Oyorooms IN

Thursday, 17th August, 2017 5:04 PM

BREAKING NEWS

ಚಿಕ್ಕಬಳ್ಳಾಪುರ

ಭ್ರಷ್ಟಚಾರ ಮುಕ್ತ ಆಡಳಿತ ನಡೆಸುವುದಾಗಿ ನಂಬಿಸಿ ಜನತೆಗೆ ಮೋಸ: ಮಾಜಿ ಸಚಿವ ವಿ.ಮುನಿಯಪ್ಪ

ಶಿಡ್ಲಘಟ್ಟ: ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ಭ್ರಷ್ಟಚಾರ ಮುಕ್ತ ಆಡಳಿತ ನಡೆಸುವುದಾಗಿ ನಂಬಿಸಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಸಾಧನೆ ಶೂನ್ಯವೆಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಗೆ ಬಶೆಟ್ಟಹಳ್ಳಿ ಬಿ.ಸಿ.ಎಂ.ಎ ಕ್ಷೇತ್ರದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಡಿ.ವಿ.ವೆಂಕಟೇಶ್ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದರೂ ಸಹ ಯಾವುದೇ ಶಾಶ್ವತ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ದೂರದ ಮಾಜಿ ಸಚಿವರು ವಿದೇಶದಿಂದ ಕಪ್ಪುಹಣ ತರುವುದಾಗಿ ಹೇಳಿ ಐದನೂರು-ಸಾವಿರ ನೋಟುಗಳನ್ನು ಅಮಾನ್ಯಗೊಳಿಸಿ ಬಡವರು,ಜನಸಾಮಾನ್ಯರು ತಮ್ಮ ಹಣ ಪಡೆಯಲು ಬ್ಯಾಂಕಿನ ಮುಂದೆ ಸಾಲಾಗಿ ನಿಲ್ಲಿಸಿ ಅಮಾಯಕ ಜನರ ಪ್ರಾಣಕಳೆದುಕೊಳ್ಳುವಂತೆ ಮಾಡಿದ್ದೇ ಬಿಜೆಪಿ ಸರಕಾರದ ಸಾಧನೆ ಎಂದು ಲೇವಡಿ ಮಾಡಿದರು.
ಕೇಂದ್ರದಲ್ಲಿ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರ ಉಳಿಸಲು ಸಿಪಿಎಂ ಪಕ್ಷ ಮೊದಲು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿದ್ದರಿಂದ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್‍ಸಿಂಗ್ ನೇತೃತ್ವದಲ್ಲಿ ಯು.ಪಿ.ಎ ಸರಕಾರ ರಚನೆ ಮಾಡಲು ಸಹಕರಿಸಿದರು ಹಾಗೆಯೇ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುತ್ತಿರುವ ಸಿಪಿಎಂ ಪಕ್ಷದ ಮುಖಂಡರು ಕೆ.ಎಂ.ವೆಂಕಟೇಶ್ ಮತ್ತು ಪಕ್ಷದ ಕಾರ್ಯಕರ್ತರಿಗೆ ಸದಾಋಣಿಯಾಗಿರುವುದಾಗಿ ವಾಗ್ದಾನ ಮಾಡಿದರು.
ಕುಟುಂಬ ಪಕ್ಷದಿಂದ ದೂರ ಇರಿ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವೆಂದು ಪ್ರತಿಪಾದಿಸಿ ಮಾಜಿ ಸಚಿವರು ಜಾತ್ಯಾತೀತ ತತ್ವಗಳಿಗೆ ತಿಲಾಂಜಿಲಿಟ್ಟು ಕೋಮುವಾದಿ ಪಕ್ಷ ಬಿಜೆಪಿಯೊಂದಿಗೆ ಅಧಿಕಾರದ ರುಚಿಯನ್ನು ಅನುಭವಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿನವರ ನಂಬಿಕೆದ್ರೋಹ ಮಾಡಿದ್ದ ಫಲದಿಂದಾಗಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದನ್ನು ಯಾರು ಮರೆತಿಲ್ಲವೆಂದು ಕೆಣಕಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡನವರು ರಾಷ್ಟ್ರಾಧ್ಯಕ್ಷರು ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿರುವುದೇ ಜೆ.ಡಿ.ಎಸ್ ಕುಟುಂಬ ಪಕ್ಷ ಎಂಬುದು ಜೀವಂತ ನಿದರ್ಶನ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃಧ್ದಿ ನಿಗಮ,ದೇವರಾಜ್ ಅಭಿವೃಧ್ಧಿ ನಿಗಮ,ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮ ಹಾಗೂ ಆಶ್ರಯ ಸಮಿತಿಯ ಮನೆಗಳ ಸಾಲಗಳನ್ನು ಮನ್ನಾ ಮಾಡುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದೆ ಜೊತೆಗೆ ರೈತರಿಗೆ 3 ಲಕ್ಷ ವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಮತ್ತು 10 ಲಕ್ಷ ವರೆಗೆ 3% ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಿಲಾಗುತ್ತಿದೆ  ಹಾಲು ಉತ್ಪಾದಕರಿಗೆ 4 ರೂಗಳಿಂದ 5 ರೂಗಳವರೆಗೆ ಪ್ರೋತ್ಸಾಹಧನವನ್ನು ಹೆಚ್ಚಿಸಿ ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಎತ್ತಿನಹೊಳೆ,ಕೆ.ಸಿ.ವ್ಯಾಲಿ ಹಾಗೂ ಹೆಬ್ಬಾಳ,ಬಾಣಸವಾಡಿ ಕೆರೆಗಳ ನೀರನ್ನು ಹರಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು ರೈತರು ಕಾಂಗ್ರೆಸ್ ಸರಕಾರದ ಸಾಧನೆಯನ್ನು ಗುರುತಿಸಿ ಮತ ನೀಡಬೇಕೆಂದು ಮನವಿ ಮಾಡಿದರು.
7 ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲುವು: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ (ಚಿಲಕಲನೇರ್ಪು ಹೋಬಳಿಯ 2 ಸ್ಥಾನ ಸೇರಿದಂತೆ) ಒಟ್ಟು 7 ಸ್ಥಾನದಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದು ರೈತರು ಉತ್ತಮರು ಹಾಗೂ ಪ್ರಾಮಾಣಿಕರನ್ನು ಬೆಂಬಲಿಸಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು.
ಬಶೆಟ್ಟಿಹಳ್ಳಿ ಕ್ಷೇತ್ರದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಡಿ.ವಿ.ವೆಂಕಟೇಶ್ ಮಾತನಾಡಿ ಮಾಜಿ ಸಚಿವ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಹೆಚ್.ಮುನಿಯಪ್ಪನವರ ಆಶೀರ್ವಾದಿಂದ ಎಪಿಎಂಸಿ ಚುನಾವಣೆಗೆ ಸ್ಪರ್ಧಿಸಿದ್ದು ಆಟೋರಿಕ್ಷಾ ಗುರ್ತಿಗೆ ತಮ್ಮ ಮತ ನೀಡಿ ಗೆಲ್ಲಿಸುವ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ಬಲ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ನಂದಾಮುನಿಕೃಷ್ಣಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ಸಿಪಿಐ(ಎಂ) ಪಕ್ಷದ ಮುಖಂಡ ಕೆ.ಎಂ.ವೆಂಕಟೇಶ್, ಕೆ.ಸಿ.ವೆಂಕಟೇಶ್, ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮಾಂಜನೇಯರೆಡ್ಡಿ, ರಾಜ್ಯ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ನಿರಂಜನ್, ಗ್ರಾ.ಪಂ.ಅಧ್ಯಕ್ಷೆ ಕಲ್ಪನಾ, ಕಾಂಗ್ರೇಸ್ ಮುಖಂಡಮುನಿರೆಡ್ಡಿ, ರಾಮಚಂದ್ರರೆಡ್ಡಿ, ಟಿಎಪಿಸಿಎಂ ಮಾಜಿ ಅಧ್ಯಕ್ಷ ಕೇಶವಮೂರ್ತಿ, ತಾಪಂ ಸದಸ್ಯ ಕೋಟಹಳ್ಳಿ ಶ್ರೀನಿವಾಸ್,ರಾಜ್ಯ ಡಿವೈಎಫ್‍ಐ ಮುಖಂಡ ಮುನೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...