Oyorooms IN

Saturday, 19th August, 2017 4:37 PM

BREAKING NEWS

Uncategorized

ಮುತ್ತಿನ ಕತೆ

7
ಕಾಲ ಎಷ್ಟೇ ಬದಲಾದರೂ ಮುತ್ತು ಎಂದಿಗೂ ತನ್ನ ಮೌಲ್ಯವನ್ನು ಕಳೆದುಕೊಳ್ಳುವದಿಲ್ಲ.ಅರೆ! ಸ್ವಲ್ಪ ಇರಿ, ನಾನೀಗ ಹೇಳ್ತಿರೋದು ಕಡಲಾಳದಲ್ಲಿ ಕಪ್ಪೆ ಚಿಪ್ಪಿನೊಳಗಿಂದ ದೊರಕುವ ಶುದ್ಧ ಮುತ್ತಿನ ಬಗ್ಗೆ. ಮುತ್ತು ಯಾರಿಗೆ ಇಷ್ಟ ಇಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ, ಬಡವರಿಂದ ಹಿಡಿದು, ಆಗರ್ಭ ಶ್ರೀಮಂತರವರೆಗೂ ಮುತ್ತುಗಳನ್ನು ಎಲ್ಲರೂ ಇಷ್ಟ ಪಡುತ್ತಾರೆ. ಮಹಿಳೆಯರ ಲಿಸ್ಟನಲ್ಲಂತೂ ಮುತ್ತಿಗೆ ಇನ್ನೂ ಸ್ಥಾನವಿದೆ. ಎಲ್ಲ ರೀತಿಯ ಡ್ರೆಸ್ಗಳೊಂದಿಗೆ ಹೊಂದಿಕೊಳ್ಳುವ ಮುತ್ತಿನ ಸರ , ಕಿವಿಯೋಲೆ, ಉಂಗುರ, ಆಂಕ್ಲೆಟ್, ಬ್ರೇಸ್ಲೆಟ್ಗಳು ಯುವತಿಯರಷ್ಟೇ ಅಲ್ಲದೆ ಮಧ್ಯವಯಸ್ಕರೆನ್ನದೆ, ಎಲ್ಲರಿಗೂ ಇಷ್ಟವಾಗುವದು ವಿಶೇಷ. ಕಾಲಕ್ಕೆ ತಕ್ಕಂತೆ ಆಭರಣಗಳ ತಯಾರಿಕೆಯಲ್ಲಿ ಹಲವಾರು ಲೋಹಗಳ ಉಪಯೋಗವಾದರೂ ಸಹಿತ, ಕೆಲ ದಿನಗಳ ಬಳಿಕ ಸ್ವಲ್ಪ ಲೋಹಗಳು ತಮ್ಮ ಬೇಡಿಕೆಯನ್ನು , ವಿಶೇಷತೆಯನ್ನು ಕಳೆದುಕೊಂಡರೂ ಸಹಿತ ಮುತ್ತು ಮಾತ್ರ ಕಾಲಕ್ಕೆ ತಕ್ಕಂತೆ ಕೊಂಚ ಬದಲಾವಣೆಯಾಗಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿದೆ. ಇಂಥ ಮುತ್ತಿನ ಹಿಂದೆ ಹಲವಾರು ಕಟ್ಟು ಕತೆಗಳು ಇದ್ದು, ಮುತ್ತುಗಳು ಕಡಲಾಳದಲ್ಲಿ ಹೇಗೆ ಮೂಡುತ್ತವೆ? ಎಂಬುದು ಒಂದು ಕೂತುಹಲಕಾರಿಯಾದ ಸಂಗತಿಯಾಗಿದೆ.
ಮುತ್ತಿನ ಇತಿಹಾಸ
ಸಾವಿರಾರು ವರ್ಷಗಳ ಹಿಂದೆಯೇ ಪುರಾತನ ಕಾಲದಲ್ಲೇ ಮುತ್ತುಗಳು ಪತ್ತೆಯಾಗಿ ಆದಿಮಾನವನ ಕಾಲದಲ್ಲೇ ಬಳಕೆಯಲ್ಲಿದ್ದವು. ಮಾನವ ನಾಗರಿಕತೆಗಳು ರೂಪುಗೊಳ್ಳುತ್ತಿದ್ದ ಕಾಲದಲ್ಲೇ ಈ ಮುತ್ತುಗಳು ಬಳಕೆಯಲ್ಲಿದ್ದ ಬಗ್ಗೆ ಹಲವಾರು ಪುರಾವೆಗಳು ಸಿಕ್ಕಿವೆ. ಬಹುಶಃ ಸಮುದ್ರ ತೀರದಲ್ಲಿ ಆಹಾರಕ್ಕಾಗಿ ಹುಡುಕುತ್ತಿರುವಾಗ ಓಯೆಸ್ಟರ ಹಾಗೂ ಅದರೊಳಗಿನ ಮುತ್ತು ದೊರಕಿರಬಹುದು . ಮೊತ್ತ ಮೊದಲ ಮುತ್ತು ಸಿಕ್ಕಿದ್ದು ಎಲ್ಲಿ ಎಂಬುದು ಖಾತ್ರಿಯಾಗಿ ತಿಳಿದಿಲ್ಲವಾದರೂ ಪರ್ಷಿಯನ್ ಗಲ್ಫ್ ರಾಷ್ಟ್ರಗಳ ಸಮುದ್ರ ತೀರಗಳಲ್ಲಿರಬಹುದು ಎಂಬುದು ಭೂ ವಿಜ್ಞಾನಿಗಳ ಊಹೆ.
ಈ ಪ್ರದೇಶಗಳಲ್ಲಿ ಸಿಕ್ಕ ಕೆಲವು ತುಂಬಾ ಹಳೆಯ ಪುರಾವೆಗಳೆಂದರೆ ಭೂಮಿಯಲ್ಲಿ ಹೂಳಲ್ಪಟ್ಟ ಮಾನವನ ಅಸ್ತಿಯ ಕೈ ಮುಷ್ಟಿಗಳಲ್ಲಿ ಮುತ್ತುಗಳು ಕಂಡುಬಂದಿದ್ದವು. ಭೂ ವಿಜ್ಞಾನಿಗಳ ಅಂದಾಜಿನ ಪ್ರಕಾರ ಹೀಗೆ ಮುತ್ತು ಹಿಡಿದುಕೊಂಡಿರುವ ಈ ಅಸ್ಥಿ 6000 ವರ್ಷಗಳಷ್ಟು ಹಳೆಯದು ಅಂದರೆ ಸರಿ ಸುಮಾರು 4000 BC ಇಸ್ವಿಯ ಕಾಲದಲ್ಲೇ ಮುತ್ತುಗಳ ಬಳಕೆ ಇತ್ತು. ಈ ನಿಟ್ಟನಲ್ಲಿ ಅಧ್ಯಯನ ನಡೆಸಿದ ಭೂ ವಿಜ್ಞಾನಿಗಳ ತಂಡಕ್ಕೆ ಇನ್ನೂ ಸಾಕಷ್ಟು ಪುರಾವೆಗಳು ದೊರೆತು ಮೆಸೆಪೋಟೆಮಿಯಾ ನಾಗರೀಕತೆಯ ಕಾಲದಲ್ಲೇ ಈ ಮುತ್ತುಗಳ ವಾಣಿಜ್ಯ ವಹಿವಾಟು ನಡೆಯುತ್ತಿತ್ತು ಎಂದು ಭೂ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ಪರ್ಷಿಯನ್ ಗಲ್ಪ್ ಪುರಾತನ ಕಾಲದಲ್ಲಿ ಮುತ್ತುಗಳ ಆಕರವಾಗಿತ್ತು. ಈ ಪರ್ಷಿಯನ್ ಗಲ್ಫ್ ಪ್ರಾಂತ್ಯದ ಹೆಚ್ಚಿನ ಪ್ರದೇಶಗಳಲ್ಲಿ ಮಾನವ ವಾಸ ಯೋಗ್ಯ ವಾತಾವರಣ ಬಹಳ ಕಡಿಮೆ . ನೀರು, ಫಲವತ್ತಾದ ಭೂಮಿ ಇಲ್ಲದ ವಿಪರೀತ ತಾಪಮಾನದ ಪ್ರದೇಶಗಳಲ್ಲಿ ಕೂಡ ಜನರು ವಾಸವಾಗಿದ್ದರು. ಇದಕ್ಕೆ ಕಾರಣ ಅಲ್ಲಿ ಹೇರಳವಾಗಿ ಸಿಗುತ್ತಿದ್ದ ಮುತ್ತು ಎಂದು ಭೂ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಕತಾರ್ ನ ಜುಬಾಹಾಹ್ ಎಂಬ ಪ್ರದೇಶದಲ್ಲಿ ಮಾನವ ವಾಸಕ್ಕೆ ಬಹಳ ಪ್ರತಿಕೂಲ ವಾತಾವರಣವಿದ್ದರೂ ಕೂಡ 18 ನೇ ಶತಮಾನದ ಕಾಲದಲ್ಲಿ ಬಹಳ ಶ್ರೀಮಂತ ಪಟ್ಟಣವಾಗಿತ್ತು. ಬೇಸಿಗೆಯಲ್ಲಿ 120 ಡಿಗ್ರಿಗಳಷ್ಟು ತಾಪಮಾನವಿರುತ್ತಿದ್ದು, ನೀರು ಹಾಗೂ ಮರಗಳೇ ಇಲ್ಲದ ಈ ಪ್ರದೇಶದ ತುಂಬಾ ಜನ ವಾಸ್ತವ್ಯವಿತ್ತು. ಹಾಗೂ ಈ ಪಟ್ಟಣ ಗಲ್ಫ್ ನ ಮುತ್ತುಗಳ ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರವಾಗಿತ್ತು. ಇತ್ತಿಚಿಗೆ ಭೂ ವಿಜ್ಞಾನಿಗಳು ಕುವೈತ್ ನಿಂದ ಒಮನ್ ನ ಉದ್ದಕ್ಕೂ ನಡೆಸಿದ ಭೂ ಶೋಧಗಳಲ್ಲಿ ಪುರಾತನ ಕಾಲದಲ್ಲಿ ಈ ಪ್ರದೇಶಗಳಲ್ಲಿ ಸಿಗುತ್ತಿದ್ದ ಮುತ್ತುಗಳು, ನಡೆಯುತ್ತಿದ್ದ ಮುತ್ತುಗಳ ವಹಿವಾಟು, ಸಮುದ್ರಗಳಿಂದ ಮುತ್ತುಗಳ ಸಂಗ್ರಹ ಇವೆಲ್ಲವುಗಳ ಬಗ್ಗೆ ಪುರಾವೆಗಳು ಸಿಗುತ್ತಿವೆ. ಇಂಥ ವಾಸ ಯೋಗ್ಯವಲ್ಲದ ಪ್ರದೇಶಗಳಲ್ಲೂ ಕೂಡ ಮಾನವ ನಾಗರೀಕತೆ ಬೆಳೆದು ಬಂದಿರುವದಕ್ಕೆ ಹಾಗೂ ಅಲ್ಲಿನ ಪುರಾತನ ಶ್ರೀಮಂತ ಪಟ್ಟಣಗಳನ್ನು ರೂಪಿಸುವಲ್ಲಿ ಆ ಕಾಲದಲ್ಲಿ ಅಲ್ಲಿ ಹೇರಳವಾಗಿ ಸಿಗುತ್ತಿದ್ದ ಮುತ್ತುಗಳೂ ಸಹ ಒಂದು ಬಲವಾದ ಕಾರಣ ಎಂದು ಯುನಿವರ್ಸಿಟೀ ಕಾಲೇಜ್ ಲಂಡನ್ ನ ಭೂ ವಿಜ್ಞಾನಿ ರಾಬರ್ಟ ಕಾರ್ಟರ್ ಅಭಿಪ್ರಾಯ ಪಡುತ್ತಾರೆ.

ಇಷ್ಟೇ ಅಲ್ಲದೇ, ನುಡಿದರೆ ಮುತ್ತಿನ ಹಾರದಂತಿರಬೇಕು . . . . ಹನ್ನೇರಡನೆ ಶತಮಾನದಲ್ಲಿ ಹುಟ್ಟಿದ ವಚನಗಳನ್ನು ಕೇಳಿದರೆ ಮುತ್ತು-ರತ್ನಗಳ ಪರಿಚಯ ನಮಗೆ ತುಂಬಾ ಹಿಂದಿನಿಂದ ಇರುವುದು ತಿಳಿಯುತ್ತದೆ. ಚೀನಾದ ಇತಿಹಾಸದ ಪ್ರಕಾರ ಸುಮಾರು ಕ್ರಿಸ್ತ ಪೂರ್ವ 2300 ರಲ್ಲಿಯೇ ಮುತ್ತುಗಳ ಪರಿಚಯವಿತ್ತೆಂದು ಹೇಳಲಾಗುತ್ತದೆ. ಭಾರತದ ಇತಿಹಾಸದಲ್ಲಿ ಮುತ್ತುಗಳ ಬಗ್ಗೆ ದೊರೆತಿರುವ ಮೊದಲ ಗುರುತು ಎಂದರೆ, ಕ್ರಿಸ್ತ ಪೂರ್ವ 600 ರಲ್ಲಿ ತೆಂಕಣ ಭಾರತವನ್ನು ಆಳುತ್ತಿದ್ದ ಪಾಂಡ್ಯರು ಮುತ್ತುಗಳ ವ್ಯಾಪಾರ ಮಾಡುತ್ತಿದ್ದರು ಎಂಬುದು. ಒಟ್ಟಾರೆಯಾಗಿ ಸುಮಾರು ಸಾವಿರಾರು ವರ್ಷಗಳ ಹಿಂದಿನಿಂದ ಮುತ್ತುಗಳು ಬಳಕೆಯಲ್ಲಿರುವದನ್ನು ನಾವು ಕಾಣಬಹುದು.

ಚಿಪ್ಪಿನಲ್ಲಿ ಮುತ್ತು ಮೂಡುವ ಬಗೆ
ಮುತ್ತುಗಳು ಪ್ರಕೃತಿಯ ಅಸಾಧಾರಣ ಸೃಷ್ಟಿ. ಅತ್ಯಾಕರ್ಷಕವಾಗಿ ಹೊಳೆಯುವ ಸುಂದರ ಮುತ್ತುಗಳು ಭೂ ಪರಿಸರದಲ್ಲಿ ಹೇಗೆ ಉತ್ಪಾದನೆಯಾಗುತ್ತವೆ ? ಎಂಬುದು ಪ್ರಕೃತಿಯ ಒಂದು ವಿಸ್ಮಯಕಾರಿ ರೋಚಕ ಕತೆ. ಎಲ್ಲ ಬೆಲೆಬಾಳುವ ರತ್ನಗಳು ಅಂದರೆ ವಜ್ರ ವೈಢೂರ್ಯಗಳು ,ಆಭರಣ ಯೋಗ್ಯ ಲೋಹಗಳು ಭೂಮಿಯನ್ನು ಅಗೆದಾಗ ಸಿಗುತ್ತವೆ. ಆದರೆ ಮುತ್ತು ಎಂಬ ಅಪೂರ್ವ ವಸ್ತುವಿನ ಜನನ ಮಾತ್ರ ಸಾಗರದಾಳದ ಪ್ರಕೃತಿಯ ಒಂದು ಅದ್ಭುತ ಸುವ್ಯಸ್ಥಿತ ಸೃಷ್ಟಿ ಎಂದು ಹೇಳಬಹುದು. ಕಡಲಾಳದಲ್ಲಿರುವ ಚಿಪ್ಪಿನಲ್ಲಿ ಮುತ್ತುಗಳು ಹೇಗೆ ಹುಟ್ಟುತ್ತವೆ ಎಂಬುದಕ್ಕೆ ಹಲವಾರು ಕಟ್ಟು ಕತೆಗಳೂ ಇವೆ ಅವುಗಳಲ್ಲಿ ಸ್ವಾತಿ ಮಳೆಯ ಹನಿಗಳು ಕಡಲಿಗೆ ಬಿದ್ದು ಆ ಹನಿಗಳು ಚಿಪ್ಪಿನಲ್ಲಿ ಕೂತು ಮುತ್ತುಗಳಾಗುತ್ತವೆ ಎಂಬುದೊಂದು ಕತೆಯೂ ಇದೆ. ನಿಜವಾಗಿ ಹೇಳಬೇಕೆಂದರೆ ಮುತ್ತುಗಳು ಆಗುವದು ಬೇರೆ ಬಗೆಯಲ್ಲಿ. ಸ್ವಾತಿಮಳೆಗೂ ಮುತ್ತಿಗೂ ಯಾವ ರೀತಿಯ ನಂಟು ಇಲ್ಲ! ಅಲ್ಲದೆ, ಮುತ್ತುಗಳು ದೇವರ ಕಂಬನಿಗಳೆಂದು, ಇನ್ನೂ ಕೆಲವರು ಚಂದ್ರನ ಬೆಳದಿಂಗಳನ್ನು ತುಂಬಿಕೊಂಡ ಇಬ್ಬನಿ ಹನಿಗಳು ಸಮುದ್ರಕ್ಕೆ ಸೇರಿದಾಗ ಆ ಹನಿಗಳನ್ನು ಸಿಂಪಿ(ಚಿಪ್ಪು) ಗಳು ನುಂಗಿಬಿಟ್ಟವು.ಹೀಗೆ ಸಿಂಪಿ ಚಿಪ್ಪುಗಳ ಒಳಗೆ ಮುತ್ತುಗಳು ಬರುತ್ತವೆ. ಎಂಬ ಕಟ್ಟು ಕತೆಗಳೂ ಇವೆ.
ಆದರೆ ಸಂಶೋಧನೆಗಳ ಮೂಲಕ ತಿಳಿದುಬರುವದೇನೆಂದರೆ, ಮುತ್ತುಗಳು ಒಂದು ಜೈವಿಕ ಪ್ರಕ್ರೀಯೆಯ ಫಲಿತಾಂಶ. ಕಡಲಿನಲ್ಲಿರುವ ಕೆಲವು ಬಗೆಯ ಜೀವಂತ ಸಮುದ್ರ ಜಂತುವಿನ ಚಿಪ್ಪಿನೊಳಗೆ ಸಿಗುವ ಈ ಮುತ್ತುಗಳು ತಯಾರಾಗುವದು ಒಂದು ಜೈವಿಕ ಕ್ರೀಯೆಯಿಂದ . ಮುತ್ತಿನ ಚಿಪ್ಪು ಸಿರಿ(pearl oyster) ಯ ಚಿಪ್ಪಿನ ಒಳಗೆ ಮರಳಿನ ಕಣ ಇಲ್ಲವೇ ಚಿಕ್ಕ ಹೊರಪದಾರ್ಥ( parasite) ಗಳು ಹೊಕ್ಕುತ್ತವೆ. ಆ ಹೊರಪದಾರ್ಥ ಚಿಪ್ಪು ಸಿರಿಯ ಮೈಯೊಳಗೆ ಬಂದು ತೊಂದರೆಯನ್ನು ನೀಡುವ ಸಾಧ್ಯತೆಗಳಿರುತ್ತವೆ. ಈ ತೊಂದರೆಯಿಂದ ತಪ್ಪಿಸಿಕೊಂಡು ತನ್ನ ಮೈಯನ್ನು ಕಾಪಾಡಿಕೊಳ್ಳಲು ಚಿಪ್ಪು ಸಿರಿಯು ಮರಳಿನಕಣ/ಹೊರಪದಾರ್ಥವನ್ನು ಕ್ಯಾಲ್ಸಿಯಂ ಕಾರ್ಬೋನೆಟ್ ನಿಂದಾದ(Layer)ಪದರುಗಳಿಂದ ಸುತ್ತುವರಿಯುತ್ತದೆ. ಹೀಗೆ ಹಲವಾರು ಮಡಿಕೆಗಳಿಂದ ಸುತ್ತುವರೆದಿರುವ ಹೊರಪದಾರ್ಥವು ಚಿಪ್ಪು ಸಿರಿಯ ಮೈಗೆ ಯಾವುದೇ ತೊಂದರೆಯನ್ನು ಮಾಡಲಾಗುವದಿಲ್ಲ. ಹೀಗೆ ಹೊರ ಪದಾರ್ಥ ಮತ್ತು ಅದನ್ನು ಸುತ್ತುವರೆದಿರುವ ಕ್ಯಾಲ್ಸಿಯಂ ಕಾರ್ಬೋನೆಟ್ ನ ಮಡಿಕೆಗಳು ಗಟ್ಟಿಯಾಗಿ ಮುತ್ತುಗಳಾಗಿ ಪರಿವರ್ತನೆಗೊಳ್ಳುತ್ತವೆ.

ಮುತ್ತುಗಳನ್ನು ಮೂಡಿಸುವ ಚಿಪ್ಪುಸಿರಿಯ ಮೈ ಭಾಗಗಳು:-
ಚಿಪ್ಪು ಸಿರಿಯ ಹೊರ ಪದರವು ಗಟ್ಟಿಯಾದ ಚಿಪ್ಪಿನಿಂದ ಕೂಡಿರುತ್ತದೆ. ಈ ಚಿಪ್ಪಿನ ಪದರದ ಕೆಳಗೆ ತೆಳುವಾದ ಹೊದಿಕೆ(Mantle) ಇರುತ್ತದೆ. ಚಿಪ್ಪು ಹಾಗೂ ಹೊದಿಕೆಯ ನಡುವೆ ಮುತ್ತುಗಳು ಮೂಡುತ್ತವೆ.

2

ಸಿಂಪಿ/ಚಿಪ್ಪು ಸಿರಿ ಗಳೆಂದರೆನು?
ಸಿಂಪಿಗಳನ್ನು ಸಾಮಾನ್ಯವಾಗಿ ಸಮುದ್ರಗಳ ಒಳಗೆ ಕಾಣಬಹುದು. ಸಿಂಪಿಗಳಿಗಿರುವ ಚಿಪ್ಪುಗಳಿಗೆ ಎರಡು ಭಾಗಗಳನ್ನು ಒಂದು ಇಲಾಸ್ಟಿಕ್ ಕಟ್ಟು ಕೂಡಿಸುತ್ತದೆ. ಈ ಇಲಾಸ್ಟಿಕ್ ಕಟ್ಟು ಸಿಂಪಿ ಚಿಪ್ಪುಗಳ ಭಾಗಗಳ ಒಂದು ಬದಿಯನ್ನು ಕೂಡಿಸುತ್ತದೆ. ಮತ್ತು ಇನ್ನೊಂದು ಬದಿಯನ್ನು ಕೂಡಿಸದೇ ತೆರೆದಿಡುತ್ತದೆ. ಈ ತೆರೆದ ಬಾಯಿಯ ಮೂಲಕ ಸಿಂಪಿಗಳು ತಮ್ಮ ಆಹಾರವನ್ನು ಸೇವಿಸುತ್ತವೆ.ಸಿಂಪಿಗಳು ಬೆಳೆದಂತೆ ಅವುಗಳ ಚಿಪ್ಪುಗಳ ಗಾತ್ರವೂ ಬೆಳೆಯುತ್ತದೆ. ಈ ಚಿಪ್ಪುಗಳ ಒಳಪದರವನ್ನು ಮುತ್ತು ಚಿಪ್ಪು/ಚಿಪ್ಪು ಸಿರಿ ಎಂದು ಕರೆಯುತ್ತಾರೆ. ಸಿಂಪಿಗಳ ಕವಚವು, ಸಿಂಪಿಗಳು ತಿಂದ ಆಹಾರದಲ್ಲಿರುವ ಖನಿಜಗಳ ಸಹಾಯದಿಂದ ಈ ಮುತ್ತು ಚಿಪ್ಪುಗಳನ್ನು ತಯಾರು ಮಾಡುತ್ತದೆ. ಮುತ್ತು ಚಿಪ್ಪುಗಳ ಸಹಾಯದಿಂದ ಸಿಂಪಿಗಳು ಮುತ್ತುಗಳಿಗೆ ಜನ್ಮ ನೀಡುತ್ತವೆ.
ಸಿಂಪಿಗಳಲ್ಲಿ ಹಲವಾರು ತರಹದ ಸಿಂಪಿಗಳಿರುತ್ತವೆ. ಹಾಗೇಯೆ ಹಲವಾರು ತರಹದ ಮುತ್ತುಗಳನ್ನು ತಯಾರಿಸುತ್ತವೆ. ಎಲ್ಲಾ ಸಿಂಪಿಗಳು ನೈಸರ್ಗಿಕ ಮುತ್ತುಗಳನ್ನು ತಯಾರಿಸುವದಿಲ್ಲ. ನೈಸರ್ಗಿಕ ಮುತ್ತುಗಳು ಸಿಗುವುದು ಅಪರೂಪ. ನೈಸರ್ಗಿಕ ಮುತ್ತುಗಳನ್ನು ಮಾಡಲು ವಿಶಿಷ್ಟವಾದ ಸಿಂಪಿಗಳೇ ಇರುತ್ತವೆ.

3
ಮುತ್ತು ಮೂಡುವ ಹಂತಗಳು:-

ಸಿಂಪಿಗಳ ಮೇಲೆ ಯಾವುದಾದರೂ ಪರೋಪ ಜೀವಿಗಳು ದಾಳಿ ಮಾಡಿದಾಗ ಅಥವಾ ಯಾವುದಾದರೂ ಹೊರ ಪದಾರ್ಥವು ಸಿಂಪಿಯ ಕವಚ ಹಾಗೂ ಚಿಪ್ಪುಗಳ ನಡುವೆ ಸಿಲುಕಿ ಕೊಂಡರೆ ,ಸಿಂಪಿಯ ಕವಚಕ್ಕೆ ಕಿರಿಕಿರಿ ಉಂಟಾಗುತ್ತದೆ. ಹೀಗೆ ಸಿಂಪಿಯ ಕವಚಕ್ಕೆ ಕಿರಿಕಿರಿ ಉಂಟಾಗಲು ಶುರುವಾದಾಗ, ಸಿಂಪಿಗಳು ಮುತ್ತನ್ನು ತಯಾರು ಮಾಡಲು ಶುರು ಮಾಡುತ್ತವೆ. ಸಿಂಪಿಯ ಕವಚಕ್ಕೆ ಕಿರಿಕಿರಿ ಉಂಟಾಗಿ ಅಲ್ಲಿ ಗಾಯವಾದಂತೆ ಆಗುತ್ತದೆ. ಹೀಗೆ ಆದ ಗಾಯವನ್ನು ಗುಣಪಡಿಸಿಕೊಳ್ಳಲು ,ಮೊದಲು ಮುತ್ತು ಚಿಪ್ಪನ್ನು ತಯಾರಿಸುತ್ತವೆ.
ಗಾಯವಾದಾಗ ಸಿಂಪಿಯು ಕೊಂಚಿನ್ ಮತ್ತು ಪೆರ್ಲುಸಿನ್ ಎಂಬ ಎರಡು ರೀತಿಯ ಪ್ರೋಟಿನನ್ನು ಹೊರಹಾಕುತ್ತದೆ.ಈ ಎರಡು ಪ್ರೋಟೀನ್ಗಳು ಸೇರಿ ಕಾನ್ಕಿಯೋಲಿನ್/ಕೊಂಕಿಯೋಲಿನ್ ಎಂಬ ಒಂದು ಮೇಟ್ರಿಕ್ಸ್ ಆಗಿ ರೂಪುಗೊಳ್ಳುತ್ತದೆ. ಸಿಂಪಿಗಳೂ ಆರೋಗೊನೈಟ್ಹ್ ಹರಳುಗಳನ್ನು ಆ ಮೇಟ್ರಿಕ್ಸ್ ನಲ್ಲಿರುವ ಖಾಲಿ ಜಾಗಗಳಲ್ಲಿ ತುಂಬುತ್ತವೆ. ಆರೋಗೊನೈಟ್ಹ್
ಹರಳುಗಳಲ್ಲಿ ಕ್ಯಾಲ್ಸಿಯಂ ಕಾರ್ಬೋನೆಟ್ ಇರುತ್ತದೆ. ಈ ಕೊಂಕಿಯೋಲಿನ್ ಮತ್ತು ಆರೋಗೋನೈಟ್ಹ್ ಮಿಶ್ರಣವೇ ಮುತ್ತು ಚಿಪ್ಪು.
ಸಿಂಪಿಯು ತನ್ನ ಮೇಲೆ ದಾಳಿ ಮಾಡಿರುವ ಹೊರ ಪದಾರ್ಥದ ಮೇಲೆ ಈ ಮುತ್ತು ಚಿಪ್ಪಿನ ಪದರವನ್ನು ಹರಡುತ್ತಾ ಹೋಗುತ್ತದೆ. ಪದರಗಳ ಮೇಲೆ ಪದರಗಳವನ್ನು ಹರಡಿ , ಆ ಹೊರ ಪದಾರ್ಥವನ್ನು ಒಂದು ಮೃದುವಾದ ಮುತ್ತಾಗಿ ಹೊರಹಾಕುತ್ತದೆ. ಹೀಗೆ ಹೊರ ಪದಾರ್ಥವನ್ನು ಮುತ್ತಾಗಿ ಬದಲಾಯಿಸುವದರಿಂದ ಸಿಂಪಿಗೆ ಆದ ಕಿರಿಕಿರಿಯು ಕಡಿಮೆ ಆಗುತ್ತದೆ. ಕೆಲವರ ಅಭಿಪ್ರಾಯದ ಪ್ರಕಾರ ಒಂದು ಕಾಳು ಮರಳು ಸಿಂಪಿಗಳಲ್ಲಿ ಹೊರಪದಾರ್ಥವಾಗಿ ಕಿರಿಕಿರಿ ಮಾಡಲು ಪ್ರಯತ್ನಿಸಿದಾಗ ಮಾತ್ರ ,ಮುತ್ತು ಚಿಪ್ಪು ಹರಡಿಕೆ ಶುರುವಾಗುತ್ತದೆ ಎನ್ನುತ್ತಾರೆ. ಆದರೆ ಮರಳಷ್ಟೇ, ಅಲ್ಲದೆ ಯಾವುದೇ ಪದರ್ಥಗಳು ಅವುಗಳ ಮಧ್ಯೆ ಉಳಿದರೆ ಅದರಿಂದ ಸಿಂಪಿಗೆ ಕಿರಿಕಿರಿ ಉಂಟಾಗಿ ಮುತು ಚಿಪ್ಪು ಹರಡಿಕೆ ಶುರುವಾಗುತ್ತದೆ.
ಮುತ್ತುಗಳು ಸುಮಾರು 90% ರಷ್ಟು ಕ್ಯಾಲ್ಸಿಯಂ ಕಾರ್ಬೋನೆಟ್, 5% ಕಾನ್ಕಿಯೋಲಿನ್ ಮತ್ತು 5% ನೀರನ್ನು ಹೊಂದಿರುತ್ತದೆ.

ಮುತ್ತು ಎಷ್ಟು ದೊಡ್ಡದಿದೆ ಎಂಬುದು ಹೊರಪದಾರ್ಥ ಎಷ್ಟು ಕಿರಿಕಿರಿ ಉಂಟುಮಾಡುತ್ತದೆ. ಎಂಬುದನ್ನು ಅವಲಂಬಿಸಿರುತ್ತದೆ. ಹೆಚ್ಚು ಕಿರಿಕಿರಿಯಾದರೆ ಹೆಚ್ಚು ಹೆಚ್ಚು ಮುತ್ತುಚಿಪ್ಪನ್ನು(ಕೊಂಕಿಯೋಲಿನ್ ಮತ್ತು ಆರೋಗೋನೈಟ್ಹ್ ಮಿಶ್ರಣ) ಒಸರಿ , ಹಲವು ಪದರಗಳಿಂದ ಕಣವನ್ನು ಸುತ್ತುವರೆದು ದೊಡ್ಡದಾದ ಮುತ್ತನ್ನು ಮೂಡಿಸುತ್ತದೆ. ಒಂದು ಸಾಮಾನ್ಯ ಮುತ್ತು ಮೂಡಲು ಸುಮಾರು 3-5 ವರ್ಷ ತಗಲುತ್ತದೆ. ಕಡಲಿನಲ್ಲಿ ಸಿಗುವ ಎಲ್ಲಾ ಮುತ್ತುಗಳು ದುಂಡಗಿರುವದಿಲ್ಲ, ಮರಳಿನ ಕಣ/ಹೊರಪದಾರ್ಥ ಆಕಾರ ಮತ್ತು ಚಿಪ್ಪಿನೊಳಗೆ ಮೂಡುವ ಮುತ್ತು ಚಿಪ್ಪುಗಳ ಆಧಾರದ ಮೇಲೆ ಮುತ್ತುಗಳು ಬೇರೆ ಬೇರೆ ಆಕಾರದಲ್ಲಿ ಇರುತ್ತವೆ.

ಮುತ್ತುಗಳನ್ನು ಮೂಡಿಸುವ ಚಿಪ್ಪು ಸಿರಿ/ಸಿಂಪಿಗಳು:-
ಕಡಲಾಳದಲ್ಲಿರುವ ಎಲ್ಲಾ ಬಗೆಯ ಚಿಪ್ಪುಸಿರಿಗಳಲ್ಲಿ ಮುತ್ತುಗಳು ಸಿಗುವುದಿಲ್ಲ. ಮುತ್ತುಗಳನ್ನು ಕೊಡುವ ಚಿಪ್ಪಿನ ಕೆಲವು ಪಂಗಡಗಳೆಂದರೆ,
1)ಪಿಂಕ್ಟಡ್ ವುಲ್ಗರೀಸ್(pinctada vulgaris)
2)ಪಿಂಕ್ಟಡ್ ಮಾರ್‍ಗರಿಟಿಪೆರಾ(pinctada margaritifera)
3)ಪಿಂಕ್ಟಡ್ ಕೆಮ್ನಿಟ್ಜಿ (pinctada chemnitzi)  ಇಷ್ಟೇ ಅಲ್ಲದೇ,

ಓಯೆಸ್ಟರ್ ಎಂಬ ಸಮುದ್ರ ಜೀವಿಗಳ ಚಿಪ್ಪಿನೊಳಗಿನ ಜೈವಿಕ ಕ್ರೀಯೆಯಿಂದ ಮುತ್ತುಗಳು ದೊರೆಯುತ್ತವೆ. ಓಯೆಸ್ಟರ್ ಜೀವಿಗಳ ದೇಹ ಚಿಪ್ಪಿನಿಂದ ಕೂಡಿರುತ್ತದೆ. ಈ ಜೀವಿಗಳು ಬೆಳೆದು ದೊಡ್ಡವಾಗುತ್ತಿದ್ದಂತೆ ಅವುಗಳ ಚಿಪ್ಪು ಕೂಡ ದೊಡ್ಡದಾಗುತ್ತದೆ. ಈ ಓಯೆಸ್ಟರ್ ಕವಚದಿಂದ ಅಥವಾ ಚಿಪ್ಪಿನಿಂದ ಸಿಗುವ ಮುತ್ತುಗಳು ಸಿಗುವಾಗಲೇ ಪರಿಪೂರ್ಣವಾಗಿ ಸಿದ್ದವಾಗಿಯೇ ಸಿಗುತ್ತವೆ. ಯಾವುದೇ ಕಟಿಂಗ್ ,ಪೋಲಿಷಿಂಗ್ ಬೇಕಿಲ್ಲದೆ ಸಂಪೂರ್ಣ ಸಿದ್ದವಾಗಿ ತಯಾರಾಗಿ ಬರುವ ಈ ಮುತ್ತುಗಳು ನಿಜಕ್ಕೂ ನಿಸರ್ಗದ ಕೊಡುಗೆ . ಸಮುದ್ರದಿಂದ ಸಿಗುವ ಮುತ್ತುಗಳಲ್ಲಿ ಹೆಚ್ಚಿನವು ಈ ಓಯೆಸ್ಟರ್ ಜೀವಿಗಳಿಂದ ಸಿಕ್ಕರೂ , ಇನ್ನೂ ಹಲವಾರು ಸಮುದ್ರ ಜೀವಿಗಳ ಚಿಪ್ಪುಗಳಲ್ಲಿಯೂ ಕೂಡ ಮುತ್ತು ರಚಿತವಾಗುತ್ತದೆ. ಮುಸ್ಸೆಲ್ಸ, ಕ್ಲಾಮ್ಸ್, ಸ್ಕಾಲ್ಲೋಪ್ಸ್, ಸೀ ಸ್ನೈಲ್ಸ್ ಮುಂತಾದ ಜೀವಿಗಳ ಚಿಪ್ಪುಗಳಲ್ಲಿಯೂ ಮುತ್ತುಗಳು ಸಿಕ್ಕರೂ ಇವು ಬಹಳ ವಿರಳ. ಸಾಲ್ಟ ವಾಟರ್ ಹಾಗೂ ಪ್ರೇಷ್ ವಾಟರ್ ಗಳಲ್ಲಿ ಮುತ್ತುಗಳು ಹೆಚ್ಚಾಗಿ ತಯಾರಾಗುತ್ತವೆ.
ಜ್ಯುವೆಲ್ಲರಿ ಅಂಗಡಿಗಳಲ್ಲಿ ನಮಗೆ ಕಾಣಸಿಗುವ ಹೆಚ್ಚಿನ ಮುತ್ತುಗಳೆಲ್ಲ ಗೋಲಾಕಾರದ ಮುತ್ತುಗಳು. ಇವು ಉತ್ಕೃಷ್ಟ ಗುಣಮಟ್ಟದ ದುಬಾರಿ ಮುತ್ತುಗಳು. ಆದರೆ ಚಿಪ್ಪಿನಲ್ಲಿ ಸಿಗುವ ಎಲ್ಲ ಮುತ್ತುಗಳೂ ಗೋಲಾಕಾರವಾಗಿರದೇ ವಿಭಿನ್ನ ಆಕೃತಿಯಲ್ಲಿಯೂ ಕಂಡುಬರುತ್ತವೆ. ಕೆಲವು ಮುತ್ತುಗಳು ಚಿಪ್ಪಿನಲ್ಲಿ ಚೆನ್ನಾಗಿ ಮೂಡಿಬಂದಿರುವದಿಲ್ಲ. ಕೆಲವೊಮ್ಮೆ ಗೋಲಾಕಾರವಾಗದೆ ವಿಭಿನ್ನವಾಗಿ ಮೂಡಿ ಬಂದಿರುವ ಮುತ್ತುಗಳಿಗೆ ಬಾರೋಕ್ ಮುತ್ತುಗಳು ಎನ್ನಲಾಗುತ್ತದೆ. ಅಲ್ಲದೆ ಮುತ್ತುಗಳು ವಿವಿಧ ಬಣ್ಣಗಳಲ್ಲಿ ಅಂದರೆ ಬಿಳಿ, ಕಪ್ಪು, ಬೂದು, ಸ್ವರ್ಣ ಬಣ್ಣ, ತಿಳಿ ಗುಲಾಬಿ, ನೀಲಿ,ಹಸಿರು,ಮುಂತಾದ ಇನ್ನೂ ಹಲವಾರು ಬಣ್ಣಗಳಲ್ಲಿ ದೊರೆಯುತ್ತವೆ.

4

ಮುತ್ತುಗಳ ಬಗೆಗಳು:-
ಈಗ ಆಭರಣದ ಅಂಗಡಿಗಳಲ್ಲಿ ಸಿಗುವ ಮುತ್ತುಗಳಲ್ಲಿ ಹಲವಾರು ಬಗೆಗೆಳು ಕಾಣಸಿಗುತ್ತವೆ. ಮುತ್ತುಗಳ ವಿಧಗಳಲ್ಲಿ ಅವುಗಳ ಆಕಾರ ,ಅವು ದೊರೆಯುವ ವಿಧಾನ ಇತ್ಯಾದಿ ಹಲವು ಆಧಾರದ ಮೇಲೆ ಬೇರೆ ಬೇರೆ ಹಲವು ವಿಂಗಡನೆಗಳಿವೆ .ಮುತ್ತುಗಳು ದೊರೆಯುವ ವಿಧಾನವನ್ನು ಆಧರಿಸಿ ಎರಡು ಮುಖ್ಯ ವಿಂಗಡನೆಗಳಿವೆ.
೧)ಪ್ರೆಷ್ ವಾಟರ್ ಪರ್ಲ್ಸ
೨)ಸಾಲ್ಟ್ ವಾಟರ್ ಪರ್ಲ್ಸ
ಮುತ್ತುಗಳು ಸಿಗುವ ಸ್ಥಳ, ಸಮುದ್ರ ಜೀವಿಗಳ ಪ್ರಭೇಧ ,ಮುತ್ತುಗಳ ಬಣ್ಣ ಇವುಗಳನ್ನೆಲ್ಲಾ ಆಧರಿಸಿ ಇನ್ನೂ ಹಲವಾರು ಉಪವಿಂಗಡನೆಗಳಿವೆ. ಕೆಲವು ಪ್ರಮುಖ ಉಪವಿಂಗಡನೆಗಳೆಂದರೆ ಅಕೋಯಾ ಮುತ್ತುಗಳು, ಲೇಕ್ ಬಿವಾ ಮುತ್ತುಗಳು, ಸೌತ್ ಸೀ ಮುತ್ತುಗಳು, ತಹಿತಿಯನ್ ಅಥವಾ ಕಪ್ಪು ಮುತ್ತುಗಳು, ಪರ್ಶಿಯನ್ ಗಲ್ಪ್ ಮುತ್ತುಗಳು ಇತ್ಯಾದಿ ಇನ್ನೂ ನೂರಾರು ಬಗೆಯ ಮುತ್ತುಗಳಿವೆ.
ಅವುಗಳ ಆಧಾರದ ಮೇಲೆ ಮುಖ್ಯವಾಗಿ ೩ ವಿಂಗಡನೆಗಳಿವೆ:
1)ಸ್ಪೆರಿಕಲ್ ಮುತ್ತುಗಳು:- ಸಂಪೂರ್ಣ ಗೋಲಾಕಾರ ಹಾಗೂ ಗೋಲಾಕೃತಿಗೆ ಹತ್ತಿರವೆನಿಸುವ ಆಕಾರದ ಮುತ್ತುಗಳು.
2)ಸಿಮ್ಮೆಟ್ರಿಕಲ್ ಮುತ್ತುಗಳು:- ಮೊಟ್ಟೆಯಾಕಾರದ .ಓವಲ್ ಆಕಾರದ ಹಾಗೂ ಗೋಲಕ್ಕಿಂತ ಸ್ವಲ್ಪ ಉದ್ದದ ಮುತ್ತುಗಳು.
3)ಬರೋಕ್ ಮುತ್ತುಗಳು:- ಇವು ನಿರ್ದಿಷ್ಟ ಆಕಾರವೆಂದು ಹೇಳಲಾಗದ ಭಿನ್ನ ಆಕಾರದ ಹೊರಮೈ ಹೊಂದಿರುವ ಮುತ್ತುಗಳು.
ಹಿಂದೂಪುರಾಣಗಳ ಪ್ರಕಾರ ಜಗತ್ತಿನ ಮೊದಲ ಮುತ್ತು ಕೃಷ್ಣನಿಗೆ ಸಿಕ್ಕಿತ್ತು . ಹಾಗೂ ಆ ಮುತ್ತನ್ನು ತನ್ನ ಮಗಳಾದ ಪಂಡಾಲಳ ಮದುವೆಗೆ ಉಡುಗೊರೆಯಾಗಿ ಕೊಟ್ಟಿದ್ದನು ಎಂದು ಹೇಳಲಾಗಿದೆ. ಅದೇ ಪ್ರಕಾರ ಕ್ರಿಶ್ಚಿಯನ್ ಬೈಬಲ್ ನಲ್ಲಿ ಸಹ ಮುತ್ತುಗಳ ಬಗ್ಗೆ ಹಲವಾರು ಉಲ್ಲೇಖಗಳಿವೆ. ಹಾಗೇ ಇಸ್ಲಾಂ ಖುರಾನನಲ್ಲಿಯೂ ಮುತ್ತುಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಮುತ್ತು ಕೃಷಿ:-
ಮುತ್ತು ಪ್ರಪಂಚದ ಆಭರಣಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಭಾರತೀಯರು ಅದನ್ನು ಯಥೇಚ್ಛವಾಗಿ ಉಪಯೋಗಿಸುತ್ತಾರೆ. ಇಂತಹ ಅಮೂಲ್ಯ ವಸ್ತು ಮುತ್ತು ಕೇವಲ ಸಮುದ್ರದ ಕಪ್ಪೆ ಚಿಪ್ಪಿನಲ್ಲಿ ಮಾತ್ರ ಲಭ್ಯ ಎಂಬ ಕಲ್ಪನೆ ನಮ್ಮಲ್ಲಿತ್ತು.ಆದರೆ ಅದನ್ನು ನಮ್ಮ ಮನೆಯ ಸಿಹಿ ನೀರಿನಲ್ಲಿ ಸಹ ಉತ್ಪಾದಿಸಬಹುದು ಎಂಬುದನ್ನು ಮುತ್ತು ಕೃಷಿ ತೋರಿಸಿಕೊಟ್ಟಿದೆ.

5

19 ನೇ ಶತಮಾನದ ಪ್ರಾರಂಭದವರೆಗೂ ಮುತ್ತುಗಳು ಸಮುದ್ರದಿಂದಲೇ ದೊರೆಯುತ್ತಿತ್ತು. ಸಮುದ್ರದಲ್ಲಿ ಡೈವ್ ಮಾಡಿ ಸಮುದ್ರ ತಟದಿಂದ ಈ ಮುತ್ತುಗಳನ್ನು ಆಯ್ದು ತರುತ್ತಿದ್ದರು. ಹೀಗೇ ಸಮುದ್ರದಲ್ಲಿ ಪ್ರಕೃತಿ ಸ್ವಾಭಾವಿಕವಾಗಿ ತಯಾರಾದ ಮುತ್ತುಗಳು ಬಹಳ ದುಬಾರಿ ಮುತ್ತುಗಳು. ಆದರೆ ಇಂದು ಆಭರಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಮುತ್ತುಗಳು ಪರ್ಲ ಫಾರ್ಮಿಂಗ್ ನಿಂದಾಗಿ ಅಂದರೆ ಮುತ್ತು ವ್ಯವಸಾಯದಿಂದಾಗಿ ದೊರೆತಿರುವಂಥವು(ಕಲ್ಚರ್ಡ ಪರ್ಲ). ವಿವಿಧ ಪ್ರಭೇಧದ ಒಯೇಸ್ಟರ್ ಗಳು ಹಾಗೂ ಮುಸ್ಸೆಲ್ಸ್ ಗಳು ಮತ್ತಿತರ ಸಮುದ್ರ ಜೀವಿಗಳನ್ನು ಸಾಕಿ ಮಾನವ ಮಧ್ಯಸ್ಥಿಕೆಯಿಂದ ಒಂದು ಸಣ್ಣ ಬೀಜದಂತ ನ್ಯೂಕ್ಲಿಸ್ ಎಂಬ ವಸ್ತುವನ್ನು ಹಾಗೂ ಬೇರೆ ಒಯೆಸ್ಟರ್ ನ ಮಾಂಟಲ್ ನ ಒಂದು ಸಣ್ಣ ಚೂರನ್ನು ಈ ಸಮುದ್ರ ಜೀವಿಗಳ ಚಿಪ್ಪುಗಳಲ್ಲಿ ಸೇರಿಸಿ ಮುತ್ತು ತಯಾರಿಸುವಂತೆ ಮಾಡುತ್ತಾರೆ.

ನೀರಿನ ಕೆರೆಗಳನ್ನು ನಿರ್ಮಿಸಿಕೊಂಡು ಅಥವಾ ನದಿಗಳಲ್ಲಿ ಮುತ್ತುಗಳ ವ್ಯವಸಾಯ ಮಾಡುತ್ತಾರೆ. ಹೀಗೆ ಕೃತಕ ವಿಧಾನದಿಂದ ಈ ಜೀವಿಗಳ ಮೂಲಕ ಮುತ್ತುಗಳನ್ನು ಬೆಳೆಯಲು 2 ರಿಂದ4 ವರ್ಷಗಳು ಹಿಡಿಯುತ್ತವೆ. ಈ ಅವಧಿ ಸುತ್ತಲಿನ ವಾತಾವರಣ, ಸಾಕಿದ ಸಮುದ್ರ ಜೀವಿಯ ಪ್ರಭೇಧ, ಪ್ರೆಷ್ ವಾಟರ್, ಸಾಲ್ಟ ವಾಟರ್ ಹಾಗೂ ಇನ್ನೂ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಪ್ರೆಷ್ ವಾಟರ್‍ನಲ್ಲಿ ಮುಸ್ಸೆಲ್ಸ್ ಎಂಬ ಜೀವಿಯಿಂದ ತಯಾರಿಸುವ ಮುತ್ತುಗಳು ಒಂದು ಜೀವಿಯಿಂದ ಒಂದೇ ಸಲಕ್ಕೆ 50 ಮುತ್ತುಗಳವರೆಗೆ ತಯಾರಿಸಬಲ್ಲದು. ಅದೇ ಸಾಲ್ಟ್ ವಾಟರನಲ್ಲಿ ವಿವಿಧ ಓಯೆಸ್ಟರ್ ಪ್ರಭೇಧದ ಜೀವಿಗಳಿಂದ ತಯಾರಿಸಲ್ಪಡುವ ಮುತ್ತುಗಳು ಒಂದು ಜೀವಿಯಿಂದ ಒಂದು ಸಲಕ್ಕೆ ಒಂದು ಅಥವಾ ಎರಡು ಮುತ್ತುಗಳು ಮಾತ್ರ ದೊರೆಯಬಲ್ಲವು. ಹಾಗಾಗಿ ಸಾಲ್ಟ್ ವಾಟರ್ ನ ಮುತ್ತುಗಳು ಪ್ರೆಷ್ ವಾಟರ್ ಮುತ್ತುಗಳಿಗಿಂತ ದುಬಾರಿ. ಅಲ್ಲದೇ ಈ ಕಲ್ಚರ್ಡ ಮುತ್ತುಗಳು ಅಥವಾ ಕೃತಕ ಮುತ್ತುಗಳು ಆಕಾರ, ಬಣ್ಣ , ಗುಣಮಟ್ಟ, ಗಾತ್ರಗಳನ್ನು ಪೂರ್ವ ನಿರ್ಧರಿಸಿ ಬೇಕಾದ ರೀತಿಯಲ್ಲಿ ಮುತ್ತುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮುತ್ತುಗಳ ವ್ಯವಸಾಯ ಹೊಸ ಹೊಸ ವಿಧಾನಗಳನ್ನು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ.

6

ಮುತ್ತುಗಳ ಬಳಕೆ:
ನವರತ್ನಗಳಲ್ಲಿ ಒಂದಾದ ಈ ಬೆಲೆಬಾಳುವ ಅಪೂರ್ವ ರತ್ನ ತನ್ನ ಆಕಾರ ವರ್ಣವೈವಿಧ್ಯತೆ ಮತ್ತು ಮೃದುತ್ವಗಳಂತಹ ಗುಣಗಳಿಂದ ಜನರನ್ನು ಆಕರ್ಷಿಸುದಷ್ಟೇ ಅಲ್ಲದೇ ಯುಗ ಯುಗಗಳಿಂದಲೂ ತನ್ನ ಸ್ಥಾನಮಾನವನ್ನು ಕಾಪಾಡಿಕೊಂಡು ಬಂದಿದೆ. ಇಂತಹ ಅಮೂಲ್ಯ ವಸ್ತುವನ್ನು ಮಹಿಳೆಯರು ಅಷ್ಟೇ ಬಳಸುತ್ತಿಲ್ಲ, ಇವತ್ತು ಮುತ್ತು ಎಲ್ಲಾ ವಿಧದಲ್ಲೂ ಬಳಕೆಯಾಗುತ್ತಿದೆ. ಆಭರಣ ತಯಾರಿಕೆಯಲ್ಲಿ. ಅಲಂಕಾರಿಕ ವಸ್ತುಗಳಲ್ಲಿ, ಅಷ್ಟೇ ಅಲ್ಲದೇ ಸಾಂಪ್ರದಾಯಿಕ ಕಲೆಗಳಲ್ಲಿಯೂ ಸಹಿತ ಮುತ್ತು ತನ್ನದೇ ಆದ ಛಾಪನ್ನು ಮೂಡಿಸಿದೆ. ಈಗಾಗಲೇ ಸಾಂಪ್ರದಾಯಿಕ ಕೃಷಿಯನ್ನು ಮುತ್ತುಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ಶಿಲ್ಪ ಕಲಾಕೃತಿಗಳ ರೂಪದಲ್ಲಿ ಹಿಡಿದಿಡಲಾಗಿದೆ. ಹಾಗಂತ ಮುತ್ತುಗಳನ್ನು ಬಳಸಿ ಕಲಾಕೃತಿಗಳನ್ನು ತಯಾರಿಸುವದು ಹೊಸದೇನಲ್ಲ.

ಇದೇ ಮುತ್ತುಗಳಿಂದ ಪ್ರಾಣಿಗಳ, ಹಣ್ಣು ಹಂಪಲಗಳ, ದೇವರ,ಬಾಗಿಲು ತೋರಣದ, ಕಲಾಕೃತಿಗಳನ್ನು ಹಾಗೂ ಜಾನಪದ ಕಲೆಗಳಾದ ದೊಡ್ಡಾಟ, ವೇಷಭೂಷಣಗಳನ್ನು ತಯಾರಿಸುವದು ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುತ್ತವೆ. ಆದರೆ ಸಮಕಾಲೀನ ಕಲೆಗೆ ಹೊಸ ಆಯಾಮವನ್ನು ನೀಡುವ ಹಾಗೂ ನವ್ಯ ಕಲೆಯನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಶಿಲ್ಪ ಕಲಾಕೃತಿಗಳಿಗೆ ಮುತ್ತುಗಳನ್ನು ಬಳಕೆ ಮಾಡಲಾಗುತ್ತಿದ್ದು, ಮುತ್ತು ಒಂದು ಶುದ್ಧತೆಯ ಸಂಕೇತವಾಗಿದೆ.

ಶ್ರೀಮತಿ. ಸುನಂದಾ ಸಿ  ಭರಮನಾಯ್ಕರ (ಡಿ.ಇ.ಒ)  ರಾಮದುರ್ಗ, ಜಿಲ್ಲೆ: ಬೆಳಗಾವಿ,
ಶ್ರೀಮತಿ. ಸುನಂದಾ ಸಿ ಭರಮನಾಯ್ಕರ (ಡಿ.ಇ.ಒ)
ರಾಮದುರ್ಗ, ಜಿಲ್ಲೆ: ಬೆಳಗಾವಿ,

Uncategorized ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...