Oyorooms IN

Wednesday, 25th January, 2017 6:51 AM

BREAKING NEWS

ಪ್ರವಾಸ

ಬೆಟ್ಟದ ಮೇಲೆ ನೆಲೆನಿಂತ ಬೆಟ್ಟದಪುರದ ಶಿಡ್ಲು ಮಲ್ಲಿಕಾರ್ಜುನ

torist-1

ಮೈಸೂರು ಜಿಲ್ಲೆಯ ಬೆಟ್ಟದಪುರ ಎನ್ನುವುದೇ ಎತ್ತರದ ಪ್ರದೇಶದಲ್ಲಿ ನಿರ್ಮಾಣವಾದ ಊರು. ಇಲ್ಲಿರುವ ಶಿಡ್ಲುಮಲ್ಲಿಕಾರ್ಜುನ ಸ್ವಾಮಿ ನೆಲೆ ನಿಂತ ಬೆಟ್ಟವು ಮೈಸೂರು ಜಿಲ್ಲೆಯಲ್ಲೇ ಅತೀ ಹೆಚ್ಚು ಎತ್ತರದ ಬೆಟ್ಟ ಎಂದು ಹೇಳಲಾಗಿದೆ. ಹೀಗಾಗಿಯೇ ದೇವರ ದರ್ಶನಕ್ಕೆಂದು ಒಂದಷ್ಟು ಮಂದಿ ಬಂದರೆ ಮತ್ತೊಂದಷ್ಟು ಮಂದಿ ಚಾರಣ ಮಾಡಲು ಬರುತ್ತಾರೆ.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನೆಲೆನಿಂತಿರುವ ಶಿಡ್ಲ್ಲುಮಲ್ಲಿಕಾರ್ಜುನ ದೇಗುಲ ಸುಂದರ ನಿಸರ್ಗ ರಮಣೀಯ, ಹಸಿರ ಹಚ್ಚಡದ ಪರಿಸರವನ್ನು ಹೊಂದಿರುವ ತಾಣವಾಗಿದೆ.

ಎತ್ತರವಾದ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಶಿಡ್ಲ್ಲುಮಲ್ಲಿಕಾರ್ಜುನ ದೇಗುಲ ಆಕರ್ಷಣೀಯವಾಗಿದೆ. ಇದು ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದೆಂದು ಹೇಳಲಾಗಿದೆ. ಪಶ್ಚಿಮಘಟ್ಟಗಳ ಬೆಟ್ಟಶ್ರೇಣಿಗಳ ಸಾಲಿಗೆ ಸೇರ್ಪಡೆಯಾಗಿರುವ ಶಿಡ್ಲುಬೆಟ್ಟದಲ್ಲಿ ಮಲ್ಲಿಕಾರ್ಜುನ ನೆಲೆ ನಿಂತಿದ್ದು, ಸುತ್ತಮುತ್ತಲಿನ ಜನರ ಆರಾಧ್ಯದೈವನಾಗಿದ್ದಾನೆ. ಈ ದೇವಾಲಯದ ಬಳಿಗೆ ಹೋಗಬೇಕಾದರೆ ನೆಲಮಟ್ಟದಿಂದ ಸುಮಾರು 3600 ಮೆಟ್ಟಿಲನ್ನೇರುವುದು ಅನಿವಾರ್ಯವಾಗಿದೆ.

ಕೊಡಗು ಮತ್ತು ಮೈಸೂರಿಗೆ ಗಡಿಭಾಗದಲ್ಲಿರುವ ಈ ಬೆಟ್ಟವು ನಿಸರ್ಗ ಸೌಂದರ್ಯದ ಗಣಿಯಾಗಿದೆ. ಹೀಗಾಗಿ ನಿಸರ್ಗದ ಸುಂದರ ದೃಶ್ಯಗಳನ್ನು ಸವಿಯುತ್ತಾ ತೆರಳುತ್ತಿದ್ದರೆ ಮೆಟ್ಟಿಲೇರುವ ಆಯಾಸವೇ ಗೊತ್ತಾಗುವುದಿಲ್ಲ. ಸ್ಥಳೀಯರಲ್ಲದೆ ದೂರದ ಪ್ರವಾಸಿಗರು ಇಲ್ಲಿಗೆ ಬಂದು ಬೆಟ್ಟವನ್ನೇರಿ ಇಲ್ಲಿಂದ ಕಂಡು ಬರುವ ಸುಂದರ ದೃಶ್ಯಗಳನ್ನು ಸವಿದು ತೆರಳುತ್ತಾರೆ.

ಬೈಲುಕುಪ್ಪೆಯ ಟಿಬೆಟಿಯನ್ ಕ್ಯಾಂಪ್ ಹತ್ತಿರ ಇರುವ ಕಾರಣ ಆಗಾಗ್ಗೆ ಟಿಬೆಟಿಯನ್ನರು ಇಲ್ಲಿಗೆ ಭೇಟಿ ನೀಡಿ ಕಾಲ ಕಳೆದು ಹೋಗುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಬುದ್ದಪೂರ್ಣಿಮೆ ಇನ್ನಿತರ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟಿಬೆಟಿಯನ್ನರು ಭೇಟಿ ನೀಡುತ್ತಾರೆ.

torist

ಬೆಟ್ಟವನ್ನೇರಿ ನಿಂತು ನೋಡಿದಾಗ ಕಾಣಸಿಗುವ ಸುಂದರ ದೃಶ್ಯಗಳು ಮನಮೋಹಕವಾಗಿರುತ್ತದೆ. ಒಂದೆಡೆ ಮಲೆನಾಡು ಮತ್ತೊಂದೆಡೆ ಅರೆಮಲೆನಾಡು. ಇದೆರಡರ ಸುಂದರ ದೃಶ್ಯಗಳ ಸಮ್ಮಿಲನ ಕಣ್ಣಿಗೆ ರಾಚುತ್ತದೆ. ಹಸಿರಿನಿಂದ ಕಂಗೊಳಿಸುವ ಹೊಲಗದ್ದೆಗಳು.. ದೂರದಲ್ಲಿ ಹಸಿರನ್ನೊದ್ದು ಮಲಗಿರುವ ಬೆಟ್ಟಶ್ರೇಣಿಗಳು.. ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಮರಗಿಡಗಳು.. ಆಗಾಗ್ಗೆ ಬೀಸಿ ಬರುವ ತಂಪಾದ ಗಾಳಿ.. ಒಂದು ಕ್ಷಣ ತಮ್ಮೆಲ್ಲ ಜಂಜಾಟವನ್ನು ಮರೆಸಿ ಮೈಮನಸ್ಸನ್ನು ಉಲ್ಲಾಸಗೊಳಿಸಿಬಿಡುತ್ತದೆ.

ಇಲ್ಲಿ ಮುಂಜಾನೆ ಕಂಡುಬರುವ ಮಂಜಿನ ಆಟ ಮನಸೆಳೆಯುತ್ತದೆ. ಇಡೀ ಬೆಟ್ಟವನ್ನೇ ಆವರಿಸುವ ಮಂಜು ಮುದ ನೀಡುತ್ತದೆ. ಮಂಜಿನ ತೆರೆಯನ್ನು ಸೀಳಿ ಬಂದು ಸ್ಪರ್ಶಿಸುವ ಸೂರ್ಯ ರಶ್ಮಿ ಮೈಮನವನ್ನು ಪುಳಕಗೊಳಿಸುತ್ತದೆ. ಬೆಟ್ಟದ ಸುತ್ತಲಿನ ಕಾನನದಲ್ಲಿ ಪ್ರಾಣಿಪಕ್ಷಿಗಳು ಬೀಡು ಬಿಟ್ಟಿದ್ದು ಆಗೊಮ್ಮೆ ಈಗೊಮ್ಮೆ ನವಿಲುಗಳು ಭೇಟಿ ನೀಡುವ ಪ್ರವಾಸಿಗರ ಕಣ್ಣಿಗೆ ಬಿದ್ದು ಅಚ್ಚರಿ ಮೂಡಿಸುತ್ತವೆ. ಇನ್ನು ಹಕ್ಕಿಗಳ ಚಿಲಿಪಿಲಿ, ಪ್ರಶಾಂತ ವಾತಾವರಣ ಮುದನೀಡುತ್ತದೆ. ಮುಂಜಾನೆ ಬೆಟ್ಟವೇರಿದ್ದೇ ಆದರೆ ಸಿಗುವ ಅನುಭವ ವರ್ಣಿಸಲಾರದ್ದಾಗಿರುತ್ತದೆ.

ಸದಾ ಪಟ್ಟಣದ ಗೌಜು ಗದ್ದಲಗಳಿಗೆ ಒಳಗಾಗಿ ಅಯ್ಯೋ ಒಂದಷ್ಟು ಸಮಯವನ್ನಾದರೂ ಪ್ರಶಾಂತ ಸ್ಥಳದಲ್ಲಿ ಕಳೆದು ಬರೋಣ ಎಂದು ಯೋಚಿಸುವ ಜನ ಇಲ್ಲಿಗೆ ಬಂದು ಒಂದಷ್ಟು ಹೊತ್ತು ಕಳೆದು ಹೋಗುತ್ತಾರೆ.

ಪ್ರವಾಸ ಇನ್ನಷ್ಟು

ಪ್ರಮುಖ ಸುದ್ದಿಗಳು