Oyorooms IN

Monday, 24th July, 2017 10:09 PM

BREAKING NEWS

ಹಬ್ಬದ ಆಚರಣೆ ಹಾಗೂ ಹಿನ್ನೆಲೆ

ಶಕ್ತಿಯನ್ನು ಆರಾಧಿಸುವ ನವರಾತ್ರಿ ಆಚರಿಸುವ ಬಗ್ಗೆ ನಿಮಗೆಷ್ಟು ಗೊತ್ತು……

navaratri

ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಈ ಶಕ್ತಿಯಿಂದ ಸಂಪೂರ್ಣ ಬ್ರಹ್ಮಾಂಡವೇ ಚಲನೆಯನ್ನು ಪಡೆಯುತ್ತದೆ. ಶಕ್ತಿಯ ಆರಾಧನೆಯ ಈ ಒಂಬತ್ತು ದಿನಗಳು ಮಹತ್ವಪೂರ್ಣವಾಗಿವೆ. ಈ ಒಂಬತ್ತು ದಿನಗಳಲ್ಲಿ ಬ್ರಹ್ಮಾಂಡದ ಎಲ್ಲ ಶಕ್ತಿಗಳು ಜಾಗೃತಗೊಳ್ಳುತ್ತವೆ ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿತವಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಶಕ್ತಿಯನ್ನು ಆರಾಧಿಸುವುದರಿಂದ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಲಾಗುತ್ತದೆ. ಈ ಹಬ್ಬವನ್ನು ನವರಾತ್ರಿ ಎಂದು ಕರೆಯುತ್ತಾರೆ.

ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದು ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ‘ವಿಜಯ ದಶಮಿ’, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ. ನವರಾತ್ರಿ ಎಲ್ಲ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿ ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯ 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ.

ಭಾರತದಾದ್ಯಂತ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಗುಜರಾತಿನಲ್ಲಿ ನವರಾತ್ರಿಯ ಈ ಒಂಬತ್ತು ದಿನಗಳು ಉಲ್ಲಾಸಮಯವಾಗಿರುತ್ತವೆ. ಬಂಗಾಲದಲ್ಲಿ ಷಷ್ಠಿಯಿಂದ ದಶಮಿಯವರೆಗೆ ದೇವಿಯ ಪೂಜೆಯನ್ನು ಆಚರಿಸಲಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನವರಾತ್ರಿ ನಿಮಿತ್ತ ಉಪವಾಸ, ದೇವಿ ಮಂದಿರಗಳಲ್ಲಿ ಪೂಜೆಕಾರ್ಯಗಳು ವಿಶೇಷವಾಗಿರುತ್ತವೆ. ಪಂಜಾಬ್ ರಾಜ್ಯದಲ್ಲಿ ಕೂಡಾ ಉಪವಾಸ ಮತ್ತು ಜಾಗರಣೆ ಹಾಗೂ ದೇವಿಯ ಪೂಜೆಯನ್ನು ನೆರವೇರಿಸುತ್ತಾರೆ.

ನವರಾತ್ರಿಯಲ್ಲಿ ಮಾತೆ ದುರ್ಗೆಯ ಒಂಬತ್ತು ರೂಪಗಳ ಪೂಜೆಯನ್ನು ನೆರವೇರಿಸಲಾಗುತ್ತದೆ. ದೇವಿ ಮಾತಾ ದುರ್ಗೆಯ ಈ ಒಂಬತ್ತು ರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.

ಈ ಒಂಬತ್ತು ದಿನಗಳಲ್ಲಿ ಕಿರಿಯ ವಯಸ್ಸಿನ ಬಾಲಕಿಯರನ್ನು ದೇವಿಯ ರೂಪದಲ್ಲಿ ನೋಡಲಾಗುತ್ತದೆ. ಕುಮಾರಿಯರಿಗೆ ಪಾದ ಪೂಜೆ ಮಾಡಿ, ಮೃಷ್ಟಾನ್ನ ಭೋಜನ ನೀಡುವುದಲ್ಲದೇ ಅವರಿಗೆ ದಕ್ಷಿಣೆಯನ್ನು ಕೊಡಲಾಗುತ್ತದೆ. ಕುಮಾರಿಯರಿಗೆ ಪಾದ ಪೂಜೆ ಮಾಡಿ, ಮೃಷ್ಟಾನ್ನ ಭೋಜನ ಮಾಡುವ ನಿಯಮಗಳು ದೇಶದ ಎಲ್ಲ ರಾಜ್ಯಗಳಲ್ಲಿ ಕಂಡುಬರುತ್ತದೆ.

ಭಾರತದಲ್ಲಿ ಪ್ರತಿಯೊಂದು ಹಬ್ಬದ ಹಿಂದೆ ಒಂದು ಸಂದೇಶವಿರುತ್ತದೆ. ನವರಾತ್ರಿಯಲ್ಲೂ ಕೂಡಾ ಒಂದು ಸಂದೇಶವಿದೆ. ನಮ್ಮ ಸಮಾಜಕ್ಕೆ ಈ ಸಂದೇಶದ ಅಗತ್ಯವಿದೆ. ನವರಾತ್ರಿಯಲ್ಲಿ ಕುಮಾರಿಯರ ಪೂಜೆ ಮಾಡುವುದಲ್ಲದೇ ಅವರನ್ನು ದೇವಿಯ ರೂಪದಲ್ಲಿ ನೋಡಲಾಗುತ್ತದೆ. ಇದರಿಂದ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನ ನೀಡಿ ಗೌರವಿಸುವಂತೆ ಸಂದೇಶವನ್ನು ನೀಡುತ್ತದೆ.

ನವರಾತ್ರಿಯ ಹಬ್ಬದ ಸಂದರ್ಭದಲ್ಲಿ ಮಹಿಳೆ ತನ್ನ ಶಕ್ತಿಯನ್ನು ಗುರುತಿಸಿಕೊಂಡು ಅನ್ಯಾಯ ಮತ್ತು ಅನೀತಿಗಳ ವಿರುದ್ಧ ಹೋರಾಡಲು ಶಕ್ತಿಯನ್ನು ಕೊಡುವಂತೆ ದುರ್ಗೆಯಲ್ಲಿ ಪ್ರಾರ್ಥಿಸಬೇಕು. ದುರ್ಗಾ ಮಾತೆಯಂತೆ ನಮ್ಮ ಅಸ್ತಿತ್ವವನ್ನು ಬಲಗೊಳಿಸಿ, ಮನಸ್ಸಿನಲ್ಲಿ ಪ್ರೀತಿ ಮತ್ತು ಕರುಣೆಯನ್ನು ತುಂಬಿಕೊಳ್ಳಲು ಪ್ರಯತ್ನಿಸಿದಾಗ ಮಾತ್ರ ನವರಾತ್ರಿ ಪೂಜೆ ಮಾಡುವುದು ಸಾರ್ಥಕವಾಗುತ್ತದೆ.

ನವರಾತ್ರಿಯ ವೈಶಿಷ್ಟ್ಯತೆಗಳು:

ನವರಾತ್ರಿ ಒಂಭತ್ತು ರಾತ್ರಿಗಳ ಸಮೂಹ. ಹಿಂದೆ ಐದು ನವರಾತ್ರಿ ಆಚರಣೆ ವಿಶೇಷವಾಗಿತ್ತು. ಈಗ ಎರಡು ನವರಾತ್ರಿ ವಿಶೇಷವಾಗಿದ್ದು, ಆಚರಣೆಯಲ್ಲಿದೆ. ಒಂದು ಶರನ್ನವರಾತ್ರಿ ಇನ್ನೊಂದು ಚೈತ್ರ ನವರಾತ್ರಿ. ಈಗ ನಾವು ಆಚರಿಸುವುದು ಶರನ್ನವರಾತ್ರಿ. ನವರಾತ್ರಿ ಎಲ್ಲ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿ ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯ. ಮಂಗಳವಾರದಿಂದ 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ.

 • ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನಡೆಸುವ ವಿಶಿಷ್ಟ ಹಬ್ಬ ಎಂಬುದು ಇತಿಹಾಸದ ಉಲ್ಲೇಖ.ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ.
 1. ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ.
 2. ಎರಡನೇ ದಿನ ಆಂದರೆ ಬಿದಿಗೆ ದಿನ ದೇವಜಾತ ದುರ್ಗಾಪೂಜಾ.
 3. ಮೂರನೇ ದಿನ ತದಿಗೆ – ಮಹಿಷಾಸುರ ಮರ್ಧಿನಿ ದುರ್ಗಾಪೂಜಾ.
 4. ನಾಲ್ಕನೇ ದಿನ ಚತುರ್ದಶಿ – ಶೈಲ ಜಾತಾ ದುರ್ಗಾಪೂಜಾ.
 5. ಐದನೇ ದಿನ ಪಂಚಮಿ – ದೂಮೃಹಾ ದುರ್ಗಾಪೂಜಾ.
 6. ಆರನೇ ದಿನ ಶಷ್ಠಿ – ಚಂಡ-ಮುಂಡ ಹಾ ದುರ್ಗಾಪೂಜಾ.
 7. ಏಳನೇ ದಿನ ಸಪ್ತಮಿ – ರಕ್ತ ಬೀಜ ಹಾ ದುರ್ಗಾಪೂಜಾ.
 8. ಎಂಟನೇ ದಿನ ಅಷ್ಟಮಿ – ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಠಮಿ)
 9. ಒಂಭತ್ತನೇ ದಿನ ಮಹಾನವಮಿ -ಶುಂಭ ಹಾ ದುರ್ಗಾಪೂಜಾ.

ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಅಂದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಸಪ್ತಮಿಗೆ ವಿಶೇಷ ಸ್ಥಾನವಿದೆ. ಸಪ್ತಮಿಯ ಮೂಲಾನಕ್ಷತ್ರದಂದು ಪುಸ್ತಕ, ಪವಿತ್ರಗ್ರಂಥಗಳನ್ನು, ಚಿನ್ನ, ಬೆಳ್ಳಿ ಪೂಜೆಗಿಡಲಾಗುತ್ತದೆ. ಹಾಗೂ ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ. ಅಂದೇ ಪುಸ್ತಕಗಳನ್ನಿಟ್ಟು ಪೂಜಿಸಲಾಗುತ್ತದೆ ಇದಕ್ಕೆ ಸರಸ್ವತಿ ಪೂಜೆ ಎಂದೂ ಕರೆಯುತ್ತಾರೆ.

ಪುರಾಣಗಳಲ್ಲಿ:

 • ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವು ಉಲ್ಲೇಖಗಳಿವೆ. ಹಲವು ಕಥೆಗಳಿವೆ.. ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು .ನವರಾತ್ರಿಯೆಂದರೆ ಒಂಭತ್ತು ದಿನಗಳಿಗೆ ಸೀಮಿತ ವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು. ಅದು ವಿಜಯದಶಮಿಯ ದಿನ ಎಂಬ ನಂಬಿಕೆ ಇದೆ.
 • ದ್ವಾಪರಾಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ನಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯಸಾಧಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ.

ಹಬ್ಬದ ಆಚರಣೆ ಹಾಗೂ ಹಿನ್ನೆಲೆ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...