಬಂದ , ಎವನು ರಆಜನ ಕೈಯನ್ನು ನೋಡಿ ಮಹಾರಾಜಾ , ನಿಮ್ಮದು ಅದ್ಭುತವಾದ ಭವಿಷ್ಯ, ನಿಮ್ಮ ಕಾಲದಲ್ಲಿ ರಾಜ್ಯವು ಸುಭಿಕ್ಷಪರ್ವವನ್ನು ಕಾಣಲಿದೆ. ಆದರೆ ಎಂದು ನಿಲ್ಲಿಸಿದ . ಅದಕ್ಕೆ ರಾಜ ಏಕೆಂದು
ಕೇಳಿದಾಗ ಆ ಅನುಭವಿ ಜ್ಯೋತಿಷಿಯು ಆದರೆ ನಿಮ್ಮ ಪ್ರಜೆಗಳು ದುರದೃಷ್ಟಶಾಲಿಗಳು ಎಂದ. ಪುನಃ ರಾಜ ಏಕೆಂದು ಕೇಳಿದಾಗ ನಿಮ್ಮಂಥ ಜನಾನುರಾಗಿ ರಾಜರ ಕೈಯಲ್ಲಿ ಬಹುದಿನಗಳ ಕಾಲ ಆಳಿಸಿಕೊಳ್ಳುವ ಭಾಗ್ಯವನ್ನು ಅವರು ಪಡೆದುಕೊಂಡು ಬಂದಿಲ್ಲ ಎಂದ. ಆಹಾ! ಎಂಥ ಮಾತು! ತನ್ನಿಂದ ಆಳಿಸಿಕೊಳ್ಳುವ ಭಾಗ್ಯವನ್ನು ಈ ಜನ ಪಡೆದುಕೊಂಡು ಬಂದಿಲ್ಲವೆಂದರೆ ನಾನೆಷ್ಟು ದೊಡ್ಡವನು, ನನ್ನದೆಂಥ ಹಿರಿಮೆ ಎಂದುಕೊಂಡು ರಾಜ ಆ ಜ್ಯೋತಿಷಿಗೆ ಮುತ್ತಿನ ಹಾರದ ಭಕ್ಷೀಸನ್ನು ಕೊಟ್ಟು ಕಳಿಸಿದ.
ಇಲ್ಲಿ ಇಬ್ಬರೂ ಹೇಳಿದ್ದು ಒಂದೇ ಮಾತನ್ನೆ ಆದರೆ ವಿಧಾನ ಬೇರೆ ಬೇರೆ. ಈ ಸಂದರ್ಭಕ್ಕೆ ತಕ್ಕಂತೆ ಮತ್ತೊಂದು ದೃಷ್ಟಾಂತವನ್ನು ಇಲ್ಲಿ ಹೇಳಲೇಬೇಕು, ಸಮಾಜ ಸೇವಕನ ಸನ್ಮಾನ ಸಮಾರಂಭವೊಂದರಲ್ಲಿ ಅವರ ಕುರಿತಾಗಿ ನಾಲ್ಕು ಮಾತುಗಳನ್ನಾಡುವಂತೆ ಒಬ್ಬ ವ್ಯಕ್ತಿಗೆ ಸೂಚಿಸುತ್ತಾರಂತೆ. ಆಗ ಅವರು ವೇದಿಕೆ ಬಂದು ಅಲ್ಲಿ ನೆರೆದಿದ್ದವರಿಗೆಲ್ಲ ವಂದನೆಗಳನ್ನು ತಿಳಿಸುತ್ತಾ , ಇವರು ಒಬ್ಬ ಉತ್ತಮ ಸಮಾಜ ಸೇವಕರು. ಸಮಾಜ ಸೇವೆಗಾಗಿ ತಮ್ಮ ತನು, ಮನ, ಧನವನ್ನು ಅರ್ಪಿಸಿ ಸೇವೆಗೈದಿದ್ದಾರೆ. ಆದರೆ ಇವರು ತಮ್ಮ ಸೇವೆಯನ್ನು ಇಂದಿನವರೆಗೂ ಎಲ್ಲಿಯೂ ಪ್ರಸ್ತಾಪಿಸಿಕೊಂಡಿಲ್ಲ. ಬೂದಿ ಮುಚ್ಚಿದ ಕೆಂಡದಂತಿದ್ದು ತಮ್ಮ ನಿಸ್ವಾರ್ಥ ಸೇವೆಯನ್ನು ನಮ್ಮ ನಿಮ್ಮೆಲ್ಲರಿಗಾಗಿ ಸಲ್ಲಿಸುತ್ತಿದ್ದಾರೆ. ಅಂತ ಹೇಳಿ ಅಲ್ಲಿದ್ದವರ ಎದುರಲ್ಲಿ ನಗೆಪಾಟಲಿಗೀಡಾಗಿದ್ದಷ್ಟೇ ಅಲ್ಲದೇ, ಸಮಾಜ ಸೇವಕನ ಕೆಂಗಣ್ಣಿಗೂ ಗುರಿಯಾಗಬೇಕಾಯಿತು. ಇಲ್ಲಿ ಆ ವ್ಯಕ್ತಿ ಬಳಸಬೇಕಿರುವುದು ಎಲೆ ಮರೆಯ ಕಾಯಿಯಂತೆ ಎಂಬ ಒಳ್ಳೆಯ ದೃಷ್ಟಾಂತವನ್ನೇ , ಆದರೆ ಬಾಯಿ ತಪ್ಪಿ ಬಂದ ಮಾತು ಸಮಾರಂಭದ ದಿಕ್ಕನ್ನೆ ಬದಲಾಯಿಸಿತು. ಮಾತು ಒಂದು ಆಯುಧ ಹೇಗೋ ಹಾಗೆ ಒಂದು ಕಲೆ ಕೂಡ. ಅದನ್ನು ಕಲಾತ್ಮಕವಾಗಿ ಸದುದ್ದೇಶಕ್ಕಾಗಿ ಬಳಸುವ ಕಲೆ ಕೂಡ ಗೊತ್ತಿರಬೇಕು ಎಂಬುದನ್ನಿದು ಧ್ವನಿಸುತ್ತದೆ.
ಮಾತಿನ ಮಹತ್ವ
ನಮ್ಮ ಜೀವನದಲ್ಲಿ ಮಾತು ಎನ್ನುವ ಎರಡು ಅಕ್ಷರದ ಶಬ್ದಕ್ಕೆ ಮಹತ್ವದ ಪಾತ್ರವಿದೆ. ನಾವು ಆಡುವ ಮಾತು, ಮುತ್ತಿನಂತಿರಬೇಕು. ನಮ್ಮ ಮಾತು,ಗಳಲ್ಲಿ ನಯ-ವಿನಯವಿದ್ದರೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಸಿಕ್ಕುವ ಪ್ರಯಾಣಿಕರೂ ಕೂಡ ,,,, ಒಳ್ಳೆಯ ಸ್ನೇಹಿತರಾಗಬಲ್ಲರು. ಆದರೆ ಪರಿಸ್ಥಿತಿಯ ಪರಾಮರ್ಶೆಯಿಲ್ಲದೆ,,, ಏನಾದರೂ ಮಾತನಾಡಿದರೆ,, ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು. ಅದಕ್ಕೆ ಅಲ್ಲವೇ ಹಿರಿಯರು ಕೆಲವು ಮಾತುಗಳನ್ನು ಹೇಳಿರುವುದು. ಮಾತು ಆಡಿದರೆ ಹೋಯ್ತು-ಮುತ್ತು ಒಡೆದರೆ ಹೋಯ್ತು, ಮಾತು ಮಾತು ಪ್ರಸಂಗೇಣ ಗೇಣಿ ಅಕ್ಕಿ ವಿನಶ್ಯತಿ.
ಮಾತು ಸ್ನೇಹದ ದಾರವನ್ನೂ ಹೊಸೆಯಬಲ್ಲುದು, ದ್ವೇಷದ ದ್ವಾರವನ್ನೂ ತೆರೆಯಬಲ್ಲುದು. ಸಮರ ಸಾರುವುದಾಗಲೀ, ಶಾಂತಿ ಸಂಧಾನವಾಗಲೀ ಎರಡನ್ನೂ ಸಾಧಿಸುವುದು ಮಾತಿನ ಸಾಮರ್ಥ್ಯ. ಒಳ್ಳೆಯ ಮಾತು ಪರನಿಂದನೆಯನ್ನು ತಪ್ಪಿಸುತ್ತದೆ., ಹಾಗೆಯೇ ಪರನಿಂದನೆಯು ಎಂದೂ ಒಳ್ಳೆಯ ಮಾತಾಗುವದಿಲ್ಲ. ! ಪ್ರಖ್ಯಾತ vತ್ವಜ್ಞಾನಿಯಾದ ಸಾಕ್ರೆಟಿಸನು ಉಪಯುಕ್ತವೂ, ಉತ್ತಮವೂ ಆದ ಮಾತುಗಳನ್ನು ಬಹುವಾಗಿ ಪ್ರಶಂಸಿಸಿ ಪ್ರೋತ್ಸಾಹಿಸಿದ್ದಾನೆ. ಆತನ ಜೀವನದಲ್ಲೇ ನಡೆದ ಈ ಕೆಳಗಿನ ಘಟನೆಯು ಅದನ್ನು ನಿರೂಪಿಸುತ್ತದೆ.
ಅಪರಿಚಿತ ವ್ಯಕ್ತಿಯೊಬ್ಬ ಒಮ್ಮೆ ಸಾಕ್ರೆಟಿಸನ ಭೇಟಿಯಾಗಿ ಅತ್ಯುತ್ಸಾಹದಿಂದ ಕೇಳುತ್ತಾನೆ. ನಿಮ್ಮ ಶಿಷ್ಯಂದಿರಲ್ಲೊಬ್ಬನ ಬಗ್ಗೆ ನಾನೇನನ್ನು ಕೇಳ್ಪಟ್ಟೆನೆಂದು ನಿಮಗೆ ತಿಳಿದಿದೆಯಾ? ಅದಕ್ಕೆ ಸಾಕ್ರೆಟಿಸನು ಸ್ವಲ್ಪ ಸಾವಧಾನವಿರಲಿ, ನೀನು ಕೇಳಲ್ಪಟ್ಟ ವಿಷಯವನ್ನು ನಾನು ಕೇಳುವ ಮೊದಲು ನಿನಗೆ ಮೂರು ಹಂತಗಳ ಒಂದು ಸಣ್ಣ ಪರೀಕ್ಷೆಯನ್ನು ಮಾಡುತ್ತೇನೆ, ನನ್ನ ಶಿಷ್ಯನ ಬಗ್ಗೆ ನೀನಾಡಬಯಸಿರುವ ಮಾತುಗಳು ನನ್ನ ಪರೀಕ್ಷೆಯ ಶೋಧಕಗಳನ್ನು ಹಾದು ಬರಲಿ. ಸತ್ಯವು ಮೊದಲ ಶೋಧಕ. ನೀನಿಗ ನನಗೆ ಹೇಳಹೊರಟಿರುವುದು ಸರ್ವಥಾ ಸತ್ಯವೇ ಎಂಬುದನ್ನು ಖಚಿತಪಡಿಸಿಕೊಂಡಿದ್ದೀಯಾ? ಎನ್ನುತ್ತಾನೆ. ಆತನು ಇಲ್ಲ,,, ಅದರ ಬಗ್ಗೆ ಕೇಳಿದ್ದೇನೆ ಅಷ್ಟೇ ಎಂದನು. ಅದಕ್ಕೆ ಸಾಕ್ರೆಟಿಸನು ಹಾಗಾದರೆ ನಿನಗೆ ಈ ವಿಷಯದ ಸತ್ಯಾಸತ್ಯತೆಯ ಅರಿವಿಲ್ಲವೆಂದಾಯಿತು., ಇರಲಿ.. ನೀನು ನನ್ನ ಶಿಷ್ಯನ ಬಗೆಗೆ ಒಳ್ಳೆಯದನ್ನೇನಾದರೂ ಹೇಳಬೇಕೆಂದಿರುವೆಯಾ? ಏಕೆಂದರೆ ನನ್ನ ಎರಡನೇ ಹಂತದ ಪರೀಕ್ಷೆಯ ಶೋಧಕವು ಒಳ್ಳೆತನವಾಗಿರುತ್ತದೆ. ಎಂದನು. ಅದಕ್ಕೆ ಆ ವ್ಯಕ್ತಿಯು ಇಲ್ಲ.. ಒಳ್ಳೆಯ ವಿಷಯವಂತೂ ಅಲ್ಲ ಎಂದು ಉಸುರಿದನು. ಅದಕ್ಕೆ ಆ ಮಹಾ ತತ್ವಜ್ಞಾನಿಯು ಹೇಳುತ್ತಿರುವ ಮಾತು ಸತ್ಯವೋ, ಅಲ್ಲವೋ ಎಂಬುದು ನಿನಗೆ ತಿಳಿಯದಿದ್ದರೂ ನನ್ನ ಶಿಷ್ಯನ ಬಗ್ಗೆ ಕೆಟ್ಟ ವಿಷಯವೊಂದನ್ನು ಹೇಳ ಹೊರಟಿರುವೆಯೆಂದಾಯಿತು ಎಂದನು. ಆಗ ಆ ವ್ಯಕ್ತಿಯ ಮುಖದಲ್ಲಿ ಸಂಕೋಚವು ಕಾಣಲಾರಂಭಿಸಿತು. ಮಾತು ಮುಂದುವರೆಸಿದ ಸಾಕ್ರೆಟಿಸನು ಇಷ್ಟಾದರೂ ನೀನು ನನ್ನ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂದರೆ ಮೂರನೇ ಹಂತದ ಉಪಯುಕ್ತತೆ ಎಂಬ ಶೋಧಕದಲ್ಲಿ ಯಶಸ್ವಿಯಾಗಿ ಹಾಯಬೇಕಾಗುತ್ತದೆ. ನೀನು ನನ್ನ ಶಿಷ್ಯನ ಬಗ್ಗೆ ನನ್ನಲ್ಲಿ ಹೇಳುವ ವಿಷಯದಿಂದ ನನಗೇನಾದರೂ ಉಪಯೋಗವಾಗುವ ಸಾಧ್ಯತೆಯಿದೆಯಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದನು. ಅದಕ್ಕೆ ಇಲ್ಲ, ..ಅಂತಹ ಪ್ರಯೋಜನಕಾರಯೇನಲ್ಲ ಎಂದು ಆ ಅಪರಿಚಿತ ವ್ಯಕ್ತಿಯು ಹೇಳಿದನು. ಆಗ ಸಾಕ್ರೆಟಿಸನು ನೀನು ನನಗೆ ಹೇಳಬಯಸುತ್ತಿರುವುದು ಸತ್ಯವೂ ಅಲ್ಲದ, ಒಳ್ಳೆಯದೂ ಅಲ್ಲದ, ಉಪಯುಕ್ತವೂ ಅಲ್ಲದ ವಿಷಯವೆಂದ ಮೇಲೆ ಅದನ್ನು ನನ್ನಲ್ಲಿ ಹೇಳುವುದರ ಔಚಿತ್ಯವಾದರೂ ಏನು ಎಂದು ಕೇಳುತ್ತಾ ಮಾತು ಮುಗಿಸುತ್ತಾನೆ. ಹೀಗೆ ಯಾರೊಬ್ಬರೂ ನಿರುಪಯುಕ್ತವೂ, ಅಯೋಗ್ಯವೂ ಆದ ಪರನಿಂದನೆಯನ್ನು ಮಾಡಬಾರದೆಂಬ ನೀತಿಯನ್ನು ಸಾಕ್ರೆಟಿಸನು ಆ ವ್ಯಕ್ತಿಗೆ ತಿಳಿಹೇಳಿದನು..
ಯಾರೋಬ್ಬರ ಬಗ್ಗೆಯೂ ಸಂಪೂರ್ಣವಾಗಿ ತಿಳಿದುಕೊಳ್ಳದೆ ಇನ್ನೊಬ್ಬರಿಗೆ ಹೇಳುವುದು ಎಂದಿಗೂ ನೈತಿಕತೆಯಾಗದು. ನಮ್ಮ ಧರ್ಮ ಗ್ರಂಥಗಳಿಂದಲೂ , ನೀತಿ ಭೋದಕರಿಂದಲೂ ಇಂತಹ ಚಾಡಿ ಮಾತುಗಳಿಗೆ ವಿರೋಧವಿದೆ. ನಾವು ನುಡಿಯುವ ಪ್ರತೀ ಮಾತೂ ಸತ್ಯವೇ ಆಗಿರಬೇಕೆಂದು ವೇದ ಶಾಸ್ತ್ರಗಳು ಪ್ರತಿಪಾದಿಸುತ್ತವೆ. ಸತ್ಯವನ್ನು ಮರೆಮಾಚುವುದೂ ಸಹ ಅಸತ್ಯವನ್ನಾಡುವುದಕ್ಕೆ ಸಮವೆಂದು ಅವು ಸಿದ್ದಪಡಿಸುತ್ತವೆ. ಹಾಗಾಗಿಯೇ ಮೌನವು ಸದಾಕಾಲ ಸುವರ್ಣವಲ್ಲ! ನಾವು ತಪ್ಪುಗಳ ವಿರುದ್ಧ ಧ್ವನಿಯೆತ್ತಬೇಕು. ಅನ್ಯಾಯ, ಅಧರ್ಮ, ಅಪರಾಧಗಳಾದಾಗಲೂ ಮೌನವಾಗಿರುವುದು ಅಂತಹ ಹೇಯ ಕೃತ್ಯಗಳನ್ನೆಸಗಿದವರಷ್ಟೇ ನಮ್ಮನ್ನೂ ದೋಷಿಗಳನ್ನಾಗಿಸುತ್ತದೆ.
ಮಾತು ಎಂಬ ಈ ಎರಡಕ್ಷರದ ಪದ ಜಗತ್ತಿನಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ವ್ಯಕ್ತಿ-ವ್ಯಕ್ತಿಗಳ ನಡುವಿನ ವ್ಯವಹಾರದ ಮಾಧ್ಯಮವಾಗಿದೆ. ಸಿಹಿ-ಕಹಿಗಳ ಹಂಚಿಕೆಯ ಸೇತುವೆಯಾಗಿದೆ. ಒಂದು ಕಡೆ ಮಾತಿನಿಂದ ಸುಖ,ಶಾಂತಿ, ನೆಮ್ಮದಿ ದೊರಕಿದರೆ ಮತ್ತೊಂದೆಡೆ ಇದೇ ಮಾತು ಬಡತನ, ಅಶಾಂತಿ, ಯುದ್ಧ, ದ್ವೇಷದ ಕಿಡಿ ಉದ್ಭವಿಸುತ್ತದೆ. ಮಾತು ಮಾಣಿಕ್ಯಕ್ಕಿಂತಲೂ ಅಮೂಲ್ಯವಾದುದು, ಮಾತಿನ ಏಟು ಬಾಣದ ಏಟಿಗಿಂತಲೂ ತೀಕ್ಷ್ಣವಾದುದು. ಅದಕ್ಕೆ ಅಸಂಬದ್ಧ, ಅಯೋಗ್ಯ, ನಿರಾಧಾರದ ಮಾತುಗಳ ಬದಲು ನಮ್ಮಲ್ಲಿ ಹಿತ-ಮಿತದ ಮುತ್ತಂತ ಮಾತುಗಳು ಹರಿದು ಬರಲಿ.

ಶ್ರೀಮತಿ. ಸುನಂದಾ ಸಿ ಭರಮನಾಯ್ಕರ (ಡಿ.ಇ.ಒ)
ರಾಮದುರ್ಗ, ಜಿಲ್ಲೆ: ಬೆಳಗಾವಿ,

Columns ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...