Oyorooms IN

Saturday, 19th August, 2017 4:37 PM

BREAKING NEWS

ಉತ್ತರ ಕನ್ನಡ

ಸದಾಶಿವರಾಯನ ಹೆಸರಿನಲ್ಲಿ ಕೊಡುತ್ತಿದ್ದಾರೆ ಪ್ರಶಸ್ತಿ…! ಆದರೆ, ನೋಡುವವರಿಲ್ಲ ಅವರ ಸಮಾಧಿಯ ದುಸ್ಥಿತಿ..!!

ಸದಾಶಿವರಾಯನ ಹೆಸರಿನಲ್ಲಿ ಕೊಡುತ್ತಿದ್ದಾರೆ ಪ್ರಶಸ್ತಿ...! ಆದರೆ, ನೋಡುವವರಿಲ್ಲ ಅವರ ಸಮಾಧಿಯ ದುಸ್ಥಿತಿ..!!
ಸಮಾಧಿ ಸ್ಥಳ

ಸೋದೆ ಸಾಮ್ರಾಜ್ಯವನ್ನು ಆಳಿದ ಮಾಂಡಲಿಕ ದೊರೆಗಳಲ್ಲಿ ಸೋದೆಯ ಇಮ್ಮಡಿ ಸದಾಶಿವರಾಯರದು ಅಗ್ರಗಣ್ಯ ವ್ಕಕ್ತಿತ್ವ. ಸೋದೆಯನ್ನಾಳಿದ ಹತ್ತಾರು ಅರಸರಲ್ಲಿ ಇವರೇ ಪ್ರಸಿದ್ಧ ದೊರೆ. ಈತ ಕೇವಲ ಅರಸನಾಗಿರದೆ, ಒಬ್ಬ ಕವಿಯಾಗಿ, ಸಾಹಿತಿಯಾಗಿ, ಪ್ರಬುದ್ಧತೆಯನ್ನು ಮೆರೆದ ವ್ಯಕ್ತಿ ಎನ್ನುವ ಬಗ್ಗೆ ಈಗಾಗಲೇ ನಮಗೆಲ್ಲರಿಗೂ ತಿಳಿದೇ ಇದೆ. ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯ, ಹಾಗೂ ಶಂಕರನಾರಾಯಣ ದೇವಸ್ಥಾನದ ನಿರ್ಮಾಣಕರ್ತೃ, ಬನವಾಸಿಯ ತ್ರಿಲೋಕ ಮಂಟಪ, ಬನವಾಸಿಯ ರಥ, ಸಹಸ್ರಲಿಂಗದ ಸಾವಿರಾರು ಲಿಂಗದ ಕೆತ್ತನೆಯ ಆದಿಯಾಗಿ ವಾಸ್ತುಶಿಲ್ಪದ ದೃಷ್ಟಿಯಿಂದಲೂ ಸದಾಶಿವರಾಯರ ಕೊಡುಗೆಗಳೂ ಅಪಾರ. ಆ ಕಾಲದಲ್ಲೇ 18 ಕೃತಿಗಳನ್ನು ರಚಿಸಿ, ಕಲೆ, ಸಾಹಿತ್ಯ, ವಾಸ್ತುಶಿಲ್ಪ ಕ್ಷೇತ್ರ್ರಕ್ಕೆ ವಿಫುಲವಾದ ಕೊಡುಗೆಗಳನ್ನು ನೀಡಿದವನು ಈ

ಸೋದೆಯ ಸದಾಶಿವರಾಯ.
ಸೋದೆಯ ಸದಾಶಿವರಾಯ.

ಇಂತಹ ವಿದ್ವಾಂಸ ದೊರೆಯ ನೆನಪು ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಶಾಶ್ವತವಾಗಿರಬೇಕೆಂಬ ಕಾರಣದಿಂದ; ಶ್ರೀ ಸೋದೆ ವಾದಿರಾಜ ಮಠ, ಶ್ರೀ ಸೊಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸ್ವಾದಿ ಜೈನಮಠ ಮತ್ತು ಜಾಗೃತವೇದಿಕೆ ಸೋಂದಾ, ಶ್ರೀನಿಕೇತನ ಶಾಲೆ ಸಹಯೋಗದಲ್ಲಿ, ರಾಜ್ಯಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಿರಸಿಯಲ್ಲಿ ಕಳೆದ ಎರಡು ವರ್ಷಗಳಿಂದ ಸೆಪ್ಟೆಂಬರ್- ಅಕ್ಟೋಬರ್ ಸಮಯದಲ್ಲಿ ಆಯೋಜಿಸುತ್ತಾ ಬಂದಿದೆ. ಇತಿಹಾಸ ಸಂಶೋಧನೆ ಎನ್ನುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡ ಮಹನೀಯರಿಗೆ ಪ್ರಶಸ್ತಿ ನೀಡುವ ಹೊಸ ಪರಂಪರೆಗೆ ಈ ಮೂಲಕ ನಾಂದಿ ಇಡಲಾಗಿರುವುದು ಸ್ತುತ್ಯಾರ್ಹ. ಈ ಮೂಲಕ ಸದಾಶಿವರಾಯ ಮತ್ತು ಅವರ ಚರಿತ್ರೆ ಚಿರಂತನವಾಗಲೆಂಬ ಆಶಯ ಇದರ ಹಿಂದಿರುವುದೂ ಪ್ರಶಂಸನೀಯವೇ! ಆದರೆ..??

ಸೋದೇ ಸದಾಶಿವರಾಯನ ಸ್ಮರಣೆ ಕೇವಲ ಪ್ರಶಸ್ತಿ ಕೊಟ್ಟು, ಸಮಾರಂಭ ಏರ್ಪಡಿಸಿ ಸಡಗರ ಮಾಡಿದರಷ್ಟೇ ಮುಗಿಯಿತೇ! ರಾಜ್ಯದ ಒಬ್ಬ ಹೆಸರಾಂತ ಪರಾಕ್ರಮಿ ರಾಜ, ಈಗಲೂ ತನ್ನ ಕೊಡುಗೆಗಳಿಂದ ಕೋಟ್ಯಾಂತರ ಪ್ರವಾಸಿಗರನ್ನು ಸೆಳೆಯುತ್ತಿರುವಂತಹ ಧೀರನ ಸಮಾಧಿ ಮಾತ್ರ ಇಂದಿಗೂ ಏಕೆ ಯಾರಿಗೂ ಬೇಡವಾದಂತೆ ಪಾಳುಬಿದ್ದಿದೆ.

ಸಿನಿಮಾದ ರೀಲಿನಲ್ಲಿ ’ರಾಜ’ರಾದವರ ಸಮಾಧಿಗೆ ಸಾವಿರಾರು ಜನರು ಭೆಟ್ಟಿಕೊಟ್ಟು ವೀಕ್ಷಿಸುತ್ತಾ ಪಾವನರಾದೆವೆಂಬ ಧನ್ಯತಾ ಭಾವ ಹೊಂದುತ್ತಾರೆಂದರೆ ರಿಯಲ್ ಲೈಫಿನ ಅಪ್ರತಿಮ ರಾಜನ ಸಮಾಧಿಗೆ ಇನ್ನೆಷ್ಟು ಜನ ಬರಬಹುದು?! ವಿದೇಶಿ ಜನರ ಅಂಧಾನುಕರಣೆ ಮಾಡುವ ನಮಗೆ ಅಮೇರಿಕಾ, ಜಪಾನಿನಂತಹ ದೇಶಗಳಲ್ಲಿ ಭಯೋತ್ಪಾದಕರ ದಾಳಿಗೆ, ಯುದ್ಧಕ್ಕೆ ಬಲಿಯಾಗಿ ಸತ್ತವರಿಗೇ ಪ್ರತ್ಯೇಕ ಸ್ಮಾರಕ ವಿಶೇಷ ಗೌರವ ಕೊಡುವಂತಹುದು ತಿಳಿಯುತ್ತದೆಯಾದರೂ ನಮ್ಮಲ್ಲಿಯೇ ಇರುವ ಪಾಳು ಬಿದ್ದ ಗುಡಿ, ಮಂದಿರ, ಸಮಾಧಿ, ಸ್ಮಾರಕಗಳನ್ನೇಕೆ ಗೌರವಿಸಬೇಕು, ಸಂರಕ್ಷಿಸಬೇಕು ಎಂದೆಲ್ಲ ಅನ್ನಿಸುವುದಿಲ್ಲ?

ಈಗ ಇಲ್ಲಿ ಹೇಳುತ್ತಿರುವ ಮಾಹಿತಿ ಯಾವುದೋ ಕಲ್ಲು ನೆಟ್ಟ ಶಿಲಾಶಾಸನದಂತಹ ಸಮಾಧಿಯಲ್ಲ. ಈ ತರಹದ ಕಲ್ಲಿನ ಕಟ್ಟಡವನ್ನು ನಿಮಗೆ ಇಡೀ ದಕ್ಷಿಣ ಭಾರತದಲ್ಲಿಯೇ ಕಾಣಲು ಸಾಧ್ಯವಿಲ್ಲ. ಅದು 40  ಅಂಕಣದ ಕರಿಕಲ್ಲಿನ ಬೃಹತ್ ಕಟ್ಟಡ. ಇಡೀ ಅರಮನೆಯು ಕಲ್ಲಿನಿಂದಲೇ ಸ್ಥಾಪನೆಯಾಗಿದೆ. ಆದರೆ ಇದು ಈಗಲೂ ಹೊರಜಗತ್ತಿಗೆ ಬೆಳಕಿಗೆ ಬಂದಿಲ್ಲ. ಶಿರಸಿಯಿಂದ ಕೇವಲ 18-20 ಕಿಲೋಮೀಟರ್ ಅಂತರದಲ್ಲಿದ್ದರೂ ಸಹಾ, ಹೆಸರು ಕೇಳಿದ್ದೇವೆಂದು ಅನಿಸಿದರೂ ಕೂಡಾ ನಮ್ಮಲ್ಲಿಯೇ ಬಹಳಷ್ಟು ಮಂದಿಗೆ ಆ ಪ್ರದೇಶದ ಬಗ್ಗೆ ಗೊತ್ತೇ ಇಲ್ಲ. ಏಕೆಂದರೆ ಸರಕಾರವಾಗಲಿ, ಸಂಬಂಧಪಟ್ಟ ಇಲಾಖೆಯಾಗಲಿ ಅಭಿವೃದ್ಧಿಗೆ ಮನಸ್ಸು ಮಾಡಿಲ್ಲ. ದಿನಂಪ್ರತಿ ಶಿರಸಿ ಹುಲೇಕಲ್ ಮಾರ್ಗವಾಗಿ ಸೋಂದಾಗೆ ಹೋಗುವ ಬಹಳಷ್ಟು ಯಾತ್ರಿಕರಿಗೆ ಮಾರ್ಗ ಮಧ್ಯೆಯೇ ಸಿಗುವ ಈ ವಿಶಿಷ್ಟ ಪ್ರದೇಶದ ಬಗ್ಗೆ ಒಂದು ಸೂಚನಾ ಫಲಕವಾಗಲಿ, ಮಾಹಿತಿಯ ಬೋರ್ಡಾಗಲೀ ಹಾಕಿಯೇ ಇಲ್ಲ. ಸದಾಶಿವರಾಯನೆಂಬ ಮಹಾನ್ ರಾಜನ ದುಸ್ಥಿತಿಯ ಸಮಾಧಿ ಇರುವುದು ಸೋಂದಾದಿಂದ ಕೇವಲ 2.5ಕಿಲೋಮೀಟರ್ ದೂರದ ಬಾಡಲಕೊಪ್ಪ ಎಂಬಲ್ಲಿ, ಹಾಲಿ ಖಾಸಗೀ ಒಡೆತನಕ್ಕೆ ಸೇರಿದವರ ಬೇಣದಲ್ಲಿ! ಈ ಪ್ರದೇಶದ ಹೆಸರೇ ’ಗದ್ದಿಗೆ ಮಠ’.


ಸೋಂದಾ ಸುತ್ತಮುತ್ತಲು ಬಹಳಷ್ಟು ರಾಜರ ಕಾಲದ ಐತಿಹಾಸಿಕ ಕಟ್ಟಡಗಳಿದ್ದರೂ ಅವುಗಳಲ್ಲಿ ಅನೇಕ ಪ್ರದೇಶಗಳ ಬಗ್ಗೆ ಪ್ರವಾಸಿಗರಿಗೆ ಅಷ್ಟೇ ಏಕೆ, ಶಿರಸಿಯ ಜನಸಾಮಾನ್ಯರಿಗೂ ಸರಿಯಾಗಿ ಮಾಹಿತಿ ತಿಳಿದಿಲ್ಲ. ಅಂತಹವುಗಳಲ್ಲಿ ಒಂದಾಗಿರುವುದು ಸದಾಶಿವರಾಯನ ಸಮಾಧಿ ಸ್ಥಳವಾಗಿರುವ ಗದ್ದುಗೆ ಮಠ.

ವೀರಶೈವರಲ್ಲಿ ಗದ್ದುಗೆ ಎಂದರೆ ಸಮಾಧಿ. ಸಾಮಾನ್ಯವಾಗಿ ವೀರಶೈವ ಮಠಗಳಲ್ಲಿ ಗುರುಪರಂಪರೆಯ ಗದ್ದುಗೆಗಳಿರುತ್ತವೆ. ಆದರೆ ಇಲ್ಲಿರುವುದು ಸೋದೆಯ ಇಬ್ಬರ ರಾಜರ ಸಮಾಧಿಗಳು. ಪತ್ರಕರ್ತರಾದ ಗೋಪಾಲಕೃಷ್ಣ ಅನವಟ್ಟಿ ಹಾಗೂ ಇತಿಹಾಸ ಸಂಶೋಧಕರಾದ ಲಕ್ಷ್ಮೀಶ ಹೆಗಡೆ ಸೋಂದಾರವರು ಬರೆದ ಪುಸ್ತಕಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಸಮಾಧಿಗಳಲ್ಲಿ ಒಂದು ಸದಾಶಿವರಾಯನದಾದರೆ ಇನ್ನೊಂದು ಸದಾಶಿವರಾಯರ ತಂದೆ ಬಸವಲಿಂಗರಾಯರ ಸಮಾಧಿಗಳು.

ಮಠದ ಪಾರ್ಶ್ವ ನೋಟ
ಮಠದ ಪಾರ್ಶ್ವ ನೋಟ

ಚೌಕಾಕಾರದ ವಿಶಾಲ ಕಟ್ಟೆಯ ಎರಡೂ ಸಮಾಧಿಗಳು ಒಂದೇ ರೀತಿ ಇವೆ. ಆ ಸಮಾಧಿಯ ಕಟ್ಟೆಯ ಕಲ್ಲಿನ ಮೇಲೆ ಹೋರಾಟದ, ಭೇಟೆಯ, ಶೃಂಗಾರದ ಚಿತ್ರಗಳನ್ನೆಲ್ಲಾ ಕೆತ್ತಲಾಗಿದೆ. ಆದರೆ ಇಂತಹ ಅದ್ಭುತ ಕಲೆಯ ಅಪರೂಪದ ಸಮಾಧಿ ನಿರ್ಲಕ್ಷ ಜನರಿಂದ ದೂರವಾಗಿ ಕಾಲನ ದವಡೆಯಲ್ಲಿ ನಲುಗುತ್ತಿದೆ. ಸಮಾಧಿಯ ಮೇಲೆಯೇ ಬೃಹತ್ ಮರಗಳು, ಗಿಡಗಂಟಿಗಳು ಬೆಳೆದು ನಾಶವಾಗುತ್ತಿವೆ.

ಅವುಗಳ ರಕ್ಷಣೆಗೆ ವಿಶೇಷ ಗಮನವನ್ನೇ ಹರಿಸುವವರು ಇಲ್ಲವಾಗಿ ಅನಾಥವಾಗಿ ರೋದಿಸುತ್ತಿವೆ. ನಮ್ಮ ಸಂಸ್ಕೃತಿಯಲ್ಲಿ ಮುಸಲ್ಮಾನರ ಗೋರಿಯ ಹೊರತಾಗಿ ಅರಸರ ಸ್ಮಶಾನ ಭೂಮಿ ಎಲ್ಲೂ ಕಂಡುಬಂದಿಲ್ಲದಿರುವುದರಿಂದ ಇದೊಂದು ವಿಶಿಷ್ಟತೆಯ ಸ್ಮಾರಕವೆಂದೇ ಹೇಳಬಹುದು.

ಈ ಸಮಾಧಿಯ ಎದುರಿನಲ್ಲಿಯೇ ಇದೆ ಅದ್ಭುತ ಕಟ್ಟಡದ ಗುರುಮಠ. ಇದು ಕೂಡಾ ನಾಶವಾಗುವ ಹಂತದಲ್ಲಿ ಅಳುತ್ತಾ ನಿಂತಿದೆ. ಸೋದೆ ಅರಸನ ಇಚ್ಛೆಯಂತೆ ಆತನ ಸಮಾಧಿ ಎದುರಿಗೆ ವೀರಶೈವ ಗುರುಮಠವನ್ನು ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ನಾವು ಇಂಡೋ-ಇಸ್ಲಾಮಿಕ್ ಶೈಲಿಯನ್ನು ಕಾಣಬಹುದು. ಈ ಚಾಲೀಸ್ ಅಂಕಣದ ಕರಿಕಲ್ಲಿನ ಬೃಹತ್ ಕಟ್ಟಡದ ಒಳಗೆ ದಿಕ್ಪಾಲಕರ ಚಿತ್ರ ಹಾಗೂ ಅಷ್ಟಮಾಲೆಯಿಂದ ಕೂಡಿರುವ ಅದ್ಬುತ ಗೋಪುರವನ್ನು ನಾವಿಲ್ಲಿ ಕಾಣಬಹುದು. ಈ ಪ್ರದೇಶದಲ್ಲಿ ತೆರೆದ ಮೊಗಸಾಲೆ ಇದೆ. ಎದುರಿಗಿನ ಜಗುಲಿ, ಪಾರ್ಶ್ವದ ಆವಾರ ಹಾಗೂ ಹಿಂಬದಿಯ ವಿಶಾಲ ಚೌಕಾಕಾರ ಪ್ರಾಂಗಣದ ಜೊತೆಗೆ ಆಯತಾಕಾರದ ಒಂದು ಕೋನೆಯೂ ಇಲ್ಲಿದೆ. 40 ಅಂಕಣಗಳ, ಏಕಶಿಲಾ ಬಾಗಿಲುಗಳು ಹಾಗೂ ಜೊತೆಗೆ 46 ಕಂಬ ಹೊಂದಿರುವ ಈ ಭವ್ಯ ವಾಸ್ತು ಕೃತಿ ಇಂದು ದನಗಳ ಕೊಟ್ಟಿಗೆಯಾಗಿ, ಬಾವಲಿಗಳ ಅವಾಸ ಸ್ಥಾನವಾಗಿ ಹಾಳು ಸುರಿಯುತ್ತಿದೆ.

ಸಭೆ ಸಮಾರಂಭದಲ್ಲಿ ಕೇವಲ ಭಾಷಣವಾಗದೇ, ಲೇಖನಗಳಲ್ಲಿ ಕೇವಲ ಅಕ್ಷರಗಳಾಗದೇ ಇತಿಹಾಸದಲ್ಲಿ ಭೂಗತವಾಗುತ್ತಿರುವ ಈ ಅದ್ಭುತ ಅಪರೂಪದ ಪ್ರದೇಶ ಪ್ರವಾಸಿಗರಿಗೆ ನೋಡುವಂತಾಗಲಿ, ಇತಿಹಾಸದ ಅದ್ಭುತ ಕಲೆಯನ್ನು ಎಲ್ಲರೂ ಗಮನಿಸುವಂತಾಗಲಿ ಎಂಬುದು ಈ ನಮ್ಮ ಶಿರಸಿ ಸಿರಿ ಆಶಯ. ಹಾಳುಬಿದ್ದ ಸದಾಶಿವರಾಯನ ಹಾಗೂ ಅವರ ತಂದೆಯ ಸಮಾಧಿಗೆ ಕಾಯಕಲ್ಪ ಕಲ್ಪಿಸಿ ಗದ್ದುಗೆಮಠದ ಕಲಾಸೌಂದರ್ಯ ಎಲ್ಲರೂ ಸವಿಯುವಂತಾದರೆ ಮಾತ್ರ ಶಿರಸಿಗರಿಗೆ ಸದಾಶಿವರಾಯನ ಉಪಕಾರಕ್ಕೆ ನಾವು ಕಿಂಚಿತ್ತಾದರೂ ಅಳಿಲು ಸೇವೆ ಸಲ್ಲಿಸಿದಂತಾಗುವುದಿಲ್ಲವೇ? ಸದಾಶಿವರಾಯರ ಹೆಸರಿನಲ್ಲಿ ಕೊಡಲಾಗುವ ಪ್ರಶಸ್ತಿ ಸಮಾರಂಭವು ಮುಂದಿನ ದಿನಗಳಲ್ಲಿ ಗದ್ದುಗೆಮಠದಲ್ಲಿಯೇ ನಡೆಯುವಂತಾದರೆ ಆ ಪ್ರಶಸ್ತಿಯ ಗೌರವ ಇನ್ನೂ ಹೆಚ್ಚಾಗುತ್ತದೆ. ಈ ಮೂಲಕ ಆಗಿನ ಇತಿಹಾಸದ ವೈಭವದ ಭಾವವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು.

ಬರಹ : ಎಂ.ಆರ್‍ ಸಚಿನ್‌

ಉತ್ತರ ಕನ್ನಡ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...