Oyorooms IN

Sunday, 20th August, 2017 10:40 PM

BREAKING NEWS

ಹಬ್ಬದ ಆಚರಣೆ ಹಾಗೂ ಹಿನ್ನೆಲೆ

ಸಂಭ್ರಮದ ಮೊಹರಂ ಹಬ್ಬ ಆಚರಣೆ

%e0%b2%ae%e0%b3%8a%e0%b2%b9%e0%b2%bb%e0%b2%b0%e0%b3%8a

ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರಸಿದ್ಧ ಮೊಹರಂ ಹಬ್ಬ. ಮಹಮ್ಮದೀಯರ ವರ್ಷದ ಮೊದಲ ತಿಂಗಳು ಮೊಹರಂ. ಈ ಮಾಸದ ಮೊದಲ ೧೦ ದಿನಗಳನ್ನು ಮೊಹರಂ ಎಂದು ಕರೆಯುತ್ತಾರೆ. ಪ್ರವಾದಿ ಮಹ್ಮಮದರ ಮರಿಮೊಮ್ಮಗ ಹಜರತ್ ಇಮಾಂ ಹುಸೇನ್ ಅವರ ವೀರ ಮರಣದ ಅಂಗವಾಗಿ ನಡೆಯುವ ಆಚರಣೆಯೇ ಮೊಹರಂ ಆಚರಣೆ. ಧರ್ಮ ಯುದ್ಧ ಆರಂಭವಾದ ಮೊದಲ ದಿನವನ್ನು ಮೊಹರಂ ಮೊದಲ ದಿನವೆಂದು ಕರೆಯಲಾಗುತ್ತದೆ. ಈ ಹಬ್ಬವನ್ನು ದೇಶಾದ್ಯಂತ ಮುಸ್ಲಿಂ ಜನಾಂಗ ವಿಭಿನ್ನವಾಗಿ ಆಚರಿಸುತ್ತಾರೆ.
ಪ್ರತಿಯೊಂದು ಹಬ್ಬಗಳಿಗೂ ಅದರದ್ದೇ ಆದ ಇತಿಹಾಸ, ಪುರಾಣ ಕಥೆಗಳಿರುತ್ತದೆ. ಅಂತೆಯೇ ಈ ಮೊಹರಂ ಹಬ್ಬಕ್ಕೂ ಒಂದು ವಿಶೇಷ ಕಥೆಯ ಹಿನ್ನಲೆಯಿದೆ. ಅದೇನೆಂದರೆ….
ಸುಮಾರು ಸಾವಿರದ ಮುನ್ನೂರು ವರುಷಗಳ ಹಿಂದೆ ಹಜರತ್ ಇಮಾಮ ಹುಸೇನರು, ಸತ್ಯಕ್ಕಾಗಿ ಧರ್ಮರಕ್ಷಣೆಗಾಗಿ ಅರಬಸ್ತಾನದ ಕರ್ಬಲಾ ಮರುಭೂಮಿಯಲ್ಲಿ ಪ್ರಾಣಕೊಟ್ಟ ಕಥೆಯಿದೆ. ಹಜರತ್ ಇ | ಹುಸೇನರು ಹಜರತ್ ಪೈಗಂಬರರ ಮೊಮ್ಮಕ್ಕಳು, ಅರ್ಥಾತ್ ಅವರ ಮಗಳಾದ ಬೀಬಿ ಫಾತಿಮಾರವರ ಪುತ್ರರು. ಇವರು ಕ್ರಿ.ಶ. ೬೨೬ರಲ್ಲಿ ಜನಿಸಿ ಕ್ರಿ.ಶ. ೬೮೩ರಲ್ಲಿ ಹುತಾತ್ಮರಾದರು. ಇವರು ಬಾಲ್ಯದ ಏಳು ವರ್ಷಗಳನ್ನು, ತಾತ ಪೈಂಗಂಬರರ ಸನಿಹದಲ್ಲೂ ನಂತರದ ಮೂವತ್ತು ವರ್ಷಗಳನ್ನು ತಂದೆ ಹಜರತ್ ಅಲಿಯವರ ಬಳಿಯಲ್ಲೂ, ತರುವಾಯ ಬನಿಹಾಷೀಮರ ನಾಯಕರಾಗಿಯೂ ಕಳೆದರು.
ಮೊಹರಂ ಹಿನ್ನೆಲೆ
ಅರಬ್ ರಾಜ್ಯವನ್ನು ಆಳುತ್ತಿದ್ದ ಯಜೀದ್ ಆಡಳಿತದಿಂದ ಬೇಸತ್ತ ಕುಫಾದ ಜನ ಯಜೀದ್ನನ್ನು ಪದಚ್ಯುತಿಗೊಳಿಸಬೇಕು ಎಂದು ಪ್ರವಾದಿ ಮಹ್ಮಮದರ ಮರಿಮೊಮ್ಮಗ ಹಜರತ್ ಇಮಾಂ ಹುಸೇನ್ ರವನ್ನು ಕೇಳಿಕೊಂಡರು. ಈಗಿನ ಇರಾಕಿನಲ್ಲಿರುವ ಕರ್ಬಲಾ ಬಳಿ ನಡೆದ ಯುದ್ಧದಲ್ಲಿ ಯಜೀದಿನ ಸೈನಿಕರಿಂದ ಇವರೆಲ್ಲರೂ ಹತರಾದರು. ಹುಸೇನ್ ಮಡಿದದ್ದು ಮೊಹರಂನ ಹತ್ತನೇಯ ದಿವಸ. ಹೀಗಾಗಿ ಈ ದಿನವನ್ನು “ದುಃಖದಾಯಕ ಪವಿತ್ರ ದಿನ” ಎಂಬುದರ ಸಂಕೇತವಾಗಿ ಮೊಹರಂ ಅನ್ನು ಆಚರಿಸಲಾಗುತ್ತದೆ.

%e0%b2%ae%e0%b3%8a%e0%b2%b9%e0%b2%bb%e0%b2%b0%e0%b3%8a-1

ಭಾರತ ದೇಶದಲ್ಲಿ ಮೊಹರಂ ಹಬ್ಬ
ಮಸಾಲೆ ವ್ಯಾಪಾರಕ್ಕೆಂದು ಬಂದ ಅರಬ್ಬ ನಿವಾಸಿಗಳು ಭಾರತದ ಮಲಬಾರಿ ಪ್ರದೇಶಗಳಲ್ಲಿ ನೆಲೆ ನಿಂತು ರಾಜ್ಯಭಾರ ಮಾಡಿದರು. ಮಾನವೀಯ ಮೌಲ್ಯ ಸಾರ್ವಕಾಲಿಕ ಸತ್ಯದ ಹೋರಾಟದಿಂದ ಕೂಡಿದ ಕರ್ಬಲಾ ಕಾಳಗದ ಕಥೆಯನ್ನು ಮುಸಲ್ಮಾನರು ಮೊಹರಂ ತಿಂಗಳಿನಲ್ಲಿ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ಉಪವಾಸ, ಕುರಾನ್ ಪಠಣ ದಾನ ಧರ್ಮ ಮಾಡುತ್ತಿದ್ದರು. ಇಂಥ ಆಚರಣೆ ತೈಮುರಲೇನ (ಕ್ರಿ.ಶ. ೧೩೬೯) ನ ಕಾಲದಲ್ಲಿ ಭಾರತದಲ್ಲಿ ಆಚರಿಸಲ್ಪಟ್ಟಿತು. ಸಾಮ್ರಾಟ ಅಕ್ಬರ (ಕ್ರಿ.ಶ. ೧೫೫೬-೧೬೦೫) ದೀನ್ -ಎ ಇಲಾಹಿ ಸ್ಥಾಪಿಸಿದ ನಂತರ ಮೊಹರಂ ಹಬ್ಬವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಜಾನಪದರು ಆಚರಿಸಲು ಆರಂಭಿಸಿದರು ಎಂಬ ಇತಿಹಾಸವಿದೆ.
ಜಾನಪದದಂತೆ ಮೊಹರಂ ಹೇಗೆ ಆಚರಣೆ?
ಮುಸ್ಲಿಂ ಬಾಂಧವರೊಡಗೂಡಿ ಗುದ್ದಲಿ ಹಾಕುವುದು ಸಡಗರದ ವಿಷಯ. ಚಂದ್ರ ಕಾಣದಿದ್ದರೆ ಹಬ್ಬದ ಆರಂಭದ ದಿನ ಚಂದ್ರ ಕಾಣುವವರೆಗೂ ಮುಂದುವರೆಯುತ್ತದೆ. ಗುದ್ದಲಿ ಹಾಕುವ ಸಂಪ್ರದಾಯ ಕರ್ಬಲಾದಲ್ಲಿ ಧರ್ಮಯುದ್ಧಕ್ಕೆ ಆಹ್ವಾನವಿತ್ತುದರ ಸಂಕೇತವಾಗಿದೆ. ನಂತರದಲ್ಲಿ ಕ್ರಮವಾಗಿ ಮೂರು ಮತ್ತು ಐದು ದಿನಗಳ ಏಳು ದಿನಗಳಲ್ಲಿ ಫಕೀರರಾಗುತ್ತಾರೆ. ಮುಸ್ಲಿಂರೊಂದಿಗೆ ಹಿಂದೂಗಳೂ ಫಕೀರರಾಗುತ್ತಾರೆ. ಕೆಲವೆಡೆ ಮಾತ್ರ ಮೇಲು ಜಾತಿಯ ಹಿಂದೂಗಳು ಫಕೀರರಾಗುತ್ತಾರೆ. ಖತಲ್ ರಾತ್ರಿಯ ದಿನ ಬಹಳಷ್ಟು ಜನರು ಫಕೀರರಾಗಲು ಇಷ್ಟಪಡುತ್ತಾರೆ. ಹೊಸ ಮಣ್ಣಿನ ಕೊಡಗಳಲ್ಲಿ ಬೆಲ್ಲದ ಪಾನಕ ಹೊತ್ತು ಹಲಗೆಗಳ ಸದ್ದಿನೊಂದಿಗೆ ಕೈಯಲ್ಲಿ ಹಸಿರು ಝಂಡಾಗಳನ್ನು ಹಿಡಿದು ಗುಂಪು ಗುಂಪಾಗಿ ಮಸೀದಿ ಗುಡಿಯ ಮುಂದಿನ ಅಲಾಯಿ ಕುಣಿ ಮತ್ತು ಮಸೀದಿಯನ್ನು ಸುತ್ತುವರೆಯುತ್ತಾ ‘ಸಾಹುಸೇನ ಧೂಲ್ಲೇವ್’ಎಂದು ಕೂಗುತ್ತಾರೆ. ಈ ತೆರನಾದ ಆಚರಣೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿರುತ್ತದೆ. ಬೆಲ್ಲದ ಪಾನಕ ಅಥವಾ ಶರಬತ್ ಕೊಡುವ ಉದ್ದೇಶ ಯುಜೀದ್ನ ಕಡೆಯವರು ಮುತ್ತಿಗೆ ಹಾಕಿದಾಗ ಹುಸೇನರ ಪರಿವಾರಕ್ಕೆ ನೀರು ಸಿಕ್ಕದೆ ಪರಿತಾಪ ಪಟ್ಟಿದ್ದನ್ನು ಹಬ್ಬದಲ್ಲಿ ಸ್ಮರಿಸಿ ಅವರ ಸ್ಮರಣೆಯೊಂದಿಗೆ ಜನರಿಗೆ ಹಂಚುವುದಾಗಿದೆ. ತಕ್ಕ ಮಟ್ಟಿನ ವಿಸ್ತಾರದ ಮತ್ತು ಮನುಷ್ಯನಾಳದ ಹೊಂಡದಲ್ಲಿ, ಧಗಧಗಿಸಿವ ಬೆಂಕಿಯ ಸುತ್ತಾ ಅಲಾಯಿ ಕುಣಿತ ಶುರುವಾಗುತ್ತದೆ. ಕಿವಿಗಡಚಿಕ್ಕುವ ಹಲಗೆಗಳ ತಾಳಕ್ಕೆ ಕ್ರಮವಾಗಿ ಹೆಜ್ಜೆ ಹಾಕುತ್ತಾ ಕುಣಿಯುವವರ ಮನಸ್ಸು ಕುಂದುವುದೇ ಅಪರೂಪ. ಎದುರುಗಡೆ ಮಸೀದಿಯೊಳಗೆ ತಲೆಗೆ ಮುಂಡಾಸು ಸುತ್ತಿಕೊಂಡು ಮುಲ್ಲಾರೊಂದಿಗೆ ಏಳೆಂಟು ಜನ ದೇವರ ಪಂಜಾಗಳನ್ನು ಹೊರುವವರು ಕೂತಿರುತ್ತಾರೆ. ಹೊರಗಡೆ ಪೌಳಿಯಂತಹ ಭಾಗದಲ್ಲಿ ಕಿಕ್ಕಿರಿದು ಕೂತ ಸ್ತ್ರೀಯರು ಮತ್ತು ಭಯಭಕ್ತಿಯಿಂದ ಮಸೀದಿಯೊಳಗೆ ನಡೆಯುವ ಪ್ರತಿ ವಿವರಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಾರೆ. ಈ ಬಗೆಯಾಗಿ ವೀಕ್ಷಿಸಿವುದು ಅವರ ಭಕ್ತಿಯ ಒಂದು ಭಾಗವೂ ಹೌದು. ತಾವು ಹರಕೆ ಹೊತ್ತಂತೆ ತಮ್ಮ ಇಷ್ಟಾರ್ಥಗಳು ಈಡೇರಿದುದರ ಫಲವಾಗಿ ಮೊಹರಂ ದೇವರಿಗೆ ಮಾಡಿಸಿ ತಂದ ಬೆಳ್ಳಿಯ ತೊಟ್ಟಿಲು, ಛತ್ರಿಗಳನ್ನು ಅರ್ಪಿಸುವುದು ಈ ವೇಳೆಯಲ್ಲಿಯೆ. ಮೊಹರಂನ ಮುಖ್ಯ ದೇವರನ್ನು ಹೊರುವವರು ಹೆಚ್ಚಾಗಿ ಹಿಂದುಗಳೇ ಆಗಿರುತ್ತಾರೆ. ತಮ್ಮೆದುರುಗಡೆ ಸಾಲಾಗಿ ನಿಂತ ದೇವರುಗಳ ಸನ್ನಿಧಿಯಲ್ಲಿ ಕೂತವರು ಅದರಲ್ಲೂ ಮುಖ್ಯ ದೇವರನ್ನು ಹೊರುವವರು ಭಕ್ತಿಯ ಆವೇಶದಿಂದ ಚಡಪಡಿಸುತ್ತಿರುತ್ತಾರೆ.

%e0%b2%ae%e0%b3%8a%e0%b2%b9%e0%b2%bb%e0%b2%b0%e0%b3%8a-2

ಲೋಬಾನದ ಹೊಗೆಯಿಂಧ ಮತ್ತು ಬುಕ್ಕಿಟ್ಟಿನ ಧೂಳಿನಿಂದ ತುಂಬಿದ ಮಸೀದಿಯಲ್ಲಿ ದೇವರು ಮೇಲೇಳುವುದನ್ನು ಕಾಯುತ್ತಾ ಕೂತವರ ನಿಲುವು, ಪೌಳಿಯಂತಹ ಭಾಗದಲ್ಲಿ ಮೌನವಾಗಿ ನೆರೆದ ಭಕ್ತ ಸಮೂಹದೊಂದಿಗೆ ಎದುರುಗಡೆ ಬಿಡುವಿಲ್ಲದೆ ಮುಂದುವರಿಯುವ ಅಲಾಯಿ ಕುಣಿತ. ಇವೆಲ್ಲಾ ಈ ಜನರ ದೈನಂದಿನ ಬದುಕಿನಲ್ಲಿ ಅನುಭವಕ್ಕೆ ಬರದಿರುವಂತಹ ಅಪೂರ್ವ ಅಲೌಕಿಕ ಪರಿಸರವೊಂದನ್ನು ಅನಾವರಣಗೊಳಿಸಿ ಬಿಡುತ್ತವೆ. ಅಲ್ಲಿದ್ದವರ ಲಹರಿಯೆಲ್ಲಾ ಒಮ್ಮುಖವಾಗಿ ದೇವರೆಡೆಗೇ ತುಯ್ಯುವಂತೆ ಪ್ರೇರೇಪಿಸುತ್ತವೆ. ಮೊಹರಂನ ಈ ಕ್ರಿಯೆ ಉಂಟು ಮಾಡುವಂತಹ ಅನನ್ಯತೆಯಿಂದಾಗಿಯೇ ಈ ದೇವರು ಜನರ ಬದುಕಿನಲ್ಲಿ ಬೇರ್ಪಡಿಸಲಾಗದ ಭಾಗವಾಗಿ ಬಿಟ್ಟದ್ದಾನೆ. ಬಹುಶಃ ಇಂತಹ ಅಪೂರ್ವ ಕ್ಷಣಗಳಲ್ಲಿಯೇ ಜರುಗುವ ಅತೀ ಸಾಮಾನ್ಯ ಘಟನೆಗಲೂ ದೈವಿಕ ಅರ್ಥ ಪಡೆದುಕೊಂಡು ಪ್ರಚಲಿತಕ್ಕೆ ಬರುತ್ತವೆನಿಸುತ್ತದೆ. ಮೊಹರಂನ ಮೂಲ ಘಟನೆಗಳಿಗೆ ಸಂಬಂಧ ಪಡೆದು ಎಷ್ಟೋ ವಿವರಗಳು ಈ ಮೂಲಕ ಸೇರಿಕೊಂಡಿರಬಹುದಾಗಿದೆ. ನಿದರ್ಶನಕ್ಕೆ ಖತಲ್ ರಾತ್ರಿಯ ವೇಳೆ ಬೆಳಗಿನಜಾವ ಗುಂಗಾಡಿಯೊಂದು ದೇವರುಗಳ ಸುತ್ತ ಸುತ್ತುವರಿದ ಮೇಲೆಯೇ ದೇವರುಗಳು ಮೇಲೆದ್ದು ಊರಲ್ಲಿ ಸವಾರಿ ಹೊರಡುವೆವೆಂಬ ನಂಬಿಕೆ ಪ್ರಚಲಿತದಲ್ಲಿದೆ.
ಹಬ್ಬ ಬರುವ ಮೊದಲು ಬೇಡಿಕೊಂಡು ವರ ಪಡೆದವರು ಖತಲ್ ರಾತ್ರಿಯಂದು, ಮಡಿಯಿಂದ ಮೀಸಲು ನೀರು ತಂದು ಮಾದ್ಲಿ (ಮಲೀದಾ) ಕುದುರಿ (ಗೋಢೆ) ಬಿರಂಜಿ ಅನ್ನಾ, ಕಿಚಡಿ, ಕಂದೂರಿ ಅಡಿಗೆ ಮಾಡಿ, ತೆಂಗಿನಕಾಯಿ, ಕೊಬ್ಬರಿ ಗಿಟಗ, ಲಿಂಬೆಹಣ್ಣು, ಉತ್ತತ್ತಿ ಎಡಿಗಳನ್ನು ಲಾಡಿಯಿಂದ ಕಟ್ಟಿ ಎಣ್ಣಿಬತ್ತಿ, ಊದುಬತ್ತಿ, ಊದು ಗಂಧ ಶರಬತ್ತಿನ ಎಡೆ ತಯಾರಿಸಿ ಎಡೆಕೊಡಲು ಸಿದ್ಧವಾಗುವರು. ಕೆಂವಸಲ್ ಭೌಂವಸಲ್ ಧೂಲಾ, ದೋಸ್ತರ, ನುಡಿಯುತ್ತಾ ಅಲಾವಿಗೆ ಕಟ್ಟಡದ ಗುಮಜಿನ ಸುತ್ತ ಐದು ಸಾರೆ ಸುತ್ತುವರು. ಹರಕೆ ಹೊತ್ತುವರು ನಮಸ್ಕಾರ ಹಾಕುವರು. ಐದು ಸುತ್ತಿನ ನಂತರ ತಂದ ಹಿಡಿ ಕಟ್ಟಿಗೆ ಅಲಾವಿ ಕುಣಿಯಲ್ಲಿ ಚೆಲ್ಲಿ ಫಾತಿಹಾ ಮಾಡಲು ಡೋಲಿಯ ಎದುರು ಎಡೆಗಳನ್ನು ಅರೆತೆರೆದು ಇಡುತ್ತಾರೆ.
ಮೊಹರಂ ತಿಂಗಳ ಒಂಬತ್ತನೆಯ ದಿನ ರಾತ್ರಿಯನ್ನು ವೀರಮರಣ ಹೊಂದಿದ ಇಮಾಮ ಹುಸೇನರ ಅನುಯಾಯಿಗಳ ನೆನಪಿಗಾಗಿ ಆ ದಿನ ಇಡೀ ಹಗಲು ರಾತ್ರಿ ಆಗ್ಗಿ ತುಳಿದು ದೇವರೆದುರು ಶೋಕಗೀತೆ ಹಾಡುವರು. ಅಲ್ಲದೇ ನಿಷ್ಠಾವಂತರು ಯಾವುದೇ ತರದ ಅಡಿಗೆ ಮಾಡುವುದಿಲ್ಲ. ಅಂದು ಪುರುಷರು ಕಪ್ಪು ಸಮವಸ್ತ್ರ ಧರಿಸಿ, ಎದೆ ಎದೆ ಬಡಿದುಕೊಳ್ಳುತ್ತ, ಮೈಮೇಲಿನ ಬಟ್ಟೆ ಹರಿದುಕೊಳ್ಳುತ್ತ ‘ಇಬ್ನೆ ಜ್ಹಹೆರಾ ವಾ ವೈಲಾ. ವಾ ವೈಲಾ ಹಾಯ್ ಹಾಯ್’ ಎಂದು ನುಡಿದರೆ, ಕೆಲವರು ಮುಳ್ಳಿನಾಕಾರದ ಹಿಡಿಕೆಯನ್ನು ಸರಪಳಿಗೆ ಕಟ್ಟಿ ಕೈಯಲ್ಲಿ ಹಿಡಿದು ಬರಿದಾದ ಮೈಮೇಲೆ ರಕ್ತ ಸೋರುವ ಹಾಗೆ ಬಡಿದುಕೊಳ್ಳುತ್ತ ಯಾ ಹಸನ್ ಯಾ ಹುಸೇನ್ ಎನ್ನುವರು. ಈ ರೀತಿ ಶಿಕ್ಷಿಸಿಕೊಳ್ಳುವಾಗ ಅತೀ ರಕ್ತ ಸೋರಿ ಮೂರ್ಛೆ ಹೋದರೆ, ಮರಣ ಹೊಂದಿದರೆ ಶುಭವೆಂದು ಜಾನಪದರ ನಂಬಿಗೆ.

%e0%b2%ae%e0%b3%8a%e0%b2%b9%e0%b2%bb%e0%b2%b0%e0%b3%8a-3
ಮಹಿಳೆಯರು ಸಹ ಕಪ್ಪು ಸಮವಸ್ತ್ರ ಧರಿಸಿ ತಲೆಗೂದಲು ಹರಡಿಕೊಂಡು ದುಃಖ ಮಾಡುವರು. ಆದರೆ ಈ ’ಮಾತಂ’ ಆಚರಿಸುವರು ’ಷಿಯಾ’ ಮುಸ್ಲಿಮರು. ’ಸುನ್ನಿ’ ಮುಸ್ಲಿಮರು ಆಚರಿಸುವುದಿಲ್ಲ. ರಾಯಚೂರು ಹೊಸಪೇಟೆ ಹೈದ್ರಾಬಾದ್ ಪ್ರದೇಶಗಳಲ್ಲಿ ಇಂಥ ಸಂಪ್ರದಾಯವಿದ್ದರೆ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಮೊಹರಮ್ ದ ಈ ವಿಧವಾದ ಆಚರಣೆ ಬಳಕೆಯಲ್ಲಿಲ್ಲ.
ರಂಗು ರಂಗಿನ ಸುನೇರಿ ಹಾಳಿ, ಪರಿಪರಿ ಜಾಲರಿಯಿಂದ ಸಿಂಗರಿಸಿದ ಡೋಲಿಯು ಗ್ಯಾಸಿನ ಬೆಳಕಿನಲ್ಲಿ ಭಕ್ತರಿಗೆ ಭಕ್ತಿ ಹುಟ್ಟಿಸುವುದು. ಫಾತಿಹಾದ ನಂತರ ಒಕ್ಕೊರಲಿಂದ ದೀನ್ ಜಗಾಯಿಸುವರು. ಮುಲ್ಲಾ ಸಾಹೇಬರು ಬಾಬು ತೆಗೆದುಕೊಂಡು ತುಂಡು ಚೀಟಿಯಲ್ಲಿ ಹಸ್ತ (ಕೈ) ಗಲ್ಲೀಪ. ಉಡಿ, ಉಡುಗೊರೆ, ಹೂವಿನಸರ ಹರಕಿಯ ದೇವರಿಗೆ ಅರ್ಪಿಸಿ ಮನದ ಇಷ್ಟಾರ್ಥಗಳನ್ನು ಬೇಡಿಕೊಂಡು ಮರಳುವ ಮುನ್ನ ದೇವರಿಟ್ಟ ಕೋಣೆಯಿಂದ ಅನತಿದೂರದಲ್ಲಿ ಕುಳಿತ ಭಿಕ್ಷುಕರಿಗೆ ಶರಬತ್ತ ಹಂಚಿ ಕೃತಾರ್ಥರಾಗುವರು. ಇಮಾಮ ಹುಸೇನರು ಅವರ ಅನುಯಾಯಿಗಳು ಕುಡಿಯಲು ಹನಿ ನೀರಿಲ್ಲದೆ ಇದ್ದರೂ ಕಾಳಗ ಮಾಡಿ ಹುತಾತ್ಮರಾದ ನೆನಪಿಗಾಗಿ ಶರಬತ್ ಹಂಚುತ್ತಾರೆ. ಖತಲ್ ರಾತ್ರಿ ದಿನವು ಮುಗಿದಾಗ ಮುಸ್ಲಿಮರಿಗೆ ಅರ್ಧ ಹಬ್ಬ ಆಚರಿಸಿದ ಅನುಭವ.
ಹೀಗೆ ಇಂದು ಮೊಹರಂ ಹಬ್ಬ ಬೃಹತ್ ನಗರಗಳಲ್ಲಿ ಈ ಅರ್ಥವತ್ತಾದ ಸಂಪ್ರದಾಯದಂತೆ ಆಚರಿಸುವ ಪರಿಪಾಠ ಕಡಿಮೆ. ಆದರೆ ಬೆರಳೆಣಿಕೆ ಹಳ್ಳಿ ಪ್ರದೇಶಗಳಲ್ಲಿ ಈ ಹಬ್ಬವನ್ನೂ ಇಂದಿಗೂ ವಿಶಿಷ್ಟವಾಗಿ ಆಚರಿಸುವ ಪದ್ಧತಿಯನ್ನು ಕಾಣಬಹುದು.

ಹಬ್ಬದ ಆಚರಣೆ ಹಾಗೂ ಹಿನ್ನೆಲೆ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...