Oyorooms IN

Saturday, 21st January, 2017 9:00 PM

BREAKING NEWS

ಕಥೆ

ಕಾಮನಬಿಲ್ಲು

kamanabillu

 

“ ಅಮ್ಮಾ . ಹೊರಗೆ ಹೋಗಿ ಆಡ್ತೀನೀ…”   ಅಮ್ಮ ನನ್ನ ಬೇಡಿಕೆಯನ್ನು ನಿರಾಕರಿಸಿದಳು.. “ ಬೇಡಮ್ಮಾ ಮಳೆ ಬರ್ತಿದೆ.. ಆಮೇಲೆ ನೆಗಡಿ ಆಗುತ್ತೆ.. ಡಾಕ್ಟ ಹತ್ರ ಚುಚ್ಚಿ ಕೊಡ್ಸಬೇಕಾಗುತ್ತೆ..” ಅಮ್ಮ ಹೀಗೆ  ಹೇಳಿದ್ದರಿಂದ ಕಿಟಕಿಯ ಮೇಲೆ ಕುಳಿತು ಬೀಳೋ ಮಳೇನ  ವೀಕ್ಷಿಸ್ತಿದ್ದೆ..

ನೋಡು ನೋಡ್ತಿದ ಹಾಗೇ ಮಳೆ ನಿಂತಿತು.. ಖುಷಿಯಿಂದ ` ಅಮ್ಮಾ ಮಳೆ ನಿಲ್ತು.. ಆಟಕ್ಕೆ ಹೋಗ್ತೀನಿ ….”ಅಂತ ಓಡಿದೆ. ಗೇಟಿನ ಮೇಲೆ  ಶಾಲೆ ಮಕ್ಕಳ ಹಾಗೆ ಸಾಲಾಗಿರೋ ಹನಿಗಳನ್ನು ಬೀಳಿಸೋದು  ನನಗಿಷ್ಟವಾದ ಆಟ.. ಹಾಗೇ ನಿಂತ ನೀರಿನ ಮೇಲೆ ಕುಪ್ಪಳಿಸಿ  ಅದನ್ನು ಸುತ್ತಾ ಎಗರಿಸೋದೂ.. ಹೀಗೇ ಮಾಡ್ತಿರಬೇಕಾದರೆ  ಆಕಾಶದಲ್ಲೊಂದು ವಿಚಿತ್ರ ನನ್ನ ಗಮನ ಸೆಳೀತು.. ಅರೇ  ನಾನು ಬರೆಯೋ ಡ್ರಾಯಿಂಗ್ ಥರ ಅಲ್ಲ.. ಅಣ್ಣ ಕಾಂಪಾಸ್( ಅದು ಬರೇ ದೊಡ್ಡೋರು ಬಳಸೋದು ನಾನು, ನೀವು ಅಲ್ಲ) ಇಟ್ಟು ಡ್ರಾ  ಮಾಡಿ ನೀಟಾಗಿ ಬಣ್ಣ ತುಂಬಿದ ಹಾಗೆ.. “ಅಮ್ಮಾ ಅಮ್ಮಾ.. ”ಅಂತ ಕಿರುಚಿದೆ.. ಅಮ್ಮ ಗಾಭರಿಯಿಂದ ಓಡಿ ಬಂದಳು… ಏನಾಯ್ತೇ.. ಬಿದ್ಯಾ?  ಓಡಬೇಡ ಜಾರುತ್ತೆ ಅಂತ ಎಷ್ಟು ಸಾವಿರ ಸಲ ಹೇಳ್ದೀನೋ….” ಅಂತ ಬೈತಾ..

ನಾನು ಅವಳಿಗೆ ಆಕಾಶ ತೋರಿಸಿದೆ.. ಅಯ್ಯೋ.. ಅದಾ? ಕಾಮನ ಬಿಲ್ಲು ಕಣೇ ಅದು..  ಮಳೆ ಬಿಸಿಲು ಎರಡೂ ಬಂದಾಗ ಬರುತ್ತೆ.. ” ಇದಕ್ಕೇ ಕಿರಿಚಿದ್ದಾ? ಸರಿ ನನಗೆ ಕೆಲ್ಸ ಇದೆ… ಹುಶಾರಾಗಿ ಆಡ್ಕೋ..” ಅಂದು   ಹೊರಟಳು.. ನನಗೆ ಅದು ಹೇಗೆ ಬರುತ್ತೆ ಅನ್ನೋದು ಬೇಕಾಗಿರಲಿಲ್ಲ.. ಅವಳ ಕೈ ಹಿಡಿದು,

“ ಅಮ್ಮಾ ನಂಗದು ಬೇಕು.. ಹಿಡ್ಕೊಡು..”

“ ಅದೇನು ಚಿಟ್ಟೇನಾ ..  ಆಗಲ್ಲ ಪುಟ್ಟಾ..”

“. ಯಾಕೆ ಆಗಲ್ಲ. ಊ… ನಂಗೆ ಬೇಕು,,”

“ತುಂಬಾ ಮೇಲೆದೆ. ಅದನ್ನು ಮುಟ್ಟಕ್ಕೆ ಆಗಲ್ಲ.. ”

“ನೋಡಮ್ಮಾ.. ಆ ಫ್ಯಾನೂ ಮೇಲಿದೆ.. ಆದರೆ ಟೇಬಲ್ ಮೇಲೆ ನಿಂತ್ರೆ ಮುಟ್ಟಬಹುದಲ್ವಾ?  ಇದ್ಯಾಕೆ ಆಗಲ್ಲಾ.. ಊ.. ನಂಗೆ ಬೇಕೇ ಬೇಕು. ಆದರೆ  ಅಲ್ಲಿ  ಕೆಳಗೆ ಬರ್ತಿದೆಯಲ್ಲಾ.. ಅಲ್ಲಿಂದನೇ    ಒಂಚೂರು ಕಿತ್ಕೊಡು….” ಒಂದೇ ಸಮ ಹಟ ಹಿಡಿದೆ..

“ಅಯ್ಯೋ ಪುಟ್ಟಿ ಅದು ನಿಜವಾಗ್ಲೂ ಅಲ್ಲಿ ಇಲ್ಲ ಕಣೋ….”

“ ಇಲ್ಲ ಅಂದರೇನು ಕಾಣ್ತಿದೆಯಲ್ಲ…?”

ಅಷ್ಟೊತ್ತಿಗೆ ಅಪ್ಪ ಬಂದರು “ ಏನಮ್ಮಾ ನಿನ್ನ ಗಲಾಟೆ?”

“ ಅವಳಿಗೆ  ಕಾಮನ ಬಿಲ್ಬೇಕಂತೆ.. ನೀವೇ  ಸುಧಾರಿಸಿ….” ಅಮ್ಮ ಬಿಟ್ಟು ಹೋದಳು.. ಅಪ್ಪ  ಬೇರೆ ಟೆಕ್ನಿಕ್ ಉಪಯೋಗಿಸಿದ್ರು… “ನೋಡು ಪುಟ್ಟ ಅದು ನಮ್ಮದಲ್ಲ.. ಬೇರೆಯವರದ್ದನ್ನು ನಾವು ಮುಟ್ಟಿದ್ರೆ ಏನಾಗುತ್ತೆ? ಕಾಗೆ ಕಣ್ಣು ಕುಕ್ಕುತ್ತೆ ಅಲ್ಲವಾ…? ”

“ ಅದು ಯಾರದ್ದು..?”

“ದೇವರದ್ದು…”

“ಹಾಗಾದ್ರೆ ದೇವರನ್ನೇ ಕೇಳೋಣ,  ಪೂಜಾ ರೂಂ ಗೆ ಹೋಗಿ.. ಇರು ನಾನೇ ಕೇಳ್ತೀನಿ….”

ಓಡಿ ಹೋಗಿ  ಬೇಡಿದೆ, “ಮಾಮಿ… ಮಾಮಿ …..ನಾನೊಂಚೂರು ಕಾಮನ್ ಬಿಲ್ ಕಿತ್ಕೊಳ್ಳಾ?

ಅಪ್ಪ ಹಿಂದೆ ನಿಂತು ನಗ್ತಿದ್ದರು.. “ ನೋಡಿದ್ಯಾ ಮಾಮಿ ಏನೂ ಹೇಳಿಲ್ಲ.. ಅಂದರೆ ಬೇಡ ಅಂತ….” ಅಂದರು..

ನನಗ್ಯಾಕೋ ನಂಬಿಕೆ ಬರಲಿಲ್ಲ..  ಎಲ್ಲಾ ಏನೇನೋ ಹೇಳಿ ನನ್ನ ಒಪ್ಪಿಸಕ್ಕೆ ಟ್ರೈ ಮಾಡಿದ್ರು…  ಅಂತೂ ಕಾಮನ ಬಿಲ್ಲು ಸಿಗದ ಹಾಗೆ ಮಾಡಿದ್ರು ಅಂತ  ತುಂಬಾ ಬೇಜಾರಾಯ್ತು. ಆಕಾಶ ಮುಟ್ಟುವ ತೆಂಗಿನ ಮರದಿಂದ ಕಾಯಿ ಕೀಳಲ್ಲವಾ  ದೋಟಿಯಲ್ಲಿ? ಹಾಗೇ  ಕಾಮನಬಿಲ್ಲನ್ನೂ ಕಿತ್ ಕೊಡಬಹುದಿತ್ತು.. ಯಾರಿಗೂ ನನ್ ಮೇಲೆ ಪ್ರೀತೀನೇ ಇಲ್ಲ ಅಂತ ದು:ಖವಾಯ್ತು..

. ನನ್ನ  ಜೀವನದಲ್ಲಿ ಅನುಭವಿಸಿದ ಮೊತ್ತ ಮೊದಲ..  ಅತ್ಯಂತ ದೊಡ್ದ ನಿರಾಸೆ ಅದು.

 

 

ವಸುಮತಿ ರಾಮಚಂದ್ರ ಬೆಂಗಳೂರು
ವಸುಮತಿ ರಾಮಚಂದ್ರ
ಬೆಂಗಳೂರು

ಕಥೆ ಇನ್ನಷ್ಟು